ಜೈವಿಕ ಇಂಧನ ಬಳಕೆಗೆ ಹೆಚ್ಚಿನ ಆದ್ಯತೆ: ಕೇಂದ್ರ ಸಚಿವ ಗಡ್ಕರಿ
ಪೆಟ್ರೋಲ್, ಡೀಸೆಲ್ ಬೆಲೆ ದುಬಾರಿಯಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಜೈವಿಕ ಇಂಧನ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದರು.
ಮೈಸೂರು (ಜೂ.10): ಪೆಟ್ರೋಲ್, ಡೀಸೆಲ್ ಬೆಲೆ ದುಬಾರಿಯಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಜೈವಿಕ ಇಂಧನ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದರು. ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದು ಶ್ರೀಗಳೊಂದಿಗೆ ಮಾತುಕತೆ ನಡೆಸಿದ ಅವರು, ಪೆಟ್ರೋಲ್-ಡೀಸೆಲ್‌ಗೆ ಪರ್ಯಾಯವಾಗಿ ಎಥೆನಾಲ್ ಸೇರಿ ಜೈವಿಕ ಮೂಲಗಳಿಂದ ತಯಾರಾಗುವ ಇಂಧನ ಬಳಕೆಗೆ ಹೆಚ್ಚು ಒತ್ತು ನೀಡಲಾಗುವುದು.
ಇದರಿಂದ ಪರಿಸರ ಮಾಲಿನ್ಯ ತಡೆಗಟ್ಟಲು ಸಾಧ್ಯವಾಗಲಿದೆ. ಅಲ್ಲದೆ, ಸ್ವದೇಶಿ ಉತ್ಪನ್ನಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗಲಿದೆ ಎಂದು ಹೇಳಿದರು. ಮೈಸೂರು ಸುಂದರವಾದ ನಗರ, ಇಲ್ಲಿನ ಪರಿಸರ ಅತ್ಯುತ್ತಮವಾಗಿದೆ. ಈ ಪರಿಸರವನ್ನು ಹೀಗೆಯೇ ಕಾಪಾಡಿಕೊಂಡು ಹೋಗಬೇಕಿದೆ ಎಂದು ಇದೇ ವೇಳೆ ಸಲಹೆ ನೀಡಿದರು. ಸಂಸದ ಪ್ರತಾಪ್ ಸಿಂಹ, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು. ಸಿದ್ದಲಿಂಗಸ್ವಾಮಿ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಮೊದಲಾದವರು ಇದ್ದರು. ಖಾಸಗಿ ಭೇಟಿ ಹಿನ್ನೆಲೆಯಲ್ಲಿ ನಿತಿನ್ ಗಡ್ಕರಿ ಅವರು ಮೈಸೂರಿಗೆ ಆಗಮಿಸಿದ್ದಾರೆ.
ಉತ್ತಮ ಹೆದ್ದಾರಿ 5 ಟ್ರಿಲಿಯನ್ ಆರ್ಥಿಕತೆಗೆ ಸಹಕಾರಿ, ಆತ್ಮ ನಿರ್ಭರ ಭಾರತದ ಭದ್ರ ಬುನಾದಿ
ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮನವಿ: ನಗರಕ್ಕೆ ಭೇಟಿ ನೀಡಿದ್ದ ಕೇಂದ್ರ ಭೂ ಸಾರಿಗೆ, ಹೆದ್ದಾರಿ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಸಂಸದ ಪ್ರತಾಪ್ ಸಿಂಹ ಅವರು ಭೇಟಿ ಮಾಡಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ನೀಡುವಂತೆ ಕೋರಿ ಮನವಿ ಮಾಡಿದರು. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿರುವ ಸಚಿವರು ಸದರಿ ಕಾಮಗಾರಿಗಳಿಗೆ ಒಪ್ಪಿಗೆ ನೀಡಿದ್ದು, ಸಂಸದ ಪ್ರತಾಪ್ ಸಿಂಹ ಅವರು ಸಚಿವರಿಗೆ ಧನ್ಯವಾದ ತಿಳಿಸಿದ್ದಾರೆ.
ಮೈಸೂರು ನಗರದ ಕುಕ್ಕರಹಳ್ಳಿ ಕೆರೆ ಬಳಿ ಬೋಗಾದಿ ರಸ್ತೆಯ ಮೈಸೂರು-ಚಾಮರಾಜನಗರ ರೈಲ್ವೆ ಲೆವಲ್ ಕ್ರಾಸಿಂಗ್ ನಂ.1ರಲ್ಲಿ ರೋಡ್ ಅಂಡರ್ ಬ್ರಿಡ್ಜ್ ನಿರ್ಮಾಣದ ಕಾಮಗಾರಿ, ಚನ್ನರಾಉಪಟ್ಟಣ- ಹೊಳೆನರಸೀಪುರ- ಅರಕಲಗೂಡು- ಕೊಡ್ಲಿಪೇಟೆ- ಮಡಿಕೇರಿ- ವಿರಾಜಪೇಟೆ ಮಾರ್ಗವಾಗಿ ಮಾಕುಟ್ಟ(ಕೇರಳ ಗಡಿ) ಸಂಪರ್ಕಿಸುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸುವಂತೆ ಕೋರಿದರು.
NHAI Guinness Record 108 ಗಂಟೆಯಲ್ಲಿ 75 ಕಿ.ಮೀ ಹೆದ್ದಾರಿ ನಿರ್ಮಾಣ,ಗಿನ್ನಿಸ್ ದಾಖಲೆ ಬರೆದ ಭಾರತ!
ರಾಷ್ಟ್ರೀಯ ಹೆದ್ದಾರಿ 373ರ ಹಾಸನ- ಬೇಲೂರು ಹಾಗೂ ಎಡೆಗೌಡನಹಳ್ಳಿ- ಬಿಳಿಕೆರೆ ರಸ್ತೆಯನ್ನು 2 ಪಥದಿಂದ 4 ಪಥದ ರಸ್ತೆಗೆ ಅನುಮೋದಿಸುವಂತೆ ಕೋರಿದರು. ರಾಷ್ಟ್ರೀಯ ಹೆದ್ದಾರಿ 212ರ ಮೈಸೂರು- ನಂಜನಗೂಡು ರಸ್ತೆಯನ್ನು 4 ಪಥದಿಂದ 6 ಪಥದ ರಸ್ತೆಗೆ ಅನುಮೋದಿಸುವಂತೆ ಮನವಿ ಮಾಡಿದರು. ರಾಷ್ಟ್ರೀಯ ಹೆದ್ದಾರಿ 275 ರ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಟೌನ್ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಒಪ್ಪಿಗೆ ನೀಡುವಂತೆ ಕೋರಿದರು.