ಹುಬ್ಬಳ್ಳಿ ಪೊಲೀಸ್ ಠಾಣೆ ದಾಳಿ ಪ್ರಕರಣ ವಾಪಸ್ ಪಡೆದ ರಾಜ್ಯ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಛೀಮಾರಿ ಹಾಕಿದೆ. ಓಲೈಕೆ ರಾಜಕಾರಣಕ್ಕೆ ಕೇಸ್ ವಾಪಸ್ ಪಡೆಯಲಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಬೆಂಗಳೂರು (ಮೇ 29) : ಹುಬ್ಬಳ್ಳಿ ಪೊಲಿಸ್ ಠಾಣೆ ಮೇಲೆ ದಾಳಿ ಮಾಡಿರುವ ಪ್ರಕರಣವನ್ನು ವಾಪಸ್ ಪಡೆದಿರುವ ರಾಜ್ಯ ಸರ್ಕಾರದ ಕ್ರಮ ಸರಿಯಿಲ್ಲ ಎಂದು ಹೈಕೋರ್ಟ್ ಛೀಮಾರಿ ಹಾಕಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ಪೀಠ ಹುಬ್ಬಳ್ಳಿ ಗಲಭೆ ಪ್ರಕರಣದ ಕುರಿತು ತೀರ್ಪು ನೀಡಿದೆ. ರಾಜ್ಯ ಸರ್ಕಾರ ಕ್ರಿಮಿನಲ್ ಕೇಸ್ ಹಿಂಪಡೆದಿತ್ತು. ಆ ಕ್ರಮ ಸರಿಯಲ್ಲ ಎಂದು ಆದೇಶ ಮಾಡಿದೆ. ನಾನು ಹಿಂದೆ ಹೇಳಿದ್ದೆ ಪೊಲೀಸ್ ಠಾಣೆ ಮೇಲೆ ದಾಳಿ ಮಾಡುವ ಪ್ರಕರಣ ವಾಪಸ್ ಪಡೆಯುವುದು ಸರಿಯಲ್ಲ. ಆದರೂ ರಾಜಕೀಯ ಒತ್ತಡಕ್ಕೆ, ಓಲೈಕೆ ರಾಜಕಾರಣಕ್ಕೆ ಕೇಸ್ ವಾಪಸ್ ಪಡೆದಿದ್ದರು. ನ್ಯಾಯಾಲಯ ಸರಿಯಾದ ಛೀಮಾರಿ ಹಾಕಿದೆ. ರಾಜ್ಯದ ಸಚಿವ ಸಂಪುಟ, ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡಬೇಕೇ ಹೊರತು. ಒಲೈಕೆ ರಾಜಕಾರಣ ಮಾಡಬಾರಬಾರದು. ಇನ್ನಾದರೂ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಮಾಡಿದವರ ಮೇಲೆ ಕ್ರಮ ಆಗಬೇಕು ಎಂದು ಆಗ್ರಹಿಸಿದರು.
ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲ:
ಮಂಗಳೂರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಯಾರಿಗೂ ಪೊಲೀಸರ ಬಗ್ಗೆ ಭಯ ಇಲ್ಲದಂತಾಗಿದೆ. ಪೊಲೀಸ್ ಠಾಣೆಗಳು ಭ್ರಷ್ಟಾಚಾರದ ಕೇಂದ್ರಗಳಾಗಿವೆ. ಹೀಗಾಗಿ ಸಮಾಜ ಘಾತುಕ ಶಕ್ತಿಗಳು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಿವೆ. ರಾಜ್ಯ ಸರ್ಕಾರದ ಓಲೈಕೆ ರಾಜಕಾರಣದಿಂದ ಜನರು ಸರ್ಕಾರದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತಾಗಿದೆ ಎಂದು ಹೇಳಿದರು.
ಕಮಲ್ ಹಾಸನ್ ಕ್ಷಮೆ ಕೇಳಲಿ:
ತಮಿಳು ನಟ ಕಮಲ್ ಹಾಸನ್ ಕನ್ನಡ ಭಾಷೆಗೆ ಅಪಮಾನ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕನ್ನಡ ಬಹಳ ಹಳೆಯ ಪ್ರಾಚೀನ ಭಾಷೆ. ಭಾಷೆಯ ಪ್ರಾಚೀನತೆ ಹಲವಾರು ವಿಧಾನದಲ್ಲಿ ಇರಲಿದೆ. ಕಮಲ್ ಹಾಸನ್ ದೊಡ್ಡ ಪರಿಣಿತ ಅಲ್ಲ. ಭಾಷೆಯ ಮೇಲೆ ಮಾತನಾಡುವಾಗ ಹಿಡಿತ ಇರಬೇಕು. ಅವರು ತಮ್ಮ ವ್ಯಕ್ತಿತ್ವ ಉಳಿಸಿಕೊಳ್ಳಬೇಕಾದರೆ ಕ್ಷಮಾಪಣೆ ಕೇಳಬೇಕು ಎಂದು ಹೇಳಿದರು.
ಜನೌಷಧಿ ಕೇಂದ್ರ ಸ್ಥಗಿತದ ಆದೇಶ ರದ್ದು ಪಡಿಸಲು ಆಗ್ರಹ
ಹಾವೇರಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಪ್ರಾರಂಭಿಸಲಾದ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರ ಹೊರಡಿಸಿದ ಆದೇಶ ರದ್ದುಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಆಗ್ರಹಿಸಿದ್ದಾರೆ. ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳನ್ನು ಸರ್ಕಾರಿ ಆಸ್ಪತ್ರೆಗಳ ಆವರಣಗಳಲ್ಲಿ ಸ್ಥಗಿತಗೊಳಿಸುವುದರಿಂದ ಸಾಮಾನ್ಯ ಬಡ ಜನರಿಗೆ ಉತ್ತಮ ಗುಣಮಟ್ಟದ ಜನರಿಕ್ ಔಷಧಿಗಳನ್ನು ಕಡಿಮೆ ಹಾಗೂ ಕೈಗೆಟುಕುವ ದರಗಳಲ್ಲಿ ದೊರಕಿಸುವ ಕೇಂದ್ರ ಸರ್ಕಾರದ ಉದ್ದೇಶಕ್ಕೆ ಅಡ್ಡಿಪಡಿಸಿದಂತಾಗುತ್ತದೆ. ಆದುದ್ದರಿಂದ, ಸದರಿ ವಿಷಯದ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಬೇಕು. ಹಾವೇರಿ ಜಿಲ್ಲಾ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರದ ಮಾಲೀಕರ ಸಂಘದವರು, ಹಾವೇರಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಪ್ರಾರಂಭಿಸಲಾದ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ಸ್ಥಗಿತ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ಸಂಸದ ಬಸವರಾಜ್ ಬೊಮ್ಮಾಯಿ ತಿಳಿಸಿದರು.
