Asianet Suvarna News Asianet Suvarna News

ಹಠ, ಹೋರಾಟ, ಔದಾರ್ಯ ಮತ್ತು ಮೋಹ = ಬಿ.ಎಸ್.ಯಡಿಯೂರಪ್ಪ

ರಾಜ್ಯದ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ 80ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರ ರಾಜಕೀಯ ಜೀವನದ ಪ್ರಮುಖ ಘಟನೆಗಳನ್ನು ರಾಜಕೀಯ ವಿಶ್ಲೇಷಕ, ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಪ್ರಶಾಂತ್ ನಾತು ಅವರು ಕಂಡಂತೆ ಮೆಲಕು ಹಾಕಿದ್ದಾರೆ. 

Prashanth Natu writes about political life of Karnataka former CM BS Yediyurppa on laters birthday
Author
First Published Feb 27, 2023, 4:55 PM IST

1989 ಅನ್ನಿಸುತ್ತದೆ ಹುಬ್ಬಳ್ಳಿ ಆರ್ ಎನ್ ಶೆಟ್ಟಿ ಕಲ್ಯಾಣ ಮಂಟಪ ದಲ್ಲಿ ನಮ್ಮ ಹುಬ್ಬಳ್ಳಿ  ಮನೆ ಹತ್ತಿರದಲ್ಲೇ ಇರುತ್ತಿದ್ದ  ಅನಂತ ಕುಮಾರ ಮತ್ತು  ತೇಜಸ್ವಿನಿ  ಮದುವೆ.ನನಗಾಗ 10 ವರ್ಷ ವಯಸ್ಸು .ಒಂದು ಅಂಬಾಸೆಡರ್ ಕಾರಿನಲ್ಲಿ ಬಿಳಿ ಸಫಾರಿ ಧರಿಸಿದ ವ್ಯಕ್ತಿ ಬಂದು ಇಳಿದರು.ಒಮ್ಮೆಲೇ ಅಲ್ಲೇ ಕುಳಿತಿದ್ದವರೆಲ್ಲ ಯಡಿಯೂರಪ್ಪ ಬಂದರು ಬಂದರು ಎಂದು ಹಿಂದೆ ಹೋದರು ನಾನು ಹೋದೆ ಆಗಲೇ ನಾನು ಮೊದಲ ಬಾರಿ ಯಡಿಯೂರಪ್ಪ ನವರನ್ನು ನೋಡಿದ್ದು. ನಂತರ 1993 ರಲ್ಲಿ ಹುಬ್ಬಳ್ಳಿ ದಾಜಿಬಾನ್ ಪೇಟೆ ಯ ಕಾಮತ ಹೋಟೆಲ್ ಕಡೆಯಿಂದ ಯಡಿಯೂರಪ್ಪ ನವರು ಮತ್ತು ವೀರಭದ್ರಯ್ಯ ನವರು ಈದಗಾ ಮೈದಾನ ದತ್ತ ನುಗ್ಗುತ್ತಾರೆ ಎಂದು ಕೇಳಿಯೇ ನಾನು ಮಿತ್ರರ ಜೊತೆ ಅಲ್ಲಿಗೆ ಹೋಗಿದ್ದೆ.200 ಮೀಟರ್ ನಡೆದು ಯಡಿಯೂರಪ್ಪ ಬಂಧನ ಕ್ಕೊಳಗಾದರು.ನಮಗೆಲ್ಲ ನಿರಾಸೆ.ಆಮೇಲೆ 15 ದಿನ ಕಳೆದು ಮೂರು ಸಾವಿರ ಮಠದ ಮೈದಾನದಲ್ಲಿ ಯಡಿಯೂರಪ್ಪ ಭಾಷಣ " ಬಂಧುಗಳೇ ನಾನು ಅವತ್ತು ಇನ್ನು ಮುಂದೆ ಹೋಗಿದ್ದರೆ  ಈ ಪೊಲೀಸ ಮಹಾ ನಿರ್ದೇಶಕ ಬರ್ಮನ್ ಗೋಲಿ ಬಾರ ಮಾಡುತ್ತಿದ್ದರು ಅದಕ್ಕೆ ನಾನು ಬಂಧನಕ್ಕೆ ಒಳಗಾಗಿ ಬಿಟ್ಟೆ ಕ್ಷಮಿಸಿ  " ಎಂದೆಲ್ಲ ಹೇಳಿದಾಗ ನನಗೂ ಓ ಹೌದಲ್ವಾ ಅನ್ನಿಸಿತು.ಆಗ ಈಗಿನ ಹಾಗೇನು ಟಿ ವಿ ಇಂಟರ್ ನೆಟ್ ಇರಲಿಲ್ಲ.   ಹುಬ್ಬಳ್ಳಿ ಧಾರವಾಡ ದಲ್ಲಿ ಇದ್ದವರಿಗೆ ಸಂಯುಕ್ತ ಕರ್ನಾಟಕ ಪತ್ರಿಕೆ ಯಲ್ಲಿ ಓದಿ ಓದಿಯೇ ಅವರು ಹಾಗೆ ಇವರು ಹೀಗೆ ಎಂಬ ಅಭಿಪ್ರಾಯ ಮೂಡುತ್ತಿತ್ತು.ಯಡಿಯೂರಪ್ಪ ಗುಡುಗಿದರೆ ವಿಧಾನ ಸೌಧ ನಡುಗುತ್ತದೆ ಎಂದು ಘೋಷಣೆ  ತಲೆಯಲ್ಲಿ ಕುಳಿತಿದ್ದು ಆವಾಗಲೇ. ಯಡಿಯೂರಪ್ಪ ನವರನ್ನು ಆಮೇಲೆ ಹತ್ತಿರದಿಂದ ನೋಡಿದ್ದು 1999 ರಲ್ಲಿ ಹುಬ್ಬಳ್ಳಿ ರೇಲ್ವೆ ಮೈದಾನದಲ್ಲಿ ಸಂಕಲ್ಪ ಯಾತ್ರೆ ಸಮಾರೋಪ ದಲ್ಲಿ.ಗರಿ ಗರಿ ಸಫಾರಿ ಹಾಕಿಕೊಂಡಿದ್ದ ಯಡಿಯೂರಪ್ಪ ಮದು ಮಗನಂತೆ ಓಡಾಡಿಕೊಂಡಿದ್ದರು.ಅಟಲ್ ಜಿ ಭಾಷಣಕ್ಕೆ ಜನ ಸಾಗರ ಸೇರಿದ್ದು ನೋಡಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿಯೇ ಬಿಟ್ಟರು ಅನ್ನುವ ಹಾಗೆ ಬಿಜೆಪಿ ನಾಯಕರು ಮಾತನಾಡ ತೊಡಗಿದರು.ಆದರೆ ವಿಪರ್ಯಾಸ ನೋಡಿ ಶಿಕಾರಿಪುರದಲ್ಲಿ ಯಡಿಯೂರಪ್ಪ ಶಿವಮೊಗ್ಗದಲ್ಲಿ ಈಶ್ವರಪ್ಪ ಸೋತು ಹೋದರು.ಬಿಜೆಪಿಗರಿಗೆ ಆಘಾತವೋ ಆಘಾತ. ಅಧಿಕಾರ ಹಿಡಿಯುತ್ತೇವೆ ಎಂದು ಕೊಂಡಿದ್ದ ಬಿಜೆಪಿಗೆ ಅಧಿಕೃತ ವಿರೋಧ ಪಕ್ಷ ಸ್ಥಾನಮಾನ ಎದುರಿಗೆ ಎಸ್ ಎಂ ಕೃಷ್ಣ ಮುಖ್ಯಮಂತ್ರಿ. ಆದರೆ ಅನಂತ ಮತ್ತು ಬಿಎಸ್‌ವೈ ಸೇರಿ  ಬಿಬಿ ಶಿವಪ್ಪ ಅವರಿಗೆ ತಪ್ಪಿಸಿದ್ದರಿಂದ ಜಗದೀಶ್ ಶೆಟ್ಟರ್ ವಿರೋಧಿ ನಾಯಕರಾದರು.

ಯಡಿಯೂರಪ್ಪ ಅನಂತ ಭಲೇ  ಜೋಡಿ 
ಇಬ್ಬರಲ್ಲಿ ಒಬ್ಬರು ಇಲ್ಲದಿದ್ದರೂ ಕರ್ನಾಟಕದಲ್ಲಿ ಬಿಜೆಪಿ ಬೆಳೆಯುತ್ತಿತ್ತಾ ಅನ್ನುವುದೇ ಅನುಮಾನ. ಅನಂತ ಕುಮಾರ ಬುದ್ಧಿವಂತ ಯಡಿಯೂರಪ್ಪ ಹೃದಯವಂತ. ಇಬ್ಬರು ಒಬ್ಬರಿಗೊಬ್ಬರು ಇಷ್ಟು ಆತ್ಮೀಯರು ಇದ್ದರು ಎಂದರೆ ಅನಂತ ಕುಮಾರ ತೇಜಸ್ವಿನಿ ಯವರ ಮದುವೆ ನಂತರ ಯಡಿಯೂರಪ್ಪನವರು ಮತ್ತು ಮೈತ್ರಾದೇವಿ ನವದಂಪತಿಗಳನ್ನು ತಮ್ಮ ಕಾರಿನಲ್ಲಿ ಮೈಸೂರು, ಊಟಿ, ರಾಮೇಶ್ವರಕ್ಕೆ ಕರೆದು ಕೊಂಡು ಹೋಗಿದ್ದರಂತೆ. ಜಯ ಮಹಲದ ಎಸ್ ಮಲ್ಲಿಕಾರ್ಜುನಯ್ಯ ಅಧಿಕೃತ ನಿವಾಸದ ಒಂದು ಬದಿ ಅನಂತಕುಮಾರ ದಂಪತಿ ವಾಸ, ಇನ್ನೊಂದು ಕೋಣೆಯಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಆಗಲು ಬರುವ ರಿಗೆ ಮೀಸಲು. ಪಾರ್ಟಿ ಪ್ರವಾಸ ಚುನಾವಣೆ ಖರ್ಚು ವೆಚ್ಚ ಎಂದು  ಮೈತ್ರಾದೇವಿ ಅವರ ಕಡೆಯಿಂದ ಬಂದಿದ್ದ ಒಂದಿಷ್ಟು ಜಮೀನು ಮಾರಿಕೊಂಡಿದ್ದ ಯಡಿಯೂರಪ್ಪ ನವರು ತಮ್ಮ ಸ್ವಂತ ಕಾರು ಕೂಡ ಪಾರ್ಟಿ ಓಡಾಟಕ್ಕೆ ಬಹುಪಾಲು ಬಳಸುತ್ತಿದ್ದರಂತೆ. ಅನಂತ ಕುಮಾರ ಪ್ರಹ್ಲಾದ ಜೋಶಿ ಮತ್ತವರ ಗೆಳೆಯರು ಸೇರಿ ವಿಭವ ಕೆಮಿಕಲ್ಸ್ ಎಂಬ ಫಿನೈಲ್ ತಯಾರಿಕಾ ಉದ್ಯಮ ಶುರು ಮಾಡಿದಾಗ ಯಡಿಯೂರಪ್ಪನವರೇ ಓಡಾಡಿ ಲ್ಯಾಬೊರೇಟರಿ ಲೈಸೆನ್ಸ್ ಮಾಡಿ ಕೊಟ್ಟಿದ್ದರಂತೆ. ಆದರೆ ರಾಜಕೀಯವೇ ಹಾಗೆ ನೋಡಿ ಅತ್ಯಂತ  ಆತ್ಮೀಯರಾಗಿದ್ದ ಇಬ್ಬರು 2004 ರಿಂದ 2014ರ ವರೆಗೆ ಹಾವು ಮುಂಗುಸಿಯಂತೆ ಕಾದಾಡಿದರು.

ಶಿಗ್ಗಾವಿಯಲ್ಲಿ ಬೊಮ್ಮಾಯಿ ವಿರುದ್ಧ ವಿನಯ್ ಕುಲಕರ್ಣಿ ನಿಲ್ಲಿಸಲು ಸುರ್ಜೇವಾಲಾ ಯತ್ನಿಸುತ್ತಿರೋದೇಕೆ?

ಯಡಿಯೂರಪ್ಪ ಕಣ್ಣೀರಿನ ಕಥೆ 
2009 ನವೆಂಬರ್ ಎರಡನೇ ವಾರ.ರಾತ್ರಿ 12 ಗಂಟೆ ಆಸು ಪಾಸು. ಸುಶ್ಮಾ ಸ್ವರಾಜ್ ನಿವಾಸದಿಂದ ಹೊರಟ ಯಡಿಯೂರಪ್ಪ ಮುಖದಲ್ಲಿ ಬೇಸರ ಕಾಣುತ್ತಿತ್ತು. ಆದರೂ ಅಭ್ಯಾಸ ಸಹಜವಾಗಿ ಯಡಿಯೂರಪ್ಪನವರು ವಿಕ್ಟರಿ ಚಿಹ್ನೆ ತೋರಿಸುತ್ತಾ ಹೋದರು. ಮರು ದಿನ ಬೆಳಿಗ್ಗೆ ಯಡಿಯೂರಪ್ಪನವರು ವೈಶ್ಣೋದೇವಿ ಮಂದಿರಕ್ಕೆ ಲೆಹೆರ್ ಸಿಂಗ್ ಜೊತೆ ಹೋಗುವವರಿದ್ದರು. ಬೆಳಗ್ಗೆ 5.30 ಕ್ಕೆ ನಾನು, ನನ್ನ ಸಹೋದ್ಯೋಗಿ ಜಯ ಪ್ರಕಾಶ ಶೆಟ್ಟಿ ದಿಲ್ಲಿ ಕರ್ನಾಟಕ ಭವನದಲ್ಲಿ ಯಡಿಯೂರಪ್ಪ ಬೈಟ್ ತೆಗೆದುಕೊಳ್ಳೋಣ ಎಂದು ಕಾಯುತ್ತಾ ನಿಂತಿದ್ದೆವು. ಅಚಾನಕ್ಕಾಗಿ ಜಯ ಪ್ರಕಾಶ ಶೆಟ್ಟರಿಗೆ ಮಾತಿಗೆ ಸಿಕ್ಕ ಯಡಿಯೂರಪ್ಪ ನವರು ಗಳ ಗಳನೆ ಕಣ್ಣೀರು ಹಾಕುತ್ತಾ ಶೋಭಾ ಕರಂದ್ಲಾಜೆ ಅವರನ್ನು ಮಂತ್ರಿ ಸ್ಥಾನದಿಂದ ಕೈ ಬಿಡಬೇಕಾಗಿ ಬಂದಿದೆ. ಅಧಿಕಾರಿ ವಿ ಪಿ ಬಳಿಗಾರರನ್ನು ವರ್ಗಾವಣೆ ಮಾಡಿ, ಎಂದು ರಾಜನಾಥ ಸಿಂಗ್ ಹೇಳಿದ್ದಾರೆ, ಎಂದು ದುಃಖ ದಿಂದ ಮಾತನಾಡಿದರು. 30 ನಿಮಿಷದಲ್ಲಿ ಸುವರ್ಣ ನ್ಯೂಸ್ ನ ಲೋಗೋ ಸಮೇತದ ಸುದ್ದಿ ದೇಶದ ಅಷ್ಟೂ ಚಾನೆಲ್‌ನಲ್ಲಿ ಬಿತ್ತರ ಆಯಿತು. ಯಾವುದೋ ಒಬ್ಬ ಪತ್ರಕರ್ತರ ಮೂಲಕ ಕಾಲ್ ಮಾಡಿದ ಅರುಣ್ ಜೇಟ್ಲಿ ಕೇಳಿದ ಮೊದಲ ಪ್ರಶ್ನೆ 'ವೋ ಖುದ್ ರೋಯೇ ಕ್ಯಾ ಆಪ್ ಲೋಗೋನೆ ರುಲಾಯಾ?,' ಎಂದು. ಯಾವಾಗ ಯಡಿಯೂರಪ್ಪ ಅತ್ತರೋ ಕರ್ನಾಟಕದಲ್ಲಿ ಭಾಳ ಅನುಕಂಪ ಯಡಿಯೂರಪ್ಪ ಪರವಾಗಿ ಬಂತು.

ಹಠವಾದಿ ಛಲವಾದಿ 
2011ರಲ್ಲಿ ಲೋಕಾಯುಕ್ತ ಸಂತೋಷ್ ಹೆಗ್ಡೆ ವರದಿ ಬರುವ ಮುಂಚೆಯೇ ಅರುಣ್ ಜೇಟ್ಲಿ ಗಡ್ಕರಿ ಇಲ್ಲಿನ ರಾಜ್ಯ ಮುಖ್ಯ ಕಾರ್ಯದರ್ಶಿಗಳ ಜೊತೆ ಮಾತಾಡಿದಾಗ ಜಿಂದಾಲ್ ಕೇಸ್‌ನಲ್ಲಿ ಸಮಸ್ಯೆ ಆಗುತ್ತದೆ ಎಂಬುದು ದಿಲ್ಲಿ ನಾಯಕರ ಅರಿವಿಗೆ ಬಂದಿತ್ತು. ಹೀಗಾಗಿ ಗಡ್ಕರಿ, ರಾಜನಾಥ್, ಸುಶ್ಮಾ ಸ್ವರಾಜ್ ಮತ್ತು ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ವರದಿಯಲ್ಲಿ ತಪ್ಪು ನಡೆದಿದೆ ಎನ್ನುವ  ಉಲ್ಲೇಖ ಬಂದರೆ, ಅನಂತ ಕುಮಾರ ಅವರನ್ನು ಮುಖ್ಯಮಂತ್ರಿಯಾಗಿ ಕಳುಹಿಸಬೇಕು ಎನ್ನುವ ಮನಸ್ಸಿತ್ತು. ಆದರೆ ಅನಂತರನ್ನು ಕಳುಹಿಸಲು ಅರುಣ್ ಜೇಟ್ಲಿ ಮತ್ತು ವೆಂಕಯ್ಯ ನಾಯಿಡು ಬೆಂಬಲ ಇರಲಿಲ್ಲ. ಸಂತೋಷ್ ಹೆಗ್ಡೆ ಯಾವಾಗ ಸಂಜೆ 4 ಗಂಟೆಗೆ ವರದಿ ಕೊಟ್ಟರೋ, ಯಡಿಯೂರಪ್ಪ ಅವರನ್ನು ರಾತ್ರಿ 12 ಗಂಟೆಗೆ ದಿಲ್ಲಿಗೆ ಕರೆಸಿಕೊಂಡ ನಿತಿನ್ ಗಡ್ಕರಿ ಎದುರು, ಯಾರನ್ನು ಮುಖ್ಯಮಂತ್ರಿ ಮಾಡುತ್ತೀರಿ ಎಂದು ಯಡಿಯೂರಪ್ಪ ಕೇಳಿದಾಗ ನೀವು ಮೊದಲು ರಾಜೀನಾಮೆ ಕೊಡಿ, ಆಮೇಲೆ ನಾವು ನಿರ್ಧಾರ ಮಾಡುತ್ತೇವೆ ಎಂದು ಗಡ್ಕರಿ ಹೇಳಿದ್ದರು. ಆಗಲೇ ಯಡಿಯೂರಪ್ಪ ಅವರಿಗೆ ಇವರು ಅನಂತ ಕುಮಾರ ಅವರನ್ನೇ ಮಾಡುತ್ತಾರೆ ಎನ್ನುವುದು ಪಕ್ಕಾ ಆಗಿದೆ. ಆಯಿತು ನಾಳೆ ಬೆಳಗ್ಗೆ ರಾಜೀನಾಮೆ ಕೊಡುತ್ತೇನೆಂದು, ಹೇಳಿ ದಿಲ್ಲಿ ಕರ್ನಾಟಕ ಭವನಕ್ಕೆ ಬಂದ ಯಡಿಯೂರಪ್ಪ ನವರು ವಿಶೇಷ ವಿಮಾನ ತರಿಸಿ 5 ಗಂಟೆಗೆ ಹುಬ್ಬಳ್ಳಿಗೆ ಹಾರಿದವರು, 36 ಗಂಟೆ ಜಮಖಂಡಿ, ವಿಜಯಪುರ, ಇಂಡಿ ಎಂದು ಓಡಾಡುತ್ತಾ ಗಡ್ಕರಿ ಫೋನ್ ಕೂಡ ಎತ್ತಲು ಹೋಗಲಿಲ್ಲ. ಕೊನೆಗೆ ಅರುಣ್ ಜೇಟ್ಲಿ ಮತ್ತು ರಾಜನಾಥ ಸಿಂಗ್ ಬೆಂಗಳೂರಿಗೆ ಬಂದು ಯಡಿಯೂರಪ್ಪ ಜೊತೆ ಮಾತನಾಡಿದ ಮೇಲೆಯೇ ಶಾಸಕರ ಬಲಾ ಬಲ ನಡೆದು ಯಡಿಯೂರಪ್ಪ ಮತ್ತು ಆರ್‌ಎಸ್‌ಎಸ್ ಕಡೆಯಿಂದ ಸದಾನಂದ ಗೌಡರು ಅಭ್ಯರ್ಥಿಯಾಗಿ ಅನಂತ ಕುಮಾರ ಕಡೆಯಿಂದ ಜಗದೀಶ್ ಶೆಟ್ಟರ್ ಅಭ್ಯರ್ಥಿಯಾಗಿ ಹೆಚ್ಚು ವೋಟು ಪಡೆದು  ಡಿವಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಯಾದ ಮೇಲೆಯೇ ಯಡಿಯೂರಪ್ಪನವರು ರಾಜ ಭವನಕ್ಕೆ ಹೋಗಿ ರಾಜೀನಾಮೆ ಕೊಟ್ಟರು.

ಮೋದಿ ಮತ್ತು ಯಡಿಯೂರಪ್ಪ 
2009ರ ಲೋಕಸಭಾ ಸೋಲಿನ ನಂತರ ದಿಲ್ಲಿಯಲ್ಲಿ ಅಡ್ವಾಣಿ, ಸುಶ್ಮಾ ಸ್ವರಾಜ್, ರಾಜನಾಥ್ ಸಿಂಗ್, ಅನಂತ ಕುಮಾರ್, ಶಿವರಾಜ್ ಸಿಂಗ್ ಚೌಹಾಣ್, ವಸುಂಧರಾ ರಾಜೇ  ಒಂದು ಗುಂಪಾದರೆ, ಅರುಣ್ ಜೇಟ್ಲಿ, ವೆಂಕಯ್ಯ ನರೇಂದ್ರ ಮೋದಿಯದ್ದು ಇನ್ನೊಂದು ಗುಂಪು. ಸಹಜವಾಗಿ ಯಡಿಯೂರಪ್ಪ ಜೇಟ್ಲಿ ಮತ್ತು ಮೋದಿ ಜೊತೆಗಿದ್ದರು. ಯಡಿಯೂರಪ್ಪ ಪಾರ್ಟಿ ಕಟ್ಟಿದ್ದೇ ಅಡ್ವಾಣಿ, ಗಡ್ಕರಿ, ಸುಶ್ಮಾರಿಗೆ 'ನನ್ನ ಶಕ್ತಿ' ಏನು ಎಂದು ತೋರಿಸಲು. 2013ರಲ್ಲಿ ನನ್ನ ಬಿಟ್ಟು, ಅನಂತ ಕುಮಾರ್, ಬಿ ಎಲ್ ಸಂತೋಷ ಮತ್ತು RSS ಎಲ್ಲರೂ ಒಟ್ಟಿಗೆ ಕೆಲಸ ಮಾಡಿದರೂ ಬಿಜೆಪಿ ಶಕ್ತಿ 40 ಮಾತ್ರ ಎಂದು ತೋರಿಸುವಲ್ಲಿ ಯಶಸ್ವಿ ಯಾದರು. ಆದರೆ ಮೋದಿ ಯಡಿಯೂರಪ್ಪನವರ ಜೊತೆ ಸಂಪರ್ಕ ಇಟ್ಟು ಕೊಂಡಿದ್ದರು. ಯಾವಾಗ ಮೋದಿ ಪ್ರಧಾನಿ ಅಭ್ಯರ್ಥಿಯಾದರೋ ಸ್ವತಃ ಯಡಿಯೂರಪ್ಪ ಜೊತೆ ಮಾತನಾಡಿದ್ದ ಅರುಣ್ ಜೇಟ್ಲಿ ವಾಪಸ್ ಬರಲು ಮಾತುಕತೆ ಕೂಡ ನಡೆಸಿದ್ದರು. ಆದರೆ ಸ್ಥಳೀಯ RSSಗೆ ಇನ್ನು ಯಡಿಯೂರಪ್ಪ ನವರ ಬಗ್ಗೆ ಪ್ರಶ್ನೆಗಳಿದ್ದವು. ಗಡ್ಕರಿ ಒಪ್ಪಿರಲಿಲ್ಲ. ಕೊನೆಗೆ ಆಗಿನ ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಅವರನ್ನು ಗುಜರಾತ್ ಗೆ ಕರೆಸಿಕೊಂಡ ಮೋದಿ 'ಆದಷ್ಟು ಬೇಗ ರಾಜ್ಯ ಕೋರ್ ಕಮಿಟಿ ತೀರ್ಮಾನ ಮಾಡಿ ಯಡಿಯೂರಪ್ಪ ಅವರನ್ನು ಸೇರಿಸಿಕೊಳ್ಳಿ. ದಿಲ್ಲಿ ಒಪ್ಪಿಗೆ ಕಾಯುತ್ತಾ ಕೂರಬೇಡಿ. ಯಡಿಯೂರಪ್ಪ ಹೊರಗಿದ್ದರೆ, ಚುನಾವಣೆ ವಾತಾವರಣ ಇರೋಲ್ಲ,' ಎಂದು ಹೇಳಿ ಕಳುಹಿಸಿದ್ದರು. ಮೋದಿ ರಿಗೆ ರಾಜ್ಯ ಬಿಜೆಪಿ ಬಗ್ಗೆ ಅರ್ಥ ಆಗಿರುವ  ಒಂದು ವಿಷಯ ಎಂದರೆ ಯಡಿಯೂರಪ್ಪ ಮತ್ತು ಲಿಂಗಾಯಿತರನ್ನು ಬಿಟ್ಟು ಕರ್ನಾಟಕದಲ್ಲಿ ಬಿಜೆಪಿ ಗೆ ಚುನಾವಣೆ ಮಾಡಲು ಸಾಧ್ಯ ಆಗುವುದಿಲ್ಲ ಎಂದು.

India Gate: ಅಮಿತ್‌ ಶಾಗೆ ರಮೇಶ್‌ ಸಿಡಿ ತೋರಿಸಿದರೋ ಅಥವಾ ಆಡಿಯೋ ಕೇಳಿಸಿದರೋ?

ಇಷ್ಟವಾದ ಕೆಲ ಬಿಎಸವೈ ಗುಣಗಳು 
2007ಕ್ಕೆ ದಿಲ್ಲಿಗೆ ನಾನು ಹೋದಾಗ ನಮಗೆಲ್ಲ ಕರ್ನಾಟಕ ಭವನದಲ್ಲಿ ಊಟ ಉಪಹಾರಕ್ಕೆ ಪ್ರವೇಶ ಇರಲಿಲ್ಲ. ಆ 10 ಸಾವಿರ ಸಂಬಳದಲ್ಲಿ ನಮಗೆಲ್ಲ ಉಪಹಾರಕ್ಕೆ ಊಟಕ್ಕೆ ಒಂದು ಬಾರಿ 150 ರಿಂದ 200 ಕೊಡುವ ಶಕ್ತಿಯೂ ಇರಲಿಲ್ಲ. ನಾವೆಲ್ಲ ಮೂರು ನಾಲ್ಕು ಪತ್ರಕರ್ತರು ಸೇರಿ ಯಡಿಯೂರಪ್ಪ ಬಳಿ ಹೋಗಿ ಸಮಸ್ಯೆ ಹೇಳಿಕೊಂಡೆವು. ಅಲ್ಲಿಯೇ ಇದ್ದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅರವಿಂದ ರಿಸ್‌ಬುಡ್ ಇಲ್ಲ ಇಲ್ಲ ಆಗೋಲ್ಲ ಎಂದು ಬಿಟ್ಟರು. ಕೋಪಗೊಂಡ ಯಡಿಯೂರಪ್ಪ, ನಾನು ಮುಖ್ಯಮಂತ್ರಿ ಲಿಖಿತ ಆದೇಶ ಮಾಡುತ್ತಿದ್ದೇನೆ. ಶಾಸಕ ಮಂತ್ರಿಗಳಿಗೆ ಯಾವ ರೇಟ್ ನಲ್ಲಿ ಊಟ ಉಪಹಾರ ಕೊಡುತ್ತಿರೋ, ದಿಲ್ಲಿಗೆ ಬಂದು ಈ ಬಿಸಿಲು ಚಳಿಯಲ್ಲಿ ಕೆಲಸ ಮಾಡುವ ಕನ್ನಡ ಪತ್ರಕರ್ತರಿಗೂ ಕೊಡಿ ಎಂದು ಜೋರಿನಿಂದಲೇ ಆದೇಶಿಸಿದರು. ರಾಜಕಾರಣಿಗಳ ಇನ್ನೊಂದು ಗುಣ ಎಂದರೆ ತಮ್ಮ ಕೆಲಸ ಇದ್ದಾಗ ಪತ್ರಕರ್ತರನ್ನು ಮಾತನಾಡಿಸುವುದು ಉಳಿದಂತೆ ನಾಟ್ ರೀಚಿಬಲ್. ಆದರೆ ಯಡಿಯೂರಪ್ಪ ನವರು ಹಾಗಲ್ಲ. ಗಡ್ಕರಿ ಕರೆದು ರಾಜೀನಾಮೆ ಕೊಡಿ ಎಂದು ಹೇಳಿದಾಗ ನಖ ಶಿಖಾಂತ ಕೋಪದಲ್ಲಿ ಹೊರಗೆ ಬಂದರು 'ಏನು ಅಣ್ಣಾ ಊಟ ಮಾಡಿದ್ರಾ?' ಎಂದು ಕೇಳುತ್ತಾ ಹೊರಗೆ ಬರುತ್ತಿದ್ದರು.ಪ್ರಶ್ನೆ ಎದುರಿಸುತ್ತಿದರೆ ಹೊರತು ತಪ್ಪಿಸಿಕೊಂಡು ಓಡಿ ಹೋದವರಲ್ಲ. ಎಂದು ಹೀಗೆ ಯಾಕೆ ಬರೆದ್ರಿ ನನ್ನ ವಿರುದ್ಧ ನನ್ನ ಪರ ಎಂದು ವಿಂಗಡಿಸಿ ಮಾತನಾಡುವ ಜಾಯಮಾನ ದವರಲ್ಲ.2020 ಡಿಸೆಂಬರ್ 12 ನನ್ನ ತಂದೆ 630 ಕ್ಕೆ ಸಂಜೆ ತೀರಿಕೊಂಡರು.7 ಗಂಟೆಗೆ ಸ್ವತಃ ಯಡಿಯೂರಪ್ಪ ನವರ ಸಾಂತ್ವನದ ಫೋನು. ನನ್ನ ಪ್ರಕಾರ ಜಾತಿ ದುಡ್ಡು ಪ್ರಚಾರ ಅಧಿಕಾರದಿಂದ ದೊಡ್ಡವರು ಯಾರೂ ಆಗೋಲ್ಲ. ಎಲ್ಲವೂ ಇದ್ದಾಗ ತೋರಿಸುವ ಗುಣಗಳಿಂದ ಸಹಾಯ ಔದಾರ್ಯಗಳಿಂದ  ದೊಡ್ಡವರು ಅನ್ನಿಸಿ ಕೊಳ್ಳುತ್ತಾರೆ.

ತಪ್ಪುಗಳ ನಂತರವೂ 
ಆಡಳಿತ ನಡೆಸುವಾಗ ಕುಟುಂಬದ ಮೇಲೆ ತೋರಿಸಿದ ಮೋಹ ಯಡಿಯೂರಪ್ಪ ನವರ ಮುಖ್ಯ ತಪ್ಪುಗಳಲ್ಲಿ ಒಂದು. ರಾಜನಾಗಿ ಆಡಳಿತ ನಡೆಸುತ್ತಿದ್ದ  ಯಡಿಯೂರಪ್ಪನವರು ಜೈಲಿಗೆ ಹೋಗಿದ್ದು ಅವರ ರಾಜಕೀಯ ಜೀವನದ ಕೆಟ್ಟ ಅಧ್ಯಾಯಗಳಲ್ಲಿ ಒಂದು. ತಮ್ಮ ಅತಿಯಾದ ಔದಾರ್ಯದಿಂದ ಯಡಿಯೂರಪ್ಪ ತಮ್ಮ ಪಾರ್ಟಿಗೆ RSSಗೆ  ಕೆಟ್ಟವರಾಗಿ ಕಾಣಿಸಿಕೊಂಡಿದ್ದು ಹೆಚ್ಚು. ಆದರೆ ಅವು ಯಾವವೂ ಅವರ ಜನಪ್ರಿಯತೆ ಕಡಿಮೆ ಮಾಡಲಿಲ್ಲ ಅನ್ನೋದು ಒಂದು ವಿಚಿತ್ರ. 2021ರ ಘಟನೆ. ನಾನು ಹುಬ್ಬಳ್ಳಿಯಲ್ಲಿ ಮನೆಯಿಂದ ಲೈವ್ ಕೊಡುತ್ತಿದ್ದೆ. ರಾಜೀನಾಮೆ ಕೊಡಲು ಹೋಗುವ ಮುಂಚೆ ಯಡಿಯೂರಪ್ಪನವರು ಅಳುತ್ತಾ ಮಾತನಾಡುತ್ತಿದ್ದರು. ನಾನು ಹಾಗೆ, ಹೀಗೆ ಎಂದೆಲ್ಲ ವಿಶ್ಲೇಷಣೆ ಮಾಡುತ್ತಿದ್ದೆ. ಪಕ್ಕದಲ್ಲಿ ಕುಳಿತಿದ್ದ ನನ್ನ ತಾಯಿ 'ಯಾಕೆ ಹಿಂಗೆ ದಿಲ್ಲಿ ನಾಯಕರು ಅಳಿಸಿ ಮನೆಗೆ ಕಳುಹಿಸುತ್ತಾರೆ? ಮುಂದಿನ ಚುನಾವಣೆವರೆಗೆ ಇದ್ದರೆ ಏನಾಗುತ್ತಿತ್ತು? ಯಡಿಯೂರಪ್ಪ ಇಲ್ಲದೆ ಕರ್ನಾಟಕದಲ್ಲಿ ಬಿಜೆಪಿ ಉಂಟಾ?' ಎಂದೆಲ್ಲ ಬಡಬಡಾಯಿಸುತ್ತಿದ್ದರು. ಕೆಲವೊಮ್ಮೆ ಗುಣಾಕಾರ, ಭಾಗಾಕಾರ, ಲೆಕ್ಕಾಚಾರ ಹಾಕಿ ಎಲ್ಲವನ್ನೂ ನೋಡುವ  ರಾಜಕೀಯ ಪಂಡಿತರಿಗೆ ಅರ್ಥ ಆಗದೆ ಇರುವುದು ಜನ ಸಾಮಾನ್ಯನಿಗೆ ಕೂಡಲೇ ಸರಿ ಯಾವುದು? ತಪ್ಪು ಯಾವುದು? ಎಂದು ಅರ್ಥ ಆಗಿ ಬಿಡುತ್ತದೆ.

India Gate: ಮೋದಿ ಸಂಪುಟದಲ್ಲೂ ಸರ್ಜರಿ ಗೌಜು

Follow Us:
Download App:
  • android
  • ios