Asianet Suvarna News Asianet Suvarna News

29ರಿಂದ ಕೇಬಲ್‌ ಟೀವಿ ಬಂದ್‌?: ಉದ್ಯಮ ಸ್ಥಗಿತಗೊಳಿಸಲು ಆಪರೇಟರ್‌ಗಳ ಚಿಂತನೆ!

29ರಿಂದ ಬಂದ್‌ ಆಗುತ್ತಾ ಕೇಬಲ್‌ ಟೀವಿ?| ಟ್ರಾಯ್‌ನ ಹೊಸ ವ್ಯವಸ್ಥೆ ಒಪ್ಪಿಕೊಳ್ಳದಿರಲು ಕೇಬಲ್‌ ಆಪರೇಟರ್‌ಗಳ ಚಿಂತನೆ| ಉದ್ಯಮ ಸ್ಥಗಿತಗೊಳಿಸಿ ಕೇಂದ್ರಕ್ಕೆ ಸಡ್ಡು ಹೊಡೆಯಲು ಒಲವು

Cable operators are thinking to stop the business
Author
Bangalore, First Published Dec 22, 2018, 9:07 AM IST

 ಬೆಂಗಳೂರು[ಡಿ.22]: ಭಾರತೀಯ ದೂರ ಸಂಪರ್ಕ ಪ್ರಾಧಿಕಾರ (ಟ್ರಾಯ್‌)ದ ಹೊಸ ನೀತಿಯಿಂದಾಗಿ ಎಂಎಸ್‌ಓ (ಮಲ್ಟಿಸರ್ವಿಸ್‌ ಆಪರೇಟರ್‌) ವಿರುದ್ಧ ತಿರುಗಿ ಬಿದ್ದಿರುವ ಕೇಬಲ್‌ ಟೀವಿ ಆಪರೇಟರ್‌ಗಳು ಡಿ.29ರಿಂದ ಸಂಪೂರ್ಣ ಉದ್ಯಮ ಸ್ಥಗಿತಗೊಳಿಸುವ ಚಿಂತನೆ ನಡೆ​ಸು​ತ್ತಿದ್ದು, ಇದ​ರಿಂದಾಗಿ 29ರ ನಂತರ ಟೀವಿ ಚಾನಲ್‌ಗಳು ವೀಕ್ಷ​ಣೆಗೆ ಲಭ್ಯ​ವಾ​ಗುವುದೋ ಅಥವಾ ಇಲ್ಲವೋ ಎಂಬ ಗೊಂದಲ ಮೂಡಿ​ದೆ.

ಒಂದು ಕಡೆ ಕೇಬಲ್‌ ಟೀವಿ ವೀಕ್ಷಕರ ನೋಂದಣಿಗೆ ಕೇಬಲ್‌ ಟೀವಿ ಆಪರೇಟಿಂಗ್‌ ಸಿಸ್ಟಂ ಸಿದ್ಧವಾಗಿಲ್ಲ. ಇನ್ನೊಂದು ಕಡೆ ಎಂಎಸ್‌ಓಗಳಾದ ಹಾಥ್‌ ವೇ ನೆಟ್‌ವರ್ಕ್ಸ್‌, ಡೆನ್‌ ನೆಟ್‌ವರ್ಕ್ಸ್‌, ಸಿಟಿ ಕೇಬಲ್‌, ಎಸಿಟಿಗಳು ಈವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಅಲ್ಲದೇ, ವೈಯಕ್ತಿವಾಗಿ ಪ್ರತಿಯೊಬ್ಬ ಗ್ರಾಹಕರ ಆಯ್ಕೆಗೆ ಅನುಗುಣವಾಗಿ ಚಾನಲ್‌ಗಳನ್ನು ನೀಡುವುದಕ್ಕೆ ಬೇಕಾದ ದೊಡ್ಡ ತಾಂತ್ರಿಕ ವ್ಯವಸ್ಥೆ ಎಂಎಸ್‌ಓಗಳ ಬಳಿ ಇಲ್ಲ. ಗ್ರಾಹಕರಿಗೆ ಹೇಗೆ ಸರ್ವಿಸ್‌ ನೀಡಬೇಕು ಎಂಬುದರ ಬಗ್ಗೆ ಕೇಬಲ್‌ ಟೀವಿ ಆಪರೇಟರ್‌ ಸೂಕ್ತ ಮಾಹಿತಿ ನೀಡಿಲ್ಲ.

ಟ್ರಾಯ್ ಕಾಯ್ದೆಗೆ ವಿರೋಧ: ಸಿಡಿದೆದ್ದ ಕೇಬಲ್ ಆಪರೇಟರ್‌ಗಳು!

ಹೀಗಾಗಿ, ಟ್ರಾಯ್‌ ತನ್ನ ಹೊಸ ನೀತಿ​ಯನ್ನು ಮುಂದೂ​ಡದೇ ಹೋದರೆ 29ರಿಂದ ರಾಜ್ಯಾ​ದ್ಯಂತ ಕೇಬಲ್‌ ಟೀವಿ ವ್ಯವ​ಸ್ಥೆಯೇ ಸ್ತಬ್ಧ​ಗೊ​ಳ್ಳುವ ಸಾಧ್ಯ​ತೆ​ಯಿದೆ ಎನ್ನ​ಲಾ​ಗು​ತ್ತಿ​ದೆ. ಕೇಬಲ್‌ ಟೀವಿ ಆಪ​ರೇ​ಟ​ರ್‌​ಗಳ ಪ್ರಕಾರ, ರಾಜ್ಯ​ದಲ್ಲಿ ಮಾತ್ರ​ವಲ್ಲ ಇಡೀ ದೇಶ​ದಲ್ಲೇ ಈ ಪರಿ​ಸ್ಥಿತಿ ನಿರ್ಮಾ​ಣ​ವಾ​ಗ​ಲಿದೆ. ಏಕೆಂದರೆ, ಕೇಬಲ್‌ ಟೀವಿ ಆಪ​ರೇ​ಟಿಂಗ್‌ ವ್ಯವ​ಸ್ಥೆಯು ದೇಶದ ಶೇ.80ರಷ್ಟುಟೀವಿ ಚಾನಲ್‌ ಗ್ರಾಹ​ಕ​ರನ್ನು ಹೊಂದಿದೆ. ದೇಶದಲ್ಲಿ ಒಟ್ಟು 9.6 ಕೋಟಿ, ರಾಜ್ಯದಲ್ಲಿ 60ರಿಂದ 80 ಲಕ್ಷ ಮಂದಿ ಕೇಬಲ್‌ ಟೀವಿ ಗ್ರಾಹಕರಿದ್ದಾರೆ. ಟ್ರಾಯ್‌ನ ಹೊಸ ನೀತಿಯಿಂದ ಗ್ರಾಹಕರಿಗೆ ಹೊರೆಯಾಗಲಿದ್ದು, ಕೇಬಲ್‌ ಟೀವಿ ಆಪರೇಟರ್‌ಗಳನ್ನು ನಷ್ಟಕ್ಕೆ ನೂಕಲಿದೆ ಎಂಬ ಕಾರಣಕ್ಕೆ ಉದ್ಯಮವನ್ನೇ ಬಿಡುವ ಬೆದ​ರಿ​ಕೆ​ಯನ್ನು ಹಾಕುವ ತೀರ್ಮಾ​ನಕ್ಕೆ ಆಪರೇಟರ್‌ಗಳು ಬಂದಿ​ದ್ದಾರೆ. ಕೇಬಲ್‌ ಟೀವಿ ಆಪರೇಟರ್‌ಗಳು ಸೇವೆ ನಿಲ್ಲಿಸಿದರೆ ಗ್ರಾಹಕರು ಡಿಟಿಎಚ್‌ ಸೇವೆ ಪಡೆಯಬೇಕಾಗುತ್ತದೆ. ಆಗ, ಒಂದೂವರೆ ವರ್ಷದ ಹಿಂದೆ ಕೇಬಲ್‌ ಟೀವಿ ವೀಕ್ಷಕರು ಸಾವಿರಾರು ರು. ನೀಡಿ ಖರೀದಿಸಿದ್ದ ಸೆಟ್‌ ಟಾಪ್‌ ಬಾಕ್ಸ್‌ಗಳು ಕಸದ ಬುಟ್ಟಿಸೇರಲಿದ್ದು, ಗ್ರಾಹಕರಿಗೆ ಮತ್ತಷ್ಟುಹೊರೆಯಾಗಲಿದೆ.

ನೋಂದಣಿ ಮಾಡದಿರಲು ತೀರ್ಮಾನ:

ಟ್ರಾಯ್‌ನ ಹೊಸ ನೀತಿಯಿಂದ ಕೇಬಲ್‌ ಟೀವಿ ಗ್ರಾಹಕರ ಮಾಹಿತಿಯನ್ನು ಹೊಸದಾಗಿ ನೋಂದಣಿ ಮಾಡಬೇಕಾಗಿದೆ. ಆದರೆ, ಟ್ರಾಯ್‌ನ ನೀತಿಯನ್ನೇ ವಿರೋಧಿಸುತ್ತಿರುವ ರಾಜ್ಯ ಕೇಬಲ್‌ ಟೀವಿ ಆಪರೇಟರ್‌ಗಳು ಗ್ರಾಹಕರ ನೋಂದಣಿ ಮಾಡದಿರುವುದಕ್ಕೆ ತೀರ್ಮಾನಿಸಿದ್ದಾರೆ. ಇದರಿಂದ ಸ್ವಲ್ಪ ಪ್ರಮಾಣದಲ್ಲಿ ಡಿಟಿಎಚ್‌ಗಳಿಗೆ ಅನುಕೂಲವಾಗಲಿದೆ. ಆದರೆ, ಗ್ರಾಹಕರಿಗೆ ಮಾತ್ರ ಟೀವಿ ಸಂಪರ್ಕ ಸಿಗುವುದಿಲ್ಲ.

ಹೊಸ ವರ್ಷ, ಹೊಸ ದರ: ಟೀವಿ ಕೇಬಲ್‌, ಡಿಟಿಎಚ್‌ ಗ್ರಾಹಕರ ಜೇಬಿಗೆ ಕತ್ತರಿ!

ಎಂಎಸ್‌ಓ ಹಾಗೂ ಚಾನಲ್‌ಗಳ ಪರ ನೀತಿ:

ಟ್ರಾಯ್‌ನ ಹೊಸ ನೀತಿಯಲ್ಲಿ ಕೇಬಲ್‌ ಟೀವಿ ಆಪರೇಟರ್‌ ಹಾಗೂ ಗ್ರಾಹಕರು ಇಬ್ಬರಿಗೂ ಅನ್ಯಾಯವಾಗಿದ್ದು, ದೊಡ್ಡ ಚಾನಲ್‌ಗಳ ಪರವಾಗಿದೆ. ಈ ಮೂಲಕ ಕೇಬಲ್‌ ಟೀವಿ ಆಪರೇಟರ್‌ಗಳನ್ನು ಉದ್ಯಮದಿಂದ ದೂರವಿಡುವ ಹುನ್ನಾರ ಮಾಡಲಾಗಿದೆ. ಹೊಸ ನೀತಿಯ ಪ್ರಕಾರ ಕೇಬಲ್‌ ಟೀವಿ ಗ್ರಾಹಕರಿಂದ ಪ್ರತಿ ತಿಂಗಳು ಪಡೆಯುವ ಸೇವಾಶುಲ್ಕದಲ್ಲಿ (130 ರು. ಮತ್ತು ಶೇ.18ರಷ್ಟುತೆರಿಗೆ) ಶೇ.45ರಷ್ಟುಕೇಬಲ್‌ ಟೀವಿ ಆಪರೇಟರ್‌ಗಳಿಗೆ ಉಳಿದ ಶೇ.55ರಷ್ಟುಎಂಎಸ್‌ಓಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಕೇಬಲ್‌ ಟೀವಿ ಆಪರೇಟರ್‌ಗಳು ದೂರಿದ್ದಾರೆ.

ಇನ್ನು ಪೇ ಚಾನಲ್‌ ಶುಲ್ಕ ಹಂಚಿಕೆಯಲ್ಲೂ ಅನ್ಯಾಯ ಮಾಡಲಾಗಿದ್ದು, ಶೇ.80ರಷ್ಟುಹಣ ಚಾನಲ್‌ಗಳಿಗೆ, ಉಳಿದ ಶೇ.20ರಷ್ಟುಹಣ ಎಂಎಸ್‌ಓ ಹಾಗೂ ಕೇಬಲ್‌ ಟೀವಿ ಆಪರೇಟರ್‌ಗಳಿಗೆ ಹಂಚಿಕೆಯಾಗಬೇಕಾಗುತ್ತದೆ. ಎಂಎಸ್‌ಓಗಳಿಗೆ ಗ್ರಾಹಕರು ಮತ್ತು ಚಾನಲ್‌ ಎರಡೂ ಕಡೆಯಿಂದ ಆದಾಯ ಬರಲಿದೆ. ಆದರೆ, ಕೇಬಲ್‌ ಆಪರೇಟರ್‌ಗಳು ಮನೆ ಮನೆಗೆ ಸುತ್ತಿ ಹಣ ಸಂಗ್ರಹಣೆ ಮಾಡಿದರೂ ತಿಂಗಳಿಗೆ ಒಂದು ಮನೆಯಿಂದ 60 ರು. ಆದಾಯ ಸಿಗುವುದಿಲ್ಲ. ಇದರಿಂದಾಗಿ ಕೇಬಲ್‌ ಟೀವಿ ಉದ್ಯಮ ಸಂಪೂರ್ಣವಾಗಿ ನಷ್ಟಕ್ಕೆ ಒಳಗಾಗಲಿದೆ ಎಂದು ರಾಜ್ಯ ಕೇಬಲ್‌ ಟೀವಿ ಆಪರೇಟರ್‌ಗಳ ಸಂಘದ ಅಧ್ಯಕ್ಷ ಪ್ಯಾಟ್ರಿಕ್‌ ರಾಜು ತಿಳಿಸಿದ್ದಾರೆ.

ವರ್ಷಾರಂಭಕ್ಕೆ ಸ್ತಬ್ಧವಾಗಲಿವೆಯಾ ಕೇಬಲ್ ಟೀವಿ

ಮನೆ ಮನೆಗೆ ತೆರಳಿ ಜಾಗೃತಿ

ಕೇಂದ್ರ ಸರ್ಕಾರ ಭಾರತೀಯ ದೂರಸಂಪರ್ಕ ಪ್ರಾಧಿಕಾರದ ಹೊಸ ನೀತಿಯ ಮೂಲಕ ಗ್ರಾಹಕರ ಮೇಲೆ ಹೊರೆ ಹಾಕಿ, ಕಾರ್ಪೋರೆಟ್‌ ಕಂಪನಿಗಳ ಪರವಾಗಿ ನಿರ್ಧಾರ ತೆಗೆದುಕೊಂಡಿದೆ ಎಂದು ಕೇಬಲ್‌ ಟೀವಿ ಆಪರೇಟರ್‌ಗಳು ಮನೆ ಮನೆಗೆ ಹೋಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಕ್ಕೆ ತೀರ್ಮಾನ ಮಾಡಿದ್ದಾರೆ.

ಹೊಸ ವ್ಯವಸ್ಥೆ ಜಾರಿಗೆ ಕಾಲಾವಕಾಶ?

ಭಾರತೀಯ ದೂರಸಂಪರ್ಕ ಪ್ರಾಧಿಕಾರ ಡಿ.29ರಂದು ಪೇ ಚಾನಲ್‌ಗಳನ್ನು ಸ್ಥಗಿತಗೊಳಿಸದೆ ಹೊಸ ನೀತಿ ಜಾರಿಗೆ ತರುವುದಕ್ಕೆ ಚಿಂತನೆ ಮಾಡುತ್ತಿದ್ದು, ಹಂತ ಹಂತವಾಗಿ ಹೊಸ ನೀತಿಯನ್ನು ಜಾರಿಗೆ ತರುವುದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಮೂಲಕ ಹೊಸ ನೀತಿ ಜಾರಿಗೆ ಕಾಲಾವಕಾಶ ನೀಡುವುದಕ್ಕೆ ಮುಂದಾಗಿದೆ.

Follow Us:
Download App:
  • android
  • ios