ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರನ್ಯಾ ರಾವ್ ಕುರಿತು ಅಸಭ್ಯ ಪದ ಬಳಕೆ ಮಾಡಿದ ಆರೋಪದಡಿ ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಡಾ.ಅಕುಲಾ ಅನುರಾಧಾ ನೀಡಿದ ದೂರಿನ ಮೇರೆಗೆ ಹೈಗ್ರೌಂಡ್ಸ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬೆಂಗಳೂರು ಮಾ.19):ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರನ್ಯಾ ರಾವ್ ಕುರಿತು ಅಸಭ್ಯ ಹಾಗೂ ಅಶ್ಲೀಲ ಪದ ಬಳಕೆ ಮಾಡಿದ ಆರೋಪದಡಿ ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ಹ್ರೈಗೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಾ.ಅಕುಲಾ ಅನುರಾಧಾ ಎಂಬುವವರು ನೀಡಿದ ದೂರಿನ ಮೇರೆಗೆ ಶಾಸಕ ಯತ್ನಾಳ್ ವಿರುದ್ಧ ಬಿಎನ್‌ಎಸ್ ಕಲಂ 79 ಅಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರಿನಲ್ಲಿ ಏನಿದೆ?:
ಶಾಸಕ ಯತ್ನಾಳ್ ಮಾ.17ರಂದು ‘ಆ ರನ್ಯನ್ ಜೋಡಿ ಯಾರ್ ಯಾರ್ ಸಂಬಂಧ ಅದವೋ, ಆಕೆಗೆ ಏನೇನ್ ಸೆಕ್ಯುರಿಟಿ ಕೊಟ್ಟಾರೋ ಎಲ್ಲಾ ಮಾಹಿತಿ ತೆಗೆದುಕೊಂಡಿವಿ. ಗೋಲ್ಡ್ ಎಲ್ಲಿಂದ ತಂದ್ರು, ಎಲ್ಲವೂ ಹೇಳ್ತೀವಿ. ಮೈ ತುಂಬಾ ಆಕೆ ಬಂಗಾರ ಇಡ್ಕೊಂಡು ಬಂದಾಳಾ’ ಇತ್ಯಾದಿಯಾಗಿ ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಸಮಾಜದಲ್ಲಿ ಗೌರವದ ಸ್ಥಾನದಲ್ಲಿ ಇರುವ ಬಸನಗೌಡ ಯತ್ನಾಳ್ ಅವರು ಬೇಜವಾಬ್ದಾರಿತನದಿಂದ ಹರ್ಷವರ್ಧಿನಿ ರನ್ಯಾ ರಾವ್ ಕುರಿತು ಅಸಭ್ಯ ಹಾಗೂ ಅಶ್ಲೀಲವಾಗಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ರನ್ಯಾ ರಾವ್ ಅವರ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ರನ್ಯಾಗೆ ಸಚಿವರ ಸಹಾಯ! ಹೆಸರು ಹೇಳ್ತಾರಾ ಯತ್ನಾಳ್
ರನ್ಯಾ ರಾವ್ ಅವರು ಕನ್ನಡ, ತಮಿಳು, ತೆಲುಗು ಭಾಷೆ ಚಲನಚಿತ್ರಗಳಲ್ಲಿ ನಟಿಯಾಗಿದ್ದು, ಸಮಾಜದಲ್ಲಿ ಒಳ್ಳೆಯ ಗೌರವ ಹೊಂದಿದ್ದಾರೆ. ಅಂತವರ ಗೌರವಕ್ಕೆ ಚ್ಯುತಿ ಮತ್ತು ಚಾರಿತ್ರ್ಯಕ್ಕೆ ಧಕ್ಕೆ ತರುವ ರೀತಿ ಯತ್ನಾಳ್ ಸಾರ್ವಜನಿಕವಾಗಿ ಮಾಧ್ಯಮಗಳ ಎದುರು ಮಾತನಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಕುಲಾ ಅನುರಾಧ ದೂರಿನಲ್ಲಿ ಮನವಿ ಮಾಡಿದ್ದಾರೆ.
