ಪಿಎಸ್ಐ ಪೊಲೀಸ್ ಪರೀಕ್ಷಾ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಬ್ ಮತ್ತೊಬ್ಬ ಇನ್‌ಸ್ಪೆಕ್ಟರ್‌ ಅನ್ನು ಬಂಧಿಸಲಾಗಿದೆ.

ಬೆಂಗಳೂರು (ಜೂ.15): ಪಿಎಸ್ಐ ಪೊಲೀಸ್ ಪರೀಕ್ಷಾ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಒಬ್ಬನನ್ನು ಬಂಧಿಸಲಾಗಿದೆ. ಎರಡು ದಿನಗಳ ಹಿಂದೆ ಸಿಐಡಿ ಪೊಲೀಸರು ಪಿಎಸ್ಐ ಹರೀಶ್ ನನ್ನ ಬಂಧಿಸಿದ್ದಾರೆ.

ಸಚಿವ ಅಶ್ವಥ್ ನಾರಾಯಣ್ ಸ್ವಗ್ರಾಮವಾಗಿರುವ ಮಾಗಡಿಯ ಚಿಕ್ಕಕಲ್ಯ ಗ್ರಾಮದ ಹರೀಶ್ 2019ನೇ ಬ್ಯಾಚ್ ಪಿಎಸ್ಐ ಆಗಿದ್ದು ಕಳೆದ‌ ಮೂರು ವರ್ಷಗಳಿಂದ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಪ್ರಕರಣ ಸಂಬಂಧ ಸಿಐಡಿ ಪೊಲೀಸರು ನೀಡಿದ ದೂರಿನ‌ ಮೇರೆಗೆ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 14 ಮಂದಿ ಆಭ್ಯರ್ಥಿಗಳ ಪೈಕಿ ದಿಲೀಪ್ ಬಂಧನವಾಗಿತ್ತು. ಈತ ನೀಡಿದ ಸುಳಿವಿನ ಮೇರೆಗೆ ಪಿಎಸ್ಐ ಹರೀಶ್ ನನ್ನ ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ದಿಲೀಪ್ ಚಿಕ್ಕಕಲ್ಯ ಗ್ರಾಮದವನಾಗಿದ್ದು‌, ಹಲವು ವರ್ಷಗಳ ಹಿಂದೆ ಪಿಎಸ್ಐ ಹರೀಶ್ ಪರಿಚಿತನಾಗಿದ್ದ. ವಾಮಮಾರ್ಗದಲ್ಲಿ‌ ಪಿಎಸ್ ಐ ಆಗುವ ಸಲುವಾಗಿ ಲಕ್ಷಾಂತರ ರೂಪಾಯಿ ಹಣವನ್ನು ಹರೀಶ್ ನೀಡಿರುವುದಾಗಿ ಸಿಐಡಿ ಮುಂದೆ ಹೇಳಿಕೆ‌ ನೀಡಿದ್ದ. ಹರೀಶ್ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು ಸದ್ಯ ಈತನನ್ನು ಬಂಧಿಸಿರುವ ಸಿಐಡಿ ತನಿಖೆ ಮುಂದುವರೆಸಿದ್ದಾರೆ.

Raichur; ಮೂರು ದಿನಗಳ ಕಾಲ ಮುಂಗಾರು ಹಬ್ಬದ ಸಂಭ್ರಮ

ರಾಜ್ಯದ 11 ಕೇಂದ್ರಗಳಲ್ಲಿ ಎಸ್‌ಐ ಪರೀಕ್ಷೆ ಅಕ್ರಮ : ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳ ನೇಮಕಾತಿ ಹಗರಣದಲ್ಲಿ ಬೆಂಗಳೂರು ಹಾಗೂ ಕಲಬುರಗಿ ಸೇರಿದಂತೆ ಒಟ್ಟು 11 ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಿದೆ ಎಂಬ ಸಂಗತಿ ರಾಜ್ಯ ಅಪರಾಧ ತನಿಖಾ ದಳ (ಸಿಐಡಿ)ದ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಅಕ್ರಮದಲ್ಲಿ 172 ಅಭ್ಯರ್ಥಿಗಳಿಗೆ ಸಂಕಷ್ಟ ಎದುರಾಗಿದೆ.

ಬೆಂಗಳೂರಿನ ಕೇಂಬ್ರಿಡ್ಜ್‌, ನ್ಯೂ ಹಾರಿಜನ್‌, ಸೇಂಟ್‌ ಆನ್ಸ್‌ ಬಾಲಕಿಯರ ಕಾಲೇಜು ಸೇರಿ 7 ಹಾಗೂ ಕಲಬುರಗಿ ನಗರದ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ, ಎಂ.ಎಲ್‌. ಇರಾನಿ ಸೇರಿ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಹಾಜರಾಗಿದ್ದ ಅಭ್ಯರ್ಥಿಗಳು ಅಕ್ರಮದಲ್ಲಿ ತೊಡಗಿದ್ದಕ್ಕೆ ಪುರಾವೆಗಳು ಸಿಕ್ಕಿವೆ. ಈ ಕೇಂದ್ರಗಳಲ್ಲಿ ಪರೀಕ್ಷೆ ಬರೆದು ರಾರ‍ಯಂಕ್‌ ಮೂಲಕ ಪಿಎಸ್‌ಐ ಹುದ್ದೆ ಆಯ್ಕೆ ಪಟ್ಟಿಯಲ್ಲಿ ಹೆಸರಿದ್ದ 28 ಅಭ್ಯರ್ಥಿಗಳನ್ನು ಬಂಧಿಸಲಾಗಿದೆ. ಇನ್ನೂ ತನಿಖೆ ಮುಂದುವರೆದಿದ್ದು, ಪರೀಕ್ಷಾ ಕೇಂದ್ರ ಹಾಗೂ ಬಂಧಿತರ ಸಂಖ್ಯೆ ಸಹ ಹೆಚ್ಚಾಗಲಿದೆ ಎಂದು ಸಿಐಡಿ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ತುಮಕೂರು ಗಡಿಯಲ್ಲಿ ಕನ್ನಡಿಗರ ಮೇಲೆ ಆಂಧ್ರ ಪೊಲೀಸರ ದಬ್ಬಾಳಿಕೆ!

ಪಿಎಸ್‌ಐ ಹಗರಣದಲ್ಲಿ ಬೆಂಗಳೂರು ಹಾಗೂ ಕಲಬುರಗಿ ನಗರದಲ್ಲಿ ಪ್ರತ್ಯೇಕವಾಗಿ ಆರೋಪಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಕಲಬುರಗಿ ನಗರದ ಪರೀಕ್ಷಾ ಕೇಂದ್ರದಲ್ಲಿ ದಿವ್ಯಾ ಹಾಗರಗಿ ತಂಡವು ಪರೀಕ್ಷಾ ಕೇಂದ್ರದಲ್ಲೇ ಒಎಂಆರ್‌ ತಿದ್ದುಪಡಿ ಮಾಡಿ ಅಭ್ಯರ್ಥಿಗಳಿಗೆ ನೆರವಾಗಿದ್ದರೆ, ಕಾಂಗ್ರೆಸ್‌ ಮುಖಂಡ ರುದ್ರಗೌಡ ಪಾಟೀಲ್‌ ಹಾಗೂ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್‌ ಮಂಜುನಾಥ ಮೇಳಕುಂದಿ ತಂಡವು ಪರೀಕ್ಷಾ ಕೇಂದ್ರಗಳಿಗೆ ಬ್ಲೂಟೂತ್‌ ಪೂರೈಸಿ ಅಭ್ಯರ್ಥಿಗಳಿಗೆ ಸಾಥ್‌ ಕೊಟ್ಟಿದೆ. ಆದರೆ ಬೆಂಗಳೂರಿನಲ್ಲಿ ಅಭ್ಯರ್ಥಿಗಳಿಗೆ ರಾಜ್ಯ ಪೊಲೀಸ್‌ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್‌ ತಂಡವು ನೇರವಾಗಿ ಸಹಾಯ ಮಾಡಿದೆ. ಪರೀಕ್ಷೆ ಮುಗಿದ ಬಳಿಕ ಒಎಂಆರ್‌ ಶೀಟ್‌ಗಳನ್ನು ನೇಮಕಾತಿ ವಿಭಾಗದ ಸ್ಟ್ರಾಂಗ್‌ ರೂಮ್‌ನಲ್ಲೇ ಅಧಿಕಾರಿ ಹಾಗೂ ಸಿಬ್ಬಂದಿ ತಿದ್ದುಪಡಿ ಮಾಡಿದ್ದರು ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ಆರೋಪದ ಮೇರೆಗೆ 172 ಅಭ್ಯರ್ಥಿಗಳ ಒಎಂಆರ್‌ ಶೀಟ್‌ ಹಾಗೂ ಕಾರ್ಬನ್‌ ಒಎಂಆರ್‌ ಶೀಟ್‌ಗಳನ್ನು ಜಪ್ತಿ ಮಾಡಿ ಬಳಿಕ ಅವುಗಳನ್ನು ಪರಿಶೀಲನೆ ಸಲುವಾಗಿ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌)ಕ್ಕೆ ಕಳುಹಿಸಲಾಗಿದೆ. ಒಂದೊಂದಾಗಿ ಒಎಂಆರ್‌ ಶೀಟ್‌ ಅಸಲಿತನ ಬಗ್ಗೆ ಎಫ್‌ಎಸ್‌ಎಲ್‌ ವರದಿ ಆಧರಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.