ಎರಡನೇ ಪತ್ನಿ ಮತ್ತು ಮಕ್ಕಳನ್ನು ಪೋಷಿಸುವ ವ್ಯಕ್ತಿ, ತನ್ನ ಮೊದಲ ಪತ್ನಿ ಮತ್ತು ವೃದ್ಧ ತಾಯಿಗೆ ಜೀವನಾಂಶ ನೀಡಲು ಹಣವಿಲ್ಲ ಎಂದು ಹೇಳಲಾಗದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಭಾಗಶಃ ಮಾರ್ಪಡಿಸಿದ ಹೈಕೋರ್ಟ್, ಮೊದಲ ಕುಟುಂಬ ಮತ್ತು ತಾಯಿಯ ಪೋಷಣೆಗೆ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಪಾವತಿಸುವಂತೆ ಪತಿಗೆ ಆದೇಶಿಸಿದೆ.

ಬೆಂಗಳೂರು: ಎರಡನೇ ಪತ್ನಿ ಹಾಗೂ ಆಕೆಗೆ ಜನಿಸಿದ ಮಕ್ಕಳನ್ನು ಪೋಷಣೆ ಮಾಡುವ ಸಾಮರ್ಥ್ಯ ಹೊಂದಿರುವ ವ್ಯಕ್ತಿ, ತನ್ನ ಮೊದಲ ಪತ್ನಿ, ಮತ್ತವರ ಮಕ್ಕಳು ಹಾಗೂ ವೃದ್ಧ ತಾಯಿಗೆ ಜೀವನಾಂಶ ನೀಡಲು ಹಣವಿಲ್ಲ ಎಂಬುದಾಗಿ ಹೇಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

Add Asianetnews Kannada as a Preferred SourcegooglePreferred

ಮೊದಲ ಪತ್ನಿ ಮತ್ತವರ ಮಕ್ಕಳಿಗೆ ಮಾಸಿಕ 30 ಸಾವಿರ ರು. ಜೀವನಾಂಶವಾಗಿ ನೀಡಬೇಕು ಎಂದು ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ರದ್ದು ಕೋರಿ ವ್ಯಕ್ತಿಯೋರ್ವ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಬಿ. ಗೀತಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಪ್ರಕರಣದಲ್ಲಿ ಅರ್ಜಿದಾರ (ಪತಿ) ತನ್ನ ಆದಾಯ ತೋರಿಸಲು ಯಾವುದೇ ದಾಖಲೆ ಒದಗಿಸಿಲ್ಲ. ಆದರೆ, ಪತಿ ನಿಜವಾಗಿಯೂ ಯಾವುದೇ ಕೆಲಸ ಮಾಡುತ್ತಿಲ್ಲ ಎಂದಾದರೆ ತನ್ನ ಎರಡನೇ ಪತ್ನಿ ಮತ್ತು ಆಕೆಯ ಇಬ್ಬರು ಮಕ್ಕಳನ್ನು ಪೋಷಣೆ ಮಾಡುತ್ತಿರಲಿಲ್ಲ. ಎರಡನೇ ಹೆಂಡತಿ, ಮಕ್ಕಳನ್ನು ಪೋಷಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೀಠ ಆದೇಶದಲ್ಲಿ ಹೇಳಿದೆ.

ಈ ಮಧ್ಯೆ ಅರ್ಜಿದಾರ ಫೋಟೋ ಸ್ಟೂಡಿಯೋ ನಡೆಸುತ್ತಿದ್ದು, ದೇವಾಲಯವೊಂದರಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದು ದಾಖಲೆಗಳಿಂದ ಗೊತ್ತಾಗಿದೆ. ಆದರೆ, ಬರುತ್ತಿರುವ ಆದಾಯವೆಷ್ಟು ಎಂಬುದು ನಿಖರವಾಗಿ ತಿಳಿಸಿಲ್ಲ. ಮಾಸಿಕ 5 ರಿಂದ ಆರು ಸಾವಿರ ಮಾತ್ರ ದುಡಿಮೆ ಇದೆ ಎಂದಾದರೂ, ಎರಡನೇ ಹೆಂಡತಿ ಮತ್ತು ಮಕ್ಕಳನ್ನು ಫೋಷಣೆ ಮಾಡುತ್ತಿದ್ದಾನೆ. ಇಂಥ ಸ್ಥಿತಿಯಲ್ಲಿ ತನ್ನ ಮೊದಲ ಪತ್ನಿ, ಮತ್ತವರ ಮಕ್ಕಳು, ವೃದ್ಧ ತಾಯಿಗೆ ಜೀವನಾಂಶ ನೀಡಲು ಹಣವಿಲ್ಲ ಎಂಬುದಾಗಿ ಹೇಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಪೀಠ ಹೇಳಿದೆ.

ಇನ್ನು‌ 74 ವರ್ಷದ ತಾಯಿ ಮೆಸ್ ಒಂದರಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ ಎಂಬ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ಪೀಠ, ತಾಯಿಗೆ ಆದಾಯವಿದ್ದರೂ ಅಥವಾ ಆಕೆ ಅನಾರೋಗ್ಯದಿಂದ ಬಳಲುತ್ತಿದ್ದರೂ ಮಗನಾಗಿ ಆಕೆಯನ್ನು ನೋಡಿಕೊಳ್ಳುವುದು ಆತನ ಕಾನೂನಾತ್ಮಕ ಜವಾಬ್ದಾರಿ. ಹಾಗಾಗಿ, ಅರ್ಜಿದಾರ ಪ್ರತಿ ತಿಂಗಳು 17,500 ರು.ಗಳನ್ನು ತನ್ನ ಮೊದಲ ಕುಟುಂಬ ಮತ್ತು ತಾಯಿಗೆ ನೀಡಬೇಕು ಎಂದು ಆದೇಶಿಸಿದೆ.

ಪ್ರಕರಣವೇನು?

ಅರ್ಜಿದಾರರು ಮತ್ತು ಮೊದಲ ಪತ್ನಿಯನ್ನು 2005ರಲ್ಲಿ ವಿವಾಹವಾಗಿದ್ದರು. ದಂಪತಿ 2010ರವರೆಗೂ ಸಂತೋಷದಿಂದ ವೈವಾಹಿಕ ಜೀವನ ನಡೆಸಿದ್ದರು. ಬಳಿಕ ಪತಿ, ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದು, ಇಬ್ಬರು ಮಕ್ಕಳಾಗಿದ್ದರು.

ಈ ನಡುವೆ ಮದ್ಯ ವ್ಯಸನಿಯಾಗಿದ್ದ ಪತಿ, ಮೊದಲ ಪತ್ನಿ ಮತ್ತವರ ಕುಟುಂಬ ಪೋಷಣೆಗೆ ಯಾವುದೇ ರೀತಿಯಲ್ಲಿಯೂ ನೆರವು ನೀಡದೆ, ವರದಕ್ಷಿಣೆ ಕಿರುಕುಳ ನೀಡುವುದಕ್ಕೆ ಮುಂದಾಗಿ, ಪತ್ನಿ ಮತ್ತು ಮಕ್ಕಳನ್ನು ಮನೆಯಿಂದ ಹೊರ ಹಾಕಿದ್ದರು.

ಬೆಳಗಾವಿಯ ಕೌಟುಂಬಿಕ ನ್ಯಾಯಾಲಯ

ಇದರಿಂದ ಮೊದಲ ಪತ್ನಿ, ಮಕ್ಕಳು ಮತ್ತು ಪತಿ ತಾಯಿಗೆ ಮಾಸಿಕ ಜೀವನಾಂಶಕ್ಕಾಗಿ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಬೆಳಗಾವಿಯ ಕೌಟುಂಬಿಕ ನ್ಯಾಯಾಲಯ ಈ ಹಿಂದೆ ಪತಿಗೆ ತನ್ನ ಮೊದಲ ಕುಟುಂಬಕ್ಕೆ ಮಾಸಿಕ 30,000 ರು. ಜೀವನಾಂಶ ನೀಡುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಪತಿಯು ಹೈಕೋರ್ಟ್ ಮೆಟ್ಟಿಲೇರಿದ್ದ. ಈಗ ಹೈಕೋರ್ಟ್ 30,000 ರು. ಜೀವನಾಂಶದ ಮೊತ್ತವು ಸ್ವಲ್ಪ ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟು, ಆ ಮೊತ್ತವನ್ನು ಕಡಿಮೆ ಮಾಡಿದೆ.