ಬೆಂಗಳೂರು[ಡಿ.18]: ನೀವು ಟೀವಿ ಪ್ರಿಯರೇ.. ಹಾಗಿ​ದ್ದರೆ ಹೊಸ ವರ್ಷ​ದಿಂದ ನಿಮ್ಮ ಜೇಬಿಗೆ ಭಾರಿ ಕತ್ತರಿ ಬೀಳ​ಲಿದೆ.

ಹೌದು, ಇದು​ವ​ರೆಗೂ 150 ರು.ನಿಂದ 250 ರು. ಮಾಸಿಕ ಶುಲ್ಕ ನೀಡಿ 400ರಿಂದ 500 ಚಾನಲ್‌​ಗ​ಳನ್ನು ವೀಕ್ಷಿ​ಸು​ತ್ತಿದ್ದ ಗ್ರಾಹ​ಕರು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ನೀತಿಯಿಂದಾಗಿ ಹೊಸ ವರ್ಷ​ದಿಂದ ಇಷ್ಟೇ ಚಾನಲ್‌​ಗ​ಳಿ​ಗಾಗಿ ಮಾಸಿಕ 1500 ರು. ಪಾವ​ತಿ​ಸು​ವಂತಾ​ಗ​ಲಿ​ದೆ!

ಟೀವಿ ಕೇಬಲ್‌ ನಿಯಮಾವಳಿಗಳ ಸಂಬಂಧ ಕೇಂದ್ರ ಸರ್ಕಾರದ ಟ್ರಾಯ್‌ (ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್‌ ಇಂಡಿಯಾ) ಮೂಲಕ ಹೊಸ ನಿಯಮ ಜಾರಿಗೊಳಿಸುವುದಕ್ಕೆ ಮುಂದಾಗಿದ್ದು, ಡಿ.29ರಿಂದ ಜಾರಿಗೆ ಬರಲಿದೆ. ಆಗ ಕೇಬಲ್‌ ಟೀವಿ ಗ್ರಾಹಕರು ವೀಕ್ಷಣೆ ಮಾಡುತ್ತಿರುವ ಚಾನಲ್‌ಗಳಿಗೆ ಪಾವತಿಸುವ ಶುಲ್ಕದ ಮೊತ್ತ ಸುಮಾರು 10 ಪಟ್ಟು ಹೆಚ್ಚಾಗಲಿದೆ. ಈ ನಿಯಮ ಡಿಟಿಎಚ್‌ ಗ್ರಾಹಕರಿಗೂ ಅನ್ವಯವಾಗಲಿದೆ.

ಪ್ರಸಕ್ತ ರಾಜ್ಯಾದ್ಯಂತ 400ರಿಂದ 500 ಚಾನಲ್‌ಗಳನ್ನು ಕೇಬಲ್‌ ಟೀವಿ ಗ್ರಾಹಕರಿಗೆ ಕೇಬಲ್‌ ಆಪರೇಟರ್‌ಗಳು ನೀಡುತ್ತಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ 150 ರು., ಬೆಂಗಳೂರು, ಮೈಸೂರು ಸೇರಿದಂತೆ ಮಹಾನಗರದಲ್ಲಿ 250 ರು.ಗಳಿಂದ 350 ರು.ವರೆಗೆ ಮಾಸಿಕ ಶುಲ್ಕ ಸಂಗ್ರಹಿಸುತ್ತಿದ್ದಾರೆ. ಹೊಸ ನಿಯಮದಿಂದ ಏಕರೂಪದ ಶುಲ್ಕ ಪಾವತಿ ವ್ಯವಸ್ಥೆ ಜಾರಿಗೆ ಬರುವುದರ ಜತೆಗೆ ಶುಲ್ಕದ ಪ್ರಮಾಣ ಹೆಚ್ಚಾಗಲಿದ್ದು, ಗ್ರಾಹಕರಿಗೆ ದೊಡ್ಡ ಹೊರೆಯಾಗಲಿದೆ.

ಏನಿದು ಹೊಸ ನಿಯ​ಮ?:

ಕೇಂದ್ರ ಸರ್ಕಾರದ ಟ್ರಾಯ್‌ ಸಂಸ್ಥೆಯು ತಂದಿ​ರುವ ಕೇಬಲ್‌ ಚಾನಲ್‌​ಗಳ ಹೊಸ ಶುಲ್ಕ ಪದ್ಧತಿ ಪ್ರಕಾರ ಗ್ರಾಹ​ಕರು ಟೀವಿ ಚಾನಲ್‌​ಗ​ಳನ್ನು ಪಡೆ​ಯಲು ಟ್ರಾಯ್‌ ಪ್ರಾಥ​ಮಿಕ ಶುಲ್ಕ​ವನ್ನು ವಿಧಿ​ಸುತ್ತದೆ. ಇದರ ಮೇಲೆ ನೀವು ಜನ​ಪ್ರಿಯ ಚಾನಲ್‌​ಗ​ಳನ್ನು ನೋಡ​ಬೇಕು ಎಂದರೆ, ಅವು​ಗ​ಳಿಗೆ ಪ್ರತ್ಯೇಕ (ಪ್ರತಿ ಚಾನಲ್‌ಗೂ) ಶುಲ್ಕ​ವನ್ನು ನೀಡ​ಬೇಕು. ಈ ಜನಪ್ರಿಯ ಚಾನಲ್‌​ಗ​ಳನ್ನು ಆಯ್ಕೆ ಮಾಡಿ​​ಕೊ​ಳ್ಳುವ ಅವ​ಕಾ​ಶ​ವನ್ನು ಗ್ರಾಹ​ಕ​ರಿಗೆ ನೀಡಲಾಗಿದೆ.

ಪ್ರಸ್ತುತ ಗ್ರಾಹ​ಕರು 400ರಿಂದ 500 ಚಾನಲ್‌ ವೀಕ್ಷಣೆ ಮಾಡುವುದಕ್ಕೆ ಪ್ರತಿ ತಿಂಗಳು 150 ರು. ಪಾವತಿ ಮಾಡುತ್ತಿದ್ದಾರೆ. ಆದರೆ, ಡಿ.29ರ ನಂತರ ಒಂದು ತಿಂಗಳಿಗೆ ಬಾಡಿಗೆ ರೂಪದಲ್ಲಿ 130 ರು. ಪಾವತಿ ಮಾಡಬೇಕು. ಅದಕ್ಕೆ ತೆರಿಗೆ (ಜಿಎಸ್‌ಟಿ) ಶೇ.18ರಷ್ಟುಸೇರಿಸಿದರೆ ಶುಲ್ಕದ ಮೊತ್ತ 150 ರುಪಾಯಿಗಿಂತ ಹೆಚ್ಚಾಗಲಿದೆ. ಈ ಮೊತ್ತ ನೀಡಿ​ದರೆ, ನಿಮಗೆ ಮೊದ​ಲಿ​ನಂತೆ ಎಲ್ಲಾ ಜನ​ಪ್ರಿಯ ಚಾನಲ್‌​ಗಳು ಸಿಗು​ವು​ದಿಲ್ಲ. ಬದ​ಲಾಗಿ, 24 ದೂರದರ್ಶನ ಚಾನಲ್‌ಗಳು, 100 ಉಚಿತ ವೀಕ್ಷಣೆಯ ಚಾನಲ್‌ಗಳು ಮಾತ್ರ ಸಿಗಲಿವೆ.

ಜನ​ಪ್ರಿಯ ಚಾನಲ್‌ ಬೇಕು ಎಂದರೆ ಅವು​ಗ​ಳಿಗೆ ನೀವು ಪ್ರತ್ಯೇ​ಕ​ವಾಗಿ ಶುಲ್ಕ​ವನ್ನು ಪಾವತಿ ಮಾಡ​ಬೇಕು. ಈ ಜನ​ಪ್ರಿಯ ಚಾನಲ್‌​ಗ​ಳಿಗೆ ಅವು​ಗಳ ಜನ​ಪ್ರಿ​ಯತೆ ಆಧಾ​ರದ ಮೇಲೆ 1 ರು.ನಿಂದ 19 ರು.ವರೆಗೆ ಶುಲ್ಕ ನಿಗದಿಯಾ​ಗಿ​ರು​ತ್ತದೆ. ಕಡಿಮೆ ಬೇಡಿಕೆ ಇರುವ ಚಾನಲ್‌ಗಳಿಗೆ ಕಡಿಮೆ ಶುಲ್ಕ, ಹೆಚ್ಚು ಬೇಡಿಕೆ ಇರುವ ಚಾನಲ್‌ಗಳಿಗೆ ಹೆಚ್ಚಿನ ಶುಲ್ಕ ಇರುತ್ತದೆ. ಈಗಾಗಲೇ ಜನಪ್ರಿಯವಾಗಿರುವ ಚಾನಲ್‌ಗಳ ಶುಲ್ಕ 15ರಿಂದ 19 ರು. ಆಗಿರುತ್ತದೆ.

ಕನಿಷ್ಠ 400 ರು ಶುಲ್ಕ:

ಅಂದರೆ, ನೀವು ಎಲ್ಲಾ ಚಾನಲ್‌ ನೋಡ​ಬೇಕು ಎಂದರೆ 1500 ರು. ಶುಲ್ಕ ನೀಡ​ಬೇ​ಕಾ​ಗು​ತ್ತದೆ. ನಾನು ಕೆಲವೇ ಜನ​ಪ್ರಿಯ ಚಾನಲ್‌​ಗ​ಳನ್ನು ನೋಡು​ತ್ತೇನೆ ಎಂದು ಅವು​ಗ​ಳನ್ನು ಆಯ್ಕೆ ಮಾಡಿ​ಕೊಂಡರೆ ನೀವು ಪಾವತಿ ಮಾಡ​ಬೇ​ಕಾದ ಶುಲ್ಕ ಕನಿಷ್ಠ ಎಂದರೂ 400ರಿಂದ 500 ರು. ಆಗುತ್ತದೆ.

ಎಲ್ಲಿ, ಎಷ್ಟುದರ?

ಪ್ರದೇಶ ಪ್ರಸ್ತುತ ದರ ಹೊಸ ದರ (ಸುಮಾರು)

ಬೆಂಗಳೂರು ಮತ್ತು ಮಹಾನಗರ 250-350 ರು. 1500 ರು.

ಗ್ರಾಮಾಂತರ ಪ್ರದೇಶ 150 ರು. 1500 ರು.

ಏಕೆ ಇಷ್ಟುದುಬಾರಿ?

ಪ್ರಾಥಮಿಕ ಶುಲ್ಕ- 130 ರು. (ಬಾಡಿಗೆ)

ತೆರಿಗೆ- ಶೇ.18 (24 ರು.)

ಒಟ್ಟು- 154 ರು. (ಉಚಿತ 124 ಚಾನಲ್‌ಗೆ)

ಪ್ರತಿ ಜನಪ್ರಿಯ ಚಾನಲ್‌ಗೆ 1ರಿಂದ 19 ರು.

ಟೀವಿ ಗ್ರಾಹಕರ ವಿವರ

ಗ್ರಾಹಕರು ದೇಶ ಕರ್ನಾಟಕ ಬೆಂಗಳೂರು

ಕೇಬಲ್‌ ಟೀವಿ 9.6 ಕೋಟಿ 60-80 ಲಕ್ಷ 25-30 ಲಕ್ಷ

ಡಿಟಿಎಚ್‌ 3.5 ಕೋಟಿ 6-10 ಲಕ್ಷ 3-5 ಲಕ್ಷ

ಕೇಬಲ್‌ ಟೀವಿ ಚಾನಲ್‌ ಆಪರೇಟರ್ಸ್‌

ರಾಜ್ಯದಲ್ಲಿ ಸುಮಾರು 1 ಲಕ್ಷ

ಬೆಂಗಳೂರು 2,250