Asianet Suvarna News Asianet Suvarna News

ಸಾರಿಗೆ ಮುಷ್ಕರ ಬೆಂಬಲಿಸಲು ಈಗ ಶಾಸಕರಿಗೆ ಮನವಿ

ಇದೀಗ ಸಾರಿಗೆ ಸಂಸ್ಥೆ ನೌಕರರು ತಮಗೆ ಬೆಂಬಲ ನೀಡುವಂತೆ ಶಾಸಕರ ಬಳಿ ಮನವಿ ಮಾಡಿದ್ದಾರೆ. ತಮ್ಮ ಮುಷ್ಕರಕ್ಕೆ ವಿವಿಧ ಶಾಸಕರನ್ನು ಭೇಟಿ ಮಾಡಿ ಸಹಕಾರ ಕೋರಿದ್ದಾರೆ. 

Karnataka Transportation Department Employees Meets MLAs for support snr
Author
Bengaluru, First Published Apr 17, 2021, 9:17 AM IST

 ಬೆಂಗಳೂರು (ಏ.17) :  ಕಳೆದ ಹತ್ತು ದಿನಗಳಿಂದ ಬಸ್‌ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರು ಶುಕ್ರವಾರ ರಾಜ್ಯದ ಶಾಸಕರನ್ನು ಭೇಟಿ ಮಾಡಿ ಮುಷ್ಕರ ಬೆಂಬಲಿಸುವಂತೆ ಹಾಗೂ ಬೇಡಿಕೆ ಈಡೇರಿಸಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿದರು.

ಬೆಂಗಳೂರು, ಮೈಸೂರು, ಹಾಸನ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧೆಡೆ ಶಾಸಕರನ್ನು ಭೇಟಿಯಾಗಿ 6ನೇ ವೇತನ ಆಯೋಗದ ಶಿಫಾರಸಿನ ಅನ್ವಯ ವೇತನ ನಿಗದಿಯಿಂದಾಗುವ ಅನುಕೂಲಗಳು, ನೌಕರರ ಎದುರಿಸುತ್ತಿರುವ ಸಮಸ್ಯೆಗಳು ಸೇರಿದಂತೆ ಹಲವು ವಿಚಾರಗಳನ್ನು ಶಾಸಕರಿಗೆ ಮನವರಿಕೆ ಮಾಡಿಕೊಟ್ಟರು. ಕಳೆದ ಹತ್ತು ದಿನಗಳಿಂದ ಮುಷ್ಕರ ಮಾಡುತ್ತಿದ್ದರೂ ಸರ್ಕಾರ ಮಾತುಕತೆ ಕರೆಯದೇ ನಿರ್ಲಕ್ಷ್ಯಿಸಿದೆ ಎಂದು ಅಳಲು ತೋಡಿಕೊಂಡರು. ಈ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರಿ ನೌಕರರ ಸಮಸ್ಯೆಗಳನ್ನು ಬಗೆಹರಿಸಿಕೊಡುವಂತೆ ಮನವಿ ಮಾಡಿದರು.

ಇಂದು ಕಾರ್ಮಿಕ ಆಯುಕ್ತರಿಗೆ ಮನವಿ:

ಮಾರ್ಚ್ ತಿಂಗಳ ವೇತನ ತಡೆ ಹಿಡಿದಿರುವ ಬಗ್ಗೆ ಶನಿವಾರ ರಾಜ್ಯಾದ್ಯಂತ ಕಾರ್ಮಿಕ ಇಲಾಖೆ ಅಧಿಕಾರಿಗಳ ಗಮನ ಸೆಳೆಯಲು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ನಿರ್ಧರಿಸಿದೆ. ಬೆಂಗಳೂರಿನಲ್ಲಿ ನೌಕರರ ಕೂಟ ನಿಯೋಗದಿಂದ ಕಾರ್ಮಿಕ ಇಲಾಖೆ ಆಯುಕ್ತರನ್ನು ಭೇಟಿಯಾಗಿ ವೇತನ ತಡೆ ಹಿಡಿದಿರುವ ಬಗ್ಗೆ ಮಾಹಿತಿ ನೀಡಿ, ಕೂಡಲೇ ವೇತನ ಬಿಡುಗಡೆಗೆ ಕ್ರಮ ವಹಿಸುವಂತೆ ಮನವಿ ಮಾಡಲಿದೆ. ಅಂತೆಯೇ ಉಳಿದಂತೆ ಸಾರಿಗೆ ನೌಕರರು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಮಾಡಲಿದ್ದಾರೆ.

ಸಾರಿಗೆ ನೌಕರರ ಬೆಂಬಲಕ್ಕೆ ನಿಂತ ನಟ ಯಶ್; ವಿರಸ ಬಿಟ್ಟು ಸಾಮರಸ್ಯದಿಂದ ಮುನ್ನಡೆಯೋಣ! ..

ಬಿಎಂಟಿಸಿಯ 240 ನೌಕರರು ವಜಾ

ಬೆಂಗಳೂರು: ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರದಲ್ಲಿ ನಿರತರಾಗಿರುವ ಕಾಯಂ ನೌಕರರ ವಿರುದ್ಧ ಶಿಸ್ತುಕ್ರಮಕ್ಕೆ ಮುಂದಾಗಿರುವ ಬಿಎಂಟಿಸಿ, ಇದೀಗ 240 ಕಾಯಂ ನೌಕರರನ್ನು ಸೇವೆಯಿಂದ ವಜಾಗೊಳಿಸಿ ಬಿಸಿ ಮುಟ್ಟಿಸಿದೆ. ಮುಷ್ಕರ ಆರಂಭದಲ್ಲಿ ರಾಜ್ಯ ಸರ್ಕಾರ ಮುಷ್ಕರ ಕೈಬಿಟ್ಟು ಮಾತುಕತೆಗೆ ಬರುವಂತೆ ಮನವಿ ಮಾಡಿತ್ತು. ಈ ವೇಳೆ ಮಾತುಕತೆಗೆ ಮುಷ್ಕರ ನಿರತರು ನಿರಾಕರಿಸಿದ್ದರು. ಇದೀಗ ರಾಜ್ಯ ಸರ್ಕಾರ ಮಾತುಕತೆ-ಸಂಧಾನದ ಹಾದಿ ಬಿಟ್ಟು ಕಾನೂನು ಅಸ್ತ್ರಗಳ ಮೂಲಕ ಮುಷ್ಕರ ನಿರತ ನೌಕರರನ್ನು ಮಣಿಸಲು ಮುಂದಾಗಿದೆ.

ಅಂತೆಯೇ ಶನಿವಾರ ಸಂಜೆಯೊಳಗೆ ಕೆಲಸಕ್ಕೆ ಹಾಜರಾಗುವಂತೆ ಮತ್ತೆ 232 ಕಾಯಂ ನೌಕರರಿಗೆ ಶುಕ್ರವಾರ ನೋಟಿಸ್‌ ನೀಡಲಾಗಿದೆ. ಒಂದು ವೇಳೆ ಕೆಲಸಕ್ಕೆ ಬರದಿದ್ದರೆ, ನಿಗಮವು ಏಕಪಕ್ಷೀಯವಾಗಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಖಡಕ್‌ ಎಚ್ಚರಿಕೆ ನೀಡಿದೆ.

ಮತ್ತಷ್ಟುಬಸ್‌ ರೋಡಿಗೆ: 5,500 ಬಸ್‌ ಕಾರ್ಯಾಚರಣೆ

ಬೆಂಗಳೂರು: ಸಾರಿಗೆ ನೌಕರರ ಮುಷ್ಕರದ ನಡುವೆಯೂ ನಾಲ್ಕು ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಶುಕ್ರವಾರ 5,500ಕ್ಕೂ ಅಧಿಕ ಬಸ್‌ ಕಾರ್ಯಾಚರಣೆ ಮಾಡಲಾಗಿದೆ. ಈ ಮೂಲಕ ದಿನದಿಂದ ದಿನಕ್ಕೆ ಕಾರ್ಯಾಚರಣೆಯಾಗುತ್ತಿರುವ ಬಸ್‌ಗಳ ಸಂಖ್ಯೆ ಹೆಚ್ಚಳವಾಗಿದೆ.

ಸಂಧಾನದ ಸೂತ್ರ ಬಿಟ್ಟು ಶಿಸ್ತುಕ್ರಮಕ್ಕೆ ಮುಂದಾದ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಿರುವ ನೌಕರರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹೀಗಾಗಿ ಬಸ್‌ಗಳ ಕಾರ್ಯಾಚರಣೆ ಸಂಖ್ಯೆ ಏರಿಕೆಯಾಗುತ್ತಿದೆ. ಶುಕ್ರವಾರ ರಾತ್ರಿ 7 ಗಂಟೆ ವರೆಗೆ ಕೆಎಸ್‌ಆರ್‌ಟಿಸಿಯ 2,540, ಬಿಎಂಟಿಸಿಯ 873, ಎನ್‌ಇಕೆಆರ್‌ಟಿಸಿಯ 1,131 ಹಾಗೂ ಎನ್‌ಡಬ್ಲ್ಯೂಕೆಆರ್‌ಟಿಸಿಯ 960 ಬಸ್‌ ಸೇರಿದಂತೆ ಒಟ್ಟು 5,504 ಬಸ್‌ ರಾಜ್ಯ ಹಾಗೂ ಹೊರರಾಜ್ಯದ ವಿವಿಧ ಸ್ಥಗಳಿಗೆ ಸಂಚರಿಸಿವೆ.

ಮುಷ್ಕರ ಕೈಬಿಟ್ಟರಷ್ಟೇ ಮಾತುಕತೆ: ಸಾರಿಗೆ ಇಲಾಖೆ

ಬೆಂಗಳೂರು: ಆರನೇ ವೇತನ ಆಯೋಗದ ಸಂಬಂಧಪಟ್ಟಂತೆ ಸಾರಿಗೆ ನೌಕರರ ಸಂಘಟನೆಗಳನ್ನು ಯಾವುದೇ ಮಾತುಕತೆಗೆ ಆಹ್ವಾನಿಸಿಲ್ಲ. ಈ ಸಂಬಂಧ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ. ಮುಷ್ಕರ ಹಿಂಪಡೆದ ನಂತರವಷ್ಟೇ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸುವುದಾಗಿ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರು ತಿಳಿಸಿದ್ದಾರೆ ಎಂದು ಸಾರಿಗೆ ಇಲಾಖೆ ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿದೆ.

ಮೃತ ಚಾಲಕನ ಕುಟುಂಬಕ್ಕೆ 30 ಲಕ್ಷ ರು.

ಬೆಂಗಳೂರು: ಮುಷ್ಕರದ ವೇಳೆ ಕರ್ತವ್ಯ ನಿರ್ವಹಿಸುವಾಗ ದುಷ್ಕರ್ಮಿಗಳ ಹಲ್ಲೆಯಿಂದ ಗಾಯಗೊಂಡು ಮೃತಪಟ್ಟಿರುವ ವಾಯುವ್ಯ ಸಾರಿಗೆ ನಿಗಮದ ಚಾಲಕ ಅವಟಿ ಅವರ ಕುಟುಂಬಕ್ಕೆ 30 ಲಕ್ಷ ರು. ಪರಿಹಾರ ಹಾಗೂ ಕುಟುಂಬದ ಒರ್ವ ಸದಸ್ಯರಿಗೆ ಅನುಕುಂಪ ಆಧಾರದಡಿ ನೌಕರಿ ನೀಡಲಾಗುವುದು. ಶಾಂತಿಯುತ ಮುಷ್ಕರದ ಹೆಸರಿನಲ್ಲಿ ಸಹೋದ್ಯೋಗಿಯ ಜೀವ ಬಲಿ ಪಡೆದಿರುವುದು ಖಂಡನೀಯ. ಹಿಂಸಾ ಕೃತ್ಯ ನಡೆಸುವವರನ್ನು ಸರ್ಕಾರ ಎಂದಿಗೂ ಕ್ಷಮಿಸುವುದಿಲ್ಲ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಭಟನೆ ಬದಲು ಶಾಸಕರಿಗೆ ಮನವಿ

ಬೆಂಗಳೂರು: ಸಾರಿಗೆ ಮುಷ್ಕರ ಬೆಂಬಲಿಸುವಂತೆ ಹಾಗೂ ಸರ್ಕಾರದ ಮೇಲೆ ನೌಕರರ ಪರವಾಗಿ ಒತ್ತಡ ಹೇರುವಂತೆ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟವು ರಾಜ್ಯದ ಎಲ್ಲ ಶಾಸಕರುಗಳ ನಿವಾಸದ ಎದುರು ಪ್ರತಿಭಟನೆ ಮಾಡಲು ನಿರ್ಧರಿಸಿತ್ತು. ಆದರೆ, ಕೊರೋನಾ ನಿಯಮಾವಳಿ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡಲಿಲ್ಲ. ಹೀಗಾಗಿ ಸಾರಿಗೆ ನೌಕರರು ಶಾಸಕರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.

Follow Us:
Download App:
  • android
  • ios