ಬೆಂಗಳೂರು (ಮೇ.12):  ಕೊರೋನಾ ಸಂಕಷ್ಟದಲ್ಲಿ ಜನರ ನೆರವಿಗೆ ನಿಂತಿದ್ದ ಕನ್ನಡಿಗ ಹಾಗೂ ಅಖಿಲ ಭಾರತ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ ಅವರನ್ನು ಕೊರೋನಾ ಸಂಕಷ್ಟದಲ್ಲಿರುವವರ ನೆರವಿಗಾಗಿ ರಚಿಸಿರುವ ಕಾಂಗ್ರೆಸ್‌ನ ರಾಷ್ಟ್ರಮಟ್ಟದ ಕಾರ್ಯಪಡೆ ಸದಸ್ಯರನ್ನಾಗಿ ನೇಮಿಸಲಾಗಿದೆ.

ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ನೇತೃತ್ವದ ಕಾರ್ಯಪಡೆಯ 13 ಸದಸ್ಯರ ತಂಡದಲ್ಲಿ ಶ್ರೀನಿವಾಸ್‌ಗೆ ಸ್ಥಾನ ಕಲ್ಪಿಸಲಾಗಿದೆ. ಈ ಮೂಲಕ ಅಖಿಲ ಭಾರತ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ ದೆಹಲಿ ಸೇರಿದಂತೆ ದೇಶಾದ್ಯಂತ ಕೊರೋನಾ ಸಂಕಷ್ಟದಲ್ಲಿರುವವರಿಗೆ ನೆರವಾದ ಶ್ರೀನಿವಾಸ್‌ ಸೇವೆಯನ್ನು ಗುರುತಿಸಿದೆ.

ರಾಜಕೀಯ ಬೇಡ: ಸಿಎಂ ಯಡಿಯೂರಪ್ಪಗೆ ಸಿದ್ದರಾಮಯ್ಯ ಪತ್ರ ..

ಶ್ರೀನಿವಾಸ್‌ ಅವರು ಒಂದು ಸಾವಿರ ಸದಸ್ಯರ ತಂಡದೊಂದಿಗೆ ಜನರ ಸೇವೆಯಲ್ಲಿ ತೊಡಗಿದ್ದರು. ಆಕ್ಸಿಜನ್‌ ಕೊರತೆ, ಆಸ್ಪತ್ರೆಗಳ ಬೆಡ್‌ ಅಲಭ್ಯತೆ, ಪ್ಲಾಸ್ಮಾ ಬೇಡಿಕೆಗಾಗಿ ಮನವಿ ಸಲ್ಲಿಸುವ ಪ್ರತಿಯೊಬ್ಬರಿಗೂ ನೆರವು ನೀಡಿದ್ದರು. ಇದಕ್ಕಾಗಿಯೇ ಸಾಮಾಜಿಕ ಜಾಲತಾಣದ ಮೂಲಕ ಕಂಟ್ರೋಲ್‌ ರೂಂ ಸ್ಥಾಪಿಸಿದ್ದರು. ತಮ್ಮ ಸೇವೆಗಳ ಮೂಲಕ ಎಲ್ಲೆಡೆ ಪ್ರಶಂಸೆಗೆ ಪಾತ್ರರಾಗಿದ್ದರು.

ಕೊರೋನಾ ನಿರ್ವಹಣೆಯಲ್ಲಿ ವಿಫಲ: ಮೋದಿ ತಿವಿದ ಸೋನಿಯಾಗೆ, ಬಿಜೆಪಿ ಅಧ್ಯಕ್ಷನ ಗುದ್ದು! ...

ದೆಹಲಿ ಮತ್ತು ಹೊರ ವಲಯದಲ್ಲಿ ಸೋಂಕಿನ ಸುನಾಮಿ ಎದ್ದಾಗ ಜನರ ರಕ್ಷಣೆಗೆ ನಿಂತಿದ್ದರು. ಶಿವಮೊಗ್ಗ ಜಿಲ್ಲೆಯ ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ಶ್ರೀನಿವಾಸ್‌ 2014ರಲ್ಲಿ ಭಾರತೀಯ ಯುವ ಕಾಂಗ್ರೆಸ್‌ ಕಾರ್ಯದರ್ಶಿಯಾಗಿ ನೇಮಕಗೊಂಡು ಬಳಿಕ ಪ್ರಧಾನ ಕಾರ್ಯದರ್ಶಿಯಾಗಿ ಇದೀಗ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದಾರೆ. ಕೊರೋನಾ ಸಂಕಷ್ಟದಲ್ಲಿರುವ 20 ಸಾವಿರಕ್ಕೂ ಹೆಚ್ಚು ಜನರಿಗೆ ನೆರವಾಗಿರುವ ಶ್ರೀನಿವಾಸ್‌ ಅವರಿಗೆ ಕಾಂಗ್ರೆಸ್‌ ಹೊಸ ಜವಾಬ್ದಾರಿ ನೀಡಿದೆ.