ಶಕ್ತಿ ಯೋಜನೆಯಿಂದ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯು ಬಸ್‌ನಲ್ಲಿರುವ ಸೀಟುಗಳ ಸಂಖ್ಯೆಯಷ್ಟೇ ಪ್ರಯಾಣಿಕರು ಸಂಚರಿಸಬೇಕು ಎಂದು ಹೊಸ ಆದೇಶ ಹೊರಡಿಸಿದೆ. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರು (ನ.24) ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ತಕ್ಷಣವೇ ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಗ್ಯಾರಂಟಿ ಯೋಜನೆಗಳನ್ನ ಘೋಷಣೆ ಮಾಡುವ ಮೂಲಕ ನುಡಿದಂತೆ ನಡೆಯುವ ಸರ್ಕಾರ ಸಾಬೀತು ಮಾಡಿತ್ತು. ಐದು ಗ್ಯಾರೆಂಟಿ ಯೋಜನೆಗಳ ಪೈಕಿ ಮಹಿಳೆಯರಿಗೆ ರಾಜ್ಯಾದ್ಯಂತ ಪ್ರಯಾಣಿಸಲು ಮಾಡಲು ಉಚಿತ ಪ್ರಯಾಣ ಸೌಲಭ್ಯ ಒದಗಿಸಿದ 'ಶಕ್ತಿ ಯೋಜನೆ'ಯೂ ಒಂದು. ಶಕ್ತಿ ಯೋಜನೆ ಜಾರಿಯಾದಾಗ ಇದರಿಂದ ಸರ್ಕಾರಕ್ಕೆ, ಸಾರಿಗೆ ಇಲಾಖೆ ಭಾರೀ ನಷ್ಟವಾಗಲಿದೆ ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು.

ಅದಕ್ಕೆ ಸರ್ಕಾರ ಸೊಪ್ಪು ಹಾಕಿರಲಿಲ್ಲ. ಶಕ್ತಿ ಯೋಜನೆಯಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ವ್ಯಾಪಾರವು ಹೆಚ್ಚುತ್ತದೆ. ಇದರಿಂದ ಸಾರಿಗೆ ಆದಾಯ ಬರುತ್ತದೆ ಹೊರತು ನಷ್ಟವಿಲ್ಲ ಎಂದು ಸರ್ಕಾರ ವಾದಿಸಿತ್ತು. ಆದರೆ ಜಾರಿಯಾದ ಮೂರೂವರೆ ವರ್ಷದ ಬಳಿಕ ಇದೀಗ ಶಕ್ತಿ ಯೋಜನೆಗೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ. ಅಂದರೆ ಇನ್ನುಮುಂದೆ ಬಸ್ ಸೀಟುಗಳು ಇರುವಷ್ಟೇ ಪ್ರಯಾಣಿಕರನ್ನು ಕರೆದೊಯ್ಯಬೇಕು, ಹೆಚ್ಚುವರಿ ಪ್ರಯಾಣಿಕರನ್ನ ಕರೆದೊಯ್ಯುವಂತಿಲ್ಲ ಎಂದು ಸಾರಿಗೆ ಇಲಾಖೆ ಹೊಸ ಆದೇಶ ಹೊರಡಿಸಿದೆ.

ಪ್ರಯಾಣಿಕರ ಸಂಖ್ಯೆ ಹೆಚ್ಚಳದಿಂದ ಪ್ರಯಾಣಕ್ಕೆ ತುಂಬಾ ತುಂಬಾ ಕಿರಿಕಿರಿ ಉಂಟಾಗಿತ್ತು. ಕೆಲವೆಡೆ ಬಸ್ ಸೌಲಭ್ಯ ಕಡಿಮೆ, ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದರಿಂದ ಬಸ್‌ನೊಳಗೆ ಮಕ್ಕಳು, ವಿದ್ಯಾರ್ಥಿಗಳು, ವೃದ್ಧರಿಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ ಇದರಿಂದ ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಸಲು ಹೆದರುವಂತಾಗಿದೆ. ಈ ಹಿನ್ನೆಲೆ ಸಾರಿಗೆ ಇಲಾಖೆಗೆ ಈ ಬಗ್ಗೆ ದೂರುಗಳು ಬಂದ ಹಿನ್ನೆಲೆ ಈ ಕ್ರಮಕ್ಕೆ ಮುಂದಾಗಿದೆ.

ಇನ್ಮುಂದೆ ಸೀಟು ಇದ್ದಷ್ಟೇ ಪ್ರಯಾಣ..!

ಹೌದು ಸಾರಿಗೆ ಇಲಾಖೆ ಹೊಸ ಆದೇಶದ ಪ್ರಕಾರ ಇನ್ಮುಂದೆ ಬಸ್‌ನಲ್ಲಿರುವ ಆಸನಗಳ ಸಂಖ್ಯೆಯಷ್ಟೇ ಪ್ರಯಾಣಿಸಬೇಕು. ರಾಜ್ಯದಲ್ಲಿ ಸಂಚರಿಸುವ ಎಲ್ಲ ಬಸ್‌ಗಳಿಗೂ ಈ ನಿಯಮ ಅನ್ವಯ. ಈ ಕುರಿತು ಸಾರಿಗೆ ಇಲಾಖೆ ರಾಜ್ಯದ ಎಲ್ಲ ಪ್ರಾದೇಶಿಕ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿ ಹೆಚ್ಚು ಜನರನ್ನು ಹೊತ್ತೊಯ್ದರೆ, ನಿಯಮಗಳನ್ನ ಉಲ್ಲಂಘಿಸಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ.

ಪ್ರಯಾಣಿಕರಿಗೆ ಅರಿವು ಮೂಡಿಸಲು ಸೂಚನೆ:

ಇನ್ನು ಸಾರಿಗೆ ಇಲಾಖೆ ಹೊಸ ನಿಯಮ ಜಾರಿ ಮಾಡಿದ್ರು, ಜನ ಸಾಮಾನ್ಯರಿಗೆ ಈ ವಿಚಾರದ ಬಗ್ಗೆ ಅರಿವು ಮೂಡಿಸುವುದು ತುಂಬಾ ಮುಖ್ಯ. ಏಕೆಂದರೆ ಪ್ರಯಾಣಿಕರಿಗೆ ಸಾರಿಗೆ ಇಲಾಖೆ ನಿಯಮಗಳು ತಿಳಿಯದಿದ್ದರೆ, ಅರಿವು ಮೂಡಿಸದಿದ್ದರೆ ಆಸನ ನಿಯಮದಂತೆ ಪ್ರಯಾಣಿಸಲು ಮುಂದಾದಾಗ ಬಸ್ ಚಾಲಕ, ನಿರ್ವಾಹಕರೊಂದಿಗೆ ಪ್ರಯಾಣಿಕರ ವಾಗ್ವಾದ ನಡೆಯುವ ಸಾಧ್ಯತೆ ಹೆಚ್ಚಿರುತ್ತೆ. ಹೀಗಾಗಿ ಸಾರಿಗೆ ಇಲಾಖೆಯ ಹೊಸ ನಿಯಮದ ಬಗ್ಗೆ ಪ್ರಯಾಣಿಕರಿಗೆ ಅರಿವು ಮೂಡಿಸುವಂತೆಯೂ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಂದು ವೇಳೆ ಈ ನಿಯಮ ಕಟ್ಟುನಿಟ್ಟಾಗಿ ಜಾರಿಯಾದರೆ ಪುರುಷರು, ಮಹಿಳೆಯರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಎಲ್ಲರೂ ಪ್ರಯಾಣಿಸಲು ಅನುಕೂಲವಾಗುತ್ತದೆ ಎಂಬ ಅಭಿಪ್ರಯಾ ವ್ಯಕ್ತವಾಗಿದೆ.

ಇದೊಂದೇ ಅಲ್ಲ, ಆಸನಗಳಿದ್ದಷ್ಟೇ ಪ್ರಯಾಣಿಸುವುದರಿಂದ ಅಪಾಯ ಸಾಧ್ಯತೆಗಳು ಕಡಿಮೆ, ಏಕೆಂದರೆ ಇಂದು ಪ್ರತಿ ಬಸ್‌ಗಳು ತುಂಬಿ ತುಳುಕುತ್ತಿವೆ. ವಿದ್ಯಾರ್ಥಿಗಳು ಬಸ್ ಡೂರ್‌ನಲ್ಲಿ ನಿಂತು ಅಪಾಯಕಾರಿಯಾಗಿ ಪ್ರಯಾಣಿಸುತ್ತಿದ್ದಾರೆ. ನೂಕುನುಗ್ಗಲಿನಲ್ಲಿ ಹಿರಿಯರು, ರೋಗಿಗಳು ಹೈರಾಣಾಗುತ್ತಿದ್ದಾರೆ. ಜನಜಂಗುಳಿಯ ಲಾಭ ಪಡೆದುಕೊಳ್ಳುವ ಕಳ್ಳರು, ಪಿಕ್ ಪಾಕೆಟ್, ಸರಗಳ್ಳತನ, ಮೊಬೈಲ್ ಕಳ್ಳತನ ಮಾಡುತ್ತಿದ್ದಾರೆ. ಇವೆಲ್ಲವುಗಳಿಗೆ ಕಡಿವಾಣ ಹಾಕಿ ಪ್ರಯಾಣಿಕರು ಆರಾಮದಾಯಕವಾಗಿ ಪ್ರಯಾಣಿಸಬೇಕೆಂದರೆ ಆಸನಗಳಿದ್ದಷ್ಟೇ ಪ್ರಯಾಣಿಸುವುದು ಉತ್ತಮ.

ಸಾರಿಗೆ ಇಲಾಖೆಯು ಕೂಡ ಇವೆಲ್ಲವುಗಳಿಂದ ಗಮನದಲ್ಲಿಟ್ಟುಕೊಂಡು ಹೊಸ ನಿಯಮ ಮಾಡಿದೆ. ಆದರೆ ಇಲಾಖೆಯ ಆದೇಶವನ್ನು ರಾಜ್ಯದ ಸಾರಿಗೆ ನಿಗಮಗಳು ಎಷ್ಟು ಪರಿಣಾಮಕಾರಿಯಾಗಿ, ಹೇಗೆ ಕಾರ್ಯಗತಗೊಳಿಸುತ್ತವೆ ಎಂಬುದರ ಮೇಲೆ ನಿಂತಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯದ ಹೊಸ ನಿಯಮದಂತೆ ಹೇಗೆ ಪಾಲಿಸುತ್ತವೆ, ಪ್ರಯಾಣಿಕರಿಗೆ ಹೇಗೆ ಅರಿವು ಮೂಡಿಸುತ್ತವೆ ಎಂಬುದನ್ನ ಕಾದು ನೋಡಬೇಕು.