ಬೆಂಗಳೂರು, ಬೆಳಗಾವಿ ಏರ್ಪೋರ್ಟ್‌ಗೆ ಬಾಂಬ್ ಬೆದರಿಕೆ
ದೇಶದ ಇತರೆಡೆಯಂತೆ ರಾಜ್ಯದ ಬೆಂಗಳೂರು ಮತ್ತು ಬೆಳಗಾವಿಯ ವಿಮಾನ ನಿಲ್ದಾಣಗಳಿಗೂ ಕೆಲ ಕಿಡಿಗೇಡಿಗಳು ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದು, ಇದೊಂದು ಹುಸಿ ಬಾಂಬ್ ಬೆದರಿಕೆ ಸಂದೇಶ ಎಂಬುದು ನಂತರ ಖಚಿತವಾಗಿದೆ.
ಬೆಂಗಳೂರು/ಬೆಳಗಾವಿ (ಅ.21): ದೇಶದ ಇತರೆಡೆಯಂತೆ ರಾಜ್ಯದ ಬೆಂಗಳೂರು ಮತ್ತು ಬೆಳಗಾವಿಯ ವಿಮಾನ ನಿಲ್ದಾಣಗಳಿಗೂ ಕೆಲ ಕಿಡಿಗೇಡಿಗಳು ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದು, ಇದೊಂದು ಹುಸಿ ಬಾಂಬ್ ಬೆದರಿಕೆ ಸಂದೇಶ ಎಂಬುದು ನಂತರ ಖಚಿತವಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ವಿಮಾನ ನಿಲ್ದಾಣದ ಕಮಾಂಡ್ ಸೆಂಟರ್‌ಗೆ ಅನಾಮಧೇಯ ಎಕ್ಸ್ ಖಾತೆಯಿಂದ ಬಾಂಬ್ ಬೆದರಿಕೆ ಸಂದೇಶ ಬಂದಿದ್ದರೆ, ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕ ತ್ಯಾಗರಾಜ್ ಅವರ ಇಮೇಲ್‌ಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಇದರಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಎರಡೂ ವಿಮಾನ ನಿಲ್ದಾಣಗಳಿಗೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.
ಬಾಂಬರ್‌ಗಳಿದ್ದಾರೆಂದು ಸಂದೇಶ: ಕೆಐಎ ವಿಮಾನ ನಿಲ್ದಾಣದ ಕಮಾಂಡ್ ಸೆಂಟರ್‌ಗೆ ಅನಾಮಧೇಯ ಎಕ್ಸ್ ಖಾತೆಯಿಂದ ಇಂಡಿಗೋ ಏರ್‌ಲೈನ್ಸ್‌ನ IX 233, IX 375, IX 481, IX 383, IX 549, IX 399 ವಿಮಾನಗಳಲ್ಲಿ ತಲಾ ಇಬ್ಬರಂತೆ 12 ಮಂದಿ ಬಾಂಬರ್‌ಗಳಿರುವುದಾಗಿ ಬೆದರಿಕೆ ಸಂದೇಶಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಬೆದರಿಕೆ ಸಂದೇಶದ ಬೆನ್ನಲ್ಲೇ ವಿಮಾನ ನಿಲ್ದಾಣದ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಕಳೆದೊಂದು ವಾರದಲ್ಲಿ ಕೆಐಎ ವಿಮಾನ ನಿಲ್ದಾಣಕ್ಕೆ 2ನೇ ಬಾರಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಭಾನುವಾರ ಬಂದಿರುವ ಬಾಂಬ್ ಬೆದರಿಕೆ ಸಂದೇಶ ಸಂಬಂಧ ಸದ್ಯ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ದೇಶದಾದ್ಯಂತ ಒಂದೇ ದಿನ 30 ವಿಮಾನಗಳಿಗೆ ಬಾಂಬ್ ಬೆದರಿಕೆ ಸಂದೇಶ!
ಸ್ಫೋಟಿಸುವ ಬೆದರಿಕೆ: ಇನ್ನು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕ ತ್ಯಾಗರಾಜ್ ಅವರ ಇ-ಮೇಲ್‌ಗೆ ವಿಮಾನ ನಿಲ್ದಾಣ ಸ್ಫೋಟಿಸುವ ಬೆದರಿಕೆ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದೊಂದಿಗೆ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಲಾಗಿದೆ. ಈ ಸಂಬಂಧ ಮಾಹಿತಿ ನೀಡಿರುವ ಡಿಸಿಪಿ ರೋಹನ್ ಜಗದೀಶ್, ಬೆದರಿಕೆ ಇ-ಮೇಲ್‌ಗೆ ಸಂಬಂಧಿಸಿ ತಪಾಸಣೆ ನಡೆಸಿದ್ದು, ಯಾವುದೇ ಸ್ಫೋಟಕ ವಸ್ತುಗಳು, ರಾಸಾಯನಿಕ ಪದಾರ್ಥಗಳು ಪತ್ತೆಯಾಗಿಲ್ಲ. ಇದೊಂದು ಹುಸಿ ಸಂದೇಶವಾಗಿದ್ದು, ಇದರ ಮೂಲ ಪತ್ತೆಗೆ ಜಾಲ ಬೀಸಿದ್ದೇವೆ. ಹಾಗಾಗಿ, ಯಾರೂ ಭಯ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.