ವನ್ಯಜೀವಿ-ಮಾನವ ಸಂಘರ್ಷ ಶಾಶ್ವತ ಪರಿಹಾರಕ್ಕೆ ಸರ್ಕಾರದಿಂದ ಹಲವಾರು ಕ್ರಮಕೈಗೊಂಡಿದ್ದು, ಸಂಘರ್ಷ ತಡೆಯಲು ಐದು ವರ್ಷಗಳ ಯೋಜನೆ ತಯಾರಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ವಿಧಾನ ಪರಿಷತ್ (ಡಿ.17): ವನ್ಯಜೀವಿ-ಮಾನವ ಸಂಘರ್ಷ ಶಾಶ್ವತ ಪರಿಹಾರಕ್ಕೆ ಸರ್ಕಾರದಿಂದ ಹಲವಾರು ಕ್ರಮಕೈಗೊಂಡಿದ್ದು, ಸಂಘರ್ಷ ತಡೆಯಲು ಐದು ವರ್ಷಗಳ ಯೋಜನೆ ತಯಾರಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಕಾಂಗ್ರೆಸ್‌ನ ಡಾ.ತಿಮ್ಮಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ವನ್ಯ ಜೀವಿ-ಮಾನವ ಸಂಘರ್ಷ ಪ್ರಕರಣಗಳು ಹೆಚ್ಚು ಕಂಡು ಬರುವ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಳ್ಳಬೇಟೆ ಶಿಬಿರಗಳ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ಸಂಘರ್ಷ ಸಂಭವಿಸುತ್ತಿರುವ ಅರಣ್ಯದ ಅಂಚಿನ ಗಡಿರೇಖೆಗಳಿಗೆ ಸ್ಥಳಾಂತರಿಸಲಾಗುತ್ತಿದೆ.
ಇವರು ಮುಂದಿನ ಮೂರು ತಿಂಗಳವರೆಗೆ ಗಸ್ತು ನಡೆಸಿ ಸಂಘರ್ಷ ತಡೆಗಟ್ಟಲು ಕ್ರಮ ವಹಿಸಲಿದ್ದಾರೆ. ಸಂಘರ್ಷ ಉಂಟಾಗುವ ಸಂದರ್ಭದಲ್ಲಿ ತಕ್ಷಣ ಕ್ರಮ ಕೈಗೊಳ್ಳಲು ಕ್ಷಿಪ್ರ ಸ್ಪಂದನ ವಾಹನ ಹಾಗೂ ಡ್ರೋನ್ ಒಳಗೊಂಡಂತೆ ಇತರ ಉಪಕರಣ ಹೊಂದಿರುವ ಕ್ಷಿಪ್ರ ಸ್ಪಂದನ ತಂಡ ರಚಿಸಲಾಗಿದೆ ಎಂದರು. ಸಂಘರ್ಷ ಕಂಡು ಬರುವ ವನ್ಯಜೀವಿ ವಲಯಗಳ ಸಂಪೂರ್ಣ ಗಡಿ ರೇಖೆಗಳಲ್ಲಿ ನೆಟ್ ವರ್ಕ್ ಸಂಪರ್ಕವಿರುವ ಕಡೆ ಜಿಎಸ್‌ಎಂ ಆಧಾರಿತ ಗರುಡ ಸಾಫ್ಟ್‌ವೇರ್ ಹೊಂದಿರುವ ಕ್ಯಾಮೆರಾ ಅಳವಡಿಸಲಾಗುವುದು.
ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಲಭ್ಯವಿರುವ ಕ್ಯಾಮೆರಾಗಳನ್ನು ಅರಣ್ಯದ ಅಂಚಿನಲ್ಲಿರುವ ಸಂಘರ್ಷ ವಲಯದಲ್ಲಿ ಅಳವಡಿಸಿ ಪ್ರಾಣಿಗಳ ಚಲನವಲಯ ಪರಿಶೀಲಿಸಲಾಗುತ್ತಿದೆ ಎಂದು ವಿವರಿಸಿದರು. ಅನೆಗಳು ಅರಣ್ಯದಿಂದ ಹೊರ ಬಾರದಂತೆ ಭೌತಿಕ ಅಡೆ-ತಡೆಗಳ ನಿರ್ಮಾಣ, ಆನೆ ಕಾರ್ಯಪಡೆಗಳ ಸ್ಥಾಪನೆ, ಚಿರತೆ ಕಾರ್ಯಪಡೆಗಳ ಸ್ಥಾಪನೆ, ವನ್ಯಜೀವಿಗಳಿಗೆ ನೀರಿನ ಲಭ್ಯತೆ ಹೆಚ್ಚಿಸಲು ಜಲಸಂಪನ್ಮೂಲ ಅಭಿವೃದ್ಧಿ, ಆವಾಸ ಸ್ಥಾನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದ ಸಚಿವ ಈಶ್ವರ್ ಖಂಡ್ರೆ, ಸಂಘರ್ಷ ತಡೆಗೆ 5 ವರ್ಷಗಳ ಸ್ಟ್ರಾಟೆಜಿಕ್ ಪ್ಲ್ಯಾನ್ ತಯಾರಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಹೇಳಿದರು.
ಬೀದರ್ ವಿಮಾನಯಾನ ಸೇವೆಗೆ ₹35 ಕೋಟಿ ವೆಚ್ಚ
ಬೀದರ್ ನಗರಕ್ಕೆ ಉಡಾನ್ ಯೋಜನೆಯಡಿ ಕಲ್ಪಿಸಲಾಗಿದ್ದ ನಾಗರಿಕ ವಿಮಾನಯಾನ ಸೇವೆ ಒಂದೂವರೆ ವರ್ಷದಿಂದ ಸ್ಥಗಿತವಾಗಿದ್ದ ಕಾರಣ, ಜನರ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 15 ಕೋಟಿ ರು. ನೀಡಿ ಮರು ಆರಂಭ ಮಾಡಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದರು. ವಿಧಾನಪರಿಷತ್ತಿನಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಅವರು, ಬೇರೆ ಕಡೆಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ 400 ಕೋಟಿ, 1000 ಕೋಟಿ ರು. ವೆಚ್ಚ ಮಾಡಲಾಗಿದೆ. 1960ರ ದಶಕದಿಂದಲೂ ಬೀದರಿನಲ್ಲಿ ವಿಮಾನ ನಿಲ್ದಾಣವಿದ್ದು, ಕೇವಲ 20 ಕೋಟಿ ರು. ವೆಚ್ಚದಲ್ಲಿ ಟರ್ಮಿನಲ್ ಸಿದ್ಧಪಡಿಸಿ ವಿಮಾನಯಾನ ನಡೆಯುತ್ತಿತ್ತು, ಆದರೆ ಉಡಾನ್ ಯೋಜನೆ 3 ವರ್ಷ ಆದ ಬಳಿಕ ಸ್ಥಗಿತಗೊಂಡಿತ್ತು ಎಂದು ತಿಳಿಸಿದರು. ಬೀದರ್ ನಾಗರಿಕ ವಿಮಾನ ಯಾನ ಸೇವೆಗಾಗಿ ಟರ್ಮಿನಲ್ ಮತ್ತು ಅನುದಾನ ಸೇರಿ ಒಟ್ಟು ವೆಚ್ಚ ಮಾಡಿರುವುದು 35 ಕೋಟಿ ರು. ಮಾತ್ರ ಎಂದು ಸಚಿವ ಈಶ್ವರ ಖಂಡ್ರೆ ಸದನಕ್ಕೆ ಸ್ಪಷ್ಟನೆ ನೀಡಿದರು.

