ಬೀದರ್‌ನಲ್ಲಿ ಸಾಲಬಾಧೆ ಹಾಗೂ ಆಸ್ತಿ ವಿವಾದದಿಂದ ಮನನೊಂದು ಒಂದೇ ಕುಟುಂಬದ ನಾಲ್ವರು ಕಾಲುವೆಗೆ ಹಾರಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ತಂದೆ ಮತ್ತು ಮೂರು ಮಕ್ಕಳು ಮೃತಪಟ್ಟರೆ, ತಾಯಿ ಮತ್ತು ಒಂದು ಮಗುವನ್ನು ರಕ್ಷಿಸಲಾಗಿದೆ. ಘಟನೆ ಭಾಲ್ಕಿ ತಾಲೂಕಿನ ಮರೂರಿನಲ್ಲಿ ನಡೆದಿದೆ.
ಬೀದರ್ (ಸೆ.09): ಸಾಲಬಾಧೆ ಮತ್ತು ಆಸ್ತಿ ವಿವಾದದಿಂದ ಮನನೊಂದು ಬೀದರ್‌ನಲ್ಲಿ ಒಂದೇ ಕುಟುಂಬದ ನಾಲ್ವರು ಕಾರಂಜಾ ಎಡದಂಡೆ ಕ್ಯಾನಲ್‌ಗೆ ಹಾರಿ ಆತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ವರದಿಯಾಗಿದೆ. ಈ ಘಟನೆಯಲ್ಲಿ ತಂದೆ ಮತ್ತು ಮೂವರು ಮಕ್ಕಳು ಮೃತಪಟ್ಟಿದ್ದು, ತಾಯಿ ಮತ್ತು ಇನ್ನೊಬ್ಬ ಮಗುವನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಘಟನೆ ವಿವರ:
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮರೂರು ಗ್ರಾಮದ ನಾಲೆಯಲ್ಲಿ ಈ ದುರ್ಘಟನೆ ನಡೆದಿದೆ. ಬೀದರ್ ನಗರದ ಮೈಲೂರಿನಲ್ಲಿ ವಾಸವಾಗಿದ್ದ ಶಿವಮೂರ್ತಿ ಮಾರುತಿ (45), ತಮ್ಮ ಪತ್ನಿ ರಮಾಬಾಯಿ (42) ಮತ್ತು ನಾಲ್ಕು ಮಕ್ಕಳೊಂದಿಗೆ ಕ್ಯಾನಲ್‌ಗೆ ಹಾರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದುರಂತದಲ್ಲಿ ಶಿವಮೂರ್ತಿ, ಹಾಗೂ ಅವರ ಮೂವರು ಮಕ್ಕಳಾದ ರಿತೀಕ್ (4), ಶ್ರೀಕಾಂತ್ (8) ಮತ್ತು ರಾಕೇಶ್ (7 ತಿಂಗಳು) ಮೃತಪಟ್ಟಿದ್ದಾರೆ.
ಸ್ಥಳೀಯರಿಂದ ರಕ್ಷಣೆ:
ಕ್ಯಾನಲ್‌ಗೆ ಹಾರಿದ ತಕ್ಷಣ ಸ್ಥಳದಲ್ಲಿದ್ದ ಗ್ರಾಮಸ್ಥರು ತಾಯಿ ರಮಾಬಾಯಿ ಮತ್ತು ಒಂದು ಮಗುವಾದ ಶ್ರೀಕಾಂತ್ (7 ವರ್ಷ) ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಉಳಿದ ನಾಲ್ವರನ್ನು ರಕ್ಷಿಸಲು ಸಾಧ್ಯವಾಗಿಲ್ಲ. ತಂದೆ ಶಿವಮೂರ್ತಿ ಮತ್ತು ಮೂವರು ಮಕ್ಕಳ ಮೃತದೇಹಗಳನ್ನು ಭಾಲ್ಕಿ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಇದನ್ನೂ ಓದಿ: ಎಸಿ ಸ್ಫೋಟಗೊಂಡ ಒಂದೇ ಕುಟುಂಬದ ಮೂವರು ಸಾವು, ಐಸಿಯುವಿನಲ್ಲಿ ಮಗನಿಗೆ ಚಿಕಿತ್ಸೆ
ಸಾಲಬಾಧೆ ಮತ್ತು ಆಸ್ತಿ ವಿವಾದ ಶಂಕೆ:
ಪ್ರಾಥಮಿಕ ತನಿಖೆ ಪ್ರಕಾರ, ಕುಟುಂಬದ ಆತ್ಮಹ*ತ್ಯೆಗೆ ಸಾಲದ ಹೊರೆ ಮತ್ತು ಆಸ್ತಿ ವಿವಾದವೇ ಕಾರಣ ಎನ್ನಲಾಗುತ್ತಿದೆ. ಮೃತ ಶಿವಮೂರ್ತಿ ಅವರ ಸಹೋದರ ಆಸ್ತಿಯ ಪಾಲು ನೀಡದೆ ಸತಾಯಿಸುತ್ತಿದ್ದ ಕಾರಣ ಮನನೊಂದು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ.
ಘಟನಾ ಸ್ಥಳಕ್ಕೆ ಧನ್ನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ. ಜೊತೆಗೆ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರೊಂದಿಗೆ ಮಾತುಕತೆ ನಡೆಸಿ ಸಾಂತ್ವನ ಹೇಳಿದ್ದಾರೆ. ಈ ಘಟನೆ ಇಡೀ ಜಿಲ್ಲೆಯಲ್ಲಿ ಆಘಾತ ಮತ್ತು ದುಃಖದ ವಾತಾವರಣ ಸೃಷ್ಟಿಸಿದೆ.
