ಕಾಮಗಾರಿ ತಡೆಗೆ ಭಕ್ತರಿಂದ ಅಸಮಾಧಾನ ವ್ಯಕ್ತವಾಗುತ್ತಿದ್ದು ಸರ್ಕಾರ ಯಾವುದೇ ಕಾಮಗಾರಿಗಳಿಗೆ ತಡೆ ನೀಡಿದರೂ ಮಠ ಮಾನ್ಯಗಳ ಅನುದಾನಕ್ಕೆ ತಡೆ ನೀಡಬಾರದು. ಈಗಾಗಲೇ ಸಿದ್ಧಗಂಗಾ ಮಠದ ವಿದ್ಯಾರ್ಥಿ ನಿಲಯ ಟೆಂಡರ್‌ ಪ್ರಕ್ರಿಯೆಗೆ ನೀಡಿದ್ದ ತಡೆ ಹಿಂಪಡೆಯಲು ಮುಖ್ಯಮಂತ್ರಿ ಅವರು ಲೋಕೋಪಯೋಗಿ ಇಲಾಖೆಗೆ ಸೂಚಿಸಿರುವುದು ಸ್ವಾಗತಾರ್ಹ. 

ಬೆಂಗಳೂರು(ಜೂ.02):  ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭವಾಗದ ಕಾಮಗಾರಿಗಳನ್ನು ಮರು ಪರಿಶೀಲಿಸುವ ಸಲುವಾಗಿ ತಾತ್ಕಾಲಿಕವಾಗಿ ತಡೆ ನೀಡಿದೆ. ಇದರಿಂದ ಪ್ರಮುಖ ಮಠ ಮಾನ್ಯಗಳ ಕಾಮಗಾರಿಗಳಿಗೂ ತಡೆ ಬಿದ್ದಿರುವುದು ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ, ಕಾಮಗಾರಿಗಳ ಪುನರ್‌ ಪರಿಶೀಲನಾ ಕಾರ್ಯ ಮುಗಿದ ಕೂಡಲೇ ಮಠಗಳ ಕಾಮಗಾರಿಗಳ ಅನುದಾನ ಬಿಡುಗಡೆಯಾಗಲಿದೆ ಎನ್ನುತ್ತಿವೆ ಸರ್ಕಾರದ ಮೂಲಗಳು.

ತಿಪಟೂರಿನ ರುದ್ರಮೂರ್ತಿ ಮಠದ 4.5 ಕೋಟಿ ರು. ವೆಚ್ಚದ ಕಟ್ಟಡ ನಿರ್ಮಾಣ ಕಾಮಗಾರಿ, ಕೊಪ್ಪಳದ ಗವಿ ಸಿದ್ದೇಶ್ವರ ಸ್ವಾಮಿ ಮಠ, ತೆಲಂಗಾಣದ ಶ್ರೀ ಶೈಲ ಮಠಗಳ ತಲಾ 5 ಕೋಟಿ ರು. ವೆಚ್ಚದ ಕಾಮಗಾರಿಗಳು, ಕೊರಟಗೆರೆ ತಾಲ್ಲೂಕು ಸಿದ್ದರಬೆಟ್ಟದ 2.5 ಕೋಟಿ ರು. ವೆಚ್ಚದ ಕಾಮಗಾರಿ, ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನ ರಂಭಾಪುರಿ ಮಠದ 10 ಕೋಟಿ ರು. ವೆಚ್ಚದ ಕಾಮಗಾರಿ, ಬೆಂಗಳೂರು ಗ್ರಾಮಾಂತರದ ದೊಡ್ಡ ಹುಣಸೇಕಲ್‌ ಮಠದ 1 ಕೋಟಿ ರು. ಅನುದಾನದ ಕಾಮಗಾರಿ, ಕುಣಿಗಲ್‌ನ ಅಂಕನಹಳ್ಳಿ ಮಠದ 5 ಕೋಟಿ ರು.ವೆಚ್ಚದ ಕಾಮಗಾರಿ, ಕಾಶಿ ಪೀಠದ 1.5 ಕೋಟಿ ರು. ವೆಚ್ಚದ ವಿದ್ಯಾರ್ಥಿ ನಿಲಯ (ಬೆಂಗಳೂರಿನಲ್ಲಿ) ನಿರ್ಮಾಣ ಕಾಮಗಾರಿಗಳಿಗೆ ತಡೆ ಬಿದ್ದಿದೆ ಎನ್ನಲಾಗುತ್ತಿದೆ.

ಕಾಂಗ್ರೆಸ್‌ ಗ್ಯಾರಂಟಿ: ಯುವಕರಿಗೆ ಉದ್ಯೋಗ ನೀಡಿ, ಸಿದ್ದು ಸರ್ಕಾರಕ್ಕೆ ಸಿರಿಗೆರೆ ಶ್ರೀಗಳ ಸಲಹೆ

ಕಾಮಗಾರಿ ತಡೆಗೆ ಭಕ್ತರಿಂದ ಅಸಮಾಧಾನ ವ್ಯಕ್ತವಾಗುತ್ತಿದ್ದು ಸರ್ಕಾರ ಯಾವುದೇ ಕಾಮಗಾರಿಗಳಿಗೆ ತಡೆ ನೀಡಿದರೂ ಮಠ ಮಾನ್ಯಗಳ ಅನುದಾನಕ್ಕೆ ತಡೆ ನೀಡಬಾರದು. ಈಗಾಗಲೇ ಸಿದ್ಧಗಂಗಾ ಮಠದ ವಿದ್ಯಾರ್ಥಿ ನಿಲಯ ಟೆಂಡರ್‌ ಪ್ರಕ್ರಿಯೆಗೆ ನೀಡಿದ್ದ ತಡೆ ಹಿಂಪಡೆಯಲು ಮುಖ್ಯಮಂತ್ರಿ ಅವರು ಲೋಕೋಪಯೋಗಿ ಇಲಾಖೆಗೆ ಸೂಚಿಸಿರುವುದು ಸ್ವಾಗತಾರ್ಹ. ಅದೇ ರೀತಿ ಉಳಿದ ಮಠಗಳ ಕಾಮಗಾರಿಗಳ ತಡೆಯನ್ನು ತೆರವು ಮಾಡಬೇಕು ಎಂದು ಆಗ್ರಹಿಸಿದ್ದಾರೆ.