Asianet Suvarna News Asianet Suvarna News

Raichur; ಮೂರು ದಿನಗಳ ಕಾಲ ಮುಂಗಾರು ಹಬ್ಬದ ಸಂಭ್ರಮ

  • ಬಿಸಿಲುನಾಡಿನಲ್ಲಿ ‌ಮೂರು ದಿನಗಳ ಕಾಲ ನಡೆಯುವ ಮುಂಗಾರು ಹಬ್ಬ
  • ಮುನ್ನೂರು ಕಾಪು ಸಮಾಜ ಆಯೋಜನೆ ‌ಮಾಡಿರುವ ಗ್ರಾಮೀಣ ಸೊಗಡಿನ ಮುಂಗಾರು ಹಬ್ಬ
  • ಐದು ರಾಜ್ಯಗಳ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು
  • ನೋಡುಗರನ್ನು ‌ಮನ ಸೆಳೆಯುವ ಮುಂಗಾರು ಹಬ್ಬ
Mungaru Samskritika Habba celebrated  in Raichur gow
Author
Bengaluru, First Published Jun 15, 2022, 11:22 AM IST

ವರದಿ : ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ಜೂ.15): ಕಾರ ಹುಣ್ಣಿಮೆ ರೈತರ ಸಂಭ್ರಮದ ಹಬ್ಬ. ವರ್ಷ ಪೂರ್ತಿ ಅನ್ನದಾತರಿಗೆ ಸಂಗಾತಿಯಾಗಿರುವ ಎತ್ತುಗಳನ್ನು ಈ ಹಬ್ಬದಂದು ಸಿಂಗಾರಗೊಳಿಸಿ ರೈತರು ಸಂಭ್ರಮಿಸ್ತಾರೆ. ಆದ್ರೆ ಬಿಸಿಲನಾಡು ರಾಯಚೂರು ಜಿಲ್ಲೆಯಲ್ಲಿ ಕಾರ ಹುಣ್ಣಿಮೆ ಹಬ್ಬವನ್ನು ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬವೆಂದು ಆಚರಿಸುತ್ತಾರೆ.  ಮುಂಗಾರು ಆರಂಭ, ಕಾರ ಹುಣ್ಣಿಮೆ ಹಬ್ಬದ ನಿಮಿತ್ತ ಮುನ್ನೂರು ಕಾಪು ಸಮಾಜ ವತಿಯಿಂದ ಎತ್ತುಗಳು ಸ್ಪರ್ಧೆ ಆಯೋಜನೆ ಮಾಡಿದ್ರು. ರಾಯಚೂರು  ನಗರದ ರಾಜೇಂದ್ರ ಗಂಜ್ ಆವರಣದಲ್ಲಿ ಹಮ್ಮಿಕೊಂಡಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬವನ್ನ ಕಳೆದ 20 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ.

ಕೊರೊನಾದಿಂದ ಕಳೆದ 2 ವರ್ಷಗಳಿಂದ ಬಂದ ಆಗಿರುವ ಮುಂಗಾರು ಹಬ್ಬವನ್ನು ಈ ವರ್ಷ ಸಡಗರ ಸಂಭ್ರಮದಿಂದ ‌ಆಚರಿಸಲಾಗುತ್ತಿದೆ.  3 ದಿನಗಳ ಕಾಲ ನಡೆಯುವ ಈ ಮುಂಗಾರು ಹಬ್ಬದಲ್ಲಿ ಆರು ರಾಜ್ಯದ ಕಲಾವಿದರೂ ಹಾಗೂ ರೈತರು ತಮ್ಮ ಎತ್ತುಗಳ ಸಮೇತ ಭಾಗವಹಿಸುವುದು ವಿಶೇಷವಾಗಿದೆ. ಒಂದು ಟನ್, ಒಂದೂವರೇ ಟನ್, ಎರಡು ಟನ್ ಹೀಗೆ ಭಾರೀ ಗಾತ್ರದ ಕಲ್ಲುಗಳನ್ನು ಎಳೆಯುವ ಈ ಸ್ಪರ್ಧೆಯಲ್ಲಿ ಕರ್ನಾಟಕ, ಆಂಧ್ರ ಮಹಾರಾಷ್ಟ್ರದಿಂದ ಬಂದ ರೈತರು ಬಾರವನ್ನು ಎಳೆಯುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ.

ಎತ್ತುಗಳನ್ನು ದಷ್ಟ ಪುಷ್ಟವಾಗಿ ಬೆಳೆಸಿರುವ ರೈತರು ಸ್ಪರ್ಧೆಯಲ್ಲಿ ಭಾಗವಹಿಸಿ ಸ್ಪರ್ಧೆ ಗೆಲ್ಲಲು ತಮ್ಮ ಎತ್ತುಗಳೊಂದಿಗೆ  ಸೆಣಸಾಡುವುದು ನೋಡುವುದೇ ಮಹಾನಂದ. ಒಂದೆಡೆ ಎತ್ತುಗಳು ಭಾರದ ಸೈಜುಗಲ್ಲು ಎಳೆಯುತ್ತಿದ್ರೆ, ಇತ್ತ ಎತ್ತುಗಳ ಶಕ್ತಿ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಬಂದ ಜನ್ರು ಕೇಕೆ ಮತ್ತು ಸಿಳ್ಳೆ ಹಾಕುತ್ತ ಸ್ಪರ್ಧೆಗೆ ಹುರುಪು ನೀಡಿದ್ರು. ಇನ್ನು ಗ್ರಾಮೀಣ ಕ್ರೀಡೆಗಳು ಮಾಯವಾಗುತ್ತಿರುವ ಈ ದಿನಗಳಲ್ಲಿ ಮುನ್ನೂರು ಕಾಪು ಸಮಾಜ ಕಳೆದ 20 ವರ್ಷಗಳಿಂದ ರಾಯಚೂರು ಹಬ್ಬದ ಹೆಸರಿನಲ್ಲಿ ಗ್ರಾಮೀಣ ಕ್ರೀಡೆಗಳನ್ನು ಉಳಿಸಿಕೊಂಡು ಬರುತ್ತಿದೆ. 

ಕಾರಹುಣ್ಣಿಮೆ ಸಂಭ್ರಮ: ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ವಿಜಯಪುರ..!

ಮೂರು ದಿನಗಳ ಕಾಲ ಗ್ರಾಮೀಣ ಕ್ರೀಡೆಗಳ ಉತ್ಸವ: ಮೂರು ದಿನಗಳ ಕಾಲ ನಡೆಯುವ ಮುಂಗಾರು ಸಾಂಸ್ಕೃತಿಕ ಹಬ್ಬದಲ್ಲಿ ಎತ್ತುಗಳ ಸ್ಪರ್ಧೆ, ಭಾರದ ಗುಂಡುಕಲ್ಲು ಎತ್ತುವ ಸ್ಪರ್ಧೆ, ಉಸುಕಿನ ಚೀಲ ಎತ್ತುವ ಸ್ಪರ್ಧೆ, ಕುಸ್ತಿ ಸ್ಪರ್ಧೆ, ನಾಟಕ, ನೃತ್ಯ ರೂಪಕ ಹೀಗೆ ವಿವಿಧ ಗ್ರಾಮೀಣ ಕ್ರೀಡೆಗಳು ನಡೆಯುತ್ತವೆ. ಮುಂಗಾರು ಹಬ್ಬದ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ದೇಶದ ವಿವಿಧ ರಾಜ್ಯಗಳಿಂದ ಕುಸ್ತಿಪಟ್ಟುಗಳು ಆಗಮಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿ ಬಹುಮಾನ ಗೆಲ್ಲುವರು. ಇದೂ ರೈತರಲ್ಲಿ ಹೊಸ ಚೈತನ್ಯ ತುಂಬಲು ಮುಂಗಾರು ಹಬ್ಬ ಸಹಕಾರಿ ಆಗಿದೆ.

20 ವರ್ಷಗಳಿಂದ ನಡೆದು ಬಂದ ಮುಂಗಾರು ಹಬ್ಬ: ರಾಯಚೂರು ನಗರದಲ್ಲಿ ಮುನ್ನೂರು ಕಾಪು ಸಮಾಜ ಪ್ರತಿ ವರ್ಷವೂ ಮಾಜಿ ಶಾಸಕ ಪಾಪರೆಡ್ಡಿ ನೇತೃತ್ವದಲ್ಲಿ ಮುಂಗಾರು ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ. ‌ಯಾವುದೇ ಸರ್ಕಾರದ ಸಹಾಯವಿಲ್ಲದೆ ಎಲ್ಲರೂ ಸೇರಿ ಹಣವನ್ನು ಸಂಗ್ರಹಣೆ ‌ಮಾಡಿ ಮುಂಗಾರು ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ.

ಸಂಜೆ ಸಾಂಸ್ಕೃತಿಕ ರಸದ ಔತಣ: ರಾಯಚೂರಿನ ಮುಂಗಾರು ಹಬ್ಬವೂ ಯಾವ ಮೈಸೂರು ದಸರಾಗೂ ಕಮ್ಮಿ ಇಲ್ಲದಂತೆ ಆಚರಣೆ ಮಾಡಲಾಗುತ್ತಿದೆ. 3 ದಿನಗಳ ಕಾಲ ನಡೆಯುವ ಮುಂಗಾರು ಹಬ್ಬವೂ ಬಿಸಿಲುನಾಡಿನ ಜನರಿಗೆ ಮೂರು ದಿನ ಸಂಜೆ ಮೂರು ಕಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆ ‌ಮಾಡಲಾಗಿತ್ತು. ಮೊದಲ ದಿನ ನಗರದ ಮಹಿಳಾ ಸಮಾಜದಲ್ಲಿ ‌ನಡೆದ್ರೆ, 2ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳು ಐಡಿಎಂಸಿ ಲೇಔಟ್ ನಲ್ಲಿ ‌ನಡೆಯಿತು. ಮೂರನೇ ‌ದಿನದ ಕಾರ್ಯವೂ ಗಂಜ್ ‌ನಲ್ಲಿ ನಡೆಯಲಿದೆ. ಈ ಸಂಜೆ ‌ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ದೇಶದ ಐದು - ಆರು ರಾಜ್ಯಗಳ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಎತ್ತುಗಳ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ 13 ಜೋಡಿ ಎತ್ತುಗಳ ಶಕ್ತಿ ಪ್ರದರ್ಶನ: ಮುನ್ನೂರು ಕಾಪು ಸಮಾಜದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಅದ್ಧೂರಿ ಆರಂಭಗೊಂಡಿದೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಕಾರ್ಯಕ್ರಮ ರದ್ದುಗೊಂಡ ಹಿನ್ನೆಲೆಯಲ್ಲಿ ಈ ವರ್ಷದ ಕಾರ್ಯಕ್ರಮಕ್ಕಾಗಿ ಸಾರ್ವಜನಿಕರು ತೀವ್ರ ಕುತೂಹಲದಿಂದ ನಿರೀಕ್ಷಿಸುತ್ತಿದ್ದರು.

Yadgir; ಕಾರ ಹುಣ್ಣಿಮೆ ಸಡಗರವೋ ಸಡಗರ!

ಸಾಮಾನ್ಯವಾಗಿ ಆಂಧ್ರದ ಎತ್ತುಗಳೇ ಅಧಿಕ ಸಂಖ್ಯೆಯಲ್ಲಿ ಬರುವ ಈ ಕಾರ್ಯಕ್ರಮದಲ್ಲಿ ಈ ಸಲ ಕರ್ನಾಟಕ ಎತ್ತುಗಳ ಭಾರದ ಕಲ್ಲು ಎಳೆಯುವ ಶಕ್ತಿ ಪ್ರದರ್ಶನಕ್ಕೆ ಅತ್ಯಾಧಿಕ ಸಂಖ್ಯೆಯಲ್ಲಿ ಎತ್ತುಗಳು ಬಂದಿರುವುದು ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ವರ್ಚಸ್ಸಿಗೆ ಕೈಗನ್ನಡಿಯಾಗಿತ್ತು. ಒಟ್ಟು 13 ಜೋಡಿ ಎತ್ತುಗಳು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ಶಕ್ತಿ ಪ್ರದರ್ಶಿಸಿದವು.

ಬಿಜಾಪೂರು, ಬೆಳಗಾವ ತಳಿ ಸೇರಿದಂತೆ ಆಂಧ್ರದ ತಳಿ ಭಾರೀ ಗಾತ್ರದ ಎತ್ತುಗಳು ಒಂದುವರೆ ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಪೋಟಿ ಪೈಪೋಟಿಗೆ ನುಗ್ಗಿದವು. ಎತ್ತುಗಳು ಕಲ್ಲು ಎಳೆಯುವ ಸ್ಪರ್ಧೆ ‌ನೋಡಲು ಮೈದಾನದ ಸುತ್ತಮುತ್ತ ಜನರು ಕಿಕ್ಕಿರಿದು ನಿಂತಿದ್ದರು. ಅಲ್ಲದೇ, ಅಲ್ಲಿಯೇ ಇರುವ ಅಂಗಡಿ ಮುಂಗಟ್ಟುಗಳ ಮೇಲೆ ಕುಳಿತು ಪಂದ್ಯ ವೀಕ್ಷಿಸಿದರು. ಭಾರದ ಕಲ್ಲು ಎಳೆಯುವ ಎತ್ತುಗಳು ಬಿರಿಸುನಿಂದ ಕಲ್ಲು ಎಳೆದುಕೊಂಡು ಓಡುವ ಸಂದರ್ಭದಲ್ಲಿ ಪಂದ್ಯ ವೀಕ್ಷಣೆಗೆ ಬಂದ ಪ್ರೇಕ್ಷಕರು ಸಿಳ್ಳೆ, ಕೆಕೆ ಹಾಕುವ ಮೂಲಕ ಹುರಿದುಂಬಿಸಿ ಪಂದ್ಯಕ್ಕೆ ಕಳೆತಂದರು. 13 ಜೋಡಿ ಎತ್ತುಗಳು 20 ನಿಮಿಷದಲ್ಲಿ ಅತಿ ಹೆಚ್ಚು ದೂರ ಕಲ್ಲು ಎಳೆಯುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿ, ಅತಿ ಹೆಚ್ಚು ದೂರ ಎಳೆದ ಎತ್ತುಗಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಇತರೆ ಬಹುಮಾನ ಘೋಷಿಸಲಾಯಿತು. 

 ಮುಂಗಾರು ‌ಹಬ್ಬ ಕಲ್ಯಾಣ ಕರ್ನಾಟಕ ದೊಡ್ಡ ಹಬ್ಬ: ರಾಯಚೂರಿನ ಗಂಜ್ ಪ್ರದೇಶದಲ್ಲಿ ನಡೆಯುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಕಲ್ಯಾಣ  ಕರ್ನಾಟಕದಲ್ಲಿಯೇ  ಅತಿದೊಡ್ಡ ಹಬ್ಬವೆಂದು ಖ್ಯಾತಿ ಹೊಂದಿದೆ. ಮೈಸೂರು ಹಬ್ಬದ ಮಾದರಿಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಮುಂಗಾರು ಹಬ್ಬವನ್ನು ನಿರ್ವಹಿಸಲಾಗುತ್ತದೆ. ಅಷ್ಟೇ ಅಲ್ಲದೆ ಮೂರು ದಿನವೂ ಸಹ ಮುಂಗಾರು ಹಬ್ಬದಲ್ಲಿ ಊಟ ಮತ್ತು ತಿಂಡಿ ವ್ಯವಸ್ಥೆ ಯೂ ಸಹ ಮಾಡಲಾಗಿದೆ.

ಇನ್ನೂ ಮೂರು ದಿನಗಳ ಕಾಲವೂ ನಡೆಯುವ ಕಾರ್ಯಕ್ರಮದಲ್ಲಿ ಹತ್ತಾರು ಮಠಗಳ ಸ್ವಾಮೀಜಿಗಳು, ಶ್ರೀಶೈಲ ಜಗದ್ಗುರು ಹಾಗೂ ರಾಯಚೂರು ಉಸ್ತುವಾರಿ ಸಚಿವ ಶಂಕರ್ .ಬಿ.ಪಾಟೀಲ್ ಮುನೇನಕೊಪ್ಪ , ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ,  ಶಾಸಕ ಡಾ.ಶಿವರಾಜ ಪಾಟೀಲ್, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮತ್ತು ಮಾಜಿ ಶಾಸಕರು ಹಾಗೂ ಹಬ್ಬದ ರೂವಾರಿ ಎ.ಪಾಪಾರೆಡ್ಡಿ, ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಪ್ರಧಾನ ಕಾರ್ಯದರ್ಶಿ ಜಿ.ಬಸವರಾಜ, ಕಾಂಗ್ರೆಸ್ ಹಿರಿಯ ಮುಖಂಡ ಎನ್.ಎಸ್‌. ಬೋಸರಾಜು ಸೇರಿದಂತೆ ನೂರಾರು ಗಣ್ಯರು ಹಬ್ಬದಲ್ಲಿ ಭಾಗವಹಿಸಿದ್ದರು. ಒಟ್ನಲ್ಲಿ ಗ್ರಾಮೀಣ ಭಾಗದಲ್ಲಿ ಹಳ್ಳಿಯ ಸಂಪ್ರದಾಯಗಳು ನಶಿಸುವ ಹೊತ್ತಿನಲ್ಲಿ ಹಬ್ಬದ ಹೆಸರಿನಲ್ಲಿ ರಾಯಚೂರು ಹಬ್ಬ ನಡೆಯುತ್ತಿದೆ.

Follow Us:
Download App:
  • android
  • ios