CBSE Schools to Start Third Language Classes 2026-27ನೇ ಶೈಕ್ಷಣಿಕ ವರ್ಷದಿಂದ 6ನೇ ತರಗತಿಗೆ ತೃತೀಯ ಭಾಷೆಯನ್ನು ಕಡ್ಡಾಯಗೊಳಿಸಿ ಸಿಬಿಎಸ್‌ಇ ಆದೇಶಿಸಿದೆ. ಪಠ್ಯಪುಸ್ತಕಗಳಿಗಾಗಿ ಕಾಯದೆ, ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ ತಕ್ಷಣವೇ ಬೋಧನೆ ಆರಂಭಿಸುವಂತೆ ಶಾಲೆಗಳಿಗೆ ತುರ್ತು ಸೂಚನೆ ನೀಡಿದೆ.

ನವದೆಹಲಿ (ಏ.10): ‘2026-27ನೇ ಶೈಕ್ಷಣಿಕ ವರ್ಷದಿಂದ 6ನೇ ತರಗತಿಯಲ್ಲಿ ತೃತೀಯ ಭಾಷೆಯನ್ನು (ಆರ್‌3) ಕಡ್ಡಾಯವಾಗಿ ಜಾರಿಗೊಳಿಸಬೇಕು. ಪಠ್ಯಪುಸ್ತಕಗಳು ಇನ್ನೂ ಲಭ್ಯವಾಗದಿದ್ದರೂ, ಸ್ಥಳೀಯವಾಗಿ ಲಭ್ಯವಿರುವ ಪುಸ್ತಕಗಳನ್ನೇ ಬಳಸಿಕೊಂಡು 7 ದಿನಗಳ ಒಳಗೆ ತುರ್ತಾಗಿ ಬೋಧನೆಯನ್ನು ಆರಂಭಿಸಬೇಕು’ ಎಂದು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಗುರುವಾರ ಆದೇಶಿಸಿದೆ.

ಕರ್ನಾಟಕದ ರಾಜ್ಯ ಪಠ್ಯಕ್ರಮಗಳಲ್ಲಿ ದ್ವಿಭಾಷಾ ಸೂತ್ರದ ಬಗ್ಗೆ ಚರ್ಚೆ ನಡೆದಿರುವ ನಡುವೆಯೇ ಈ ಆದೇಶ ಬಂದಿದೆ.

‘ಅನೇಕ ಶಾಲೆಗಳು ಈಗಾಗಲೇ ಆರ್‌3 ಅನುಷ್ಠಾನ ಮಾಡಿವೆ. ಉಳಿದ ಶಾಲೆಗಳೂ ತಕ್ಷಣವೇ ಬೋಧನೆಯನ್ನು ಪ್ರಾರಂಭಿಸಬೇಕು. ಅಧಿಕೃತ ಪಠ್ಯಪುಸ್ತಕಗಳು ಬರುವವರೆಗೆ ಸ್ಥಳೀಯವಾಗಿ ಲಭ್ಯವಿರುವ ಪುಸ್ತಕಗಳು ಅಥವಾ ವಸ್ತುಗಳನ್ನು ಬಳಸಿಕೊಳ್ಳಬೇಕು. ಇದನ್ನು ನಮ್ಮ ಪ್ರಾದೇಶಿಕ ಕಚೇರಿಗಳು ಮೇಲ್ವಿಚಾರಣೆ ಮಾಡುತ್ತವೆ’ ಎಂದು ಎಚ್ಚರಿಸಿದೆ.

ಸಿಬಿಎಸ್‌ಇ 6ನೇ ತರಗತಿಯಿಂದ ತ್ರಿಭಾಷಾ ಸೂತ್ರವನ್ನು ಜಾರಿಗೆ ತರುವುದಾಗಿ ಕಳೆದ ವಾರವಷ್ಟೇ ಆದೇಶ ಹೊರಡಿಸಿತ್ತು. ಆರ್‌1, ಆರ್‌2, ಆರ್‌3 ಎಂಬ 3 ಭಾಷೆಗಳಿರುತ್ತವೆ. ಇವುಗಳಲ್ಲಿ 2 ಭಾಷೆಗಳು ಕಡ್ಡಾಯವಾಗಿ ಭಾರತೀಯ ಭಾಷೆಗಳಾಗಿರಬೇಕು ಎಂದು ತಿಳಿಸಿತ್ತು. ಅದನ್ನೀಗ ಅತಿ ತುರ್ತಾಗಿ ಅನುಷ್ಠಾನಕ್ಕೆ ತರಲು ಮುಂದಾಗಿದೆ.