ಸ್ವಂತ ಕಂಪನಿಗೆ 3500 ಕೋಟಿ ವರ್ಗಾಯಿಸಿದ್ದ ಸಿದ್ಧಾರ್ಥ| ಕಾಫಿ ಡೇ ಕಂಪನಿ ನಡೆಸಿದ್ದ ಆಂತರಿಕ ತನಿಖೆಯಿಂದ ಮಾಹಿತಿ

ನವದೆಹಲಿ(ಜು.25): ಖ್ಯಾತ ಉದ್ಯಮಿ, ಕಾಫೀ ಡೇ ಸಮೂಹದ ಮಾಲೀಕ ವಿ.ಜಿ.ಸಿದ್ಧಾರ್ಥ ಅವರ ಸಾವಿಗೆ ಕಾರಣವಾದ ಸನ್ನಿವೇಶಗಳ ಕುರಿತು ತನಿಖೆ ನಡೆಸಿದ್ದ ಸಿಬಿಐನ ನಿವೃತ್ತ ನಿರ್ದೇಶಕ ಅಶೋಕ್‌ ಕುಮಾರ್‌ ಮಲ್ಹೋತ್ರಾ ನೇತೃತ್ವದ ಸಮಿತಿ, ಸಿದ್ಧಾರ್ಥ ಅವರು ಕಾಫೀಡೇನಿಂದ ಸುಮಾರು 3535 ಕೋಟಿ ರು.ಗಳನ್ನು ತಮ್ಮ ಸ್ವಂತ ಕಂಪನಿಗಳಿಗೆ ವರ್ಗಾಯಿಸಿದ್ದನ್ನು ಕಂಡುಕೊಂಡಿದೆ. ಅಲ್ಲದೆ ಸಿದ್ಧಾರ್ಥ ಅವರಿಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ವಿಷಯದಲ್ಲಿ ಆದಾಯ ತೆರಿಗೆ ಇಲಾಖೆಗೆ ಕ್ಲೀನ್‌ಚಿಟ್‌ ನೀಡಿದೆ.

Add Asianetnews Kannada as a Preferred SourcegooglePreferred

"

ಸಿದ್ದಾರ್ಥ ಅವರ ‘ಮೈಸೂರ್‌ ಅಮಾಲ್ಗಮೇಟೆಡ್‌ ಕಾಫಿ ಎಸ್ಟೇಟ್ಸ್‌ ಲಿ (ಎಂಎಸಿಇಎಲ್‌)’, ಕಾಫಿ ಡೇ ಎಂಟರ್‌ಪ್ರೈಸೆಸ್‌ ಲಿ. (ಸಿಡಿಇಎಲ್‌)ಗೆ 3535 ಕೋಟಿ ರು. ಬಾಕಿ ಉಳಿಸಿಕೊಂಡಿದೆ. ಈ ಪೈಕಿ 842 ಕೋಟಿ ರು. ಸಾಲದ ಬಗ್ಗೆ ಎಂಎಸಿಇಎಲ್‌ನ ವಾರ್ಷಿಕ ಲೆಕ್ಕಪತ್ರದಲ್ಲಿ ಉಲ್ಲೇಖಿಸಲಾಗಿದೆ. ಉಳಿದ 2693 ಕೋಟಿ ರು. ಬಗ್ಗೆ ಮುಂದೆ ಗಮನಹರಿಸಬೇಕಿದೆ ಎಂದು ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.

ಕೆಫೆ ಕಾಫೀ ಡೇ ಮಾಲೀಕ ಸಿದ್ಧಾರ್ಥ ಆತ್ಮಹತ್ಯೆ ಮಾಡಿದ್ದ ನೇತ್ರಾವತಿ ಸೇತುವೆಗೆ ತಡೆಬೇಲಿ

ಈ ನಡುವೆ ಬಾಕಿ ಹಣ ವಸೂಲಿಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಈ ವಸೂಲಿ ಪ್ರಕ್ರಿಯೆ ಮೇಲುಸ್ತುವಾರಿಗೆ ಸುಪ್ರೀಂಕೋರ್ಟ್‌ ಅಥವಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇಮಕಕ್ಕೂ ಕಂಪನಿಯ ಅಧ್ಯಕ್ಷರಿಗೆ ಆಡಳಿತ ಮಂಡಳಿ ಅಧಿಕಾರ ನೀಡಿದೆ ಎಂದು ಕಾಫಿ ಡೇ ಸಂಸ್ಥೆ ಷೇರುಮಾರುಕಟ್ಟೆನಿಯಂತ್ರಣಾ ಸಂಸ್ಥೆ ಸೆಬಿಗೆ ಮಾಹಿತಿ ನೀಡಿದೆ.

ಸಿದ್ದಾರ್ಥ ಅವರ ಸ್ವಂತ ಕಂಪನಿಯಾದ ಎಂಎಸಿಇಎಲ್‌, ಸಿಡಿಇಎಲ್‌ನ 49 ಸಹ ಸಂಸ್ಥೆಗಳ ಜೊತೆ ಹಣಕಾಸು ವ್ಯವಹಾರ ಹೊಂದಿತ್ತು. ಸಿಡಿಇಎಲ್‌ನ ವಿವಿಧ ಕಂಪನಿಗಳಿಂದ ಎಂಎಸಿಇಲ್‌ ಮುಂಗಣ ಹಣ ಪಡೆದುಕೊಂಡಿತ್ತು. ಈ ಎಲ್ಲಾ ವ್ಯವಹಾರಗಳು ಸಾಮಾನ್ಯ ಬ್ಯಾಂಕಿಂಗ್‌ ವಹಿವಾಟಿನ ಸ್ವರೂಪದಲ್ಲೇ ನಡೆದಿತ್ತು. ಹೀಗೆ ಪಡೆದ ಬಹುತೇಕ ಹಣವನ್ನು ಪಿಇ ಹೂಡಿಕೆದಾರರಿಂದ ಷೇರು ಮರುಖರೀದಿಗೆ, ಸಾಲ ಮರುಪಾವತಿಗೆ, ಬಡ್ಡಿ ಪಾವತಿಗೆ, ಇತರೆ ಕೆಲ ಖಾಸಗಿ ಹೂಡಿಕೆಗೆ ಬಳಸಿರುವ ಸಾಧ್ಯತೆ ಇದೆ ಎಂದು ಸಮಿತಿ ಹೇಳಿದೆ.

ಇದೇ ವೇಳೆ ಆದಾಯ ತೆರಿಗೆ ಇಲಾಖೆ ಕಿರುಕುಳದಿಂದಲೇ ಸಿದ್ಧಾರ್ಥ ಸಾವನ್ನಪ್ಪಿದವರು ಎಂಬುದನ್ನು ಸಾಬೀತುಪಡಿಸುವ ಯಾವುದೇ ದಾಖಲೆಗಳನ್ನು ತನಿಖೆ ವೇಳೆ ಒದಗಿಸಿಲ್ಲ ಎಂದು ಸಮಿತಿ ಹೇಳಿದೆ.