ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ: ಡಿಕೆಶಿ ಸ್ಪಷ್ಟನೆ
ಕಾವೇರಿ ನದಿಯಿಂದ ತಮಿಳುನಾಡಿಗೆ ಮುಂದಿನ 15 ದಿನಗಳವರೆಗೆ ನಿತ್ಯ 5 ಸಾವಿರ ಕ್ಯೂಸೆಕ್ಸ್ ನೀರು ಬಿಡುವ ಬಗ್ಗೆ ಕಾವೇರಿ ನೀರು ನಿಯಂತ್ರಣ ಸಮಿತಿ ಮಾಡಿರುವ ಆದೇಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಮ್ಮ ಬಳಿಯೇ ನೀರಿಲ್ಲ, ಹೀಗಾಗಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು (ಸೆ.13) : ಕಾವೇರಿ ನದಿಯಿಂದ ತಮಿಳುನಾಡಿಗೆ ಮುಂದಿನ 15 ದಿನಗಳವರೆಗೆ ನಿತ್ಯ 5 ಸಾವಿರ ಕ್ಯೂಸೆಕ್ಸ್ ನೀರು ಬಿಡುವ ಬಗ್ಗೆ ಕಾವೇರಿ ನೀರು ನಿಯಂತ್ರಣ ಸಮಿತಿ ಮಾಡಿರುವ ಆದೇಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಮ್ಮ ಬಳಿಯೇ ನೀರಿಲ್ಲ, ಹೀಗಾಗಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಕುರಿತಂತೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಮಿಳುನಾಡಿಗೆ ನೀರು ಬಿಡುವ ವಿಚಾರದ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು, ನೀರು ಬಿಡಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದೇವೆ. ಬುಧವಾರ ಅಥವಾ ಗುರುವಾರ ಕಾವೇರಿ ನೀರಾವರಿ ಪ್ರಾಧಿಕಾರದ ಸಭೆ ನಡೆಯುವ ಸಾಧ್ಯತೆಯಿದೆ. ಅಲ್ಲಿ ನಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸುತ್ತೇವೆ ಎಂದರು.
ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು, ರಾಜ್ಯಕ್ಕೆ ತೀವ್ರ ಹಿನ್ನಡೆ ಬೆನ್ನಲ್ಲೇ ಸಿಎಂ ಸಿದ್ದು ತುರ್ತು ಸಭೆ!
ತಮಿಳುನಾಡು ನಿತ್ಯ 12 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಮುಂದೆ ಬೇಡಿಕೆ ಇಟ್ಟಿತ್ತು. ಆದರೆ, ಅದನ್ನು 5 ಸಾವಿರ ಕ್ಯೂಸೆಕ್ಸ್‌ಗೆ ಸಮಿತಿಯು ಇಳಿಸಿದೆ. ನಾವು ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುತ್ತೇವೆ. ಆನಂತರ ರೈತರಿಗೆ ನೀರು ಹರಿಸುವ ಬಗ್ಗೆ ಯೋಚಿಸುತ್ತೇವೆ. ಬೆಂಗಳೂರಿನಲ್ಲಿ ಮಳೆ ಬಂದಾಗ ಆಶಾಭಾವನೆ ಮೂಡಿತ್ತು. ಆದರೆ ಈಗ ಮಳೆ ಬರದೆ ಸಂಕಷ್ಟ ಎದುರಾಗಿದೆ ಎಂದು ಹೇಳಿದರು.
ಕಾವೇರಿ ನೀರು ಬಿಡದಿರುವ ಕುರಿತಾಗಿ ರಾಜ್ಯದ ನಿಲುವಿನ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸುತ್ತೇನೆ. ಯಾವುದನ್ನೂ ಕದ್ದುಮುಚ್ಚಿ ಮಾಡುವುದಿಲ್ಲ. ರಾಜ್ಯಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಎಂದು ಪ್ರಾಧಿಕಾರಕ್ಕೂ ತಿಳಿಸಿದ್ದೇವೆ. ಆ ಪ್ರಸ್ತಾವನೆಯನ್ನು ಮತ್ತೊಮ್ಮೆ ಅವರ ಮುಂದಿಡಲಾಗುವುದು ಎಂದರು.
ತಮಿಳುನಾಡಿಗೆ ಮತ್ತೆ 15 ದಿನ ತಲಾ 5 ಸಾವಿರ ಕ್ಯೂಸೆಕ್ಸ್ ಕಾವೇರಿ ನೀರು ಹರಿಸಿ: ಸಿಡಬ್ಲ್ಯೂಆರ್‌ಸಿ ಸೂಚನೆ
ಡಿಕೆಶಿ ಹೇಳಿಕೆ ಆಘಾತಕಾರಿ: ತಮಿಳುನಾಡು ಸಚಿವ
ಚೆನ್ನೈ: ತಮಿಳುನಾಡಿಗೆ ಕಾವೇರಿ ನೀರು ಬಿಡುವ ಪರಿಸ್ಥಿತಿಯಲ್ಲಿ ರಾಜ್ಯ ಇಲ್ಲ ಎಂದು ಹೇಳಿರುವ ಕರ್ನಾಟಕ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಮಿಳುನಾಡು ಜಲ ಸಂಪನ್ಮೂಲ ಸಚಿವ ದೊರೈ ಮುರುಗನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಡಿಕೆಶಿ ಹೇಳಿಕೆ ಆಘಾತಕಾರಿ ಎಂದಿದ್ದಾರೆ.
ಸುಪ್ರೀಂಕೋರ್ಟ್ ಹಾಗೂ ಕಾವೇರಿ ನೀರು ಪ್ರಾಧಿಕಾರದ ನಿರ್ದೇಶನದಂತೆ ತಮಿಳುನಾಡಿಗೆ ನೀರು ಬಿಡುವುದು ಕಡ್ಡಾಯವಾಗಿದೆ. ಕರ್ನಾಟಕದಲ್ಲಿ ಮಳೆಯಾಗಿಲ್ಲ ಎಂಬ ಕಾರಣಕ್ಕೆ ಈ ಮೊದಲು ನಿಗದಿ ಪಡಿಸಿದ್ದಕ್ಕಿಂತ ಕಡಿಮೆ ನೀರು ಬಿಡಲು ಹಾಗೂ 15 ದಿನ ನೀರು ಬಿಡುವಂತೆ ಸೂಚಿಸಲಾಗಿದೆ. ಈ ನೀರು ಬಿಡಲು ಸಹ ಕರ್ನಾಟಕ ಹಿಂದೇಟು ಹಾಕುತ್ತಿದೆ. ಇದನ್ನು ನಾವು ಸುಪ್ರೀಂ ಕೋರ್ಟ್ ಗಮನಕ್ಕೆ ತರಲಿದ್ದೇವೆ ಎಂದು ಅವರು ಹೇಳಿದ್ದಾರೆ.