ಕೆನಡಾ ಸಂಸತ್ತಲ್ಲಿ ಸಂಸದ ಚಂದ್ರ ಕನ್ನಡ ಭಾಷಣ: ವಿದೇಶದ ಸಂಸತ್ತಿನಲ್ಲಿ ಕನ್ನಡ ಭಾಷಣ ಇದೇ ಮೊದಲು
ಕರ್ನಾಟಕದ ತುಮಕೂರು ಮೂಲದ ಕೆನಡಾ ಸಂಸದ ಚಂದ್ರ ಆರ್ಯ, ಕೆನಡಾದ ಸಂಸತ್ತಿನಲ್ಲಿ ತಮ್ಮ ಮಾತೃಭಾಷೆಯಾದ ಕನ್ನಡದಲ್ಲೇ ಭಾಷಣ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದೇಶದ ಹೊರಗಡೆ ವಿದೇಶದ ಸಂಸತ್ತಿನಲ್ಲಿ ಸಂಸದರೊಬ್ಬರು ಕನ್ನಡದಲ್ಲಿ ಮಾತನಾಡಿದ್ದು ಇದೇ ಮೊದಲ ಬಾರಿ.
ಬೆಂಗಳೂರು (ಮೇ.21): ಕರ್ನಾಟಕದ ತುಮಕೂರು ಮೂಲದ ಕೆನಡಾ ಸಂಸದ ಚಂದ್ರ ಆರ್ಯ, ಕೆನಡಾದ ಸಂಸತ್ತಿನಲ್ಲಿ ತಮ್ಮ ಮಾತೃಭಾಷೆಯಾದ ಕನ್ನಡದಲ್ಲೇ ಭಾಷಣ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದೇಶದ ಹೊರಗಡೆ ವಿದೇಶದ ಸಂಸತ್ತಿನಲ್ಲಿ ಸಂಸದರೊಬ್ಬರು ಕನ್ನಡದಲ್ಲಿ ಮಾತನಾಡಿದ್ದು ಇದೇ ಮೊದಲ ಬಾರಿ. ಕರ್ನಾಟಕದ ಚಂದ್ರ ಆರ್ಯ ಅವರು ನಾನು ನನ್ನ ಮಾತೃಭಾಷೆಯಾದ ಕನ್ನಡದಲ್ಲೇ ಕೆನಡಾದ ಸಂಸತ್ತಿನಲ್ಲಿ ಮಾತನಾಡಿದ್ದೇನೆ. ಇದು ಸುದೀರ್ಘ ಇತಿಹಾಸವನ್ನು ಹೊಂದಿರುವಂತಹ ಸುಂದರ ಭಾಷೆಯಾಗಿದೆ. ಸುಮಾರು 5 ಕೋಟಿ ಜನರಿಂದ ಮಾತನಾಡಲ್ಪಡುತ್ತದೆ. ಭಾರತದ ಹೊರಗಡೆ ವಿಶ್ವದ ಯಾವುದೇ ಸಂಸತ್ತಿನಲ್ಲಿ ಕನ್ನಡ ಮಾತನಾಡುತ್ತಿರುವುದು ಇದೇ ಮೊದಲು ಎಂದು ಟ್ವೀಟ್ ಮಾಡಿದ್ದಾರೆ.
‘ಮಾನ್ಯ ಸಭಾಪತಿಗಳೇ, ಕೆನಡಾದ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಲು ಅವಕಾಶ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಭಾರತದ ದೇಶದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಾಳು ಗ್ರಾಮದ ವ್ಯಕ್ತಿಯೊಬ್ಬರು ಕೆನಡಾದಲ್ಲಿ ಸಂಸತ್ ಸದಸ್ಯನಾಗಿ ಆಯ್ಕೆಯಾಗಿ, ಕನ್ನಡದಲ್ಲಿ ಮಾತನಾಡುವುದು ಸುಮಾರು 5 ಕೋಟಿ ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ. ಕೆನಡಾ ದೇಶದ ಕನ್ನಡಿಗರು 2018ರಲ್ಲಿ ಕೆನಡಾದ ಈ ಸಂಸತ್ತಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು. ರಾಷ್ಟ್ರಕವಿ ಕುವೆಂಪು ಬರೆದಿರುವ ಮತ್ತು ನಟ ಸಾರ್ವಭೌಮ ಡಾ. ರಾಜಕುಮಾರ್ ಹಾಡಿರುವ ಭಾವಗೀತೆಯ ಕೆಲವು ಪದಗಳೊಂದಿಗೆ ನನ್ನ ಹೇಳಿಕೆಯನ್ನು ಮುಗಿಸುತ್ತಿದ್ದೇನೆ. ಎಲ್ಲಾದರು ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು. ಧನ್ಯವಾದಗಳು ಸಭಾಪತಿ’ ಎಂದು ಭಾಷಣ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಂದ್ರ ಆರ್ಯ ಅವರ ಕನ್ನಡ ಪ್ರೇಮಕ್ಕೆ ಜನರು ವ್ಯಾಪಕ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
HDK City Rounds: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಿಟಿ ರೌಂಡ್ಸ್: ನಗರದ 7 ಸಚಿವರ ಮೇಲೆ ವಾಗ್ದಾಳಿ
ಶಿರಾ ಮೂಲದ ಕನ್ನಡಿಗ ಚಂದ್ರ ಆರ್ಯ: ಕೆನಡಾ ಸಂಸದ ಚಂದ್ರ ಆರ್ಯ ಅವರು ಶಿರಾ ತಾಲೂಕಿನ ಶಿರಾ ದ್ವಾರಾಳು ಗ್ರಾಮದವರು. ಗ್ರಾಮದ ವಾಣಿಜ್ಯ ತೆರಿಗೆ ಅಧಿಕಾರಿ ಕೆ.ಗೋವಿಂದಯ್ಯ ಮತ್ತು ಜಯಮ್ಮ ದಂಪತಿ ಹಿರಿಯ ಪುತ್ರ. ತುಮಕೂರಿನಲ್ಲಿ ಹುಟ್ಟಿಬೆಳೆದು, ಚಿತ್ರದುರ್ಗದಲ್ಲಿ ಪ್ರಾಥಮಿಕ ಶಿಕ್ಷಣ, ಬಳ್ಳಾರಿಯಲ್ಲಿ ಪ್ರೌಢ ಶಿಕ್ಷಣ, ಧಾರವಾಡದಲ್ಲಿ ಎಂಬಿಎ, ರಾಮನಗರದ ಗೌಸಿಯಾ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರ್‌ನಲ್ಲಿ ಪದವಿ ಪೂರೈಸಿದ್ದಾರೆ. ಬಳಿಕ ಡೆಹ್ರಾಡೂನ್‌ನಲ್ಲಿ ಡಿಆರ್‌ಡಿಒ, ಕೆಎಸ್‌ಎಫ್‌ಸಿಯ ಉಪ ವ್ಯವಸ್ಥಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. 2003ಕ್ಕೆ ಕೆಲಸಕ್ಕೆ ರಾಜೀನಾಮೆ ನೀಡಿ ಸ್ವಂತ ಉದ್ದಿಮೆ ಆರಂಭಿಸಲು ಆರ್ಯ ಕೆನಡಾಗೆ ತೆರಳಿದರು. ಇವರ ಪತ್ನಿ ಸಂಗೀತ ಸಹ ಎಂಜಿನಿಯರ್ ಆಗಿದ್ದಾರೆ.
16 ವರ್ಷಗಳ ಹಿಂದೆ ಕೆನಡಾಗೆ ಹೋಗಿರುವ ಚಂದ್ರ ಆರ್ಯ ಕೆನಡಾದ ಲಿಬರಲ್ ಪಕ್ಷದೊಂದಿಗೆ ಗುರುತಿಸಿಕೊಂಡು 2015ರ ಫೆಡರಲ್ ಚುನಾವಣೆಯಲ್ಲಿ ಕೆನಡಾದ ಹೌಸ್ ಆಫ್ ಕಾಮನ್ಸ್‌ಗೆ ನೇಪಿಯನ್ ಆಗಿ ಆಯ್ಕೆಯಾಗಿದ್ದರು. 2019ರಲ್ಲಿ ನಡೆದ ಮರು ಚುನಾವಣೆಯಲ್ಲಿ ಮರು ಆಯ್ಕೆಯಾಗಿದ್ದಾರೆ. ಅವರು ಪ್ರಸ್ತುತ ಅಂತಾರಾಷ್ಟ್ರೀಯ ವ್ಯಾಪಾರದ (ಸಿಐಐಟಿ) ಸ್ಥಾಯಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವರ್ಷಕ್ಕೆ 2 ಬಾರಿ ತವರಿಗೆ: ಚಂದ್ರ ಆರ್ಯ ಅವರು ಹಲವು ವರ್ಷಗಳಿಂದ ಕೆನಡಾದಲ್ಲೇ ನೆಲೆಸಿದ್ದರೂ ಹುಟ್ಟೂರನ್ನು ಮರೆತಿಲ್ಲ. ವರ್ಷಕ್ಕೆರಡು ಬಾರಿ ಅವರು ಗ್ರಾಮಕ್ಕೆ ಆಗಮಿಸುತ್ತಾರೆ. ಮನೆ ದೇವರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುತ್ತಾರೆ ಕುಟುಂಬಸ್ಥರು.
ಹತ್ಯೆಗೈದು ಮಗಳು ಶೀನಾ ಶವ ಬಚ್ಚಿಟ್ಟ ಅಪಾರ್ಟ್‌ಮೆಂಟ್‌ನಲ್ಲೇ ಉಳಿಯಲಿದ್ದಾರೆ ಇಂದ್ರಾಣಿ!
ಕನ್ನಡಾಭಿಮಾನಕ್ಕೆ ತಂದೆ ಮೆಚ್ಚುಗೆ: ತುಮಕೂರಿನ ಶಿರಾ ತಾಲೂಕಿನ ದ್ವಾರಾಳು ಗ್ರಾಮದ ಚಂದ್ರ ಆರ್ಯ ಅವರ ತಂದೆ ಕೆ. ಗೋವಿಂದ್ ಅಯ್ಯರ್ ಮಗನ ಕನ್ನಡ ಪ್ರೇಮ ಕಂಡು ಸಂತೋಷ ವ್ಯಕ್ತಪಡಿಸಿದ್ದಾರೆ. ನಿವೃತ್ತ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರಾದ ಅಯ್ಯರ್ ಅವರು, ಮಗನ ಕನ್ನಡಾಭಿಮಾನ ಕಂಡು ಭಾರೀ ಖುಷಿಯಾಗ್ತಿದೆ. ಬೇರೆ ಯಾರೂ ಮಾಡದ ಸಾಧನೆಯನ್ನು ಮಾಡಿದ್ದು ನಮಗೆ ಸಂತಸ ತಂದಿದೆ ಎಂದಿದ್ದಾರೆ.