ನವದೆಹಲಿ(ಡಿ.9): ಭಾರತದ ಆಟೋಮೊಬೈಲ್ ಕ್ಷೇತ್ರ ಭಾರಿ ಸುಧಾರಣೆ ಕಾಣುತ್ತಿದೆ. ಇದರರ ಜೊತೆಗೆ ಹೊಸ ಹೊಸ ನೀತಿಗಳು ಜಾರಿಯಾಗುತ್ತಿದೆ. ಇದೀಗ ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೆ ತರಲು ಮುಂದಾಗಿದೆ. ಭಾರತದಲ್ಲಿ ನಿರ್ಮಾಣವಾಗೋ(ಮೇಕ್ ಇನ್ ಇಂಡಿಯಾ) ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಿದೆ.

2019ರ ಮೇ ತಿಂಗಳಿನಿಂದ ಹೊಸ ನೀತಿ ಜಾರಿಯಾಗಲಿದೆ. ಈ ನೀತಿ ಪ್ರಕಾರ ಕನಿಷ್ಠ 65% ವಾಹನದ ನಿರ್ಮಾಣ ಭಾರತದಲ್ಲೇ ಆಗಬೇಕು. ಇಂತಹ ವಾಹನಗಳ ಮೇಲಿನ  ಸುಂಕ ಕಡಿಮೆಯಾಗಲಿದೆ. ಆದರೆ ವಿದೇಶದಿಂದ ನೇರವಾಗಿ ವಾಹನಗಳನ್ನ ಆಮದು ಮಾಡಿ ಇಲ್ಲಿ ಮಾರಾಟ ಮಾಡೋ ಕಂಪೆನಿಗಳಿಗೆ ಹೊಡೆತ ಬೀಳಲಿದೆ.

ನೂತನ ನೀತಿ ಮೂಲಕ ಕೇಂದ್ರ ಸರ್ಕಾರದ ಮಹತ್ವಾಂಕ್ಷಿ ಯೋಜನೆ ಮೇಕ್ ಇನ್ ಇಂಡಿಯಾ ಯೋಜನೆಗೂ ಹೆಚ್ಚಿನ ಉತ್ತೇಜನ ಸಿಗಲಿದೆ. ಇಷ್ಟೇ ಅಲ್ಲ, ಉದ್ಯೋಗ ಅವಕಾಶ ಕೂಡ ಸೃಷ್ಟಿಯಾಗಲಿದೆ. ಭಾರತದಲ್ಲಿರೋ ಬಹುತೇಕ ಆಟೋಮೊಬೈಲ್ ಕಂಪೆನಿಗಳ ಮೂಲ ವಿದೇಶ. ಆದರೆ ಹಲವು ಕಂಪೆನಿಗಳು ಭಾರತದಲ್ಲೇ ನಿರ್ಮಾಣ ಘಟಕ ಹೊಂದಿದೆ. ಆದರೆ ದುಬಾರಿ ಕಾರು ಸೇರಿದಂತೆ ಇತ್ತೀಚೆಗೆ ಭಾರತಕ್ಕೆ ಕಾಲಿಟ್ಟ ಕಂಪೆನಿಗಳು ಭಾರತದಲ್ಲಿ ನಿರ್ಮಾಣ ಘಟಕ ಹೊಂದಿಲ್ಲ. ಈ ಕಂಪೆನಿಗಳು ವಿದೇಶದಿಂದ ಸಂಪೂರ್ಣ ಕಾರನ್ನ ಆಮದು ಮಾಡಿಕೊಂಡು ಇಲ್ಲಿ ಮಾರಾಟ ಮಾಡುತ್ತವೆ. ಈ  ಕಾರುಗಳ ಬೆಲೆ ಮತ್ತಷ್ಟು ಏರಿಕೆಯಾಗಲಿದೆ.