Asianet Suvarna News Asianet Suvarna News

ಬ್ರಾಹ್ಮಣ ಮಹಾಸಭಾ : ವಂಚಕರಿಗೆ ರಕ್ಷಣೆ ನೀಡುವವರನ್ನು ದೂರವಿರಿಸಿ

  • ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕರ್ನಾಟಕ ರಾಜ್ಯದ 44 ಲಕ್ಷಕ್ಕೂ ಹೆಚ್ಚಿನ ಬ್ರಾಹ್ಮಣರ ಪ್ರಾತಿನಿಧಿಕ ಸಂಸ್ಥೆ
  • ಶ್ರೀ ಗುರುರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕಿಗೆ ವಂಚಿಸಿದವರಿಗೆ ರಕ್ಷಣೆ ನೀಡುತ್ತಿರುವವರನ್ನು ಈ ಸಂಸ್ಥೆಯಿಂದ ದೂರ ಇರಿಸುವ ಅಗತ್ಯ ಇದೆ
  • ಸಮಗ್ರ ಕರ್ನಾಟಕವನ್ನು ಪ್ರತಿನಿಧಿಸುವಂತಹ ಸಂಸ್ಥೆಯಾಗಿ ಹೊರಹೊಮ್ಮಲು ಅತ್ಯುತ್ತಮ ಅಧ್ಯಕ್ಷರ ಆಯ್ಕೆಯ ಅಗತ್ಯವಿದೆ
Brahmin Mahasabha Election  Keep away from who protects fraud People says N Kumar snr
Author
Bengaluru, First Published Nov 9, 2021, 1:49 PM IST

ಬೆಂಗಳೂರು (ನ.09): ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (Karnataka Brahmana Mahasabha) ಕರ್ನಾಟಕ ರಾಜ್ಯದ 44 ಲಕ್ಷಕ್ಕೂ ಹೆಚ್ಚಿನ ಬ್ರಾಹ್ಮಣರ ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಶ್ರೀ ಗುರುರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕಿಗೆ (Sri Guru Raghavendra Co operative bank ) ವಂಚಿಸಿದವರಿಗೆ ರಕ್ಷಣೆ ನೀಡುತ್ತಿರುವವರನ್ನು ಈ ಸಂಸ್ಥೆಯಿಂದ ದೂರ ಇರಿಸುವ ಅಗತ್ಯ ಇದೆ ಎಂದು ನಿವೃತ್ತ ನ್ಯಾಯಮೂರ್ತಿ ಎನ್‌.ಕುಮಾರ್ (N Kumar) ಹೇಳಿದರು.

ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಎಸ್‌.ರಘುನಾಥ್‌ (S Raghunath) ಅವರ ಕತ್ರಿಗುಪ್ಪೆ ಅಶೋಕ ನಗರದಲ್ಲಿರುವ ಚುನಾವಣಾ (Election) ಕಚೇರಿಯಲ್ಲಿ ಗಣೇಶ ಪೂಜೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಗ್ರ ಕರ್ನಾಟಕವನ್ನು (Karnataka) ಪ್ರತಿನಿಧಿಸುವಂತಹ ಸಂಸ್ಥೆಯಾಗಿ ಹೊರಹೊಮ್ಮಲು ಅತ್ಯುತ್ತಮ ಅಧ್ಯಕ್ಷರ ಆಯ್ಕೆಯ ಅಗತ್ಯವಿದೆ. ರಘುನಾಥ್‌ ಅವರು ಆಯ್ಕೆಯಾದರೆ ಸಂಸ್ಥೆ ಸಮರ್ಥವಾಗಿ ಮುನ್ನಡೆದು, ಬ್ರಾಹ್ಮಣ ಸಮುದಾಯಕ್ಕೂ ಉಪಯೋಗವಾಗುವ ವಿಶ್ವಾಸ ಇದೆ ಎಂದರು.

ಶ್ರೀ ಗುರುರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕಿಗೆ ವಂಚಿಸಿದವರಿಗೆ ರಕ್ಷಣೆ ನೀಡುತ್ತಿರುವವರಿಗೆ ಅಧಿಕಾರ ನೀಡಿದರೆ ಬ್ರಾಹ್ಮಣರಿಗೆ ಮತ್ತಷ್ಟು ಅನ್ಯಾಯ ಆಗುವ ಸಾಧ್ಯತೆ ಇದೆ. ಈ ಬ್ಯಾಂಕಿನಲ್ಲಿ ಹಣವಿಟ್ಟು ಕಳೆದುಕೊಂಡ 93 ಮಂದಿ ಈಗಾಗಲೇ ಜೀವ ಕಳೆದುಕೊಂಡಿದ್ದಾರೆ. ಇದುವರೆಗೆ ಮಹಾಸಭಾ ವಂಚಕರ ವಿರುದ್ಧ  ಒಂದು ಮಾತನ್ನೂ ಆಡಿಲ್ಲ’ ಎಂದು ಅವರು ದೂರಿದರು.

‘ಪ್ರಸ್ತುತ ಸ್ಪರ್ಧೆಗೆ ಅಪೇಕ್ಷೆ ಪಟ್ಟ ಕೆಲವರನ್ನು ನೋಡಿದರೆ ಹಣ ಕಳೆದುಕೊಂಡವರ ಪರವಾಗಿ ಇರಬೇಕಾದ ವ್ಯಕ್ತಿಗಳು ಹಣ ದೋಚಿದವರ ಪರವಾಗಿ ಇರುವುದು ಕಂಡುಬರುತ್ತಿದೆ. ಇದು ನಾಚಿಕೆಗೇಡಿನ ಸಂಗತಿ’ ಎಂದು ಅಸಮಾಧಾನ ಹೊರಹಾಕಿದರು.

‘ಈ ಬ್ಯಾಂಕಿಗೆ ಒಂದಲ್ಲಾ ಒಂದು ರೀತಿಯಲ್ಲಿ ಸಂಬಂಧ ಇರುವವರು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸ್ಥಾನದ (President Post) ಅಭ್ಯರ್ಥಿಯಾಗುತ್ತಿರುವುದು ಶೋಚನೀಯ. ನಿಜಕ್ಕೂ ಬ್ರಾಹ್ಮಣ ಸಮಾಜ ಎತ್ತ ಸಾಗುತ್ತಿದೆ ಎನ್ನುವ ಅನುಮಾನ ಕಾಡುತ್ತಿದೆ. ರಾಜ್ಯದ ವಿವಿಧ ಕ್ಷೇತ್ರಗಳಲ್ಲಿರುವ ಬ್ರಾಹ್ಮಣರ ಸಲಹಾ ಸಮಿತಿಯನ್ನು ರಚಿಸಿ, ಆ ಮೂಲಕ ಸಮಗ್ರ ಅಭಿವೃದ್ಧಿಗೆ ಮುಂದಾಗುವಂತಹ ಅಲ್ಲದೆ ರಾಜಕೀಯ (Politics) ಶಕ್ತಿಯನ್ನು ಪ್ರಬಲಗೊಳಿಸುವ ಅಧ್ಯಕ್ಷರ ಆಯ್ಕೆಯ ಅಗತ್ಯವಿದೆ.  ಪೂರ್ಣ ಸಮಯ ನೀಡುವ, ಮಹಾಸಭಾದಿಂದ ಯಾವುದೇ ಅಪೇಕ್ಷೆಪಡದ ಅಭ್ಯರ್ಥಿ ಬೇಕಾಗಿದೆ. ಎಸ್‌.ರಘುನಾಥ್ ಅವರು ಈ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಬಲ್ಲರು ಎಂಬ ವಿಶ್ವಾಸ ಇದೆ’ ಎಂದು ನ್ಯಾಯಮೂರ್ತಿ ಕುಮಾರ್‌ ಹೇಳಿದರು.‌

ಕರ್ನಾಟಕ (Karnataka) ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹೆಚ್.ಎಸ್. ಸಚ್ಚಿದಾನಂದಮೂರ್ತಿ ಮಾತನಾಡಿ, ಕೋವಿಡ್‌ನ (Covid) ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಮಂಡಳಿಯಿಂದ ಮಾಡಿರುವ ಸಹಾಯ ಮತ್ತು ನೆರವಿನ ಬಗ್ಗೆ ಹಾಗೂ ಸಾಂದೀಪಿನಿ ಶಿಕ್ಷಣ (Education) ವೇತನ ಸೇರಿದಂತೆ ಹತ್ತಾರು ಯೋಜನೆಗಳ ಜಾರಿಗೊಳಿಸಿರುವುದನ್ನು ವಿವರಿಸಿದರು. ಈ ಯಾವುದೇ ಕಾರ್ಯಗಳಿಗೆ ಮಹಾಸಭಾ ಸಹಕರಿಸಿಲ್ಲ. ಕೇವಲ ದೋಷಾರೋಪ ಮಾಡುವುದರಲ್ಲಿಯೇ ಸಮಯ ಹಾಳು ಮಾಡಿದೆ. ಇಂತಹವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಸ್.ರಘುನಾಥ್ ಮಾತನಾಡಿ, ಮಹಾಸಭಾಕ್ಕೆ ಬದಲಾವಣೆಯ ಅಗತ್ಯವಿದೆ. ಎಲ್ಲರ ಸಹಕಾರದಿಂದ ಬದಲಾವಣೆ ತಂದು ಅತ್ಯುತ್ತಮ ಆಡಳಿತ ನೀಡುವುದರೊಂದಿಗೆ ಇಡೀ ರಾಜ್ಯದಾದ್ಯಂತ ಬ್ರಾಹ್ಮಣರ ಸಂಘಟನೆ ಮತ್ತು ಅಭ್ಯುದಯಕ್ಕೆ ಶ್ರಮಿಸುವುದಾಗಿ ಭರವಸೆ ನೀಡಿದರು.

ದಾಸಸಾಹಿತ್ಯದ ಅರಳುಮಲ್ಲಿಗೆ ಪಾರ್ಥಸಾರಥಿ, ಖ್ಯಾತ ಗಾಯಕ ಶಶಿಧರ ಕೋಟೆ, ಸಿರಿನಾಡು ಮಹಾಸಭಾದ ಸುದರ್ಶನ್, ಮಹಾಸಭಾದ ಉಪಾಧ್ಯಕ್ಷ ಶಂಕರನಾರಾಯಣ, ವೈ.ಎನ್.ಶರ್ಮಾ, ವತ್ಸಲಾ ನಾಗೇಶ್ ಇತರರು ಇದ್ದರು.

Follow Us:
Download App:
  • android
  • ios