ನವದೆಹಲಿ(ಮೇ.11): ಕಾಂಗ್ರೆಸ್‌ ವರ್ಕಿಂಗ್ ಕಮಿಟಿ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಕೇಳಿ ಬಂದ ಟೀಕೆ ಬೆನ್ನಲ್ಲೇ, ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ ಕಾಂಗ್ರೆಸ್‌ ನಾಯಕಿ ಸೋನಿಯಾರನ್ನು ಗುರಿಯಾಗಿಸಿದ್ದಾರೆ. ಸೋನಿಯಾಗೆ ಈ ಸಂಬಂಧ ಪತ್ರ ಬರೆದಿರುವ ನಡ್ಡಾಈ ಮಹಾಮಾರಿ ದೇಶವನ್ನು ಕಾಡುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್‌ ತೋರುತ್ತಿರುವ ವರ್ತನೆಯಿಂದ ಬೇಸರವಾಗಿದೆ. ಆದರೆ ಇದು ಅಚ್ಚರಿ ಮೂಡಿಸಿಲ್ಲ. ನಿಮ್ಮ ಪಕ್ಷದ ಅನೇಕ ನಾಯಕರು ಈ ಹೋರಾಟದಲ್ಲಿ ಮೆಚ್ಚುಗೆ ವ್ಯಕ್ತಪಡಿಸುವಂತೆ ಕೆಲಸ ಮಾಡುತ್ತಿದ್ದಾರೆ. ಆದರೆ ಪಕ್ಷದ ನಾಯಕರು ಹರಡುತ್ತಿರುವ ನಕಾರಾತ್ಮಕತೆ ಅವರ ಈ ಕೆಲಸಕ್ಕೆ ಮಸಿ ಬಳಿಯುತ್ತಿದೆ ಎಂದಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷರ ಆಯ್ಕೆ ಚುನಾವಣೆ ಮುಂದೂಡಿಕೆ

ಇನ್ನು ಸೋಮವಾರದಂದು ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿಯ ಸಭೆ ನಡೆದಿತ್ತು. ಈ ಸಭೆಯಲ್ಲಿ ಸೋನಿಯಾ ಗಾಂಧಿ, ಕೊರೋನಾ ನಿರ್ವಹಣೆ ವಿಚಾರವಾಗಿ ಮೋದಿಯನ್ನು ಟೀಕಿಸಿದ್ದರು. ಮಹಾಮಾರಿ ದಿನೇ ದಿನೇ ಹೆಚ್ಚುತ್ತಿದೆ, ಸರ್ಕಾರ ವಿಫಲವಾಗಿದೆ ಎಂದಿದ್ದರು. ಮೋದಿಯವರ ನಿರ್ಲಕ್ಷ್ಯದ ಫಲ ಜನರು ಅನುಭವಿಸುವಂತಾಗಿದೆ. ವಿಜ್ಞಾನಿಗಳ ಸಲಹೆಯನ್ನೂ ಮೋದಿ ಕಡೆಗಣಿಸಿದ್ದಾರೆ ಎಂದಿದ್ದರು. 

ತಿರುಗೇಟು ನಿಡಿದ ಜೆ. ಪಿ. ನಡ್ಡಾ

ಸೋನಿಯಾ ಆರೋಪ ವಿರುದ್ಧ ಜೆ. ಪಿ. ನಡ್ಡಾ ಮಂಗಳವಾರದಂದು ಜಭರ್ಜರಿಯಾಗಿ ತಿರುಗೇಟು ನೀಡಿದ್ದಾರೆ. ಇಡೀ ಭಾರತವೇ ಕೊರೋನಾ ವಿರುದ್ಧ ಧೈರ್ಯದಿಂದ ಹೋರಾಡುತ್ತಿದೆ. ಕಾಂಗ್ರೆಸ್‌ ಯಾರ ಹಾದಿ ತಪ್ಪಿಸದಿರಲಿ ಎಂದು ಇಡೀ ದೇಶವೇ ಬಯಸುತ್ತಿದೆ. ತಪ್ಪು ಮಾಹಿತಿ ಹರಡುವುದನ್ನು ನಿಲ್ಲಿಸಿ. ಅಲ್ಲದೇ ರಾಜಕೀಯವನ್ನು ಮುಂದಿಟ್ಟುಕೊಂಡು ಇಂತಹ ಸಂದರ್ಭದಲ್ಲಿ ಟೀಕಿಸುವುದನ್ನು ನಿಲ್ಲಿಸಿ ಎಂದಿದ್ದಾರೆ,

ಅಲ್ಲದೇ, ಕೊರೋನಾ ಕಾಲದಲ್ಲಿ ರಾಹುಲ್ ಸೇರಿದಂತೆ ಕಾಂಗ್ರೆಸ್‌ ನಾಯಕರ ವರ್ತನೆಯನ್ನು ಸಮಯ ಸಾಧಕರೆಂದು ನೆನಪಿಸಿಕೊಳ್ಳುತ್ತಾರೆ. ಭಾರತದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಯಾರೂ ಸಂಕೋಚ ಪಡುತ್ತಿಲ್ಲ. ಆದರೆ ಕಾಂಗ್ರೆಸ್‌ ಈ ಮಹಾಮಾರಿ ಅಬಬ್ಬರಿಸುತ್ತಿರುವ ವೇಳೆ ಈ ಸಂಕೋಚ ಸೃಷ್ಟಿಸುವ ಯತ್ನ ಮಾಡುತ್ತಿದೆ ಎಂದಿದ್ದಾರೆ.

ಪಕ್ಷದಲ್ಲಿ ಬದಲಾವಣೆ ಅಗತ್ಯ: ಸೋನಿಯಾ ಗಾಂಧಿ ಮಾತು!

ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳೂ ಉಚಿತ ಲಸಿಕೆ ನೀಡಲಿ

ಬಿಜೆಪಿ ಹಾಗೂ ಎನ್‌ಡಿಎ ನೇತೃತ್ವದ ಸರ್ಕಾರ ಇರುವ ಎಲ್ಲಾ ರಾಜ್ಯಗಳಲ್ಲೂ ಉಚಿತ ಕೊರೋನಾ ಲಸಿಕೆ ನೀಡುವ ಘೋಷಣೆ ಮಾಡಲಾಗಿದೆ. ಕಾಂಗ್ರೆಸ್‌ ಕೂಡಾ ತನ್ನ ಆಡಳಿತವಿರುವ ರಾಜ್ಯಗಳಲ್ಲಿ ಬಡವರಿಗಾಗಿ ಇದೇ ಸೌಲಭ್ಯ ಕಲ್ಪಿಸಲಿದೆ ಎಂದು ನನಗೆ ವಿಶ್ವಾಸವಿದೆ. ಅವರು ಕೂಡಾ ಉಚಿತ ಲಸಿಕೆ ನಿಡುವ ಘೋಷಣೆ ಮಾಡುತ್ತಾರಾ? ಎಂದೂ ನಡ್ಡಾ ಪ್ರಶ್ನಿಸಿದ್ದಾರೆ. 

ನಡ್ಡಾ ಪತ್ರದಲ್ಲಿ ಉಲ್ಲೇಖವಾದ ಪ್ರಮುಖ ವಿಚಾರಗಳು:

* ಪಿಎಂ ಮೋದಿ ಹಾಗೂ ಭಾರತ ಸರ್ಕಾರ ಕೊರೋನಾ ಮಣಿಸಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

* ಕೊರೋನಾ ಮಹಾಮಾರಿ ಮಧ್ಯೆ ಪಿಎಂ ಮೋದಿ ಎಲ್ಲಾ ಮುಖ್ಯಮಂತ್ರಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಈ ಮೂಲಕ ಒಟ್ಟಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದನ್ನು ಮಾಜಿ ಪಿಎಂ ದೇವೇಗೌಡರೂ ಶ್ಲಾಘಿಸಿದ್ದಾರೆ.

* ಭಾರತ ಸರ್ಕಾರ ಬಡವರಿಗೆ ಮೊದಲ ಆದ್ಯತೆ ನಿಡಿದೆ. ಅಅವರಿಗೆ ಆಹಾರದಿಂದ ಹಿಡಿದು, ಖಾತೆಗೆ ನೇರವಾಗಿ ಹಣವನ್ನೂ ಹಾಕಿದೆ.

* ಕೊರೋನಾ ಹೋರಾಟವನ್ನು ಬಲಹೀನಗೊಳಿಸಲು ಕಾಂಗ್ರೆಸ್ ನಾಯಕರು ತಪ್ಪು ಮಾಹಿತಿ ಹರಡುತ್ತಿದ್ದಾರೆ. ಜನರ ಮನದಲ್ಲಿ ಅನುಮಾನ ಮೂಡುವಂತೆ ಮಾಡುತ್ತಿದ್ದಾರೆ.

* ಜನರಲ್ಲಿ ಲಸಿಕೆ ಸಂಬಮಧ ಭಯ ಮೂಡಿಸಲು ಇಲ್ಲ ಸಲ್ಲದ ವದಂತಿ ಹಬ್ಬಿಸುತ್ತಿದ್ದಾರೆ. ಸಾಲದೆಂಬಂತೆ ಲಸಿಕೆ ವಿತರಣೆ ವಿಚಾರದಲ್ಲಿ ಕೇಂದ್ರದ ಪಾತ್ರದ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಆದರೆ ಕೇಂದ್ರ ಈವರೆಗೆ ರಾಜ್ಯಗಳಿಗೆ ಹದಿನಾರು ಕೋಟಿ ಲಸಿಕೆ ವಿತರಿಸಿದೆ.

* ಬಿಜೆಪಿ ಹಾಗೂ ಎನ್‌ಡಿಎ ನೇತೃತ್ವದ ಸರ್ಕಾರವಿರುವ ರಾಜ್ಯಗಳು ಉಚಿತ ಲಸಿಕೆ ನೀಡುತ್ತಿವೆ. ಆದರೆ ಕಾಂಗ್ರೆಸ್‌ ಅಧಿಕಾರವಿರುವ ರಾಜ್ಯದಲ್ಲಿ ಯಾಕೆ ಹೀಗಾಗುತ್ತಿಲ್ಲ?

* ಮಿಷನ್‌ ಮೋಡ್‌ನಲ್ಲಿ 45,000 ವೆಂಟಿಲೇಟರ್‌ ನಿರ್ಮಿಸಲಾಗಿದೆ. ಹೀಗಿದ್ದರೂ ಕೆಲ ರಾಜ್ಯಗಳು ಸುಳ್ಳು ಹೇಳುತ್ತಿವೆ. 

* ಕಾಂಗ್ರೆಸ್‌ ನೇತೃತ್ವದ ಸರ್ಕಾರವಿರುವ ರಾಜ್ಯಗಳಲ್ಲಿ ಕೇಂದ್ರ ನೀಡುತ್ತಿರುವ ಸಲಹೆ ಸೂಚನೆಗಳನ್ನು ಕಡೆಗಣಿಸಲಾಗುತ್ತಿದೆ. ಹೀಗಿದ್ದರೂ ನಮಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ ಎಂದು ಸುಳ್ಳು ಹಬ್ಬಿಸುತ್ತಿದ್ದಾರೆ.

* ಕಾಂಗ್ರೆಸ್‌ ತನ್ನ ದ್ವಿವ್ಯಕ್ತಿತ್ವದಿಂದ ಗುರುತಿಸಿಕೊಳ್ಳಲಿದೆ. ಮೊದಲು ಲಾಕ್‌ಡೌನ್ ವಿರೋಧಿಸುತ್ತಾರೆ, ಬಳಿಕ ಲಾಕ್‌ಡೌನ್ ಹೇರುವಂತೆ ಒತ್ತಾಯಿಸುತ್ತಾರೆ. ಪ್ರತಿಭಟನೆಗಳನ್ನು ಆಯೋಜಿಸುತ್ತಾರೆ, ಸೂಪರ್‌ ಸ್ಪ್ರೆಡರ್‌ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕೊರೋನಾ ಮಾರ್ಗಸೂಚಿಗಳ ಬಗ್ಗೆ ಮಾತನಾಡುತ್ತಾರೆ. ಅವರು ಖುದ್ದು ಕೇರಳದಲ್ಲಿ ಸಮಾವೇಶ ಆಯೋಜಿಸುತ್ತಾರೆ. ಹಾಗೂ ಬೇರೆ ರಾಜ್ಯಗಳಲ್ಇ ನಡೆಯುವ ಬೇರೆಯವರ ಸಮಾವೇಶಗಳನ್ನು ಕೊರೋನಾ ಹಬ್ಬಿಸುವ ಕಾರ್ಯಕ್ರಮಗಳೆಂದು ದೂರುತ್ತಾರೆ.

* ಈಗ ಅವರು ಕೆಂದ್ರದ ವಿರುದ್ಧ ಸೆಂಟ್ರಲ್ ವಿಸ್ತಾ ಪ್ರಾಜೆಕ್ಟ್‌ ಬಗ್ಗೆ ಆರೋಪಿಸುತ್ತಿದ್ದಾರೆ. ಆದರೆ 2012ರಲ್ಲಿ ಅದೇ ಯುಪಿಎ ಸರ್ಕಾರ ಇದಕ್ಕೆ ಒಲವು ತೋರಿತ್ತು. ಎಲ್ಲಾ ವಿಚಾರಗಳನ್ನು ಜನರೆದುರು ಇಟ್ಟಿದೆ. ಹೀಗಿದ್ದರೂ ಸುಳ್ಳು ಮಾಹಿತಿ ಹಬ್ಬಿಸಲಾಗುತ್ತಿದೆ.

* ಅತ್ತ ಛತ್ತೀಸ್‌ಗಢ, ಕಾಂಗ್ರೆಸ್‌ ಆಡಳಿತವಿರುವ ರಾಜ್ಯದಲ್ಲಿ ವಿಧಾನಸಭಾ ಭವನ ನಿರ್ಮಿಸಲಾಗುತ್ತಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona