Asianet Suvarna News Asianet Suvarna News

Karnataka| ರಾಜ್ಯದ ಗ್ರಾಮೀಣ ಯೋಜನೆಗೆ ಕೇಂದ್ರ ಪ್ರಶಂಸೆ

*   ರಾಜ್ಯ ಸರ್ಕಾರ ಆರ್ಥಿಕ ನೆರವು ಕೋರಿದರೆ ಪರಿಶೀಲನೆ: ಕೇಂದ್ರ ಸಚಿವ ಕಪಿಲ್‌
*   ಮನೆಗಳಿಗೆ ಸೋಲಾರ್‌ ವಿದ್ಯುತ್‌ ಕಲ್ಪಿಸಲು ನೆರವಾಗಿ ಎಂದು ಈಶ್ವರಪ್ಪ ಮೊರೆ
*   ಡಿಜಿಟಲ್‌ ಲೈಬ್ರರಿ, ಶುದ್ಧ ಕುಡಿವ ನೀರು ಬಗ್ಗೆ ಮೆಚ್ಚುಗೆ
 

Central Government Praise for the Karnataka Rural Projects grg
Author
Bengaluru, First Published Nov 10, 2021, 6:56 AM IST
  • Facebook
  • Twitter
  • Whatsapp

ಬೆಂಗಳೂರು(ನ.10):  ರಾಜ್ಯ ಸರ್ಕಾರ(Government of Karnataka) ಗ್ರಾಮೀಣ ಪ್ರದೇಶದಲ್ಲಿ ಜಾರಿಗೆ ತಂದಿರುವ ಡಿಜಿಟಲ್‌ ಗ್ರಂಥಾಲಯ, ಸೌರಶಕ್ತಿ ಬೀದಿ ದೀಪ ವ್ಯವಸ್ಥೆ, ಶುದ್ಧ ಕುಡಿಯವ ನೀರಿನ ಸೌಲಭ್ಯ ಮುಂತಾದ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೇಂದ್ರ ಪಂಚಾಯತ್‌ ರಾಜ್‌ ಖಾತೆ ರಾಜ್ಯ ಸಚಿವ ಕಪಿಲ್‌ ಮೋರೇಶ್ವರ್‌ ಪಾಟೀಲ್‌(Kapil Moreshwar Patil), ಈ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ದೇಶಾದ್ಯಂತ ಜಾರಿಗೆ ತರಲು ಚಿಂತನೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಪ್ರಗತಿ ಪರಿಶೀಲನೆ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತ ಪುಸ್ತಕ ಬಿಡುಗಡೆ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗ್ರಾಮೀಣ ಭಾಗದ ನಾಲ್ವರು ಕ್ರೀಡಾಪಟುಗಳನ್ನು ಪುರಸ್ಕರಿಸಿ ಮಾತನಾಡಿದ ಅವರು, ಪಂಚಾಯತ್‌ ರಾಜ್‌(Panchayat Raj) ವ್ಯವಸ್ಥೆಯಲ್ಲಿ ಕರ್ನಾಟಕ(Karnataka) ಅತ್ಯಂತ ಬಲಿಷ್ಠವಾಗಿದೆ. ಹಲವು ನವೀನ ಯೋಜನೆಗಳನ್ನು ಜಾರಿಗೆ ತಂದಿದೆ.

ಬಿಜೆಪಿ ನಾಯಕರ ರಾಜ್ಯ ಪ್ರವಾಸಕ್ಕೆ ಮುಹೂರ್ತ ಫಿಕ್ಸ್, 4 ತಂಡಗಳಾಗಿ 4 ವಿಭಾಗಳಲ್ಲಿ 'ಜನಸ್ವರಾಜ್ ಯಾತ್ರೆ'

ತಾವು ಭೇಟಿ ನೀಡಿದ ಕೋಣನಕುಂಟೆ ಹಾಗೂ ದೊಡ್ಡಜಾಲ ಗ್ರಾಮಗಳಲ್ಲಿ ಇರುವ ಸೌಲಭ್ಯ, ಜಾರಿಯಾಗಿರುವ ಕಾರ್ಯಕ್ರಮ ಮಾದರಿಯಾಗಿವೆ. ಕರ್ನಾಟಕಕ್ಕೆ ಮೊದಲೇ ಭೇಟಿ ನೀಡಿದ್ದರೆ ಈ ಕಾರ್ಯಕ್ರಮಗಳನ್ನು ಬೇರೆಡೆ ಜಾರಿಗೆ ತರಲು ಅನುಕೂಲವಾಗುತ್ತಿತ್ತು. ಆದರೂ ಮುಂದಿನ ದಿನಗಳಲ್ಲಿ ಇಲ್ಲಿಯ ಕೆಲವು ಕಾರ್ಯಕ್ರಮಗಳನ್ನು ದೇಶದ ಎಲ್ಲ ಕಡೆ ಜಾರಿಗೆ ತರಲಾಗುವುದು ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ಯ ಸಚಿವ ಕೆ.ಎಸ್‌. ಈಶ್ವರಪ್ಪ(KS Eshwarappa) ಮಾತನಾಡಿದರು. ಈ ವೇಳೆ ವಿವಿಧ ಕ್ರೀಡೆಯಲ್ಲಿ ಸಾಧನೆ ಮಾಡಿದ ಶಿವಮೊಗ್ಗದ ಧನಲಕ್ಷ್ಮಿ, ಸಹನಾ, ಹಳಿಯಾಳದ ಸೂರಜ್‌ ಹಾಗೂ ಶಶಿಕಾಂತ್‌ ವಿರೂಪಾಕ್ಷ ಅವರನ್ನು ಸಚಿವರು ಪುರಸ್ಕರಿಸಿದರು. ಇಲಾಖೆಯ ಪ್ರಧಾನ ಕಾರ್ಯದರ್ಶಿ(ಪಂಚಾಯತ್‌ ರಾಜ್‌) ಉಮಾ ಮಹಾದೇವನ್‌, ಆಯುಕ್ತೆ ಶಿಲ್ಪಾ ನಾಗ್‌ ಮುಂತಾದವರು ಉಪಸ್ಥಿತರಿದ್ದರು.

ಹಳ್ಳಿ ಮನೆಗಳಿಗೆ ಸೌರ ವಿದ್ಯುತ್‌ಗೆ ಕ್ರಮ

ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗಳಿಗೆ ಸೌರ ವಿದ್ಯುತ್‌(Solar Power)ನೀಡುವ ಸಂಬಂಧ ಆರ್ಥಿಕ ನೆರವು ಕೋರಿ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಪಂಚಾಯತ್‌ ರಾಜ್‌ ಖಾತೆ ರಾಜ್ಯ ಸಚಿವ ಕಪಿಲ್‌ ಮೋರೇಶ್ವರ್‌ ಪಾಟೀಲ್‌ ಭರವಸೆ ನೀಡಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಕೊನೆಯಲ್ಲಿ ಗ್ರಾಮಾಂತರ ಪ್ರದೇಶದ ಮನೆಗಳಿಗೆ ಸೌರ ವಿದ್ಯುತ್‌ ಸೌಲಭ್ಯ ನೀಡಲು ಆರ್ಥಿಕ ನೆರವು ನೀಡಬೇಕೆಂಬ ಸಚಿವ ಕೆ.ಎಸ್‌. ಈಶ್ವರಪ್ಪ ಅವರ ಬೇಡಿಕೆಗೆ ಪ್ರತಿಕ್ರಿಯಿಸಿದ ಅವರು, ವಿದ್ಯುತ್‌ ಬಳಕೆ ಕಡಿಮೆ ಮಾಡಿ, ಸೌರ ವಿದ್ಯುತ್‌ ಬಳಕೆ ಎಲ್ಲ ರೀತಿಯಿಂದ ಉತ್ತಮವಾಗಿದೆ. ಈ ಬಗ್ಗೆ ಇಲಾಖೆ ಪ್ರಸ್ತಾವನೆ ಸಲ್ಲಿಸಿದರೆ ಪರಿಶೀಲಿಸಲಾಗುವುದು ಎಂದರು.

ಇದಕ್ಕೂ ಮುನ್ನ ಈಶ್ವರಪ್ಪ ಅವರು ಇಲಾಖೆಯಿಂದ ಎಲ್ಲ ಪಂಚಾಯಿತಿ ಕಚೇರಿಗಳಿಗೆ ಸೌರ ವಿದ್ಯುತ್‌ ಸೌಲಭ್ಯ ಕಲ್ಪಿಸಲಾಗುತ್ತಿದೆ. ಅನೇಕ ಕಡೆ ಸೌರಶಕ್ತಿ ಬೀದಿ ದೀಪ ಅಳವಡಿಸಲಾಗಿದೆ ಎಂದರು.

ಗ್ರಾಮೀಣ ಭಾಗದಲ್ಲಿ ಜಿಮ್‌(Gym) ಸ್ಥಾಪನೆ ಮಾಡಬೇಕು ಎಂಬ ಮತ್ತೊಂದು ಬೇಡಿಕೆ ಬಗ್ಗೆ ಉತ್ತರಿಸಿದ ಸಚಿವರು, ಈ ವಿಷಯ ಕ್ರೀಡಾ ಇಲಾಖೆಗೆ(Department of Sports) ಬರಲಿದೆ. ಆದರೂ ಬೇರೆ ಯೋಜನೆಯಡಿ ನೀಡಲು ಸಾಧ್ಯವೆ ಎಂಬ ಬಗ್ಗೆ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.

ಬ್ರಿಗೇಡ್  ಅಪಾರ್ಟ್‌ಮೆಂಟ್‌ಗೆ ಸೋಲಾರ್ ಶಕ್ತಿ.. ಅದ್ಭುತ ಯೋಜನೆ

ಮನೆ ಹಂಚಿಕೆ ತೀವ್ರಗೊಳಿಸಿ:

ಕೇಂದ್ರ ಸರ್ಕಾರದ ಯೋಜನೆಯಡಿ ಗ್ರಾಮೀಣ(Rural) ಭಾಗದ ಜನರಿಗೆ ಮನೆ ನೀಡುವ ಕಾರ್ಯಕ್ರಮವನ್ನು ಇನ್ನಷ್ಟು ವೇಗದಲ್ಲಿ ಜಾರಿಗೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವ ಪಾಟೀಲ್‌, ಕೇಂದ್ರ ಸರ್ಕಾರ(Central Government) ಕೆಲವು ಯೋಜನೆಗಳಿಗೆ ಹೆಚ್ಚಿನ ಪ್ರಮಾಣದ ಅನುದಾನ(Grants) ನೀಡುತ್ತದೆ. ಇಂತಹ ಯೋಜನೆ ಅನುಷ್ಠಾನವಾದ ಕಡೆ ಎಲ್ಲರಿಗೂ ಕಾಣುವಂತೆ ಫಲಕವನ್ನು ಹಾಕಬೇಕು ಎಂದು ನಿರ್ದೇಶನ ನೀಡಿದರು.

ಪರಿಣಾಮಕಾರಿ ‘ಸ್ವಾಮಿತ್ವ’ ಯೋಜನೆ:

ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಿಗೆ ತಮ್ಮ ಆಸ್ತಿ ವಿವರ ನೀಡುವ ‘ಸ್ವಾಮಿತ್ವ’ ಕಾರ್ಯಕ್ರಮದಡಿ ಈವರೆಗೆ 50 ಲಕ್ಷ ಕುಟುಂಬಗಳಿಗೆ ಸ್ವಾಮಿತ್ವ ಕಾರ್ಡ್‌ ನೀಡಲಾಗಿದೆ. ಅನೇಕ ರಾಜ್ಯಗಳಲ್ಲಿ ಕಾರ್ಡ್‌ ನೀಡಿಕೆ ವೇಗದಲ್ಲಿ ನಡೆಯುತ್ತಿದೆ. ಹರಿಯಾಣ ರಾಜ್ಯದಲ್ಲಿ ಶೇ. 100ರಷ್ಟು ಜಾರಿಯಾಗಿದೆ. ಕರ್ನಾಟಕ ರಾಜ್ಯದಲ್ಲಿ ಸ್ವಾಮಿತ್ವ ಕಾರ್ಡ್‌ ವಿತರಣೆಗೆ ಇನ್ನಷ್ಟು ವೇಗ ನೀಡಬೇಕಾಗಿದೆ ಎಂದರು.

ಈ ಯೋಜನೆ ಕೇವಲ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗೆ ಬರುವುದಿಲ್ಲ, ಸರ್ವೇ ಆಫ್‌ ಇಂಡಿಯಾ ಹಾಗೂ ಕಂದಾಯ ಇಲಾಖೆಯ ಪಾಲು ಸಹ ಇದೆ. ಹಾಗಾಗಿ ಕೆಲವು ಕಡೆ ನಿಧಾನವಾಗಿ ನಡೆಯುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
 

Follow Us:
Download App:
  • android
  • ios