ಇಂಟರ್‌ಪೋಲ್, ಎಫ್‌ಬಿಐ ಮತ್ತು ವಿವಿಧ ದೇಶಗಳ ಪೊಲೀಸ್ ಪಡೆಗಳ ಸಹಭಾಗಿತ್ವದಲ್ಲಿ ಶೋಧ ಕಾರ್ಯ

ವರದಿ: ಕಿರಣ್.ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು(ಅ.05): ದೇಶದಲ್ಲಿ ಸೈಬರ್ ಕ್ರೈಂ ಕೇಸ್‌ಗಳು ಹೆಚ್ಚಾದ ಹಿನ್ನಲೆಯಲ್ಲಿ ಸಿಬಿಐ ಕರ್ನಾಟಕ ರಾಜ್ಯ ಸೇರಿ ವಿವಿಧ ರಾಜ್ಯಗಳ 115ಕ್ಕೂ ಹೆಚ್ಚು ಕಡೆ ಇಂದು(ಬುಧವಾರ) ದಾಳಿ ನಡೆಸಲಾಗಿದೆ. ಇಂಟರ್‌ಪೋಲ್, ಎಫ್‌ಬಿಐ ಮತ್ತು ವಿವಿಧ ದೇಶಗಳ ಪೊಲೀಸ್ ಪಡೆಗಳ ಸಹಭಾಗಿತ್ವದಲ್ಲಿ ಈ ಶೋಧ ನಡೆಸಲಾಗಿದೆ.

ದೇಶಾದ್ಯಂತ 87 ಸ್ಥಳಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ರೆ, 28 ಸ್ಥಳಗಳ ಮೇಲೆ ರಾಜ್ಯ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ. ಇಂಟರ್ ನೆಟ್ ಮೂಲಕ ಹಣ ವಂಚನೆ ಮಾಡಿರುವ ಸೈಬರ್ ಆರೋಪಿಗಳು ವಿರುದ್ಧ 11 ಪ್ರಕರಣಗಳನ್ನು ದಾಖಲಿಸಲಾಗಿದೆ.

ಡಿಕೆ​ಶಿಗೆ ಸಂಕಷ್ಟ ತಂದೊಡ್ಡಿದ ಕೃಷಿ ಆದಾ​ಯ ಮೂಲ..!

ಸಿಬಿಐನ ಮಹತ್ವದ ದಾಳಿ ವೇಳೆ ಕರ್ನಾಟಕ, ದೆಹಲಿ, ಪಂಜಾಬ್, ರಾಜಸ್ಥಾನ, ಅಸ್ಸಾಂ, ಅಂಡಮಾನ್ ಮತ್ತು ನಿಕೋಬಾರ್, ಚಂಡೀಗಢ ಮತ್ತು ಹರಿಯಾಣ ರಾಜ್ಯಗಳ ಪೊಲೀಸರ ತಂಡ ಪಾಲ್ಗೊಂಡಿದ್ದವು. ದಾಳಿ ವೇಳೆ ಕರ್ನಾಟಕದಲ್ಲಿ ಸುಮಾರು 71.8 ಕೋಟಿ ನಗದು ಮತ್ತು 1.5 ಕೆ.ಜಿ ಚಿನ್ನ, ಅಂದಾಜು ‍1.89 ಕೋಟಿ ಮೌಲ್ಯ ಹಣ ಇರುವ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ ಅಂತ ತಿಳಿದು ಬಂದಿದೆ.

ಮೊಬೈಲ್‌ ಫೋನ್, ಲ್ಯಾಪ್‌ಟಾಪ್ ಸೇರಿದಂತೆ ಅಪಾರ ಪ್ರಮಾಣದ ಡಿಜಿಟಲ್ ಸಾಕ್ಷಿಗಳನ್ನೂ ವಶಕ್ಕೆ ಪಡೆಯಲಾಗಿದೆ. ದೇಶದಾದ್ಯಂತ ನಿರಂತರವಾಗಿ ಅಂತಾರಾಷ್ಟ್ರೀಯ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ಇದನ್ನು ತಡೆಗಟ್ಟಲು ಸಿಬಿಐ ತಂಡ ಈ ಮಹತ್ವದ ಕಾರ್ಯಾಚರಣೆ ನಡೆಸಿದೆ.