ಬೆಂಗಳೂರು, (ಏ.18): 6ನೇ ವೇತನಕ್ಕಾಗಿ ಮುಷ್ಕರ ನಿರತ 2,443 ಬಿಎಂಟಿಸಿ ಸಿಬ್ಬಂದಿಯನ್ನು ಆಡಳಿತ ಮಂಡಳಿ ಅಮಾನತುಗೊಳಿಸಿದೆ. ನೋಟಿಸ್ ನೀಡಿದರೂ ಕೆಲಸಕ್ಕೆ ಹಾಜರಾಗದಿದ್ದಕ್ಕೆ ಬಿಎಂಟಿಸಿ ಅಮಾನತು ಅಸ್ತ್ರ ಪ್ರಯೋಗಿಸಿದೆ.

ಸಸ್ಪೆಂಡ್ ಆದವರ ಪೈಕಿ 1,974 ಮಂದಿ ಹಿರಿಯ ನೌಕರರು ಎಂಬುದು ಗಮನಾರ್ಹ ಸಂಗತಿ. ನೋಟಿಸ್‌ಗೆ ಉತ್ತರ ನೀಡಲು ಸೋಮವಾರದವರೆಗೆ ಗಡುವು ನೀಡಲಾಗಿದೆ. ನೋಟಿಸ್‌ಗೆ ಸೂಕ್ತ ಕಾರಣ ನೀಡದಿದ್ರೆ ಎಲ್ಲ ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಲಾಗುವುದು ಎಂದು ಬಿಎಂಟಿಸಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಸಾರಿಗೆ ಮುಷ್ಕರ ಬೆಂಬಲಿಸಲು ಈಗ ಶಾಸಕರಿಗೆ ಮನವಿ

ಕೈಗಾರಿಕಾ ವಿವಾದ ಕಾಯ್ದೆ 22 (1) ಡಿ ಅಡಿಯಲ್ಲಿ ಕೈಗಾರಿಕಾ ವಿವಾದ ಸಂಧಾನ ಪ್ರಕ್ರೀಯೆಯಲ್ಲಿರುವಾಗ ಯಾವುದೇ ನೌಕರರು ಮುಷ್ಕರ ನಡೆಸುವಂತಿಲ್ಲ ಎಂಬ ನಿಯಮವಿದೆ.  ಸಾರಿಗೆ ನೌಕರರ ಕೂಟ ಏಪ್ರಿಲ್ 7ರಂದು ಮುಷ್ಕರದ ನೋಟೀಸ್ ನೀಡಿತ್ತು. 

ಆದರೆ ಏಪ್ರಿಲ್ 6ರ ಮಧ್ಯಾಹ್ನದಿಂದಲೇ ನೌಕರರು ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಇದು ಕಾರ್ಮಿಕ ಕಾಯ್ದೆಯ ಸ್ಪಷ್ಟ ಉಲ್ಲಂಘನೆ. ಹೀಗಾಗಿ ಸದ್ಯ ನಡೆಯುತ್ತಿರೋ ಮುಷ್ಕರ ಕಾನೂನುಬಾಹಿರ ಎಂದು ಬಿಎಂಟಿಸಿ ಘೋಷಿಸಿದೆ.

 ಕಾನೂನುಬಾಹಿರ ಮುಷ್ಕರದಲ್ಲಿ ಭಾಗಿಯಾದ ನೌಕರರು ತಕ್ಷಣ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಬಿಎಂಟಿಸಿ ಸೂಚಿಸಿದೆ. ಆದರೆ ನೌಕರರು ಮುಷ್ಕರ ಮುಂದುವರೆಸಿದ ಕಾರಣ ಇಂದು ಅಮಾನತು ಅಸ್ತ್ರ ಪ್ರಯೋಗಿಸಿದೆ.