ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಲ್ಲಿ ಬ್ರಿಟಿಷ್ ಕಾಲದ ಸಾಹಿತಿ ಜಾನ್ ಗ್ಯಾರೆಟ್ ಪತ್ನಿ ಸೋಫಿಯಾ ಗ್ಯಾರೆಟ್ ಸಮಾಧಿಯನ್ನು ಇಂಗ್ಲೆಂಡಿನಿಂದ ಬಂದ ಅವರ ವಂಶಸ್ಥರು ಪತ್ತೆ ಮಾಡಿದ್ದಾರೆ. ದೇಶ, ಕುಟುಂಬ ಬಿಟ್ಟು ಭಾರತಕ್ಕೆ ಬಂದ ಪೊರ್ವಜರ ಸಮಾಧಿ ನೋಡಿ ಭಾವುಕರಾಗಿದ್ದು, ಅವರಿಗೆ ಗೌರವ ಸಲ್ಲಿಸಿದ್ದಾರೆ.
ಚಿಕ್ಕಬಳ್ಳಾಪುರ (ಸೆ.09): ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಭಾರತದಲ್ಲಿ ಸೇವೆ ಸಲ್ಲಿಸಿ ಇಲ್ಲಿಯೇ ಮರಣ ಹೊಂದಿದ ತಮ್ಮ ಪೂರ್ವಜರ ಸಮಾಧಿಗಳನ್ನು ಹುಡುಕಿಕೊಂಡು ವಿದೇಶಿ ಪ್ರಜೆಗಳು ನಮ್ಮ ದೇಶಕ್ಕೆ ಆಗಮಿಸುತ್ತಿರುವುದು ಈಗ ಸರ್ವೇಸಾಮಾನ್ಯವಾಗಿದೆ. ಇಂತಹದ್ದೇ ಒಂದು ಭಾವುಕ ಘಟನೆ ಇತ್ತೀಚೆಗೆ ನಂದಿ ಗಿರಿಧಾಮದಲ್ಲಿ ನಡೆದಿದ್ದು, ಪ್ರಖ್ಯಾತ ಸಾಹಿತಿ ಜಾನ್ ಗ್ಯಾರೆಟ್ ಅವರ ಪತ್ನಿ ಸೋಫಿಯಾ ಗ್ಯಾರೆಟ್ ಅವರ ಸಮಾಧಿಯನ್ನು ಹುಡುಕಿಕೊಂಡು ಬಂದ ಸಂಬಂಧಿಕರೊಬ್ಬರು ಸಮಾಧಿ ಮುಂದೆ ಕುಳಿತುಕೊಂಡು ಕಣ್ಣೀರು ಹಾಕಿದ್ದಾರೆ.
ಪ್ರಖ್ಯಾತ ಸಾಹಿತಿ ಜಾನ್ ಗ್ಯಾರೆಟ್ ಯಾರು?
ಬ್ರಿಟಿಷ್ ಆಳ್ವಿಕೆಯ ಮೈಸೂರು ರಾಜ್ಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದ ಜಾನ್ ಗ್ಯಾರೆಟ್ ಒಬ್ಬ ಪ್ರಸಿದ್ಧ ಅಧಿಕಾರಿ, ಸಾಹಿತಿ ಮತ್ತು ಮುದ್ರಣಕಾರರಾಗಿದ್ದರು. ಅವರ ಪತ್ನಿ ಸೋಫಿಯಾ ಗ್ಯಾರೆಟ್ ಕೂಡ ನಂದಿಗಿರಿಧಾಮವನ್ನು ತಮ್ಮ ನೆಚ್ಚಿನ ತಾಣವನ್ನಾಗಿ ಮಾಡಿಕೊಂಡಿದ್ದರು. ಅವರ ಸಮಾಧಿಯು ನಂದಿಗಿರಿಧಾಮದ ತಪ್ಪಲಿನಲ್ಲಿರುವ ಸುಲ್ತಾನಪೇಟೆ ಗ್ರಾಮದ ಬಳಿಯ ಬ್ರಿಟಿಷರ ಸ್ಮಶಾನದಲ್ಲಿದೆ.
ಸಮಾಧಿ ಹುಡುಕಾಡಿದ ವೃದ್ಧ:
ಇತ್ತೀಚೆಗೆ ಲಂಡನ್‌ನಿಂದ ಗುಜರಾತ್‌ಗೆ ಬಂದಿದ್ದ ಒಬ್ಬ ವೃದ್ಧ, ಅಲ್ಲಿಂದ ನೇರವಾಗಿ ನಂದಿಗಿರಿಧಾಮಕ್ಕೆ ಆಗಮಿಸಿದ್ದರು. ತಮ್ಮ ಪೂರ್ವಜರ ದಾಖಲೆಗಳಲ್ಲಿ ಸೋಫಿಯಾ ಗ್ಯಾರೆಟ್ ಅವರ ಸಮಾಧಿ ನಂದಿಗಿರಿಧಾಮದಲ್ಲಿದೆ ಎಂದು ತಿಳಿದುಕೊಂಡು, ಕಳೆದ ಕೆಲವು ತಿಂಗಳುಗಳಿಂದ ಸಮಾಧಿಯನ್ನು ಹುಡುಕಾಡುತ್ತಿದ್ದರು. ಎರಡು-ಮೂರು ಬಾರಿ ಬಂದರೂ ಸಮಾಧಿ ಪತ್ತೆಯಾಗಿರಲಿಲ್ಲ. ಆದರೆ 3ನೇ ಬಾರಿಗೆ ಪ್ರವಾಸಿ ಮಿತ್ರ ಗೈಡ್ ನಳಿನಿ ಅವರ ಸಹಾಯದಿಂದ ಸಮಾಧಿಯನ್ನು ಪತ್ತೆ ಹಚ್ಚಿದ್ದಾರೆ.
ಗಂಡ, ಹೆಂಡತಿ ಮಕ್ಕಳು ಸೇರಿ ಕಾಲುವೆಗೆ ಹಾರಿದ ಒಂದೇ ಕುಟುಂಬದ 6 ಜನ; ಇಬ್ಬರು ಸೇಫ್, ನಾಲ್ವರು ಸಾವು
ಸೋಫಿಯಾ ಗ್ಯಾರೆಟ್ ಸಮಾಧಿಯನ್ನು ಕಂಡ ತಕ್ಷಣ ಆ ವೃದ್ಧ ಭಾವುಕರಾಗಿ ತಮ್ಮ ಪೂರ್ವಜರನ್ನು ನೆನೆದು ಕಣ್ಣೀರು ಹಾಕಿದರು ಎಂದು ಗೈಡ್ ನಳಿನಿ ತಿಳಿಸಿದ್ದಾರೆ. ಈ ಘಟನೆಯು ಕೇವಲ ಒಂದು ಐತಿಹಾಸಿಕ ಸಂಪರ್ಕವಲ್ಲದೆ, ಮಾನವೀಯ ಭಾವನೆಗಳಿಗೂ ಸಾಕ್ಷಿಯಾಗಿದೆ. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ವಸಾಹತುಗಳನ್ನು ಸ್ಥಾಪಿಸಿ ಕೆಲವಡೆ ತನ್ನದೇ ಅಧಿಕಾರಶಾಹಿತ್ವವನ್ನು ಹೊಂದಿದ್ದ ಬ್ರಿಟೀಷರನ್ನು ಸೂರ್ಯ ಮುಳುಗದ ನಾಡು ಎಂದು ಕರೆಯಲಾಗುತ್ತಿತ್ತು. ಆಗ ದೇಶಕ್ಕಾಗಿ, ಹಣ, ಅಧಿಕಾರ ಹಾಗೂ ಉದ್ಯೋಗಕ್ಕಾಗಿ ಸ್ವದೇಶ ತೊರೆದು ಭಾರತಕ್ಕೆ ಬಂದವರ ಪೈಕಿ ಸಾವಿರಾರು ಜನರು ಇಲ್ಲಿಯೇ ಸಮಾಧಿ ಆಗಿದ್ದಾರೆ. ಅವರ ಕುಟುಂಬಗಳು ಆಗಿಂದಾಗ್ಗೆ ಪೂರ್ವಜರ ಸಮಾಧಿ ಹುಡುಕಿಕೊಂಡು ಬಂದು ನಮನ ಸಲ್ಲಿಸುವ ಸಂಗತಿಗಳು ಆಗಾಗ್ಗೆ ಕಂಡುಬರುತ್ತವೆ.
ನಿರ್ವಹಣೆ ಇಲ್ಲದೆ ಪಾಳು ಬಿದ್ದಿರುವ ಸಮಾಧಿಗಳು
ನಂದಿಗಿರಿಧಾಮದ ತಪ್ಪಲಿನಲ್ಲಿರುವ ಬ್ರಿಟಿಷರ ಸ್ಮಶಾನಗಳು, ಈಗ ಸರಿಯಾದ ನಿರ್ವಹಣೆಯ ಕೊರತೆಯಿಂದ ಪಾಳು ಬೀಳುವ ಸ್ಥಿತಿಯಲ್ಲಿವೆ. ಐತಿಹಾಸಿಕ ಮಹತ್ವ ಹೊಂದಿರುವ ಈ ಸಮಾಧಿಗಳನ್ನು ಸಂರಕ್ಷಿಸಬೇಕಾದ ಅಗತ್ಯವಿದೆ ಎಂದು ಪ್ರವಾಸಿಗರು ಅಭಿಪ್ರಾಯಪಟ್ಟಿದ್ದಾರೆ. ಈ ರೀತಿ ತಮ್ಮ ಪೂರ್ವಜರನ್ನು ಹುಡುಕಿಕೊಂಡು ಬರುವ ವಂಶಸ್ಥರಿಗೆ ಗೌರವ ಸಲ್ಲಿಸಲು ಇಂತಹ ಸ್ಥಳಗಳ ರಕ್ಷಣೆ ಅತಿ ಮುಖ್ಯವಾಗಿದೆ.
