ನಮ್ಮಲ್ಲಿ ಇಲ್ಲದ ನೀರನ್ನು ತಮಿಳುನಾಡಿಗೆ ಬಿಡಲು ಸಾಧ್ಯವಿಲ್ಲ- ಸಿಎಂ ಸಿದ್ದರಾಮಯ್ಯ
ಮೈಸೂರು ತಾಲೂಕು ಸರ್ಕಾರಿ ಉತ್ತನಹಳ್ಳಿಯಲ್ಲಿ ಪಶುಸಖಿಯರಿಗೆ ಎ- ಹೆಲ್ಪ್ ರಾಜ್ಯ ಮಟ್ಟದ ತರಬೇತಿ, ಎನ್ಎಡಿಸಿಪಿ ಯೋಜನೆಯಡಿ 4ನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.
ಮೈಸೂರು (ಸೆ.27) : ನಮ್ಮಲ್ಲಿ ಇಲ್ಲದ ನೀರನ್ನು ತಮಿಳುನಾಡಿಗೆ ಬಿಡಲು ಸಾಧ್ಯವಿಲ್ಲ. ನಾವು ಕುಡಿಯುವ ನೀರಿಗೆ ಪರಿತಪಿಸುತ್ತಿದ್ದೇವೆ. ತಮಿಳುನಾಡಿನವರು ಕುರುವೈ ಬೆಳೆಗಾಗಿ ನೀರು ಕೇಳುತ್ತಿದ್ದಾರೆ. ತಮಿಳುನಾಡಿನ ಬೇಡಿಕೆಗೆ ತಕ್ಕಂತೆ ನೀರು ಬಿಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೈಸೂರು ತಾಲೂಕು ಸರ್ಕಾರಿ ಉತ್ತನಹಳ್ಳಿಯಲ್ಲಿ ಪಶುಸಖಿಯರಿಗೆ ಎ- ಹೆಲ್ಪ್ ರಾಜ್ಯ ಮಟ್ಟದ ತರಬೇತಿ, ಎನ್ಎಡಿಸಿಪಿ ಯೋಜನೆಯಡಿ 4ನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಬೆಳೆದ ಬೆಳೆಗೆ ಕೈಗೆ ಸಿಗುತ್ತಿಲ್ಲ. 130 ವರ್ಷಗಳ ನಂತರ ಮಳೆ ಪ್ರಮಾಣದಲ್ಲಿ ಕಡಿಮೆ ಆಗಿದೆ ಎಂದರು.
ಸಿಎಂ ಸಿದ್ದರಾಮಯ್ಯ ರಾಹುಲ್, ಸೋನಿಯಾ ಮಾತು ಕೇಳಿಕೊಂಡು ತಮಿಳನಾಡಿಗೆ ನೀರು ಬಿಡ್ತಿದ್ದಾರೆ: ಭಗವಂತ ಖೂಬಾ
ಒಂದು ಕಡೆ ಬರಗಾಲ, ಮತ್ತೊಂದು ಕಡೆ ಕಾವೇರಿ ನೀರಿನ ಸಮಸ್ಯೆ ಉದ್ಭವಿಸಿದೆ. ಪ್ರತಿ ವರ್ಷ ತಮಿಳುನಾಡಿಗೆ 177.25 ಟಿಎಂಸಿ ನೀರು ಬಿಡಬೇಕು. ಆದರೆ, ನಮ್ಮ ಜಲಾಶಯಗಳಲ್ಲಿ ಒಟ್ಟಾರೆ 50 ಟಿಎಂಸಿ ನೀರು ಮಾತ್ರವಿದೆ. ರಾಜ್ಯದ ಕಾವೇರಿ ಕಣಿವೆ ಭಾಗದಲ್ಲಿ ಮಳೆಯ ಕೊರತೆ ತೀವ್ರವಾಗಿದೆ. ಪ್ರಮುಖ ಜಲಾಶಯಗಳ ನೀರಿನ ಸಂಗ್ರಹ ತುಂಬಾ ಕಡಿಮೆಯಿದೆ. ಮೈಸೂರು, ಬೆಂಗಳೂರು ನಗರಗಳ ಕುಡಿಯುವ ನೀರಿಗೆ 30 ಟಿಎಂಸಿ ನೀರು ಅಗತ್ಯವಿದೆ. 70 ಟಿಎಂಸಿ ನಮ್ಮ ಬೆಳೆಗಳಿಗೆ, 3 ಟಿಎಂಸಿ ಕೈಗಾರಿಕೆಗಳು ಸೇರಿದಂತೆ ಒಟ್ಟು 100 ಟಿಎಂಸಿ ನೀರು ನಮಗೆ ಬೇಕಿದೆ ಎಂದು ಅವರು ಹೇಳಿದರು.
ವಿರೋಧ ಪಕ್ಷಗಳಿಂದ ರಾಜಕೀಯ
ಕಾವೇರಿ ವಿಚಾರದಲ್ಲಿ ವಿರೋಧ ಪಕ್ಷಗಳಿಗೆ ವಸ್ತುಸ್ಥಿತಿ ಗೊತ್ತಿದ್ದರೂ ಸುಮ್ಮನೆ ರಾಜಕೀಯ ಮಾಡುತ್ತಿದ್ದಾರೆ. ರೈತರ ಪ್ರತಿಭಟನೆ ಸರಿ ಇದೆ. ಆದರೆ, ಬಿಜೆಪಿ- ಜೆಡಿಎಸ್ ಪಕ್ಷದವರು ಇದರಲ್ಲೂ ರಾಜಕೀಯ ಮಾಡುತ್ತಿದ್ದಾರೆ. ವಿರೋಧ ಪಕ್ಷಗಳು 5 ಗ್ಯಾರಂಟಿಗಳಿಂದ ಹತಾಶರಾಗಿ ಈಗ ಕಾವೇರಿ ನೀರು ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ರಾಜ್ಯ ಸರ್ಕಾರ ಸರಿಯಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿಲ್ಲ ಅಂತ ವಿರೋಧ ಪಕ್ಷದವರು ಹೇಳುತ್ತಿದ್ದಾರೆ. ಎಲ್ಲರ ಕಾಲದಲ್ಲೂ ಇದ್ದ ಕಾನೂನು ತಜ್ಞರೇ ಈಗಲೂ ಇದ್ದಾರೆ. ಅವರೇ ನಮ್ಮ ಪರ ಸಮರ್ಥವಾಗಿ ವಾದ ಮಾಡಿದ್ದಾರೆ ಎಂದು ಅವರು ತಿರುಗೇಟು ನೀಡಿದರು.
ರೈತರಿಗೆ ತೊಂದರೆ ಆದ್ರೆ ನಾವು ಸುಮ್ಮನೆ ಕೂರಬೇಕಾ? ರೈತಪರ ಹೋರಾಟಕ್ಕೆ ನಾನು ಸಿದ್ಧ: ನಟಿ ರಾಗಿಣಿ ದ್ವಿವೇದಿ
ಜನ ನಮ್ಮ ಬಗ್ಗೆ ಖುಷಿಯಿಂದ ಇದ್ದಾರೆ. ಬಿಜೆಪಿ- ಜೆಡಿಎಸ್ ನವರು ಏನೋ ಕಳೆದುಕೊಂಡವರ ರೀತಿ ಹತಾಶರಾಗಿದ್ದಾರೆ.
ಬಿಜೆಪಿ- ಜೆಡಿಎಸ್ ನವರ ಮಾತು ಯಾರು ಕೇಳಬೇಡಿ. ವಿರೋಧ ಪಕ್ಷಗಳು ಏನೇ ರಾಜಕೀಯ ಮಾಡಿದರೂ ನಾವು ಜನರ ವಿಚಾರದಲ್ಲಿ ಬದ್ಧತೆಯಿಂದ ಕೆಲಸ ಮಾಡುತ್ತೇವೆ ಎಂದು ಅವರು ಭರವಸೆ ನೀಡಿದರು.