ಬೆಂಗಳೂರು, (ಡಿ.21): ಸುಲಲಿತ ವ್ಯವಹಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ  ಅಫಿಡವಿಟ್‌ ಬೇಸ್ಡ್‌ ಕ್ಲಿಯರೆನ್ಸ್‌ (ಎಬಿಸಿ) ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದ್ದು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಇದಕ್ಕೆ ಚಾಲನೆ ನೀಡಿದ್ದಾರೆ. 

ವಿಧಾನಸೌಧದಲ್ಲಿ ಸೋಮವಾರ ನಡೆದ ಕಾರ್ಯಕ್ರಮಮದಲ್ಲಿ 'ಎಬಿಸಿ' ಯೋಜನೆಯನ್ನು ಪರಿಚಯಿಸಿದ ಮುಖ್ಯಮಂತ್ರಿ, "ಸ್ವಯಂ ಘೋಷಣೆ ಪತ್ರ ಮುಖೇನ ಕೈಗಾರಿಕೆಗಳ ಸ್ಥಾಪನೆ ಪ್ರಕ್ರಿಯೆಯನ್ನು ಸರಳೀಕೃತಗೊಳಿಸುವ ಯೋಜನೆ ಇದಾಗಿದ್ದು, ವಿವಿಧ ಇಲಾಖೆಗಳ ಆಯ್ದ 15 ಉದ್ಯಮ ಸೇವೆಗಳು ಇದರ ವ್ಯಾಪ್ತಿಗೆ ಬರಲಿವೆ. ವ್ಯವಹಾರ ಪ್ರಕ್ರಿಯೆಗಳನ್ನು ಸರಳಗೊಳಿಸಿ, ಬಂಡವಾಳ ಹೂಡಿಕೆಗೆ ಪೂರಕ ವಾತಾವರಣ ಕಲ್ಪಿಸುವ ಯತ್ನದಲ್ಲಿ ಕರ್ನಾಟಕ ಸದಾ ಒಂದು ಹೆಜ್ಜೆ ಮುಂದಿರುತ್ತದೆ,"ಎಂದರು. 

ಹೊಸ ವರ್ಷಕ್ಕೆ ಹೊಸ ರೂಲ್ಸ್, BSY ಸರ್ಕಾರಕ್ಕೆ ಹೈಕೋರ್ಟ್ ಶಾಕ್; ಡಿ.21ರ ಟಾಪ್ 10 ಸುದ್ದಿ! 
 
"ಕೈಗಾರಿಕೆಗಳ ಸ್ಥಾಪನೆಗೆ ಎಲ್ಲ ರೀತಿಯ ಅನುಕೂಲ ಮಾಡಿಕೊಟ್ಟಿರುವ ರಾಜ್ಯದ ಬಗ್ಗೆ ಹೂಡಿಕೆದಾರರು ಅಚಲ ವಿಶ್ವಾಸ ಇರಿಸಿದ್ದಾರೆ.  ಹೂಡಿಕೆದಾರರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹಲವು ಸುಧಾರಣೆಗಳನ್ನು ತರಲಾಗಿದೆ. ಭೂ, ಕಾರ್ಮಿಕ ಸೇರಿದಂತೆ ಹಲವು ಅನುಮತಿ/ ಪರವಾನಗಿಗೆ  ಕೇಂದ್ರೀಕೃತ ವ್ಯವಸ್ಥೆ ಇದಾಗಲಿದೆ," ಎಂದು ಯಡಿಯೂರಪ್ಪ ಹೇಳಿದರು. 

"ಕೈಗಾರಿಕೆಗಳ ಸ್ಥಾಪನೆ ಪ್ರಕ್ರಿಯೆ ಆರಂಭ ಮಾಡುವ ಸಂದರ್ಭದಲ್ಲಿ ತಕ್ಷಣ ಅನುಮತಿ ಪಡೆಯಲು ತೊಡಕಾಗದಂತೆ ಕರ್ನಾಟಕ ಕೈಗಾರಿಕಾ ಸೌಲಭ್ಯ ಅಧಿನಿಮಯ 2002ರ ಈ ತಿದ್ದುಪಡಿಯನ್ನು ಜಾರಿ ತರಲಾಗಿದ್ದು, ಅದರಂತೆ ಕೈಗಾರಿಕೆ ಸ್ಥಾಪನೆ ಮಾಡಲು ಭೂಪರಿವರ್ತನೆ, ಬಿಲ್ಡಿಂಗ್ ಪ್ಲ್ಯಾನ್ ಸೇರಿದಂತೆ ಇತರ ಎಲ್ಲಾ ಅನುಮತಿಗಳನ್ನು ಪಡೆಯುವವರೆಗೂ ಕೈಗಾರಿಕಾ ಸ್ಥಾಪನೆ ಕಾಮಗಾರಿ ನಡೆಸಲು ಕಾಯಬೇಕಾಗಿಲ್ಲ. ಜಿಲ್ಲಾ ಸಮಿತಿ ಹಾಗೂ ರಾಜ್ಯ ಸಮಿತಿಗಳಿಂದ ಕೈಗಾರಿಕಾ ಸ್ಥಾಪನೆಗೆ ಅನುಮತಿ ಸಿಕ್ಕ ಕೂಡಲೇ ಕಾಮಗಾರಿ ಆರಂಭ ಮಾಡಬಹುದು. 3 ವರ್ಷಗಳ ಕಾಲಾವಕಾಶದಲ್ಲಿ ಇತರ ಎಲ್ಲಾ ಅನುಮತಿಗಳನ್ನು ಪಡೆದುಕೊಳ್ಳಲು ಈ ತಿದ್ದುಪಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಕೈಗಾರಿಕಾ ಸ್ಥಾಪನೆಗಾಗಿ ಕೈಗಾರಿಕೋದ್ಯಮಿಗಳು ವಿವಿಧ ಇಲಾಖೆಗಳಿಗೆ ಅಲೆದಾಡಬೇಕಾದ ಪ್ರಮೇಯ ಬರುವುದಿಲ್ಲ," ಎಂದು ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದರು. 

"ಈ ಐತಿಹಾಸಿಕ ನಿರ್ಣಯದ ಬಗ್ಗೆ ಉದ್ಯಮ ವಲಯದಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ರಾಜ್ಯದಲ್ಲಿ ಸುಲಲಿತ ವ್ಯವಹಾರಗಳಿಗೆ ಅನುವು ಮಾಡಿಕೊಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ,"  ಎಂದು ಸಚಿವರು ಹೇಳಿದರು. 

 'ಎಬಿಸಿ' ಅನುಕೂಲ
ಕೈಗಾರಿಕೆಯ ವಾಣಿಜ್ಯ ಕಾರ್ಯಾಚರಣೆ ಆರಂಭದವರೆಗೆ ಅಥವಾ 3 ವರ್ಷಗಳ ಆರಂಭಿಕ ಅವಧಿಗೆ  'ಎಬಿಸಿ'ಯನ್ನೇ  ಇಲಾಖೆಗಳ ಅನುಮೋದನೆ ಎಂದು ಪರಿಗಣಿಸಲಾಗುತ್ತದೆ.  'ಕರ್ನಾಟಕ ಉದ್ಯೋಗ ಮಿತ್ರ' ನೀಡುವ ಸ್ವೀಕೃತಿ ಪ್ರಮಾಣಪತ್ರವನ್ನು 3 ವರ್ಷಗಳ ಆರಂಭಿಕ ಅವಧಿಗೆ ಇಲಾಖೆಗಳ ಅನುಮತಿ ಎಂದೇ ಪರಿಗಣಿಸಲಾಗುತ್ತದೆ.  ಇದು ಪೂರ್ವಾನುಮತಿ ದಾಖಲೆಯಾಗಿರುತ್ತದೆ.  ಉತ್ಪಾದನಾ ಕೈಗಾರಿಕೆಗಳು / ಉದ್ಯಮಗಳು ಈ ಅಫಿಡವಿಟ್ ಕ್ಲಿಯರೆನ್ಸ್‌ ಪಡೆಯಲು ಅರ್ಹರಾಗಿರುತ್ತವೆ.

'ಎಬಿಸಿ' ಯೋಜನೆಯಡಿ 15 ಇಲಾಖೆಗಳ ಅನುಮತಿಗಳಿವು:
ಕಂದಾಯ ಇಲಾಖೆಯಿಂದ ಭೂ ಖರೀದಿ, ಭೂ ಪರಿವರ್ತನೆಗೆ ಅನುಮತಿ; ಅರಣ್ಯ ಇಲಾಖೆ, ಬಿಬಿಎಂಪಿಯಿಂದ ಮರ ಉರುಳಿಸಿ, ಸಾಗಿಸಲು ಅನುಮತಿ;   ಕೆಐಎಡಿಬಿ, ಕೆಎಸ್‌ಎಸ್‌ಐಡಿಸಿ, ಬಿಡಿಎ, ಬಿಬಿಎಂಪಿ, ಇತರ ಸ್ಥಳೀಯಾಡಳಿತ ಸಂಸ್ಥೆಗಳು / ಸ್ಥಳೀಯ ಯೋಜನಾ ಪ್ರಾಧಿಕಾರಗಳು (ಡಿಎಂಎ), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಕಟ್ಟಡ ನಿರ್ಮಾಣ ಯೋಜನೆ, ಪ್ರಾರಂಭ ಪ್ರಮಾಣ ಪತ್ರ;  ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆಯಿಂದ ಕಟ್ಟಡ ನಿರ್ಮಾಣಕ್ಕೆ ನಿರಾಕ್ಷೇಪಣಾ ಪತ್ರ,  ಕಟ್ಟಡ ಪೂರ್ಣಗೊಂಡ ನಂತರ ಕ್ಲಿಯರೆನ್ಸ್ ಪ್ರಮಾಣಪತ್ರ; ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಕಾರ್ಖಾನೆ ನಿರ್ಮಾಣ ಮತ್ತು ಯಂತ್ರೋಪಕರಣ ಸ್ಥಾಪನೆಗೆ ಅನುಮತಿ; ಕರ್ನಾಟಕ ರಾಜ್ಯ ವಿದ್ಯುತ್ ನಿರೀಕ್ಷಕರಿಂದ  ವಿದ್ಯುತ್ ಸಂಪರ್ಕ ನಕ್ಷೆ ಅನುಮೋದನೆ, ವಿದ್ಯುತ್‌ ಸಂಪರ್ಕ ಅಳವಡಿಕೆ ಅನುಮೋದನೆ; ಕಾರ್ಖಾನೆ, ಬಾಯ್ಲರ್‌, ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ಇಲಾಖೆಯಿಂದ ಕಾರ್ಖಾನೆ ಯೋಜನೆ ಅನುಮೋದನೆ; ಕಾರ್ಮಿಕ ಇಲಾಖೆಯಿಂದ ಗುತ್ತಿಗೆ ಕಾರ್ಮಿಕರ ನೇಮಕ,  ಗುತ್ತಿಗೆದಾರರಿಗೆ ಹೊಸ ಪರವಾನಗಿ; ಕಾನೂನು ಮಾಪನಶಾಸ್ತ್ರ ವಿಭಾಗದಿಂದ ತೂಕ ಮತ್ತು ಅಳತೆಗಳ ರಾಜ್ಯ ನ್ಯಾಯವ್ಯಾಪ್ತಿಯ ತಯಾರಕರಿಗೆ ಹೊಸ ಪರವಾನಗಿ. 

ಅಫಿಡವಿಟ್ ಆಧಾರಿತ ಕ್ಲಿಯರನ್ಸ್‌ ಅರ್ಜಿ ಸಲ್ಲಿಸುವುದು  ಹೇಗೆ? 
1. ಕರ್ನಾಟಕ ಉದ್ಯೋಗ ಮಿತ್ರದ ಏಕಗವಾಕ್ಷಿ ಪೋರ್ಟಲ್‌ https://ebiz.karnataka.gov.in/kum/index.aspx ಗೆ  ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ ಹಾಕಿ ಲಾಗಿನ್‌ ಮಾಡಿ.
2. ಲಾಗಿನ್‌ ಆದ ನಂತರ, 'ಅಫಿಡವಿಟ್ ಬೇಸ್ಡ್‌ ಕ್ಲಿಯರನ್ಸ್‌' ಆಯ್ಕೆ ಒತ್ತಿದರೆ ಲಭ್ಯ ಇರುವ 15 ಸೇವೆಗಳ ಪಟ್ಟಿ ಕಾಣುತ್ತದೆ. 
3. ಈ 15 ಸೇವೆಗಳ ಪೈಕಿ ಆಯಾ ಸಂಸ್ಥೆಯ ಅಗತ್ಯಕ್ಕೆ ಅನುಗುಣವಾಗಿ ಅಫಿಡವಿಟ್ ಬೇಸ್ಡ್‌ ಕ್ಲಿಯರನ್ಸ್‌'  ಆಯ್ಕೆ ಮಾಡಿದಾಗ, ನಿರ್ದಿಷ್ಟ ಇಲಾಖೆಗಳ ಆನ್‌ಲೈನ್‌ ಅರ್ಜಿ ಪಟ್ಟಿ ಕಾಣುತ್ತದೆ, ಅದನ್ನು ಭರ್ತಿ ಮಾಡಿದ ನಂತರ,
ಎ. ಅಗತ್ಯ ದಾಖಲೆಗಳನ್ನು ಲಗತ್ತಿಸಿ
ಬಿ. ಪ್ರಮಾಣೀಕರಿಸುವ ಅಫಿಡವಿಟ್  ಡೌನ್‌ಲೋಡ್ ಮಾಡಿ, ಅದನ್ನು ಭರ್ತಿ ಮಾಡಿ, ನೋಟರಿ ಸಹಾಯದಿಂದ ಸಹಿ ಮಾಡಿ ಮತ್ತು ಅದನ್ನು ಅಪ್‌ಲೋಡ್ ಮಾಡಿ
ಸಿ.  ಆನ್‌ಲೈನ್ ಬ್ಯಾಂಕಿಂಗ್ ಚಾನೆಲ್‌ ಮೂಲಕ ಶುಲ್ಕ ಪಾವತಿಸಿ. ಅದರ ರಸೀದಿ ಪ್ರತಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಿ. 
4. ಕರ್ನಾಟಕ ಉದ್ಯೋಗ ಮಿತ್ರದಿಂದ ಅಫಿಡವಿಟ್‌ ಅನುಮೋದನೆ ಆದ ನಂತರ, ಇಮೇಲ್‌ ಹಾಗೂ ಎಸ್ಎಂಎಸ್‌ ಸಂದೇಶ ರವಾನೆ ಆಗುವುದು. 
5.  ಅಧಿಸೂಚನೆಯನ್ನು ಪೋಸ್ಟ್ ಮಾಡಿ, ಏಕಗವಾಕ್ಷಿ ಪೋರ್ಟಲ್‌ಗೆ ಲಾಗಿನ್ ಮಾಡಿ ಮತ್ತು ಸ್ವೀಕೃತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.