Asianet Suvarna News Asianet Suvarna News

Vaccine for Children: 15-18 ವರ್ಷದವರಿಗೆ ಕೋವಿಡ್‌ ವ್ಯಾಕ್ಸಿನ್: ಹೈಸ್ಕೂಲ್‌, ಕಾಲೇಜಲ್ಲೇ ಲಸಿಕೆ ಕೇಂದ್ರ!

*ಮಕ್ಕಳಿಗೆ ಹೈಸ್ಕೂಲ್‌, ಕಾಲೇಜಲ್ಲೇ ಲಸಿಕೆ ಕೇಂದ್ರ
*ಜಿಲ್ಲಾಡಳಿತ ಶಾಲೆ ಆಯ್ಕೆ ಮಾಡಬೇಕು: ಆರೋಗ್ಯ ಇಲಾಖೆ
*ಹೆಡ್‌ ಮಾಸ್ಟರ್‌ ಮೊಬೈಲ್‌ ನಂಬರ್‌ಗೂ ಮಕ್ಕಳ ನೋಂದಣಿ
*ಜ.3ರಿಂದ 15-18 ವರ್ಷದವರಿಗೆ ಕೋವಿಡ್‌ ಲಸಿಕೆ ನೀಡಿಕೆ

Centers will be opened in schools and colleges ahead of Vaccination for Children mnj
Author
Bengaluru, First Published Jan 1, 2022, 4:57 AM IST

ಬೆಂಗಳೂರು (ಜ. 1): ಶಾಲೆ ಮತ್ತು ಕಾಲೇಜುಗಳಲ್ಲಿಯೇ ಕೊರೋನಾ ಲಸಿಕೆ ಕೇಂದ್ರವನ್ನು (Vaccination Centre) ತೆರೆಯುವ ಮೂಲಕ 15-18 ವರ್ಷದ ಮಕ್ಕಳಿಗೆ ಲಸಿಕೆ ನೀಡಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ. ಜ.3ರಿಂದ ಮಕ್ಕಳ ಕೊರೋನಾ ಲಸಿಕೆ (Vaccine for Children) ಅಭಿಯಾನ ಆರಂಭವಾಗುತ್ತಿದ್ದು, ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ಜಿಲ್ಲಾಡಳಿತಗಳಿಗೆ ಮಾರ್ಗಸೂಚಿ ಹೊರಡಿಸಿದೆ. ಇದರಲ್ಲಿ ಪ್ರಮುಖವಾಗಿ ಪೋಷಕರಿಗೆ ಜಾಗೃತಿ, ಶಾಲಾ, ಕಾಲೇಜುಗಳಲ್ಲಿ ಲಸಿಕೆ ಕೇಂದ್ರ ಸ್ಥಾಪನೆ, ಮಕ್ಕಳ ಹೆಸರು ನೋಂದಣಿ, ಲಸಿಕೆ ಸಮಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಿಳಿಸಲಾಗಿದೆ.

ಜಿಲ್ಲಾಡಳಿತವು ಮೊದಲು ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಕಾಲೇಜು ತಾಂತ್ರಿಕ ಶಿಕ್ಷಣ ಇಲಾಖೆ, ನರ್ಸಿಂಗ್‌ ಪ್ಯಾರಾ ಮೆಡಿಕಲ್‌ ಬೋರ್ಡ್‌ನಿಂದ 15-18 ವರ್ಷ (2007ಕ್ಕಿಂತ ಮೊದಲು ಜನಿಸಿದವರು) ವಿದ್ಯಾರ್ಥಿಗಳ ಪಟ್ಟಿಪಡೆಯಬೇಕು. ನಂತರ ಆಯಾ ಅಥವಾ ಸಮೀಪದ ಶಾಲೆ ಮತ್ತು ಕಾಲೇಜುಗಳಲ್ಲಿ ಲಸಿಕೆ ಕೇಂದ್ರವನ್ನು ತೆರೆಯಬೇಕು. ಮುಂಚಿತವಾಗಿಯೇ ಲಸಿಕೆ ಮತ್ತು ಅದರ ಅವಶ್ಯಕತೆ ಕುರಿತು ಮಾಹಿತಿ ನೀಡಿ ಅವರ ಸಂದೇಹ ಪರಿಹಾರ ಮಾಡಿ ಸೂಕ್ತ ದಿನಾಂಕ ನಿಗದಿಪಡಿಸಿ ಆನಂತರ ಲಸಿಕೆ ನೀಡಬೇಕಿದೆ. ಅಡ್ಡ ಪರಿಣಾಮಗಳು ಉಂಟಾದರೆ ನಿಭಾಯಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿರಬೇಕು ಎಂದು ತಿಳಿಸಲಾಗಿದೆ.

ಶಾಲಾ/ ಕಾಲೇಜು ಲಸಿಕೆ ಶಿಬಿರದಲ್ಲಿ ಲಸಿಕೆ ಪಡೆಯದಿರುವ ಮಕ್ಕಳನ್ನು, ಶಾಲೆ ಬಿಟ್ಟ, ಹೊರಗುಳಿದ ಮಕ್ಕಳನ್ನು ಪತ್ತೆ ಮಾಡಿ ಸಮೀಪದ ಲಸಿಕೆ ಕೇಂದ್ರದಲ್ಲಿ ಲಸಿಕೆ ಕೊಡಿಸಬೇಕು. ಕಾರ್ಮಿಕ, ನಗರಾಭಿವೃದ್ಧಿ, ಗ್ರಾಮೀಣ, ಪಂಚಾಯತ್‌ರಾಜ್‌ ಸೇರಿದಂತೆ ವಿವಿಧ ಇಲಾಖೆಗಳು ಆರೋಗ್ಯ ಇಲಾಖೆಗೆ ಸಹಕರಿಸಬೇಕು. ಇನ್ನು ಯಾವುದೇ ಲಸಿಕಾ ಕೇಂದ್ರಗಳಲ್ಲಿ ಮಕ್ಕಳ ಮತ್ತು 18 ವರ್ಷ ಮೇಲ್ಪಟ್ಟವರ ಲಸಿಕಾ ಶಿಬಿರ ಇದ್ದರೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಲಾಗಿದೆ.

ಶಾಲೆಗಳ ಆಯ್ಕೆ, ಪಟ್ಟಿಬಿಡುಗಡೆ:

ಜಿಲ್ಲಾಡಳಿತವು ಲಸಿಕೆ ಶಿಬಿರಕ್ಕೆ ಅರ್ಹ ಶಾಲೆಗಳನ್ನು (Schools) ಗುರುತಿಸಬೇಕು. ಪ್ರಮುಖವಾಗಿ ಶಾಲೆ/ಕಾಲೇಜುಗಳ ಸಾಕಷ್ಟುಸ್ಥಳಾವಕಾಶವಿರುವ ಮೂರು ಕೊಠಡಿಗಳು, ಲಸಿಕೆ ಸಂಗ್ರಹಕ್ಕೆ ಅಗತ್ಯ ವ್ಯವಸ್ಥೆ ಇರಬೇಕು. ಜತೆಗೆ ವೈದ್ಯಕೀಯ ಪರಿಕರ ಇಟ್ಟುಕೊಳ್ಳಲು ಜಾಗ, ಸ್ವಚ್ಛತೆ ಕುರಿತು ಆದ್ಯತೆ ನೀಡಬೇಕು. ಆಯ್ಕೆಯಾದ ಶಾಲೆಯ ಪಟ್ಟಿಯನ್ನು ಪ್ರಕಟಿಸಿ ಸಮೀಪದ ಶಾಲೆಗಳಿಗೆ ಮಾಹಿತಿ ನೀಡಬೇಕು ಎಂದು ತಿಳಿಸಲಾಗಿದೆ.

ಖಾಸಗಿ ಆಸ್ಪತ್ರೆಯಲ್ಲೂ ಅವಕಾಶ:

ಶಾಲಾ ಮತ್ತು ಕಾಲೇಜುಗಳಲ್ಲಿ ಆರೋಗ್ಯ ಇಲಾಖೆಗಳಿಂದ ಹಮ್ಮಿಕೊಳ್ಳುವ ಲಸಿಕೆ ಕೇಂದ್ರಗಳಲ್ಲಿ ಲಸಿಕೆ ಉಚಿತವಾಗಿರುತ್ತದೆ. ಖಾಸಗಿ ಶಾಲೆಗಳು ಇಚ್ಛೆಪಟ್ಟಲ್ಲಿ ಖಾಸಗಿ ಆಸ್ಪತ್ರೆಗಳೊಂದಿಗೆ ಸಮನ್ವಯತೆಯೊಂದಿಗೆ ನಿಗದಿತ ದರದಲ್ಲಿ ತಮ್ಮ ವಿದ್ಯಾರ್ಥಿಗಳಿಗೆ ಲಸಿಕೆ ಕೊಡಿಸಬಹುದು.

ಲಸಿಕೆ ಪಡೆಯೋದು ಹೇಗೆ?

2007ಕ್ಕೂ ಮುಂಚೆ ಜನಿಸಿದ ಮಕ್ಕಳು ಲಸಿಕೆಗೆ ಅರ್ಹ. ಕೋವಿನ್‌ ಪೋರ್ಟಲ್‌ನಲ್ಲಿ ಮಕ್ಕಳೇ ಸ್ವತಃ ತಮ್ಮ ಅಥವಾ ಪೋಷಕರ ಮೊಬೈಲ್‌ ನಂಬರ್‌ ಬಳಸಿ ನೋಂದಣಿ ಮಾಡಬಹುದು. ಲಭ್ಯವಿಲ್ಲದಿದ್ದಲ್ಲಿ ಮುಖ್ಯೋಪಾಧ್ಯಾಯರ ಮೊಬೈಲ್‌ ನಂಬರ್‌ ಬಳಸಬಹುದು. ಇನ್ನು ನೋಂದಣಿ ಸಮಯದಲ್ಲಿ ಶಾಲಾ ಗುರುತಿನ ಚೀಟಿ ಅಥವಾ ಆಧಾರ್‌ ಕಾರ್ಡ್‌ ನೀಡಬೇಕು.

ಯಾವ ಲಸಿಕೆ ಎಷ್ಟು?

ಮಕ್ಕಳಿಗೆ ಕೋವ್ಯಾಕ್ಸಿನ್‌ ಲಸಿಕೆಯನ್ನು 0.5 ಎಂ.ಎಲ್‌ ನೀಡಬೇಕು. ಮೊದಲ ಡೋಸ್‌ ಪಡೆದ 28 ದಿನಗಳ ನಂತರ 2ನೇ ಡೋಸ್‌ ನೀಡಬೇಕು.

ಇತರೆ ಪ್ರಮುಖ ಅಂಶಗಳು

* ಸಹ ಅಸ್ವಸ್ಥತೆ ಹೊಂದಿರುವ ಮಕ್ಕಳಿಗೆ ಲಸಿಕೆ ನೀಡುವ ಮುನ್ನ ಪೋಷಕರು ಮತ್ತು ವೈದ್ಯರ ಅನುಮತಿ ಕಡ್ಡಾಯ

* ಮಕ್ಕಳು ಟಿಡಿ ಅಥವಾ ಇತರೆ ಲಸಿಕೆ ಪಡೆದಿದ್ದರೆ 15 ದಿನಗಳ ಬಳಿಕ ಕೊರೋನಾ ಲಸಿಕೆ ನೀಡಬೇಕು

ಐಡಿ ಕಾರ್ಡ್‌ ತೋರಿಸಿ 3ನೇ ಡೋಸ್‌

9 ತಿಂಗಳ ಬಳಿಕ ಮೂರನೇ ಡೋಸ್‌ ಪಡೆಯುತ್ತಿರುವ ಆರೋಗ್ಯ, ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟಸಹ ಅಸ್ವಸ್ಥತೆ ಹೊಂದಿರುವ ಸಾರ್ವಜನಿಕರು ಈಗಾಗಲೇ ನೋಂದಣಿ ಮಾಡಿರುವ ಕೋವಿನ್‌ ಪೋರ್ಟಲ್‌ ಖಾತೆ ಮೂಲಕವೇ ನೋಂದಾಯಿಸಿ ಲಸಿಕೆ ಪಡೆಯಬಹುದು. ಅಥವಾ ನೇರವಾಗಿ ಲಸಿಕೆ ಕೇಂದ್ರಕ್ಕೆ ತೆರಳಿ ನೋಂದಣಿ ಮಾಡಿಸಬಹುದು.

ಈಗಾಗಲೇ 9 ತಿಂಗಳು ಪೂರ್ಣಗೊಂಡಿದ್ದರೆ ನೋದಾಯಿತ ಮೊಬೈಲ್‌ ನಂಬರ್‌ಗೆ 3ನೇ ಡೋಸ್‌ಗೆ ಆಗಮಿಸುವಂತೆ ಸಂದೇಶ ಬರಲಿದೆ. ಈ ಹಿಂದೆ ಸಾರ್ವಜನಿಕರ ವಿಭಾಗದಲ್ಲಿ ಲಸಿಕೆ ಪಡೆದಿದ್ದ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಪ್ರಸ್ತುತ ಕರ್ತವ್ಯದ ಗುರುತಿನ ಚೀಟಿ (ಐಡಿ) ತೋರಿಸಿ ಲಸಿಕೆ ಪಡೆಯಬಹುದು. 60 ವರ್ಷ ಮೇಲ್ಪಟ್ಟಸಹ ಅಸ್ವಸ್ಥತೆ ಇರುವವರು ಮೂರನೇ ಡೋಸ್‌ಗೆ ಯಾವುದೇ ವೈದ್ಯರಿಂದ ಪ್ರಮಾಣ ಪತ್ರ ನೀಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇದನ್ನೂ ಓದಿ:

1) Covid 19 Variant: ಮಹಾರಾಷ್ಟ್ರದಲ್ಲಿ ಒಮಿಕ್ರೋನ್‌ ಸೋಂಕಿತ ಸಾವು: ದೇಶದಲ್ಲೇ ಮೊದಲು!

2) Vaccine Is Imp : ಲಸಿಕೆ, ಮಾಸ್ಕ್‌ ರಾಮಬಾಣ, ರಾತ್ರಿ ಕರ್ಫ್ಯೂ ಅಲ್ಲ ಎಂದ WHO

Follow Us:
Download App:
  • android
  • ios