Asianet Suvarna News Asianet Suvarna News

ವಿದ್ಯುತ್‌ ಪೂರೈಕೆ ಖಾಸಗೀಕರಣಕ್ಕೆ ಕೇಂದ್ರ ಸಿದ್ಧತೆ

* ಇದೇ ಅಧಿವೇಶನದಲ್ಲೇ ವಿದ್ಯುತ್‌ ಮಸೂದೆ ಮಂಡನೆ ಸಾಧ್ಯತೆ
* ಅಂಗೀಕಾರ ದೊರೆತರೆ ರಾಜ್ಯದಲ್ಲಿ ವಿತರಣೆ ಖಾಸಗಿಗೆ
* ಇದು ಗ್ರಾಹಕರು, ಸಿಬ್ಬಂದಿಗೆ ಮರಣ ಶಾಸನ: ನೌಕರರ ಒಕ್ಕೂಟ
 

Central Government Preparation for Privatization of Electricity Supply grg
Author
Bengaluru, First Published Aug 2, 2021, 8:35 AM IST
  • Facebook
  • Twitter
  • Whatsapp

ಶ್ರೀಕಾಂತ್‌ ಎನ್‌. ಗೌಡಸಂದ್ರ

ಬೆಂಗಳೂರು(ಆ.02):  ಕೇಂದ್ರ ಸರ್ಕಾರವು 2003ರ ವಿದ್ಯುತ್‌ ಕಾಯಿದೆಗೆ ತಿದ್ದುಪಡಿ ತಂದು ವಿದ್ಯುತ್‌ ಸರಬರಾಜು ವ್ಯವಸ್ಥೆಯನ್ನು ಖಾಸಗಿಯವರ ನಿರ್ವಹಣೆಗೆ ನೀಡಲು ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲೇ ‘ವಿದ್ಯುತ್‌ ಮಸೂದೆ-2021’ ಮಂಡಿಸಲು ಸಿದ್ಧತೆ ನಡೆಸಿದೆ.

ಆಗಸ್ಟ್‌ 13ರವರೆಗೂ ನಡೆಯಲಿರುವ ಸಂಸತ್‌ ಅಧಿವೇಶನದಲ್ಲಿ ಆಗಸ್ಟ್‌ 10 ರಿಂದ 13ರ ನಡುವೆ ವಿದ್ಯುತ್‌ ಮಸೂದೆ-2021 (ತಿದ್ದುಪಡಿ) ಮಂಡನೆಯಾಗಲಿದೆ. ಒಂದು ವೇಳೆ ಕಾಯಿದೆಗೆ ಅಂಗೀಕಾರ ದೊರೆತರೆ ರಾಜ್ಯದಲ್ಲೂ ವಿದ್ಯುತ್‌ ಸರಬರಾಜು ವ್ಯವಸ್ಥೆ ಖಾಸಗಿಯವರಿಗೆ ವಹಿಸಲು ಅವಕಾಶ ದೊರೆತಂತಾಗಲಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಎಸ್ಕಾಂಗಳ ವಿದ್ಯುತ್‌ ಸರಬರಾಜು ವ್ಯವಸ್ಥೆಯ ಖಾಸಗೀಕರಣ ವಿರೋಧಿಸಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ ನೌಕರರ ಸಂಘ ಮತ್ತು ಅಧಿಕಾರಿಗಳ ಅಸೋಸಿಯೇಷನ್‌ಗಳ ಒಕ್ಕೂಟ ಆಗಸ್ಟ್‌ 10 ರಂದು ಒಂದು ದಿನ ಕರ್ತವ್ಯ ಬಹಿಷ್ಕರಿಸಿ ಪ್ರತಿಭಟನೆ ಹಮ್ಮಿಕೊಂಡಿದೆ. ಕೇಂದ್ರ ಸರ್ಕಾರವು ಖಾಸಗೀಕರಣ ಪ್ರಸ್ತಾವನೆಯಿಂದ ಹಿಂದೆ ಸರಿಯದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.

‘ಮೊದಲು ಬಿಲ್‌ ಕಟ್ಟಿ': ರಾಜ್ಯದಲ್ಲಿ ಶೀಘ್ರ ವಿದ್ಯುತ್‌ ಮೀಟರ್‌ಗಳು ಪ್ರೀಪೇಯ್ಡ್‌!

ಗ್ರಾಹಕರು, ಸಿಬ್ಬಂದಿಗೆ ಮರಣ ಶಾಸನ:

ಈ ಬಗ್ಗೆ ‘ಕನ್ನಡಪ್ರಭ’ ಜತೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಟಿ.ಆರ್‌. ರಾಮಕೃಷ್ಣಯ್ಯ, ವಿದ್ಯುತ್‌ ತಿದ್ದುಪಡಿ ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳುವುದು ಬಹುತೇಕ ನಿಚ್ಚಳವಾಗಿದೆ. ಈಗಾಗಲೇ ಗಯಾ, ಸಮಷ್ಟಿಪುರ, ಭಾಗಲ್‌ಪುರ, ಕಾನ್ಪುರ, ಗ್ವಾಲಿಯರ್‌, ಔರಂಗಾಬಾದ್‌ನಲ್ಲಿ ಖಾಸಗೀಕರಣ ಮಾಡಲಾಗಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲೂ ಖಾಸಗೀಕರಣ ಮಾಡಿದರೆ ಸಾರ್ವಜನಿಕರು, ರೈತರು, ಇಂಧನ ಇಲಾಖೆಯ ಉದ್ಯೋಗಿಗಳು ಎಲ್ಲರೂ ಬೀದಿಗೆ ಬರಬೇಕಾಗುತ್ತದೆ. ಖಾಸಗಿ ಕಂಪನಿಗಳು ವಿದ್ಯುತ್‌ ಪೂರೈಕೆಯ ಗುತ್ತಿಗೆ ಪಡೆಯಲು ಅವಕಾಶ ಸಿಗಲಿದೆ. ಬಂಡವಾಳಶಾಹಿ ಕಂಪನಿಗಳು ಎಸ್ಕಾಂಗಳ ಗ್ರಾಹಕರಿಂದ ಸುಲಿಗೆ ಮಾಡಲಿವೆ. ಪ್ರಸ್ತುತ ಮುಂಬೈನಲ್ಲಿ ಯೂನಿಟ್‌ಗೆ 12 ರು. ವಸೂಲಿ ಮಾಡುತ್ತಿದ್ದಾರೆ. ಅದೇ ರೀತಿ ನಮ್ಮಲ್ಲೂ ಸುಲಿಗೆ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಖಾಸಗಿಯವರು ಜವಾಬ್ದಾರಿ ವಹಿಸಿಕೊಂಡ ಬಳಿಕ ಖಾಯಂ ಅಧಿಕಾರಿಗಳು ಹಾಗೂ ನೌಕರರ ಪರಿಸ್ಥಿತಿ ಏನಾಗುತ್ತದೆ ಎಂಬ ಅತಂತ್ರ ಕಾಡುತ್ತಿದೆ. ಹೀಗಾಗಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನೌಕರರ ಸಂಘ, ಕರ್ನಾಟಕ ವಿದ್ಯುತ್‌ ಮಂಡಳಿ ಇಂಜಿನಿಯರುಗಳ ಸಂಘ, ಡಿಪ್ಲೊಮಾ ಇಂಜಿನಿಯರುಗಳ ಸಂಘ, ವಿದ್ಯುತ್‌ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

ರಾಜ್ಯ ಸರ್ಕಾರಕ್ಕೆ ಹೊರೆ

ಪ್ರಸ್ತುತ ರಾಜ್ಯದಲ್ಲಿ ಎಸ್ಕಾಂಗಳ ಮೇಲೆ 50 ಸಾವಿರ ಕೋಟಿ ರು. ಸಾಲ ಇದೆ. ಖಾಸಗಿಯವರಿಗೆ ವಹಿಸುವಾಗ ರಾಜ್ಯ ಸರ್ಕಾರ ಅಷ್ಟೂ ಸಾಲವನ್ನು ತೀರಿಸಿ ಶೂನ್ಯ ಸಾಲದಲ್ಲಿ ಖಾಸಗಿ ಕಂಪನಿಗಳಿಗೆ ನಿರ್ವಹಣೆಗೆ ನೀಡಲಿದೆ. ಅಲ್ಲದೆ, ಪ್ರಿಪೇಯ್ಡ್‌ ಮೀಟರ್‌ ವ್ಯವಸ್ಥೆ ಜಾರಿಗೆ ತರುವ ಮೂಲಕ ಖಾಸಗಿಯವರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ರಾಜ್ಯ ಸರ್ಕಾರ ಸಾಲದ ಹೊರೆ ಹೊತ್ತು ಖಾಸಗಿಯವರ ಲಾಭಕ್ಕೆ ಖಾಸಗೀಕರಣ ಮಾಡಬೇಕಾಗುತ್ತದೆ ಎಂದು ರಾಮಕೃಷ್ಣಯ್ಯ ಹೇಳಿದರು.

ಎಸ್ಕಾಂ ಖಾಸಗೀಕರಣ: ಕೇಂದ್ರದ ಪ್ರಸ್ತಾವ ತಿರಸ್ಕರಿಸಲು ರಾಜ್ಯ ಇಂಧನ ಇಲಾಖೆ ನಿರ್ಧಾರ!

ಎಸ್ಕಾಂಗಳ ಖಾಸಗೀಕರಣಕ್ಕೆ ತಯಾರಿ?

ಇಂಧನ ಇಲಾಖೆ ಮೂಲಗಳ ಪ್ರಕಾರ, ರಾಜ್ಯದಲ್ಲೂ ಎಸ್ಕಾಂಗಳ ಖಾಸಗೀಕರಣಕ್ಕೆ ಹಲವು ಸುತ್ತಿನ ಸಿದ್ಧತೆ ಪೂರ್ಣಗೊಳಿಸಲಾಗಿದೆ. ರಾಜ್ಯ ಇಂಧನ ಇಲಾಖೆ, ಎಸ್ಕಾಂಗಳನ್ನು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದೊಂದಿಗೆ (ಕೆಪಿಟಿಸಿಎಲ್‌) ವಿಲೀನಗೊಳಿಸುವ ಸಂಬಂಧ ಎರಡು ಸುತ್ತಿನ ಸಭೆಗಳನ್ನು ಮುಗಿಸಲಾಗಿದೆ. ಕೇಂದ್ರ ಸರ್ಕಾರವು ಈಗಾಗಲೇ ಮೂರು ಬಾರಿ ಎಸ್ಕಾಂಗಳ ಖಾಸಗೀಕರಣಕ್ಕೆ ರಾಜ್ಯದ ಮೇಲೆ ಒತ್ತಡ ಹೇರಿತ್ತಾದರೂ ಸರ್ಕಾರ ಅದಕ್ಕೆ ತಿರಸ್ಕರಿಸಿತ್ತು. ಇದರ ನಡುವೆಯೂ ವಿದ್ಯುತ್‌ ಸರಬರಾಜು ಕಂಪನಿಗಳನ್ನು ಖಾಸಗೀಕರಣಗೊಳಿಸಲು ಸೆ.20 ರಂದು ಕೇಂದ್ರ ಇಂಧನ ಇಲಾಖೆ ಸ್ಟಾಂಡರ್ಡ್‌ ಬಿಡ್ಡಿಂಗ್‌ ಡಾಕ್ಯುಮೆಂಟೇಷನ್‌ ಆಫ್‌ ಡಿಸ್ಟ್ರಿಬ್ಯೂಷನ್‌ ಲೈಸನ್ಸಿಸ್‌’ ಹೆಸರಿನಲ್ಲಿ ಕರಡು ಸಿದ್ಧಪಡಿಸಿತ್ತು. ಅಲ್ಲದೆ ಬೆಸ್ಕಾಂ, ಚೆಸ್ಕಾಂ ಹಾಗೂ ಗುಲ್ಬರ್ಗಾ ವಿದ್ಯುತ್‌ ಸರಬರಾಜು ಕಂಪನಿಗಳನ್ನು ಇದರಡಿ ಖಾಸಗೀಕರಣಗೊಳಿಸಲು ರಾಜ್ಯ ಸರ್ಕಾರದ ಅಭಿಪ್ರಾಯ ಕೇಳಿತ್ತು. ಇದೀಗ ಕೇಂದ್ರ ಸರ್ಕಾರದ ಮಟ್ಟದಲ್ಲೇ ಕಾಯಿದೆ ತಿದ್ದುಪಡಿಗೊಂಡರೆ ರಾಜ್ಯದಲ್ಲೂ ವಿದ್ಯುತ್‌ ಪೂರೈಕೆ ಖಾಸಗೀಕರಣ ಅನಿವಾರ್ಯವಾಗಲಿದೆ.
 

Follow Us:
Download App:
  • android
  • ios