ದೇಶದಾದ್ಯಂತ ಒಂದೇ ದಿನ 30 ವಿಮಾನಗಳಿಗೆ ಬಾಂಬ್ ಬೆದರಿಕೆ ಸಂದೇಶ!
ವಿಮಾನಗಳಿಗೆ ಬಾಂಬ್ ಬೆದರಿಕೆ ಬರುವುದು ಮುಂದುವರೆದಿದ್ದು, ಇದೀಗ ಶನಿವಾರ ಒಂದೇ ದಿನ 30ಕ್ಕೂ ಅಧಿಕ ವಿಮಾನಗಳಿಗೆ ಬೆದರಿಕೆ ಸಂದೇಶಗಳು ಬಂದಿವೆ.
ನವದೆಹಲಿ (ಅ.20): ವಿಮಾನಗಳಿಗೆ ಬಾಂಬ್ ಬೆದರಿಕೆ ಬರುವುದು ಮುಂದುವರೆದಿದ್ದು, ಇದೀಗ ಶನಿವಾರ ಒಂದೇ ದಿನ 30ಕ್ಕೂ ಅಧಿಕ ವಿಮಾನಗಳಿಗೆ ಬೆದರಿಕೆ ಸಂದೇಶಗಳು ಬಂದಿವೆ. ದೇಶೀಯ ಸಂಸ್ಥೆಗಳು ನಿರ್ವಹಿಸುವ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳಾದ ಏರಿಂಡಿಯಾ, ಇಂಡಿಗೋ, ಆಕಾಸಾ ಏರ್, ವಿಸ್ತಾರಾ, ಸ್ಪೈಸ್ ಜೆಟ್, ಸ್ಟಾರ್ ಏರ್ ಹಾಗೂ ಅಲಯನ್ಸ್ ಏರ್ ವಿಮಾನಗಳಲ್ಲಿ ಬಾಂಬ್ ಇರುವ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶ ರವಾನಿಸಲಾಗಿದೆ.
ಇದರೊಂದಿಗೆ ಈ ವಾರದಲ್ಲಿ ಒಟ್ಟು 70 ವಿಮಾನಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಂತಾಗಿದೆ. ಈ ಬಗ್ಗೆ 2 ಪ್ರತ್ಯೇಕ ಹೇಳಿಕೆ ಬಿಡುಗಡೆ ಮಾಡಿರುವ ಇಂಡಿಗೋ, ‘ಮುಂಬೈನಿಂದ ಇಸ್ತಾನ್‌ಬುಲ್‌ಗೆ ಹೋಗಲಿದ್ದ 6ಇ17 ವಿಮಾನ ಹಾಗೂ ದೆಹಲಿಯಿಂದ ಇಸ್ತಾನ್‌ಬುಲ್‌ಗೆ ಹೋಗಲಿದ್ದ 6ಇ11 ವಿಮಾನಕ್ಕೆ ಬೆದರಿಕೆ ಒಡ್ಡಲಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಈ ಸಂಬಂಧಿತ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಮಾರ್ಗಸೂಚಿಯ ಪ್ರಕಾರ ಸೂಕ್ತ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗುತ್ತಿದೆ.
ಅಂತೆಯೇ, ಜೋಧಪುರದಿಂದ ದೆಹಲಿಗೆ ಹೋಗುವ 6ಇ 184 ವಿಮಾನಕ್ಕೂ ಭದ್ರತೆ ಸಂಬಂಧಿತ ಎಚ್ಚರಿಕೆ ಸಿಕ್ಕಿದ್ದು, ಅದನ್ನು ದೆಹಲಿಯಲ್ಲಿ ಲ್ಯಾಂಡ್ ಮಾಡಿ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ’ ಎಂದಿದೆ. ಅತ್ತ ಉದಯಪುರದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ವಿಸ್ತಾರಾ ವಿಮಾನ ಮುಂಬೈನಲ್ಲಿ ಕೆಳಗಿಳಿಯುವ ಕೆಲ ಸಮಯದ ಮೊದಲು ಬೆದರಿಕೆ ಸಂದೇಶ ಬಂದಿದ್ದು, ತಪಾಸಣೆಗಾಗಿ ಅದನ್ನು ಪ್ರತ್ಯೇಕವಾಗಿರಿಸಲಾಗಿದೆ.
ಬೆಂಕಿ ಹಚ್ಚುವುದೇ ಶೋಭಾ ಕರಂದ್ಲಾಜೆ ಕೆಲಸ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆದರಿಕೆಯಿಂದ ಪ್ರತಿ ವಿಮಾನಕ್ಕೆ 3 ಕೋಟಿ ರು. ನಷ್ಟ: ಇತ್ತೀಚಿನ ದಿನಗಳಲ್ಲಿ ವಿಮಾನಗಳಿಗೆ ಬರುತ್ತಿರುವ ಹುಸಿ ಬೆದರಿಕೆ ಕರೆಗಳು ಹೆಚ್ಚಾಗುತ್ತಿವೆ. ಹೀಗಾಗಿ ಹಾರಾಟ ರದ್ದಾದರೆ ಅಥವಾ ತುರ್ತು ಭೂಸ್ಪರ್ಶ ಆದರೆ ಅಂದಾಜಿನ ಪ್ರಕಾರ ಒಂದು ವಿಮಾನಕ್ಕೆ 3 ಕೋಟಿ ರು. ನಷ್ಟ ಉಂಟಾಗುತ್ತಿದೆ ಹೇಳಲಾಗಿದೆ. 1 ವಾರದಲ್ಲಿ 70 ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ಅದರ ಪ್ರಕಾರ 210 ಕೋಟಿ ರು. ನಷ್ಟ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಅ.14ರಂದು ಬೆದರಿಕೆ ಸ್ವೀಕರಿಸಿದ ಮುಂಬೈ- ನ್ಯೂಯಾರ್ಕ್ ಏರ್ ಇಂಡಿಯಾ ಬೋಯಿಂಗ್ 777 ವಿಮಾನಕ್ಕೆ 3 ಕೋಟಿ ರು.ಗೂ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಿದೆ. ಮಿಕ್ಕಂತೆ ಬೇರೆ ಬೇರೆ ವಿಮಾನಗಳಿಗೆ ನಷ್ಟದ ಪ್ರಮಾಣವು ಬೇರೆ ಆದರೂ ಹೆಚ್ಚೂ ಕಡಿಮೆ 2-3 ಕೋಟಿ ರು. ನಷ್ಟ ಆಗೇ ಆಗುತ್ತದೆ ಎನ್ನಲಾಗಿದೆ.