ಬೆಂಗಳೂರು, (ಫೆ.27): ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಇಂದು (ಶನಿವಾರ) ಹುಟ್ಟುಹಬ್ಬದ ಸಂಭ್ರಮ. 78 ವರ್ಷ ಕಳೆದು 79ನೇ ವಸಂತಕ್ಕೆ ಕಾಲಿಟ್ಟರು. ಈ ಜನ್ಮ ದಿನದಂದು ಸಿಎಂ ಬಿಎಸ್‌ವೈ ನಿವಾಸದ ಮುಂದೆ ಸಿಂಹ ನಿಂತಿದೆ.

ಹೌದು... ಸಿಎಂ ಸರ್ಕಾರಿ ನಿವಾಸ ಕಾವೇರಿ ಮುಂಭಾಗದ ವಿಂಡ್ಸರ್ ಮ್ಯಾನರ್ ವೃತ್ತದಲ್ಲಿ ಮೇಕ್ ಇನ್ ಇಂಡಿಯಾ ಸಿಂಹ ಲಾಂಛನವನ್ನು ಪ್ರತಿಷ್ಠಾಪಿಸಲಾಗಿದೆ. ಸ್ವತಃ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬೆಂಗಳೂರಿನ ವಿಂಡ್ಸರ್ ಮ್ಯಾನರ್ ವೃತ್ತದಲ್ಲಿ ಮೇಕ್ ಇನ್ ಇಂಡಿಯಾ ಲಾಂಛನವನ್ನು ಲೋಕಾರ್ಪಣೆ ಮಾಡಿದರು.

ಮುಖ್ಯಮಂತ್ರಿ ಯಡಿಯೂರಪ್ಪಗೆ 79ರ ಹುಟ್ಟುಹಬ್ಬ : ಗಣ್ಯರಿಂದ ಸಿಎಂಗೆ ಶುಭ ಹಾರೈಕೆ

ಇನ್ನು ಈ ಪ್ರತಿಮೆಯು 1,140 ಕೆಜಿ ತೂಕವಿದ್ದು,  23 ಅಡಿ ಉದ್ದ, 4.5 ಅಡಿ ಅಗಲವಿದೆ.  10 ಅಡಿ ಎತ್ತರವಿದೆ.

ಲಾಂಛನ ಬಿಡುಗಡೆಗೊಳಿಸಿ ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ,  ಪ್ರಧಾನಿ ನರೇಂದ್ರ ಮೋದಿಯವರ ಪರಿಕಲ್ಪನೆಯನ್ನು ಅನಾವರಣಗೊಳಿಸುವ ಈ ಲಾಂಛನವನ್ನು ಸ್ಥಾಪಿಸುವುದು ಅತ್ಯಂತ ಅರ್ಥಪೂರ್ಣವಾಗಿದೆ. ವಿಶ್ವಮಾರುಕಟ್ಟೆಯಲ್ಲಿ ಬ್ರಾಂಡ್ ಕರ್ನಾಟಕವನ್ನು ಸ್ಥಾಪಿಸಲು ನಮ್ಮ ಸರ್ಕಾರ ಅಭಿವೃದ್ಧಿಪಡಿಸುವ ಮಹಾತ್ವಾಕಾಂಕ್ಷೆಯನ್ನು ಹೊಂದಿದೆ. ಮೇಕ್ ಇನ್ ಇಂಡಿಯಾ ಸಾಕಾರಕ್ಕೆ ಹೂಡಿಕೆದಾರ ಸ್ನೇಹಿ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಮೋದಿ ಸರ್ಕಾರದ ಹೊಸ ನೀತಿ- ಮೇಕ್ ಇನ್ ಇಂಡಿಯಾ ವಾಹನಕ್ಕೆ ರಾಜ ಮಾರ್ಗ! 

ಕೈಗಾರಿಕಾ ಕ್ಷೇತ್ರದಲ್ಲಿ ರಾಜ್ಯದ ಕೊಡುಗೆಯನ್ನು ಶೇಕಡಾ 20ಕ್ಕೆ ಹೆಚ್ಚಿಸಲು ಆದ್ಯತೆ ನೀಡಲಾಗುವುದು. ಇದರಲ್ಲಿ ಬಹುಪಾಲು ಬೆಂಗಳೂರು ನಗರದ್ದೇ ಆಗಿದೆ. ಬೆಂಗಳೂರು ನಗರದಲ್ಲಿ ದೊಡ್ಡ ಮತ್ತು ಸಣ್ಣ ಕೈಗಾರಿಕೆ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ ಉಪಕರಣ, ದೂರಸಂಪರ್ಕ, ವೈಮಾನಿಕ ಕೈಗಾರಿಕೆ, ಔಷಧಿ ತಯಾರಿಕೆ, ಜೈವಿಕ ವಿಜ್ಞಾನ, ಆಹಾರ ಸಂಸ್ಕರಣೆ, ಆಟೋ ಮೊಬೈಲ್ ಉದ್ಯಮಗಳ ನೆಲೆ ಬೆಂಗಳೂರು ಆಗಿದೆ. ಇಂತಹ ವಿಶ್ವವಿಖ್ಯಾತ ಬೆಂಗಳೂರು ನಗರವನ್ನು ವಿಶ್ವವಿಖ್ಯಾತಗೊಳಿಸಲು ಬೆಂಗಳೂರು ಮಿಷನ್-2020ನ್ನು ನಮ್ಮ ಸರ್ಕಾರ ರೂಪಿಸಿದೆ ಎಂದರು.