Asianet Suvarna News Asianet Suvarna News

ಹನುಮನ ಜನ್ಮಸ್ಥಳ ಅಂಜನಾದ್ರಿಗೆ ಬಂಪರ್‌ 100 ಕೋಟಿ ಹಣ..!

ರೋಪ್‌ವೇ, ರಸ್ತೆ ನಿರ್ಮಾಣ ಸೇರಿ ಹಲವು ಕಾಮಗಾರಿ, ಮುಂದಿನ ಹಂತದಲ್ಲಿ ಇನ್ನಷ್ಟು ನೆರವು: ಸಂಪುಟ ನಿರ್ಧಾರ

Cabinet decision to 100 Crore to Anjanadri Hill Development grg
Author
Bengaluru, First Published Aug 13, 2022, 8:21 AM IST

ಬೆಂಗಳೂರು(ಆ.13):  ಹನುಮನ ಜನ್ಮಸ್ಥಳ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರವು ಮುಂದಾಗಿದೆ. 100 ಕೋಟಿ ರು. ಅಂದಾಜು ವೆಚ್ಚದಲ್ಲಿ ಇಲ್ಲಿ ಕಾಮಗಾರಿಗಳನ್ನು ಕೈಗೊಳ್ಳುವ ಯೋಜನೆಗೆ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಸದ್ಯ 100 ಕೋಟಿ ರು. ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಮುಂದಿನ ದಿನದಲ್ಲಿ ಹಂತ ಹಂತವಾಗಿ ಅಗತ್ಯ ಇರುವ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಲಿದೆ. ಅಂಜನಾದ್ರಿಯನ್ನು ಪ್ರವಾಸಿ ಸ್ಥಳವಾಗಿ ಅಭಿವೃದ್ಧಿಗೊಳಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ಈ ಸಂಬಂಧ ಹಲವು ಸಭೆಗಳನ್ನು ನಡೆಸಿದ್ದಾರೆ. ಕಾಮಗಾರಿಗಳನ್ನು ಕೈಗೊಳ್ಳಲು ಸೂಚನೆಯನ್ನು ಸಹ ನೀಡಲಾಗಿದೆ.

ಅಂಜನಾದ್ರಿ ಅಭಿವೃದ್ಧಿಗೆ ಶೀಘ್ರ ನೀಲನಕ್ಷೆ: ಸಚಿವ ಆನಂದ ಸಿಂಗ್‌

ಏನೇನು ಕಾಮಗಾರಿ?:

ಯೋಜನೆಯ ಮೊದಲ ಹಂತದಲ್ಲಿ ಅಂಜನಾದ್ರಿಯ ಸಂಪರ್ಕ ರಸ್ತೆ ಅಭಿವೃದ್ಧಿ, ಪರ್ಯಾಯ ರಸ್ತೆಗಳನ್ನು ಗುರುತಿಸಿ ಅಭಿವೃದ್ಧಿಪಡಿಸಬೇಕು. ರಾಷ್ಟ್ರೀಯ ಹೆದ್ದಾರಿಯಿಂದ ಗಂಗಾವತಿವರೆಗಿನ ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಲೋಕೋಪಯೋಗಿ ಇಲಾಖೆ ಮೂಲಕ ಕ್ರಮ ವಹಿಸಲು ಸರ್ಕಾರ ನಿರ್ಧರಿಸಿದೆ. ವಿಸ್ತೃತ ಯೋಜನಾ ವರದಿಯನ್ನು ಕೂಡಲೇ ಸಿದ್ಧಪಡಿಸಲು ಸೂಚಿಸಲಾಗಿದೆ. ಬೆಟ್ಟದ ಬುಡದಲ್ಲಿ ಯಾತ್ರಿಕರಿಗೆ ಪಾರ್ಕಿಂಗ್‌ ಸೇರಿದಂತೆ ಇತರೆ ಮೂಲಸೌಕರ್ಯ ಒದಗಿಸುವ ಕಾಮಗಾರಿಗಳನ್ನು ಕೈಗೊಳ್ಳುವಂತೆ ತಿಳಿಸಲಾಗಿದೆ.

ಅಂಜನಾದ್ರಿ ಬೆಟ್ಟಕ್ಕೆ 430 ಮೀಟರ್‌ ರೋಪ್‌ ವೇ ನಿರ್ಮಿಸಲು ಪ್ರಸ್ತಾಪ ಇದೆ. ಈ ಸಂಬಂಧ ಟೆಂಡರ್‌ ಪ್ರಕ್ರಿಯೆ ನಡೆಸುವ ಬಗ್ಗೆ ಮುಖ್ಯಮಂತ್ರಿಗಳು ಈ ಹಿಂದೆ ನಡೆದ ಸಭೆಯಲ್ಲಿ ಸೂಚನೆ ನೀಡಿದ್ದರು. ರೋಪ್‌ ವೇ ಬೇಸ್‌ನಲ್ಲಿ ಪ್ರವಾಸಿಗರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವಂತೆಯೂ ತಿಳಿಸಲಾಗಿದೆ.

ಅಂಜನಾದ್ರಿ ಬೆಟ್ಟ ವೀಕ್ಷಣೆಗೆ ಸಿಎಂ ವೈಮಾನಿಕ ಸಮೀಕ್ಷೆ: ಆನಂದ್‌ ಸಿಂಗ್‌

ಟಿಟಿಡಿಗೆ ಸಡ್ಡು:

ಕೊಪ್ಪಳ ಜಿಲ್ಲೆಯ ಅಂಜನಾದ್ರಿಯ ಹನುಮನ ಜನ್ಮಸ್ಥಳವಾಗಿದ್ದರೂ, ತಿರುಮಲ ತಿರುಪತಿ ದೇಗುಲ ಮಂಡಳಿ ವಿವಾದ ತೆಗೆದಿತ್ತು. ತಿರುಮಲವೇ ಹನುಮ ಜನ್ಮಸ್ಥಳ ಎಂದು ಪ್ರತಿಪಾದಿಸಿತ್ತು. ಹೀಗಾಗಿ ಅಂಜನಾದ್ರಿ ಅಭಿವೃದ್ಧಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.

ಏನೇನು ಅಭಿವೃದ್ಧಿ?

- ಮೊದಲ ಹಂತದಲ್ಲಿ ಅಂಜನಾದ್ರಿಯ ಸಂಪರ್ಕ ರಸ್ತೆ ಅಭಿವೃದ್ಧಿ ನಿರ್ಮಾಣ
- ಪರ್ಯಾಯ ರಸ್ತೆಗಳನ್ನೂ ಗುರುತಿಸಿ ಅಭಿವೃದ್ಧಿಪಡಿಸಲು ಯೋಜನೆ
- ಅಂಜನಾದ್ರಿಗೆ 430 ಮೀಟರ್‌ ಉದ್ದದ ರೋಪ್‌ ವೇ ನಿರ್ಮಾಣ
- ರೋಪ್‌ ವೇ ಬೇಸ್‌ನಲ್ಲಿ ಪ್ರವಾಸಿಗರಿಗೆ ಅಗತ್ಯ ಸೌಕರ್ಯ
- ಹನುಮ ಜನ್ಮಸ್ಥಳ ವಿವಾದದ ಬೆನ್ನಲ್ಲೇ ಭರಪೂರ ಅನುದಾನ

ಶ್ರೀಶೈಲದಲ್ಲಿ ಯಾತ್ರಿ ನಿವಾಸಕ್ಕೆ 85 ಕೋಟಿ

ಆಂಧ್ರಪ್ರದೇಶದ ಶ್ರೀಶೈಲ ಯಾತ್ರಿ ನಿವಾಸ ಸಂಕೀರ್ಣ ಕಟ್ಟಡವನ್ನು 85 ಕೋಟಿ ರು. ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲು ಸಚಿವ ಸಂಪುಟ ಸಭೆಯು ಆಡಳಿತಾತ್ಮಕ ಅನುಮೋದನೆ ನೀಡಿದೆ. ಆಂಧ್ರಪ್ರದೇಶ ಸರ್ಕಾರವು ಈ ಸಂಬಂಧ ಅಗತ್ಯ ಜಮೀನಿನನ್ನು ನೀಡಿದೆ.
 

Follow Us:
Download App:
  • android
  • ios