BS Yediyurappa Birthday: ಯಡಿಯೂರಪ್ಪರಿಗೆ ನೀರು ನೀಡಿದ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಏನು ಹೇಳಿದರು?
ಇಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಹುಟ್ಟಿದ ಹಬ್ಬ. ಹುಟ್ಟಿದ ಹಬ್ಬ ಎನ್ನೋದು ಅವರ ಅಭಿಮಾನಿಗಳಿಗೆ ವಿಶೇಷವಾದರೆ, ಯಡಿಯೂರಪ್ಪನವರಿಗೆ ಶಿವಮೊಗ್ಗಕ್ಕೆ ಮೋದಿ ಬಂದಿದ್ದು ವಿಶೇಷವಾಗಿತ್ತು.
ರವಿ ಶಿವರಾಮ್, ರಾಜಕೀಯ ವರದಿಗಾರರು, ಏಷ್ಯಾನೆಟ್ ಸುವರ್ಣ ನ್ಯೂಸ್
ಇಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಹುಟ್ಟಿದ ಹಬ್ಬ. ಹುಟ್ಟಿದ ಹಬ್ಬ ಎನ್ನೋದು ಅವರ ಅಭಿಮಾನಿಗಳಿಗೆ ವಿಶೇಷವಾದರೆ, ಯಡಿಯೂರಪ್ಪನವರಿಗೆ ಶಿವಮೊಗ್ಗಕ್ಕೆ ಮೋದಿ ಬಂದಿದ್ದು ವಿಶೇಷವಾಗಿತ್ತು.
ಬೆಳಗ್ಗೆ 11-30 ಕ್ಕೆ ನೂತನ ಏರ್ಪೋಟ್ ಗೆ ಬಂದಿಳಿದ ಮೋದಿ(PM Narendra Modi) ಒಂದುವರೆ ತಾಸು ಶಿವಮೊಗ್ಗ(Shivamogga)ದಲ್ಲೇ ಇದ್ದರು. ಆ ಅಷ್ಟು ಸಮಯದಲ್ಲೂ ಪ್ರಧಾನಿ ಮೋದಿ ಯಡಿಯೂರಪ್ಪರ(BS Yadiyurappa) ಜೊತೆಗೆ ಇದ್ದರು ಎಂದರೆ ತಪ್ಪಾಗಲಾರದು. ವೇದಿಕೆಗೆ ಬರುವ ಮುನ್ನವೇ ಅವರ ಕೈ ಹಿಡಿದೆ ಸಮಾವೇಶದ ಸ್ಥಳಕ್ಕೆ ಬಂದರು. ವೇದಿಕೆ ಏರುತ್ತಲೆ ಯಡಿಯೂರಪ್ಪರ ಕೈ ಹಿಡಿದು ಜನರತ್ತ ಕೈ ಬೀಸಿದ ಮೋದಿ ಕಾರ್ಯಕ್ರಮ ಮುಗಿಸಿ ತೆರಳುವ ತನಕ ಸುಮಾರು ಹತ್ತಕ್ಕೂ ಹೆಚ್ಚ ಬಾರಿ ಯಡಿಯೂರಪ್ಪಗೆ ಹಸ್ತಲಾಘವ ಮಾಡಿದ್ದು ವಿಶೇಷ. ಹಾಗಾದರೆ ಇಬ್ಬರು ನಾಯಕರು ತಮ್ಮ ಭಾಷಣದಲ್ಲಿ ಪರಸ್ಪರ ಪ್ರೀತಿಯನ್ನು ಗೌರವನ್ನು ಹೇಗೆ ವ್ಯಕ್ತಪಡಿಸಿದ್ರು..
ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬಂದಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು: ಅಪ್ಪಟ ಮೋದಿ ಅಭಿಮಾನಿ
60ನೇ ಹುಟ್ಟು ಹಬ್ಬಕ್ಕೆ ವಾಜಪೇಯಿ ಬಂದಿದ್ರು, ಈಗ ನೀವು ಬಂದಿದ್ದೀರಿ
ಬಿಎಸ್ ಯಡಿಯೂರಪ್ಪ ಮೋದಿಯವರ ಮೇಲೆ ಇದ್ದ ಗೌರವ ಪ್ರೀತಿಯನ್ನು ಸಾರ್ವಜನಿಕವಾಗಿ ತೋರಿದರು ಎಂದರೆ, ಭಾಷಣಕ್ಕೆ ತೆರಳುವ ಮುನ್ನ ಮೋದಿ ಹತ್ತಿರ ಬಂದು ತಲೆ ಬಾಗಿ ನಮಸ್ಕಾರ ಮಾಡುತ್ತಿದಂತೆ, ತಕ್ಷಣ ಮೋದಿ ಎದ್ದು ನಿಂತು ಬಿಟ್ಟರು. ನೀವು ಹಾಗೆಲ್ಲಾ ನಮಸ್ಕಾರ ಮಾಡಬಾರದು ಎನ್ನೋದನ್ನು ತಲೆ ಆಡಿಸುತ್ತಲೆ ಮೋದಿ ವ್ಯಕ್ತಪಡಿಸಿದ ರೀತಿ ಯಡಿಯೂರಪ್ಪ ಮೇಲೆ ಮೋದಿಗೆ ಇರುವ ಗೌರವ ತೋರಿಸುತ್ತಿತ್ತು.
ಭಾಷಣ ಆರಂಭಿಸಿದ ಯಡಿಯೂರಪ್ಪ ಘೋಷಣೆ ಕೂಗುತ್ತಿದ್ದಂತೆ ಕೆಮ್ಮು ಬಿಕ್ಕಳಿಸಿ ಬಿಕ್ಕಳಿಸಿ ಬಂತು. ಮೋದಿ ಅದನ್ನು ಗಮನಿಸಿದ್ರು. ನೀರು ಕೊಡೊಕೆ ಸೂಚನೆ ನೀಡಿದ್ರು. ಆದರೆ ಪ್ರಧಾನಿ ಕಾರ್ಯಕ್ರಮದ ವೇದಿಕೆಯಲ್ಲಿ spg ರೂಲ್ಸ್ ಪ್ರಕಾರ ನೀರಿನ ಬಾಟಲಿ ಇಡುವಂತಿಲ್ಲ. ಕೆಲ ಶಾಸಕರು ಆ ಕಡೆ ಈ ಕಡೆ ಓಡಾಡಿದ್ರು ನೀರು ತಟ್ ಅಂತ ಸಿಗಲಿಲ್ಲ. ಆಗ ಮೋದಿಯವರಿಗೆ ಇಟ್ಟಿದ್ದ ಒಂದು ಗ್ಲಾಸ್ ನೀರನ್ನು (ಪ್ರಧಾನಿ ಕುಡಿಯುವ ನೀರನ್ನು ಸಹ ಎರಡು ಮೂರು ವೈದ್ಯರು ಪರೀಕ್ಷೆ ಮಾಡಿರುತ್ತಾರೆ) ಮೋದಿ ತನ್ನ ಹಿಂದೆ ಕುಳಿತಿದ್ದ spg (gunman) ಗೇ ಹೇಳಿ, ಯಡಿಯೂರಪ್ಪಗೆ ನೀಡಲು ಸೂಚನೆ ನೀಡಿದ್ರು. ಗನ್ ಮ್ಯಾನ್ ಗ್ಲಾಸ್ ನೀರನ್ನು ಯಡಿಯೂರಪ್ಪಗೆ ನೀಡಿದ್ರು. ಮೋದಿ ನೀಡಿದ ನೀರನ್ನು ಕುಡಿದ ಯಡಿಯೂರಪ್ಪ ಭಾಷಣ ಮುಂದುವರಿಸಿದ್ರು. ಬಳಿಕ ನಿರೂಪಕಿ ಅಪರ್ಣಾ ಒಂದು ಗ್ಲಾಸ್ ನೀರು ತಂದು ಡಯಾಸ್ ಮೇಲೆ ಇಟ್ಟರು.
ಯಡಿಯೂರಪ್ಪ ತಮ್ಮ ಭಾಷಣದಲ್ಲಿ ಮಾಜಿ ಪ್ರಧಾನಿ ದಿವಂಗತ ವಾಜಪೇಯಿ ಹೆಸರು ಉಲ್ಲೇಖಿಸಿ ತನ್ನ ಅರವತ್ತನೇ ಹುಟ್ಟು ಹಬ್ಬಕ್ಕೆ ವಾಜಪೇಯಿ ಬಂದಿದ್ದರು. ಈಗ ನೀವು ಬಂದಿದ್ದೀರಿ ಎಂದು ಖುಷಿ ವ್ಯಕ್ತಪಡಿಸಿದರು. ಇನ್ನು ನಾನು ಬರ್ತಡೆ ಎಲ್ಲಾ ಆಚರಿಸಿಕೊಳ್ಳಲ್ಲ ಎಂದ ಯಡಿಯೂರಪ್ಪ ತನ್ನ ಸುಧೀರ್ಘ ರಾಜಕೀಯ ಜೀವನದಲ್ಲಿ ಕೇವಲ 7 ವರ್ಷ ಮಾತ್ರ ಅಧಿಕಾರದಲ್ಲಿ ಇದ್ದೆ ಎಂದು ಹೇಳುವ ಮೂಲಕ ಪಕ್ಷ ಕಟ್ಟೋದಕ್ಕೆ ಹೆಚ್ಚಿನ ಸಮಯ ಕಳೆದಿದ್ದೇನೆ ಎನ್ನೋದನ್ನ ಪರೋಕ್ಷವಾಗಿ ಹೇಳಿದಂತಿತ್ತು.
ಮೊಬೈಲ್ ಟಾರ್ಚ್ ಆನ್ ಮಾಡಿಸಿ ಯಡಿಯೂರಪ್ಪಗೆ ವಿಶ್ ಮಾಡಿದ ಮೋದಿ
ಯಡಿಯೂರಪ್ಪರ ಸಾಧನೆ ಗುಣಗಾನ ಮಾಡಿದ ಮೋದಿ ಮೊನ್ನೆ ಸದನದಲ್ಲಿ ಯಡಿಯೂರಪ್ಪ ಮಾಡಿದ ಭಾಷಣ ನಿಜಕ್ಕೂ ಸ್ಪೂರ್ತಿದಾಯಕವಾಗಿತ್ತು ಎಂದು ಬಣ್ಣಿಸಿದರು. ವಿಶೇಷ ಅಂದರೆ ಯಡಿಯೂರಪ್ಪ ಬರ್ತಡೆಗೆ ವಿಭಿನ್ನವಾಗಿ ಮೋದಿ ಶುಭಾಶಯ ಹೇಳಿದ್ರು. ಸಮಾವೇಶಕ್ಕೆ ಸೇರಿದ್ದ ಲಕ್ಷಕ್ಕೂ ಅಧಿಕ ಮಂದಿಯ ಮೊಬೈಲ್ ಟಾರ್ಚ್ ಆನ್ ಮಾಡಿಸಿ ಆ ಮೂಲಕ ಯಡಿಯೂರಪ್ಪರಿಗೆ ಶುಭಾಶಯ ಹೇಳಿದರು. ಈ ವೇಳೆ ಯಡಿಯೂರಪ್ಪ ಎದ್ದು ಜನರಿಗೆ ಕೈ ಮುಗಿದರು.
ಯಡಿಯೂರಪ್ಪರಿಗೆ ಪಕ್ಷ ಅಗೌರವ ತೋರಿಲ್ಲ ಎನ್ನುವ ಸಂದೇಶ
ಯಡಿಯೂರಪ್ಪ ಒಂದುವರೆ ವರ್ಷದ ಹಿಂದೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗ ಪಕ್ಷ ಯಡಿಯೂರಪ್ಪರಿಗೆ ಅನ್ಯಾಯ ಮಾಡಿತು ಎಂಬೆಲ್ಲಾ ಚರ್ಚೆಗಳು ಹುಟ್ಟಿತ್ತು. ಮಾತ್ರವಲ್ಲ ವಿಪಕ್ಷ ಕಾಂಗ್ರೆಸ್ ಕೂಡ ಅದನ್ನು ಒತ್ತಿ ಹೇಳುವ ಮೂಲಕ ಲಿಂಗಾಯತ ಮತದ ಮೇಲೆ ದೃಷ್ಟಿ ಇಟ್ಟು ರಾಜಕೀಯ ಲಾಭ ಪಡೆಯುವ ಪ್ರಯತ್ನ ಮಾಡಿತ್ತು/ಮಾಡುತ್ತಿದೆ. ಇಂತ ಸಮಯದಲ್ಲಿ ಸ್ವತಃ ಮೋದಿ ಯಡಿಯೂರಪ್ಪ ಹುಟ್ಡು ಹಬ್ಬದ ದಿನವೇ ಶಿವಮೊಗ್ಗ ಏರ್ಪೋಟ್ ಉದ್ಘಾಟನೆ ಮಾಡಿ ಹುಟ್ಟು ಹಬ್ಬಕ್ಕೆ ಗಿಫ್ಟ್ ರೀತಿ ನೀಡಿದ್ದು ಯಡಿಯೂರಪ್ಪರನ್ನು ನಾವು ಕಡೆಗಣಿಸಿಲ್ಲ ಎನ್ನುವ ಸಂದೇಶವನ್ನು ನೀಡಿದಂತಿತ್ತು.
ಹಠ, ಹೋರಾಟ, ಔದಾರ್ಯ ಮತ್ತು ಮೋಹ = ಬಿ.ಎಸ್.ಯಡಿಯೂರಪ್ಪ
ರಾಜ್ಯದಲ್ಲಿ ಬಿಜೆಪಿ ಮರಳಿ ಅಧಿಕಾರ ಪಡೆಯಲು ಯಡಿಯೂರಪ್ಪ ಬೇಕು
ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿ ಬಿಜೆಪಿಗೆ ದೊಡ್ಡ ಏಟು ನೀಡಿದ್ದ ಯಡಿಯೂರಪ್ಪರನ್ನು ಪ್ರಧಾನಿ ಮೋದಿ 2014 ರಲ್ಲಿ ಯಡಿಯೂರಪ್ಪರನ್ನು ಮರಳಿ ಪಕ್ಷಕ್ಕೆ ಕರೆತಂದರು. ಮಾತ್ರವಲ್ಲ ಅಮಿತ್ ಶಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಆಗ್ತಾ ಇದ್ದಂತೆ ಒಂದು ವರ್ಷ ಬಿಟ್ಟು, ಯಡಿಯೂರಪ್ಪರನ್ನು ಬಿಜೆಪಿ ರಾಜ್ಯಾಧ್ಯಕ್ಷನ ಹುದ್ದೆ ನೀಡಿ ಕೂರಿಸಿದ್ರು. ಅಲ್ಲಿ ಮೋದಿ ಪ್ರಧಾನಿ ಆದ್ರು. ಇಲ್ಲಿ 2018 ರ ವಿಧಾನಸಭೆ ಚುನಾವಣೆಯಲ್ಲಿ ಮೋದಿ + ಯಡಿಯೂರಪ್ಪ ಪ್ರಚಾರ ಬಿಜೆಪಿಯನ್ನು 104 ಕ್ಕೆ ತಂದು ನಿಲ್ಲಿಸಿತು. ಬಳಿಕ ಮುಂದೆ ಆಗಿದ್ದು ಈಗ ಇತಿಹಾಸ ಬಿಡಿ. ಒಟ್ಟಾರೆಯಾಗಿ ಯಡಿಯೂರಪ್ಪ ಶಕ್ತಿ ಅರಿತಿರುವ ಮೋದಿ ಅಮಿತ್ ಶಾ ಕರ್ನಾಟಕ ಚುನಾವಣೆ ಗೆಲ್ಲಲು ಯಡಿಯೂರಪ್ಪ ಬೇಕೆ ಬೇಕು ಎನ್ನೋದನಂತು ಅರಿತಿದ್ದಾರೆ. ಕಳೆದ ಬಾರಿ ಯಡಿಯೂರಪ್ಪ ನೇತೃತ್ವ ಈಗ ಮಾರ್ಗದರ್ಶನ ಬಿಜೆಪಿ ಭವಿಷ್ಯ ಏನಾಗಲಿದೆ?!