ಪ್ರಧಾನಿ ನರೇಂದ್ರ ಮೋದಿಯವರನ್ನು 'ಭಯೋತ್ಪಾದಕ' ಎಂದು ಕರೆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯು ರಾಷ್ಟ್ರಮಟ್ಟದಲ್ಲಿ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯನ್ನು ಬಿಜೆಪಿ ನಾಯಕರು, ಅದರಲ್ಲೂ ವಿಶೇಷವಾಗಿ ಬಿ.ಎಸ್. ಯಡಿಯೂರಪ್ಪ ತೀವ್ರವಾಗಿ ಖಂಡಿಸಿದ್ದಾರೆ.
ಬೆಂಗಳೂರು (ಏ.21): ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಭಯೋತ್ಪಾದಕ' ಎಂದು ಕರೆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಈಗ ರಾಜಕೀಯ ಕಿಚ್ಚು ಹಚ್ಚಿದೆ. ಖರ್ಗೆ ಅವರ ಈ ವಿವಾದಾತ್ಮಕ ಶಬ್ದಬಳಕೆಯ ವಿರುದ್ಧ ಬಿಜೆಪಿ ನಾಯಕರು ಮತ್ತು ಮೋದಿ ಬೆಂಬಲಿಗರು ಕೆಂಡಾಮಂಡಲವಾಗಿದ್ದು, "ಇದು ನಿಮ್ಮ ರಾಜಕೀಯ ಹತಾಶೆ ಮತ್ತು ಅಹಂಕಾರದ ಪರಮಾವಧಿ" ಎಂದು ವಾಗ್ದಾಳಿ ನಡೆಸಿದ್ದಾರೆ.
ಖರ್ಗೆ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, "ಮೋದಿ ಅವರನ್ನು ಸತತ ಮೂರನೇ ಬಾರಿಗೆ ಭಾರತದ ಜನತೆ ಪ್ರಧಾನಿ ಪೀಠದಲ್ಲಿ ಕೂರಿಸಿದ್ದಾರೆ. ಅವರನ್ನು ಟೀಕಿಸುವ ಭರದಲ್ಲಿ 'ಭಯೋತ್ಪಾದಕ' ಎಂಬ ಕೀಳುಮಟ್ಟದ ಪದ ಬಳಸುವುದು ಅವರನ್ನು ಬೆಂಬಲಿಸಿದ ಕೋಟ್ಯಂತರ ಭಾರತೀಯರಿಗೆ ಮಾಡಿದ ಅಪಮಾನ. ಒಂದು ಮನೆತನವನ್ನು ಸಂತೋಷಪಡಿಸಲು ಖರ್ಗೆ ಅವರು ತಮ್ಮ ಘನತೆಯನ್ನು ಮರೆತಿದ್ದಾರೆ" ಎಂದು ಆಕ್ರೋಶ ಹೊರಹಾಕಿದ್ದಾರೆ.
ಜಾಗತಿಕ ನಾಯಕನಿಗೆ ಕೀಳು ಪದಬಳಕೆ ಸರಿಯೇ?
ವಿಶ್ವದ 26ಕ್ಕೂ ಅಧಿಕ ರಾಷ್ಟ್ರಗಳು ತಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡಿ ಮೋದಿ ಅವರ ನಾಯಕತ್ವವನ್ನು ಗೌರವಿಸಿವೆ. ಇಡೀ ಜಗತ್ತೇ ಭಾರತದತ್ತ ಹೆಮ್ಮೆಯಿಂದ ನೋಡುತ್ತಿರುವಾಗ, ದೇಶದ ಪ್ರಧಾನಿಯನ್ನು ಇಷ್ಟು ಕೀಳುಮಟ್ಟದ ಶಬ್ದಗಳಿಂದ ನಿಂದಿಸುವುದು ನಿಮ್ಮ 'ವಿಷಕಾರಿ ಮನಸ್ಥಿತಿ'ಯನ್ನು ತೋರಿಸುತ್ತದೆ ಎಂದು ಟೀಕಿಸಲಾಗಿದೆ.
ಹಿರಿಯ ನಾಯಕರಾದ ಖರ್ಗೆ ಅವರು ಕೂಡಲೇ ತಮ್ಮ ಬೇಜವಾಬ್ದಾರಿ ಹೇಳಿಕೆಗೆ ದೇಶದ ಜನರ ಕ್ಷಮೆ ಯಾಚಿಸಬೇಕು. ಚುನಾವಣೆ ಬಂದಾಗಲೆಲ್ಲ ಇಂತಹ ಹೇಳಿಕೆ ನೀಡುವುದು ಕಾಂಗ್ರೆಸ್‌ಗೆ ಅಭ್ಯಾಸವಾಗಿಬಿಟ್ಟಿದೆ. ಸೋಲಿನ ಭೀತಿಯಿಂದ ಖರ್ಗೆ ಇಂತಹ ಅಸಂಬದ್ಧ ಮಾತುಗಳನ್ನಾಡುತ್ತಿದ್ದಾರೆ. ದೇಶದ ಪ್ರಧಾನಿಯನ್ನು ನಿಂದಿಸುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದದ್ದು. ಒಟ್ಟಿನಲ್ಲಿ, ತಮಿಳುನಾಡು ಚುನಾವಣಾ ಕಣದಲ್ಲಿ ಖರ್ಗೆ ನೀಡಿದ ಒಂದು ಹೇಳಿಕೆ ಈಗ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ದೊಡ್ಡ ವಾಕ್ಸಮರಕ್ಕೆ ನಾಂದಿ ಹಾಡಿದೆ.
ಬಿಎಸ್ ಯಡಿಯೂರಪ್ಪ ಬರೆದ ಟ್ವೀಟ್
ಮಾನ್ಯ ಶ್ರೀ ಖರ್ಗೆಯವರೇ, ದೇಶದ ಹೆಮ್ಮೆಯ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜೀ ರವರನ್ನು 'ಭಯೋತ್ಪಾದಕ' ಎಂದು ತೀರಾ ಕೀಳು ಮಟ್ಟದಲ್ಲಿ ನೀವು ನೀಡಿರುವ ಹೇಳಿಕೆ ನಿಮ್ಮ ದುರಹಂಕಾರದ ಪರಮಾವಧಿ ಮಾತ್ರವಲ್ಲ, ಅದು ನಿಮ್ಮ ಕೊಳಕು, ವಿಷಕಾರಿ ಮನಸ್ಥಿತಿಯನ್ನು ಅನಾವರಣಗೊಳಿಸಿದೆ. ಮಾನ್ಯ ಖರ್ಗೆಯವರೇ, ಹೆಮ್ಮೆಯ ಪ್ರಧಾನಿ ಶ್ರೀ ಮೋದಿ ಜೀ ರವರ ನಾಯಕತ್ವದ ಮೇಲೆ ಅಚಲ ವಿಶ್ವಾಸವಿಟ್ಟು ಭಾರತದ ಜನತೆ ಸತತ ಮೂರನೇ ಬಾರಿಗೆ ಅವರನ್ನು ಪ್ರಧಾನಿ ಪೀಠದಲ್ಲಿ ಕೂರಿಸಿದ್ದಾರೆ. ಅವರನ್ನು ಟೀಕಿಸುವ ಭರದಲ್ಲಿ ಹೀಗೆ ಅವಮಾನಿಸುವುದು ಎಂದರೆ ಮೋದಿ ಜೀ ರವರನ್ನು ಬೆಂಬಲಿಸಿದ ಕೋಟ್ಯಂತರ ಭಾರತೀಯರನ್ನು ಅಪಮಾನಿಸಿದಂತೆ! ಕಾಂಗ್ರೆಸ್ ನಾಯಕರಿಗೆ ಇಂತಹ ದುರ್ವರ್ತನೆ ಅಭ್ಯಾಸವಾಗಿಬಿಟ್ಟಿದೆ. ಚುನಾವಣೆ ಬಂದಾಗಲೆಲ್ಲ ಇಂತಹ ಕೀಳು ಮಟ್ಟದ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದು, ಜನರು ನಿಮಗೆ ಪಾಠ ಕಳಿಸುತ್ತಲೇ ಬಂದಿದ್ದಾರೆ. ಆದರೂ ತಿದ್ದಿಕೊಳ್ಳದ ನಿಮ್ಮ ವರ್ತನೆ ನಿಮ್ಮ ಅಹಂಕಾರಕ್ಕೆ ಕನ್ನಡಿ ಹಿಡಿದಿದೆ.
ಮಾನ್ಯ ಖರ್ಗೆಯವರೇ, ಭಾರತದ ಪ್ರಧಾನಿ ಶ್ರೀ @narendramodi ಜೀ ರವರು ಅಪ್ರತಿಮ ಜಾಗತಿಕ ನಾಯಕ ಎಂದು ವಿಶ್ವದ ಹಲವಾರು ದೇಶಗಳ ನೇತಾರರು ಕೊಂಡಾಡುತ್ತಿದ್ದಾರೆ. ವಿಶ್ವದ 26ಕ್ಕೂ ಅಧಿಕ ರಾಷ್ಟ್ರಗಳು ತಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡಿ ಮೋದಿ ಜೀ ಯವರ ನಾಯಕತ್ವವನ್ನು ಗೌರವಿಸಿವೆ. ಇಡೀ ಜಗತ್ತೇ ಭಾರತದತ್ತ ಹೆಮ್ಮೆಯಿಂದ ನೋಡುತ್ತಿರುವಾಗ, ಕೇವಲ ನಿಮ್ಮ ರಾಜಕೀಯ ವೈಷಮ್ಯಕ್ಕಾಗಿ ದೇಶದ ಪ್ರಧಾನಮಂತ್ರಿಗಳ ಬಗ್ಗೆ ಇಷ್ಟು ಕೀಳುಮಟ್ಟದ ಶಬ್ದಗಳನ್ನು ಬಳಸುವುದು, ನಿಮ್ಮ ಕೀಳು ಮನಸ್ಥಿತಿಯನ್ನು ಮತ್ತು ನಿಮ್ಮ ರಾಜಕೀಯ ಹತಾಶೆಯನ್ನು ಸಾಬೀತುಪಡಿಸಿದೆ. ಅಧಿಕಾರದ ಹಪಾಹಪಿಯಲ್ಲಿ, ಒಂದು ಮನೆತನವನ್ನು ಸಂತೋಷಪಡಿಸುವ ಭರದಲ್ಲಿ ನಿಮ್ಮ ಘನತೆಯನ್ನು ಕಳೆದುಕೊಂಡಿದ್ದೀರಿ. ಹಿರಿಯರಾದ ನಿಮ್ಮಿಂದ ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನಾಡಿನ ಜನತೆ ಎಂದಿಗೂ ಕ್ಷಮಿಸುವುದಿಲ್ಲ. ಇಂತಹ ಕೀಳು ಮಟ್ಟದ ಅಸಂಬದ್ಧ ಹೇಳಿಕೆಗೆ ಕೂಡಲೇ ಕ್ಷಮೆ ಯಾಚಿಸಿ ಎಂದು ಆಗ್ರಹಿಸುತ್ತೇನೆ.



