ಸಿಎಂ ಪತ್ನಿ ಪ್ರಕರಣದ ಎಫೆಕ್ಟ್: ಮುಡಾ ಎಲ್ಲ 50:50 ಸೈಟ್‌ ರದ್ದು!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ 14 ಸೈಟ್‌ಗಳನ್ನು ಹಂಚಿಕೆ ಮಾಡಲಾಗಿದ್ದ ವಿವಾದಿತ 50:50 ಅನುಪಾತದ ನಿವೇಶನಗಳ ಕುರಿತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 

Cancellation of all 50 50 Sites in Mudas General Meeting gvd

ಮೈಸೂರು (ನ.08): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ 14 ಸೈಟ್‌ಗಳನ್ನು ಹಂಚಿಕೆ ಮಾಡಲಾಗಿದ್ದ ವಿವಾದಿತ 50:50 ಅನುಪಾತದ ನಿವೇಶನಗಳ ಕುರಿತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 50:50 ಅನುಪಾತದಡಿ ಹಂಚಿಕೆ ಮಾಡಲಾಗಿರುವ ಎಲ್ಲಾ ನಿವೇಶನ ಹಿಂಪಡೆಯಲು ಗುರುವಾರ ನಡೆದ ಮುಡಾದ ಸಾಮಾನ್ಯ ಸಭೆ ನಿರ್ಧರಿಸಿದೆ. ಮುಡಾದ ಈ ನಿರ್ಧಾರದಿಂದ 5,000 ಸಾವಿರಕ್ಕೂ ಹೆಚ್ಚು ನಿವೇಶನಗಳ ನೋಂದಣಿ ರದ್ದತಿಯಾಗುವ ಭೀತಿ ಶುರುವಾಗಿದೆ. 

ಮುಡಾ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಎಲ್ಲಾ ಸದಸ್ಯರು ನಿವೇಶನ ರದ್ದು ಮಾಡುವ ನಿರ್ಧಾರಕ್ಕೆ ಒಪ್ಪಿದ್ದಾರೆ ಎಂದು ಶಾಸಕ ಕೆ. ಹರೀಶ್‌ ಗೌಡ ನಂತರ ಸುದ್ದಿಗಾರರಿಗೆ ಹೇಳಿದರು. ಮುಡಾ ನಿವೇಶನ ಹಂಚಿಕೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ದೇಸಾಯಿ ಆಯೋಗದ ವರದಿ ಸಲ್ಲಿಕೆಯಾದ ಬಳಿಕ ಆ ವರದಿ ಆಧಾರದ ಮೇಲೆ ಈ ಕ್ರಮ ತೆಗೆದುಕೊಳ್ಳೋಣ ಎಂದು ಅಧ್ಯಕ್ಷರು ಹೇಳಿದ್ದಾರೆ. ಅದಕ್ಕೆ ಎಲ್ಲರೂ ಒಪ್ಪಿದ್ದಾರೆ. ಮುಡಾ ಸ್ವಚ್ಛವಾಗಬೇಕೆಂಬುದು ಎಲ್ಲರ ಅಭಿಪ್ರಾಯವಾಗಿದೆ. 

ಅಧಿಕಾರದ ತೆವಲಿಗಾಗಿ ಕುಮಾರಸ್ವಾಮಿಯಿಂದ ಕ್ಷೇತ್ರ ಬದಲಾವಣೆ: ಸಚಿವ ಚಲುವರಾಯಸ್ವಾಮಿ

2020ರಿಂದ 50:50 ಅಡಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಕೆಲ ಪ್ರಕರಣದಲ್ಲಿ ಪರಿಹಾರ ಪಡೆದಿದ್ದರೂ ಅದಕ್ಕೂ 50:50 ಅನುಪಾತಡಿ ನಿವೇಶನ ನೀಡಿರುವ ಆರೋಪ ಇದೆ ಎಂದರು. ಈ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡು ಸಭೆಯಲ್ಲಿ ನಾನು ಮಾತನಾಡಿದ್ದೇನೆ. ಕಳೆದ ಬಾರಿ ನಡೆದ ಸಭೆಯಲ್ಲೂ ಈ ಬಗ್ಗೆ ಚರ್ಚೆ ಮಾಡಲಾಗಿತ್ತು. ಆದರೆ ಅದರ ದಾಖಲೀಕರಣ ಆಗಿಲ್ಲ. ಹೀಗಾಗಿ ಅದರ ದಾಖಲೀಕರಣ ಮಾಡದ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲು ಮಾಡಿ ಶಿಸ್ತು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧರಿಸಲಾಗಿದೆ ಎಂದು ಹೇಳಿದರು. 

ಮುಡಾ ಸೈಟು ಹಂಚಿಕೆ ಗಂಭೀರ ವಿವಾದದ ಸ್ವರೂಪ ಪಡೆದ ಬಳಿಕ ನಡೆದ ಬಳಿಕ ಇದೇ ಮೊದಲ ಬಾರಿ ನಡೆದ ಈ ಸಭೆಯಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ದರ್ಶನ್ ಧ್ರುವನಾರಾಯಣ, ಎ.ಬಿ.ರಮೇಶ್ ಬಾಬು ಬಂಡಿಸಿದ್ದೇಗೌಡ, ಟಿ.ಎಸ್. ಶ್ರೀವತ್ಸ, ಎಚ್.ವಿಶ್ವನಾಥ್, ಸಿ.ಎನ್.ಮಂಜೇಗೌಡ, ಕೆ.ವಿವೇಕಾನಂದ, ಆಯುಕ್ತ ರಘುನಂದನ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ನಗರ ಪಾಲಿಕೆ ಆಯುಕ್ತ ಆಸಾದ್ ಉರ್ ರೆಹಮಾನ್ ಷರೀಫ್, ನಗರ ಯೋಜಕ ಸದಸ್ಯರು ಇದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕರಾದ ತನ್ವೀರ್ ಸೇಠ್, ಡಾ.ಯತೀಂದ್ರ ಸಿದ್ದರಾಮಯ್ಯ, ಡಾ.ಡಿ.ತಿಮ್ಮಯ್ಯ, ಮಧು ಜಿ.ಮಾದೇಗೌಡ, ದಿನೇಶ್ ಗೂಳೀಗೌಡ ಗೈರು ಹಾಜರಾಗಿದ್ದರು.

6 ತಿಂಗಳ ಅವಧಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿಗೇ ಕಂಟಕ ತಂದಿಟ್ಟಿರುವ ಮುಡಾ ನಿವೇಶನ ಹಂಚಿಕೆಯಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿ ನ್ಯಾಯಾಂಗ ತನಿಖೆಗೆ ರಾಜ್ಯ ಸರ್ಕಾರ ಜುಲೈನಲ್ಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಪಿ.ಎನ್‌.ದೇಸಾಯಿ ನೇತೃತ್ವದ ಆಯೋಗ ರಚಿಸಿದ್ದು, ಅವರಿಗೆ ವರದಿ ಸಲ್ಲಿಕೆಗೆ ಆರು ತಿಂಗಳ ಕಾಲಾವಕಾಶ ನೀಡಲಾಗಿದೆ.

ಸಿದ್ದುಗೆ ತಾಕತ್ತಿದ್ದರೆ ಮುಡಾ ಪ್ರಕರಣ ಸಿಬಿಐ ತನಿಖೆಗೆ ವಹಿಸಲಿ: ಯಡಿಯೂರಪ್ಪ ಸವಾಲು

5000ಕ್ಕೂ ಹೆಚ್ಚು ನಿವೇಶನ: ಮುಡಾದಲ್ಲಿ 2021ರಿಂದ 2024ರ ಜೂನ್‌ವರೆಗೆ 50:50/ಬದಲಿ ನಿವೇಶನ ಸ್ಕೀಂನಡಿ 4,839 ನಿವೇಶನಗಳನ್ನು ಹಂಚಲಾಗಿದೆ ಎಂದು ಹೇಳಲಾಗುತ್ತಿದೆ. ಕೆಲವರ ಪ್ರಕಾರ 2020ರಿಂದಲೇ ಈ ಸ್ಕೀಂನಡಿ ನಿವೇಶನ ಹಂಚಿಕೆ ಶುರುವಾಗಿದೆ. ಒಂದು ವೇಳೆ 2020ರಿಂದಲೇ ಹಂಚಿಕೆಯಾದ ನಿವೇಶನಗಳನ್ನು ಪರಿಗಣಿಸಿದರೆ ಈವರೆಗೆ 50:50/ಬದಲಿ ನಿವೇಶನ ಯೋಜನೆಯಡಿ ಹಂಚಿಕೆಯಾದ ಸೈಟುಗಳ ಸಂಖ್ಯೆ 5 ಸಾವಿರ ದಾಟಲಿದೆ ಎನ್ನಲಾಗುತ್ತಿದೆ.

Latest Videos
Follow Us:
Download App:
  • android
  • ios