* ಬೇಲೂರು, ಯಡಿಯೂರು, ಸಾಗರದಲ್ಲಿ ಮನವಿ ಸಲ್ಲಿಕೆ* ಮೂಡಿಗೆರೆ ಬಳಿ ಹಿಂದೂಪರ ಸಂಘಟನೆಗಳಿಂದ ಬ್ಯಾನರ್* ಮಂಗಳಾದೇವಿ- ಬಪ್ಪನಾಡು ಜಾತ್ರೆಗಳಿಗೆ ಆಗಮಿಸಿದ ಮುಸ್ಲಿಂ ವ್ಯಾಪಾರಿಗಳು
ಬೆಂಗಳೂರು(ಮಾ.25): ದೇವಸ್ಥಾನದ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ(Muslim Traders) ವ್ಯಾಪಾರ ವಹಿವಾಟಿಗೆ ಅವಕಾಶ ನಿರಾಕರಿಸುತ್ತಿರುವ ಮತ್ತಷ್ಟು ಪ್ರಸಂಗಗಳು ವರದಿಯಾಗಿವೆ. ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಕಾಣಿಸಿಕೊಂಡಿದ್ದ ಈ ಬೆಳವಣಿಗೆ ರಾಜಧಾನಿ ಬೆಂಗಳೂರು(Bengaluru) ಬಳಿಕ ಇದೀಗ ಬಯಲುಸೀಮೆ ಜಿಲ್ಲೆಗಳಾದ ಹಾಸನ, ತುಮಕೂರುಗಳಲ್ಲೂ ಕಂಡುಬಂದಿದೆ.
ಹಾಸನದ ಪ್ರಸಿದ್ಧ ಬೇಲೂರು ಚೆನ್ನಕೇಶವ ದೇವಾಲಯ, ತುಮಕೂರು ಜಿಲ್ಲೆಯ ಯಡಿಯೂರು ಸಿದ್ಧಲಿಂಗೇಶ್ವರ ದೇವಾಲಯ, ಶಿವಮೊಗ್ಗ ಜಿಲ್ಲೆಯ ಸಾಗರದ ಮಹಾಗಣಪತಿ, ದೇವಸ್ಥಾನದ(Temples) ಜಾತ್ರೆಗಳಲ್ಲಿ(Fair) ವ್ಯಾಪಾರ ಮಳಿಗೆಗಳನ್ನು ಹಿಂದೂ(Hindu) ಸಮಾಜದ ವ್ಯಾಪಾರಿಗಳಿಗೆ ಮಾತ್ರ ನೀಡುವಂತೆ ಒತ್ತಾಯಿಸಲಾಗಿದ್ದರೆ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಬಳಿಯ ಆದಿ ಸುಬ್ರಹ್ಮಣ್ಯ ದೇವಸ್ಥಾನದ ಜಾತ್ರೆಯಲ್ಲಿ ಹಿಂದೂಯೇತರರಿಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡುವುದಿಲ್ಲ ಎಂಬ ಒಕ್ಕಣೆಯಿರುವ ಬ್ಯಾನರ್ ಅಳವಡಿಸಲಾಗಿದೆ.
ಜಾತ್ರೆ, ದೇವಸ್ಥಾನಗಳಿಗೆ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ನೀಡದಂತೆ ಫ್ಲೆಕ್ಸ್!
ಹಿಜಾಬ್ ತೀರ್ಪಿಗೆ(Hijab Verdict) ವಿರುದ್ಧವಾಗಿ ಕೆಲ ಮುಸ್ಲಿಂ ಸಂಘಟನೆಗಳು ಬಂದ್ ಮಾಡಿದ ಬಳಿಕ ನಡೆದ ಬೆಳವಣಿಗೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮಹಾಲಿಂಗೇಶ್ವರ, ಮಂಗಳೂರಿನ ಮಂಗಳಾದೇವಿ, ಮೂಲ್ಕಿಯ ಬಪ್ಪನಾಡು, ಉಡುಪಿ ಜಿಲ್ಲೆಯ ಕಾಪು ಮಾರಿಗುಡಿ, ಶಿವಮೊಗ್ಗದ ಕೋಟೆ ಮಾರಿಕಾಂಬಾ ದೇವಸ್ಥಾನದ ಜಾತ್ರೆಗಳಲ್ಲಿ ಹಿಂದೂಯೇತರರಿಗೆ ವ್ಯಾಪಾರ ವಹಿವಾಟು ನಡೆಸಲು ಹಿಂದೂಪರ ಸಂಘಟನೆಗಳು ಬಹಿಷ್ಕಾರ ಹೇರಿದ್ದವು. ಜೊತೆಗೆ ಈ ಬಗ್ಗೆ ಬಹಿರಂಗ ಬ್ಯಾನರ್‌ಗಳನ್ನೂ ಅಳವಡಿಸಲಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಸಮೀಪದ ಅಡ್ಡಗದ್ದೆ, ಕಿಗ್ಗಾ ಜಾತ್ರೆಗಳಲ್ಲೂ ಅವಕಾಶ ನಿರಾಕರಿಸಿ ಮನವಿ ಸಲ್ಲಿಕೆಯಾಗಿದ್ದರೆ, ಬೆಂಗಳೂರಿನ ಉಪ್ಪಾರಪೇಟೆಯಲ್ಲಿ ಪ್ರತಿಭಟನೆಯೂ ನಡೆದಿತ್ತು. ದೇವಸ್ಥಾನಗಳ ಆಸುಪಾಸಿನಲ್ಲಿ ಹಿಂದೂಯೇತರರಿಗೆ ವ್ಯಾಪಾರ ನಡೆಸಲು ಮುಜರಾಯಿ ಇಲಾಖೆ ಕಾನೂನಿನಲ್ಲೇ ಅವಕಾಶವಿಲ್ಲ ಎಂಬುದು ಹಿಂದೂಪರ ಸಂಘಟನೆಗಳ(Hindu Organizations) ಮುಖಂಡರು ಇದಕ್ಕೆ ನೀಡುತ್ತಿರುವ ಕಾರಣವಾಗಿದೆ.
ಇದು ವಿವಾದವಾಗುತ್ತಿದ್ದಂತೆ ಮುಸ್ಲಿಮೇತರಿಗೆ ವ್ಯಾಪಾರ ವಹಿವಾಟು ನಡೆಸಲು ಯಾವುದೇ ರೀತಿಯ ನಿರ್ಬಂಧ ಇಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗಿರುವ ಬ್ಯಾನರ್‌ಗಳನ್ನು ದೇವಸ್ಥಾನದ ವತಿಯಿಂದ ಹಾಕಲಾಗಿಲ್ಲ ಎಂದು ಮಂಗಳಾದೇವಿ ಮತ್ತು ಬಪ್ಪನಾಡು ದೇವಸ್ಥಾನಗಳ ಆಡಳಿತ ಮಂಡಳಿಗಳು ಸ್ಪಷ್ಟಪಡಿಸಿದ್ದರು. ಆದರೂ ಈ ಎರಡೂ ದೇವಸ್ಥಾನಗಳ ಜಾತ್ರೆಗಳಿಗೆ ಮುಸ್ಲಿಂ ವ್ಯಾಪಾರಿಗಳು ಆಗಮಿಸಿಲ್ಲ.
ಮತ್ತೆ 4 ಕಡೆ ವಿರೋಧ:
ಗುರುವಾರ ಮತ್ತೆ ಮೂರು ಕಡೆಗಳಲ್ಲಿ ಹಿಂದೂಯೇತರಿಗೆ ಅವಕಾಶ ಕಲ್ಪಿಸಬಾರದೆಂದು ಹಿಂದೂಪರ ಸಂಘಟನೆಗಳು ಮನವಿ ಸಲ್ಲಿಸಿವೆ. ಏಪ್ರಿಲ್ 13 ಮತ್ತು 14ರಂದು ನಡೆಯಲಿರುವ ವಿಶ್ವಪ್ರಸಿದ್ಧ ಬೇಲೂರು ಚನ್ನಕೇಶವ ದೇವಸ್ಥಾನದ ರಥೋತ್ಸವದಲ್ಲಿ ಹಿಂದೂಯೇತರರು ವ್ಯಾಪಾರ ನಡೆಸುವುದನ್ನು ನಿರ್ಬಂಧಿಸುವಂತೆ ವಿಶ್ವ ಹಿಂದೂ ಪರಿಷತ್‌ನ(Vishwa Hindu Parishad) ಪದಾಧಿಕಾರಿಗಳು ತಹಸೀಲ್ದಾರ್‌ಗೆ ಮನವಿ ಸಲ್ಲಿದ್ದಾರೆ. ಹಿಜಾಬ್ ತೀರ್ಪಿನ ಹೈಕೋರ್ಟ್(High Court) ಆದೇಶವನ್ನು ಧಿಕ್ಕರಿಸಿ ಮುಸ್ಲಿಮರು ಅಂಗಡಿಗಳನ್ನು ಬಂದ್ ಮಾಡಿದ್ದರು. ಅದ್ದರಿಂದ ಹಿಂದೂ ಧಾರ್ಮಿಕ ಸಂಸ್ಥೆಗಳಲ್ಲಿ ಯಾವುದೇ ಜಾತ್ರೆಗಳಲ್ಲಿ ವ್ಯಾಪಾರ ವಹಿವಾಟು ನಡೆಸದಂತೆ ನಿರ್ಬಂಧಿಸಬೇಕು ಎಂದು ಮನವಿ ಮಾಡಿದ್ದಾರೆ.
ಅದೇ ರೀತಿ ಏಪ್ರಿಲ್ 1ರಿಂದ ಪ್ರಾರಂಭವಾಗುವ ಕುಣಿಗಲ್‌ನ ಯಡಿಯೂರು ಸಿದ್ಧಲಿಂಗೇಶ್ವರ ಜಾತ್ರೆಯಲ್ಲೂ ಹಿಂದೂಗಳಿಗೆ ಮಾತ್ರ ಅವಕಾಶ ನೀಡಬೇಕು. ಒಂದು ವೇಳೆ ಅನ್ಯ ಕೋಮಿನ ವ್ಯಾಪಾರಿಗಳು ಅಂಗಡಿಯಿಟ್ಟರೆ ತೆರವುಗೊಳಿಸಬೇಕು ಎಂದು ಬಜರಂಗ ದಳದ ಪದಾಧಿಕಾರಿಗಳು ದೇವಸ್ಥಾನದ ವ್ಯವಸ್ಥಾಪಕರಿಗೆ ಮನವಿ ಮಾಡಿದ್ದಾರೆ.
Hijab Row: 'ಹಿಜಾಬ್ ಬದಲು ದುಪ್ಪಟ್ಟಾಕ್ಕೆ ಅವಕಾಶ ಕೊಡಿ'
ಏಪ್ರಿಲ್ 5ರಂದು ನಡೆಯಲಿರುವ ಪಟ್ಟಣದ ಇತಿಹಾಸ ಪ್ರಸಿದ್ಧ ಮಹಾಗಣಪತಿ ಜಾತ್ರೆಯಲ್ಲಿ ವ್ಯಾಪಾರ ಮಳಿಗೆಗಳನ್ನು ಹಿಂದೂ ಸಮಾಜದ ವ್ಯಾಪಾರಿಗಳಿಗೆ ಮಾತ್ರ ನೀಡುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಇನ್ನು ಮಾರ್ಚ್ 27ರಂದು ನಡೆಯಲಿರುವ ಮೂಡಿಗೆರೆ ಬಳಿಯ ಗೋಣಿಬೀಡು ಗ್ರಾಮದ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಜಾತ್ರೆಯಲ್ಲಿ, ‘ದೇಶದ ಕಾನೂನನ್ನು ಗೌರವಿಸದ, ನಾವು ಪೂಜಿಸುವ ಗೋವುಗಳನ್ನು ಅಮಾನುಷವಾಗಿ ಕಡಿದು ಕೊಲ್ಲುವ, ಈ ದೇಶದ ಅಖಂಡತೆಗೆ ಸವಾಲೊಡ್ಡುವ ಮತಾಂಧರ ಜೊತೆ ವ್ಯಾಪಾರ ವಹಿವಾಟು ನಡೆಸುವುದಿಲ್ಲ, ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಬರೆದಿರುವ ಬ್ಯಾನರ್ ಅನ್ನು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಅಳವಡಿಸಿದ್ದಾರೆ.
