* ‘ಮೊದಲು ಬಿಲ್‌ ಕಟ್ಟಿ, ಮತ್ತೆ ವಿದ್ಯುತ್‌ ಬಳಸಿ’ ವ್ಯವಸ್ಥೆ* ರಾಜ್ಯದಲ್ಲಿ ಶೀಘ್ರ ವಿದ್ಯುತ್‌ ಮೀಟರ್‌ಗಳು ಪ್ರೀಪೇಯ್ಡ್‌!* 2023ರ ಡಿಸೆಂಬರ್‌ ತಿಂಗಳ ಒಳಗಾಗಿ ರಾಜ್ಯಾದ್ಯಂತ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ* ಸ್ಮಾರ್ಟ್‌ ಮೀಟರ್‌ ಅಳವಡಿಸುವಂತೆ ಕೇಂದ್ರ ಸರ್ಕಾರ ಸೂಚನೆ 

ಶ್ರೀಕಾಂತ್‌.ಎನ್‌.ಗೌಡಸಂದ್ರ

ಬೆಂಗಳೂರು(ಆ. 01): ನಿಮಗೆ ಎಷ್ಟುವಿದ್ಯುತ್‌ ಬೇಕೋ, ಅಷ್ಟಕ್ಕೆ ಮೊದಲೇ ಹಣ ಕಟ್ಟಬೇಕು. ಆಮೇಲೆ ವಿದ್ಯುತ್‌ ಬಳಸಬೇಕು... ಮೊಬೈಲ್‌ ಫೋನ್‌ಗಳಲ್ಲಿರುವ ‘ಪ್ರೀಪೇಯ್ಡ್‌’ ಮಾದರಿಯ ವ್ಯವಸ್ಥೆ ಶೀಘ್ರದಲ್ಲೇ ನಿಮ್ಮ ಮನೆಯ ವಿದ್ಯುತ್‌ ಮೀಟರ್‌ಗೂ ಬರಲಿದೆ.

ರಾಜ್ಯದ ಎಲ್ಲಾ ಐದು ವಿದ್ಯುತ್‌ ಸರಬರಾಜು ಕಂಪನಿಗಳ (ಎಸ್ಕಾಂ) ವ್ಯಾಪ್ತಿಯಲ್ಲೂ ‘ಪ್ರೀಪೇಯ್ಡ್‌ ಸ್ಮಾರ್ಟ್‌ ಮೀಟರ್‌’ ಅಳವಡಿಸುವಂತೆ ಕೇಂದ್ರ ಇಂಧನ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಕುರಿತು ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಜು.22ರಂದು ಪತ್ರ ಬರೆದಿರುವ ಕೇಂದ್ರ ಇಂಧನ ಸಚಿವಾಲಯ, ಕೂಡಲೇ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಕುರಿತು ಕ್ರಿಯಾಯೋಜನೆ ಸಿದ್ಧಪಡಿಸಿ 2023ರ ಡಿಸೆಂಬರ್‌ ಒಳಗಾಗಿ ಪ್ರೀಪೇಯ್ಡ್‌ ಮೀಟರ್‌ ಅಳವಡಿಕೆ ಮಾಡಬೇಕು ಎಂದು ಸ್ಪಷ್ಟಸೂಚನೆ ನೀಡಿದೆ.

ಯೋಜನೆಯ ರೂಪುರೇಷೆ:

ಕೇಂದ್ರ ಇಂಧನ ಇಲಾಖೆಯು ವಿದ್ಯುತ್‌ ಸರಬರಾಜು ವ್ಯವಸ್ಥೆ ಸುಧಾರಿಸಿ ಆದಾಯ ಸೋರಿಕೆ ತಡೆಯಲು ‘ರೀವ್ಯಾಂಪ್‌್ಡ ಡಿಸ್ಟ್ರಿಬ್ಯೂಷನ್‌ ಸೆಕ್ಟರ್‌ ಸ್ಕೀಮ್‌’ ಹೆಸರಿನಲ್ಲಿ ಯೋಜನೆ ರೂಪಿಸಿದೆ. ಪ್ರಸ್ತುತ ತಾಂತ್ರಿಕ ಸಮಸ್ಯೆ ಹಾಗೂ ವಿದ್ಯುತ್‌ ಸೋರಿಕೆಯಿಂದ ಉಂಟಾಗುತ್ತಿರುವ ಎ.ಸಿ. ಮತ್ತು ಟಿ ನಷ್ಟವನ್ನು (ಅಗ್ರಿಗೇಟ್‌ ಟೆಕ್ನಿಕಲ್‌ ಅಂಡ್‌ ಕಮರ್ಷಿಯಲ್‌ ಲಾಸ್‌) ದೇಶಾದ್ಯಂತ ಶೇ.12ರಿಂದ 15ರಷ್ಟುಕಡಿಮೆ ಮಾಡಲು ಹಾಗೂ 2024-25ರ ವೇಳೆಗೆ ಶೂನ್ಯಕ್ಕೆ ತರಲು ಪ್ರೀಪೇಯ್ಡ್‌ ಸ್ಮಾರ್ಟ್‌ ಮೀಟರ್‌ ಅಳವಡಿಕೆಗೆ ಮುಂದಾಗಿದೆ. ದೇಶಾದ್ಯಂತ ಒಟ್ಟು 3.03 ಲಕ್ಷ ಕೋಟಿ ರು. ವೆಚ್ಚವಾಗುವ ಈ ಯೋಜನೆಗೆ ಕೇಂದ್ರದಿಂದ ರಾಜ್ಯಗಳಿಗೆ ಒಟ್ಟು 97,631 ಕೋಟಿ ರು. ನೆರವು ನೀಡಲಾಗುತ್ತದೆ.

ರಾಜ್ಯದಲ್ಲಿ ಡಿಸೆಂಬರ್‌ 2023ರ ಒಳಗಾಗಿ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಮಾಡಿದರೆ ಶೇ.15ರಷ್ಟುಪ್ರೋತ್ಸಾಹ ಧನ ನೀಡಲಾಗುವುದು. ಪ್ರತಿ ಮೀಟರ್‌ಗೆ ಕನಿಷ್ಠ 900 ರು.ಗಳನ್ನು ಕೇಂದ್ರ ಸರ್ಕಾರವೇ ಮರುಪಾವತಿ ಮಾಡುವುದು. ಈ ಬಗ್ಗೆ ಎಸ್ಕಾಂಗಳಿಂದ ಕ್ರಿಯಾಯೋಜನೆ ಸಿದ್ಧಪಡಿಸಿ ಒಪ್ಪಿಗೆ ಪಡೆಯಬೇಕು. 2023ರ ಡಿಸೆಂಬರ್‌ ಒಳಗಾಗಿ ಯೋಜನೆ ಅನುಷ್ಠಾನಗೊಳಿಸಲು ಮುಂದಾಗುವ ಎಸ್ಕಾಂಗಳಿಗೆ ಮಾತ್ರ ಪ್ರೋತ್ಸಾಹಧನ ನೀಡಲಾಗುವುದು ಎಂದು ಸ್ಪಷ್ಟಪಡಿಸಿದೆ.

ಯೋಜನೆಯ ಉದ್ದೇಶ:

ನಷ್ಟವನ್ನು ಕಡಿಮೆ ಮಾಡಲು ವಿದ್ಯುತ್‌ ಪೂರೈಕೆ ಸುಧಾರಣೆಗೆ ಪ್ರೀಪೇಯ್ಡ್‌ ಸ್ಮಾರ್ಟ್‌ ಮೀಟರ್‌ ಹಾಗೂ ಸಿಸ್ಟಂ ಮೀಟರ್‌ ಅಳವಡಿಕೆ, ತರಬೇತಿ ನೀಡುವುದು ಹಾಗೂ ಅಗತ್ಯ ಮೂಲಸೌಕರ್ಯ ವ್ಯವಸ್ಥೆಗೆ ಸಹಕಾರ ನೀಡುವುದು ಯೋಜನೆಯ ಉದ್ದೇಶ. ಪ್ರತಿ ಮೀಟರ್‌ ಅಳವಡಿಕೆಯ ಪ್ರೋತ್ಸಾಹಧನವನ್ನು ಮೊದಲೇ ನೀಡುವುದಿಲ್ಲ. ಮೀಟರ್‌ ಅಳವಡಿಕೆಯಾಗಿ ಒಂದು ತಿಂಗಳ ಬಿಲ್ಲಿಂಗ್‌ ಆದ ಮೇಲೆ ಮಾನಿಟರಿಂಗ್‌ ಕಮಿಟಿ ವರದಿ ಆಧಾರದ ಮೇಲೆ ಪ್ರೋತ್ಸಾಹಧನ ನೀಡಲಾಗುವುದು ಎಂದು ಇಂಧನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಒಪ್ಪಂದಕ್ಕೆ ಸಹಿ ಕಡ್ಡಾಯ:

ಯೋಜನೆಯಡಿ ಪ್ರೋತ್ಸಾಹಧನ ಪಡೆಯಬೇಕಾದರೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಜೊತೆ ಮೊದಲು ಒಪ್ಪಂದಕ್ಕೆ ಸಹಿ ಹಾಕುವುದು ಕಡ್ಡಾಯ ಎಂದು ಪತ್ರದಲ್ಲಿ ತಿಳಿಸಲಾಗಿದೆ. ರಾಜ್ಯ ಸರ್ಕಾರದಿಂದ 200 ಕೋಟಿ ರು. ಕನ್ಸಲ್ಟೆನ್ಸಿಗಾಗಿ ವೆಚ್ಚ ಮಾಡಬೇಕು. ಕೇಂದ್ರದ ಮಾರ್ಗಸೂಚಿ ಅನ್ವಯ ಯೋಜನೆ ಅನುಷ್ಠಾನಗೊಳಿಸಬೇಕು. ಯೋಜನೆಯು 2021-22ರಿಂದ 2025-26ರವರೆಗೆ ಅನ್ವಯವಾಗಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಏನಿದು ಯೋಜನೆ?

ವಿದ್ಯುತ್‌ ಸೋರಿಕೆ, ನಷ್ಟತಗ್ಗಿಸಲು ಎಸ್ಕಾಂಗಳು ಪ್ರೀಪೇಯ್ಡ್‌ ಸ್ಮಾರ್ಟ್‌ ಮೀಟರ್‌ ಅಳವಡಿಸಿದರೆ ಶೇ.15ರಷ್ಟುಪ್ರೋತ್ಸಾಹಧನವನ್ನು ಕೇಂದ್ರ ಸರ್ಕಾರ ನೀಡಲಿದೆ. ಈ ಬಗ್ಗೆ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರನಾಯಕ್‌ ಅವರು ಈಗಾಗಲೇ ಎಸ್ಕಾಂಗಳ ಜತೆ ಒಂದು ಸುತ್ತಿನ ಸಭೆ ನಡೆಸಿದ್ದಾರೆ. ಬೆಸ್ಕಾಂ (ಬೆಂಗಳೂರು) ವ್ಯಾಪ್ತಿಯಲ್ಲಿ ಈಗಾಗಲೇ ಸ್ಮಾರ್ಟ್‌ ಮೀಟರ್‌ ಪ್ರಾಯೋಗಿಕ ಅಳವಡಿಕೆ ಜಾರಿಯಾಗಿದ್ದು, ಕೇಂದ್ರ ಸರ್ಕಾರವು 2020ರ ಜನವರಿಯಿಂದ ಈಚೆಗೆ ಅಳವಡಿಸಿರುವ ಮೀಟರ್‌ಗಳಿಗೂ ಸಹಾಯಧನ ನೀಡುವುದಾಗಿ ತಿಳಿಸಿದೆ. ಹೀಗಾಗಿ ಬೆಸ್ಕಾಂ ವ್ಯಾಪ್ತಿಯಲ್ಲಿ ಸದ್ಯದಲ್ಲೇ ಮತ್ತಷ್ಟುಉಪ ವಿಭಾಗಗಳಲ್ಲಿ ಸ್ಮಾರ್ಟ್‌ ಮೀಟರ್‌ ಅಳವಡಿಕೆಯಾಗುವ ಸಾಧ್ಯತೆ ಇದೆ.

ಖಾಸಗಿಕರಣ ಹುನ್ನಾರ: ಎಸ್ಕಾಂ ಸಿಬ್ಬಂದಿ ಆರೋಪ

ಪ್ರೀಪೇಯ್ಡ್‌ ವಿದ್ಯುತ್‌ ಮೀಟರ್‌ ಅಳವಡಿಕೆ ಯೋಜನೆಗೆ ರಾಜ್ಯದ ಎಸ್ಕಾಂಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರೀಪೇಯ್ಡ್‌ ವ್ಯವಸ್ಥೆ ಜಾರಿಗೊಳಿಸಿದ ಬಳಿಕ ವಿದ್ಯುತ್‌ ಕಾಯ್ದೆ ತಿದ್ದುಪಡಿ ನಿಯಮಗಳ ಪ್ರಕಾರ ಖಾಸಗಿಯವರಿಗೆ ವಿದ್ಯುತ್‌ ಸರಬರಾಜು ವ್ಯವಸ್ಥೆಯನ್ನು ಒಪ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೀರ್ಮಾನಿಸಿವೆ. ಅಲ್ಲದೆ ಎಸ್ಕಾಂಗಳ ಮೇಲಿನ ಸಾಲವನ್ನೂ ರಾಜ್ಯ ಸರ್ಕಾರಗಳೇ ತೀರಿಸಿ ನಷ್ಟದಲ್ಲಿಲ್ಲದ ಎಸ್ಕಾಂಗಳನ್ನು ಹಸ್ತಾಂತರಿಸಲು ಹುನ್ನಾರ ನಡೆಸಿವೆ ಎಂದು ಅವರು ಆರೋಪ ಮಾಡಿದ್ದಾರೆ.