ಸಿದ್ದುಗೆ ತಾಕತ್ತಿದ್ದರೆ ಮುಡಾ ಪ್ರಕರಣ ಸಿಬಿಐ ತನಿಖೆಗೆ ವಹಿಸಲಿ: ಯಡಿಯೂರಪ್ಪ ಸವಾಲು
ನನ್ನ ಜೀವನ ತೆರೆದ ಪುಸ್ತಕ, ನಾನು ಪ್ರಾಮಾಣಿಕ ವ್ಯಕ್ತಿ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ಮುಡಾ ನಿವೇಶನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಿ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸವಾಲು ಹಾಕಿದರು.
ಚನ್ನಪಟ್ಟಣ (ನ.07): ನನ್ನ ಜೀವನ ತೆರೆದ ಪುಸ್ತಕ, ನಾನು ಪ್ರಾಮಾಣಿಕ ವ್ಯಕ್ತಿ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ಮುಡಾ ನಿವೇಶನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಿ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸವಾಲು ಹಾಕಿದರು. ಚನ್ನಪಟ್ಟಣ ಕ್ಷೇತ್ರ ವ್ಯಾಪ್ತಿಯ ಸೋಗಾಲ ಗ್ರಾಮದಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಚುನಾವಣಾ ಪ್ರಚಾರ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಐ ತನಿಖೆ ನಡೆಸಿದರೆ ನಿಮ್ಮ ಯೋಗ್ಯತೆ ಏನೆಂದು ಗೊತ್ತಾಗುತ್ತದೆ.
ಒಂದು ಕ್ಷಣವೂ ಸಿದ್ದರಾಮಯ್ಯ ಅಧಿಕಾರದಲ್ಲಿ ಇರಬಾರದು. ತಕ್ಷಣವೇ ರಾಜಿನಾಮೆ ಕೊಟ್ಟು ತನಿಖೆ ಎದುರಿಸಲಿ ಎಂದರು. ಸಿದ್ದರಾಮಯ್ಯರವರು ಪ್ರಾಮಾಣಿಕರಾಗಿದ್ದರೆ ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದಲ್ಲಿ, ಸತ್ಯಾಂಶ ಹೊರ ಬರುತ್ತದೆ. ಲೋಕಾಯುಕ್ತ ತನಿಖೆಯಿಂದ ಯಾವುದೇ ಸತ್ಯ ಹೊರ ಬರುವುದಿಲ್ಲ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಲೆಂದು ಒತ್ತಾಯಿಸುತ್ತೇನೆ ಎಂದು ಹೇಳಿದರು.
ಸಿ.ಪಿ.ಯೋಗೇಶ್ವರ್ ಕನ್ವರ್ಟಡ್ ಕಾಂಗ್ರೆಸ್ ಜೆಂಟಲ್‌ಮೆನ್: ದೇವೇಗೌಡ ವಾಗ್ದಾಳಿ
ವಾಲ್ಮೀಕಿ ಹಗರಣದ ಬೆನ್ನ ಹಿಂದೆಯೇ ಅಬಕಾರಿ ಇಲಾಖೆವೊಂದರಲ್ಲೇ 500ಕೋಟಿ ಲೂಟಿ ಹೊಡೆದಿದ್ದಾರೆ. ಗುತ್ತಿಗೆದಾರು ಆಕ್ರೋಶ ವ್ಯಕ್ತಪಡಿಸಿ, ಇನ್ನು ಮುಂದೆ ಕೆಲಸ ಮಾಡಲ್ಲ ಎಂದಿದ್ದಾರೆ. ಹಾಗಾಗಿ ಇಂತಹ ಭ್ರಷ್ಟ ಸರ್ಕಾರ ಕಿತ್ತು ಹಾಕಬೇಕು. ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ನಾವು ಗೆಲ್ಲುವುದರಿಂದ ಸರ್ಕಾರ ಬೀಳುವುದಿಲ್ಲ. ಆದರೆ, ಜನಹಿತ ಮರೆತು ಭ್ರಷ್ಟಾಚಾರದಲ್ಲಿ ತೊಡಗಿರುವ ಸರ್ಕಾರ ಜಾಗೃತವಾಗಬಹುದು, ಅದಕ್ಕೊಂದು ಪಾಠ ಕಲಿಸಬಹುದು ಎಂದು ಯಡಿಯೂರಪ್ಪ ತಿಳಿಸಿದರು.