Hijab Row: ಉತ್ತರ ಕರ್ನಾಟಕದಲ್ಲೂ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ
* ಕಲಬುರಗಿ ಶರಣಬಸವೇಶ್ವರ ಜಾತ್ರೆಯಲ್ಲಿ ಅವಕಾಶ ನೀಡದಂತೆ ಡೀಸಿಗೆ ಮನವಿ
* ಶಿವಮೊಗ್ಗ, ಚಿಕ್ಕಮಗಳೂರು, ಕೊಡಗಿನ ಹಳ್ಳಿಗಳಲ್ಲೂ ಅನ್ಯ ವ್ಯಾಪಾರಿಗಳಿಗೆ ಬಿಸಿ
* ಮುಸ್ಲಿಂ ವರ್ತಕರು ವಾಪಸ್
ಬೆಂಗಳೂರು(ಮಾ.26): ದೇವಸ್ಥಾನದ(Temples) ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ(Muslim Traders) ಬಹಿಷ್ಕಾರ ಹಾಕುತ್ತಿರುವ ಪ್ರಸಂಗ ಕರಾವಳಿ, ಮಲೆನಾಡು, ಹಳೇ ಮೈಸೂರು ಜಿಲ್ಲೆಗಳ ಬಳಿಕ ಇದೀಗ ಉತ್ತರ ಕರ್ನಾಟಕಕ್ಕೂ(North Karnataka) ಹಬ್ಬಿದೆ. ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸತೊಡಗಿದೆ. ದೇವಸ್ಥಾನದ ಆವರಣದಲ್ಲಿ ಹಿಂದೂಯೇತರರಿಗೆ ವ್ಯಾಪಾರ ವಹಿವಾಟು ನಿಷೇಧಿಸಿರುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಮಾತ್ರವಲ್ಲದೆ ಜಾತ್ರೆ ನಡೆಯುತ್ತಿರುವ ಸ್ಥಳಕ್ಕೆ ತೆರಳಿ ಮುಸ್ಲಿಂ ವರ್ತಕರಿಂದ ಖರೀದಿ ಪ್ರಕ್ರಿಯೆ ನಡೆಸದಂತೆ ಅಭಿಯಾನ ನಡೆಸಿದ ಘಟನೆ ಕಲಬುರಗಿಯಲ್ಲಿ(Kalaburgi) ಶುಕ್ರವಾರ ನಡೆದಿದೆ.
ಇನ್ನು ಸಾವಯವ ಕೃಷಿ ಮತ್ತು ಕುಲಗೋವುಗಳ ಸಮ್ಮೇಳನದ ಹಿನ್ನೆಲೆಯಲ್ಲಿ ವ್ಯಾಪಾರಕ್ಕೆ ಬಂದಿದ್ದ ಅನ್ಯಕೋಮಿನವರ ಮಳಿಗೆಯನ್ನು ಹಿಂದೂಪರ ಸಂಘಟನೆಗಳ(Hindu organizations) ಕಾರ್ಯಕರ್ತರು ಖಾಲಿ ಮಾಡಿಸಿದ ಘಟನೆ ಕೊಡಗು(Kodagu) ಜಿಲ್ಲೆಯ ಶನಿವಾರಸಂತೆಯಿಂದ ವರದಿಯಾಗಿದೆ.
Muslim Traders Boycott ಕೊಲ್ಲೂರು ಮೂಕಾಂಬಿಕಾ ಉತ್ಸವದಲ್ಲೂ ಮುಸ್ಲಿಂಮರಿಗೆ ನಿರ್ಬಂಧ
ಮನವಿ ಬಳಿಕ ಅಭಿಯಾನ: ಕಲಬುರಗಿ ಮಹಾನಗರ ಸೇರಿದಂತೆ ಜಿಲ್ಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ದೇವಸ್ಥಾನದ ಆವರಣದಲ್ಲಿ ಹಿಂದೂಯೇತರರಿಗೆ ವ್ಯಾಪಾರ ವಹಿವಾಟು ನಿಷೇಧಿಸುವಂತೆ ಆಗ್ರಹಿಸಿ ಶುಕ್ರವಾರ ಶ್ರೀರಾಮಸೇನೆಯಿಂದ ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಇದಾದ ನಂತರ ಇವರೆಲ್ಲರೂ ಇಲ್ಲಿನ ಶರಣ ಬಸವೇಶ್ವರರ ಜಾತ್ರೆ(Sharana Basavaeshwara Fair) ನಡೆಯುತ್ತಿರುವ ಸ್ಥಳಕ್ಕೆ ತೆರಳಿ ಅಲ್ಲಿಗೆ ಬಂದಿದ್ದ ಮುಸ್ಲಿಂ ವ್ಯಾಪಾರಸ್ಥರ ಬಳಿ ಯಾರೂ ಖರೀದಿ ಮಾಡದಂತೆ ಅಭಿಯಾನ ನಡೆಸಿದರು.
ಮುಸ್ಲಿಂ ವರ್ತಕರು ವಾಪಸ್:
ಶಿವಮೊಗ್ಗ ತಾಲೂಕಿನ ಮಲವಗೊಪ್ಪ ಗ್ರಾಮದಲ್ಲಿ ಮಾ.25ರಂದು ನಡೆದ ಚನ್ನಬಸವೇಶ್ವರಸ್ವಾಮಿ ರಥೋತ್ಸವದಲ್ಲೂ ಮುಸ್ಲಿಂ ವ್ಯಾಪಾರಿಗಳು ಮಳಿಗೆ ಹಾಕುವುದಕ್ಕೆ ವಿರೋಧ ವ್ಯಕ್ತವಾಗಿದೆ. ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶ ಆಗಬಾರದು ಎಂಬ ದೃಷ್ಟಿಯಿಂದ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದಿರಲು ದೇವಾಲಯ ಸಮಿತಿ ಹಾಗೂ ಗ್ರಾಮದ ಪ್ರಮುಖರು ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮುಂಗಡ ನೀಡಿದ್ದ ಮುಸ್ಲಿಂ ವರ್ತಕರಿಗೆ ಹಣ ಹಿಂದಿರುಗಿಸಲಾಗಿದ್ದು ಮುಸ್ಲಿಂ ವರ್ತಕರು ಮಳಿಗೆ ತೆರವುಗೊಳಿಸಿ ವಾಪಸ್ ಹೋಗಿದ್ದಾರೆ.
ಚಿಕ್ಕಮಗಳೂರು ತಾಲೂಕು ಖಾಂಡ್ಯ ಹೋಬಳಿ ಹುಯಿಗೆರೆ ಗ್ರಾಮದಲ್ಲಿ ಮಾ.24ರಿಂದ 27ರವರೆಗೆ ಆಯೋಜಿಸಿರುವ ಕೋಲ ಉತ್ಸವದಲ್ಲಿ ಯಾವುದೇ ಅನ್ಯಧರ್ಮೀಯರು ಅಂಗಡಿ ತೆರೆಯದಂತೆ ಗ್ರಾಮಸ್ಥರು ಗ್ರಾಮದಲ್ಲಿ ಬ್ಯಾನರ್ ಅಳವಡಿಸಿದ್ದಾರೆ.
Ban Muslim Traders: ರಾಜ್ಯಾದ್ಯಂತ ಮುಸ್ಲಿಂ ವ್ಯಾಪಾರ ನಿರ್ಬಂಧಿಸಬೇಕು: ಮುತಾಲಿಕ್
ಮುಸ್ಲಿಮರ ಮಳಿಗೆ ತೆರವು: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯ ಮನೆಹಳ್ಳಿ ಮಠದಲ್ಲಿ ಶುಕ್ರವಾರ ನಡೆದ ಸಾವಯವ ಕೃಷಿ ಮತ್ತು ಕುಲಗೋವುಗಳ ಸಮ್ಮೇಳನದ ಹಿನ್ನೆಲೆಯಲ್ಲಿ ವ್ಯಾಪಾರಕ್ಕೆ ಬಂದಿದ್ದ ಅನ್ಯಕೋಮಿನವರ ಮಳಿಗೆ ಹಾಕಿದ್ದರು. ಇದರಿಂದ ಆಕ್ರೋಶಿತಗೊಂಡ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಗೋವುಗಳ ಕಡಿದು ತಿನ್ನುವವರಿಗೆ ಇಲ್ಲಿ ವ್ಯಾಪಾರ ಮಾತ್ರ ಬೇಕಾ ಎಂದು ಆಕ್ರೋಶ ವ್ಯಕ್ತಪಡಿಸಿ ಮಳಿಗೆಗಳನ್ನು ತೆರವುಗೊಳಿಸಿದ್ದಾರೆ.
ಇನ್ನು ಶುಕ್ರವಾರ ಸಂಪನ್ನಗೊಂಡ ರಾಜ್ಯದ(Karnataka) ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಉಡುಪಿ ಜಿಲ್ಲೆಯ ಕೊಲ್ಲೂರು ರಥೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ವಿಶ್ವ ಹಿಂದೂ ಪರಿಷತ್ ಮನವಿ ಮಾಡಿತು. ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಭಾಗವಹಿಸದಂತೆ ಕೊಲ್ಲೂರು ಗ್ರಾಮ ಪಂಚಾಯ್ತಿ ಮುಸ್ಲಿಂರನ್ನು ಮನವೊಲಿಸಿತ್ತು. ಆದ್ದರಿಂದ ಮುಸ್ಲಿಂ ವ್ಯಾಪಾರಿಗಳ್ಯಾರೂ ಭಾಗವಹಿಸಿರಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಪೊಳಲಿ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಜಾತ್ರೆಯಲ್ಲಿ ಮುಸ್ಲಿಮರಿಗೆ ವ್ಯಾಪಾರ ನಡೆಸಲು ಅವಕಾಶ ನೀಡದಂತೆ ಹಿಂದೂ ಸಂಘಟನೆಗಳು ಆಗ್ರಹಿಸಿವೆ. ಅದೇ ರೀತಿ ಸುರತ್ಕಲ್ ಮಾರಿಪೂಜೆ ಉತ್ಸವದಲ್ಲಿ ಮುಸ್ಲಿಮರು ವ್ಯಾಪಾರ ನಡೆಸಬಾರದು ಎಂದು ಬ್ಯಾನರ್ ಅಳವಡಿಸಲಾಗಿದೆ.