ಬಿಎಂಟಿಸಿ ಬಸ್‌ಗಳಲ್ಲಿ ವಾಂತಿ ಬರುವ ನೆಪವೊಡ್ಡಿ, ಕಿಟಕಿ ಸೀಟಿನಲ್ಲಿ ಕುಳಿತ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಪಿಕ್‌ಪಾಕೆಟ್‌ ಮಾಡುತ್ತಿದ್ದ ಐವರ ಗ್ಯಾಂಗ್ ಪೈಕಿ ಇಬ್ಬರನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಿವೃತ್ತ ನೌಕರರೊಬ್ಬರಿಂದ 35 ಸಾವಿರ ರು. ಕಳವು ಮಾಡಿದ ಪ್ರಕರಣದ ಬೆನ್ನತ್ತಿದ ಪೊಲೀಸರು, ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹಿಡಿದಿದ್ದಾರೆ.

ಬೆಂಗಳೂರು: ವಾಂತಿ ಬರುತ್ತಿದೆ ಎಂಬ ನೆಪವೊಡ್ಡಿ ಬಿಎಂಟಿಸಿ ಬಸ್‌ಗಳಲ್ಲಿ ವಿಂಡೋ ಸೀಟ್‌ನಲ್ಲಿ ಕುಳಿತು ಪ್ರಯಾಣಿಸುವ ಪ್ರಯಾಣಿಕರ ಮೈಮೇಲೆ ಬಿದ್ದು ಹಣ, ಚಿನ್ನಾಭರಣ ಎಗರಿಸುತ್ತಿದ್ದ ಐವರ ಪೈಕಿ ಇಬ್ಬರು ಆರೋಪಿಗಳನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆಂಗೇರಿಯ ಮುಬಾರಕ್ ಪಾಷಾ (30) ಮತ್ತು ಜೆ.ಜೆ.ನಗರದ ಅನ್ವರ್ ಪಾಷಾ (55) ಬಂಧಿತರು.

ಇತ್ತೀಚೆಗೆ ಬಿಎಂಟಿಸಿ ಬಸ್‌ನಲ್ಲಿ ನಿವೃತ್ತ ನೌಕರರಾದ ನರಸಿಂಹಯ್ಯ ಎಂಬುವರು 35 ಸಾವಿರ ರು. ಪಿಂಚಣಿ ಹಣವನ್ನು ಬ್ಯಾಂಕಿನಿಂದ ವಿತ್‌ಡ್ರಾ ಮಾಡಿಕೊಂಡು ಪ್ರಯಾಣಿಸುತ್ತಿದ್ದ ವೇಳೆ ಆರೋಪಿಗಳು ಅದನ್ನು ಎಗರಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧಿಸಲಾಗಿದೆ. ಇತರೆ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಿಟಕಿ ಪಕ್ಕ ಕುಳಿತವರೇ ಇವರ ಟಾರ್ಗೆಟ್

ಜೇಬು ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡಿರುವ ಆರೋಪಿಗಳು, ನಿತ್ಯ ಬಿಎಂಟಿಸಿ ಬಸ್‌ನಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿದ್ದರು. ವಿಂಡೋ ಸೀಟ್‌ನಲ್ಲಿ ಕುಳಿತ ಪ್ರಯಾಣಿಕರನ್ನು ಟಾರ್ಗೆಟ್‌ ಮಾಡುತ್ತಿದ್ದರು. ಐವರ ಪೈಕಿ ಒಬ್ಬ ವಾಂತಿ ಬರುತ್ತಿದೆ ಸೀಟ್ ಬಿಟ್ಟುಕೊಡುವಂತೆ ಮನವಿ ಮಾಡುತ್ತಿದ್ದ. ಕಳ್ಳರ ವಂಚನೆ ತಿಳಿಯದ ಪ್ರಯಾಣಿಕರು ಸೀಟ್‌ ಬಿಟ್ಟುಕೊಡುತ್ತಿದ್ದರು. ಇದೇ ವೇಳೆ ಇತರೆ ನಾಲ್ವರು ಕಳ್ಳರು, ಬಸ್‌ನಲ್ಲಿ ರಶ್ ಇದೆ ಎಂದು ವರ್ತಿಸಿ ಆ ಪ್ರಯಾಣಿಕರ ಮೈ ಮೇಲೆ ಬಿದ್ದು ಅವರ ಜೀಬಿನಿಂದ ಪರ್ಸ್‌, ನಗದು ಕಳವು ಮಾಡುತ್ತಿದ್ದರು. ಆ ಬಳಿಕ ಮುಂದಿನ ನಿಲ್ದಾಣದಲ್ಲಿ ಇಳಿದು ಪರಾರಿಯಾಗುತ್ತಿದ್ದರು. ಇದೀಗ ಆರೋಪಿಗಳ ಬಂಧಿಸಿದ್ದು, ಅವರ ವಿಚಾರಣೆಯಲ್ಲಿ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಇದೇ ರೀತಿಯ ಕೃತ್ಯ ಎಸಗಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಫ್ತಿಯಲ್ಲಿ ಕಾರ್ಯಾಚರಣೆ

ಕೇಂದ್ರ ವಿಭಾಗದ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಹಲವು ದೂರಿಗಳು ಬಂದ ಹಿನ್ನೆಲೆಯಲ್ಲಿ ಉಪ ಪೊಲೀಸ್‌ ಆಯುಕ್ತ ಅಕ್ಷಯ್ ಮಚೀಂದ್ರ ಹಾಕೆ ಅವರು ವಿಧಾನಸೌಧ ಠಾಣೆಯ ನಾಲ್ವರು ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಿದ್ದರು. ಈ ತಂಡವು ಮೊದಲಿಗೆ ಬಸ್‌ನಲ್ಲಿದ್ದ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸಿತ್ತು. ನಂತರ ಸಂತ್ರಸ್ತರು ನೀಡಿದ ಮಾಹಿತಿಯ ಮೇರೆಗೆ ಆರೋಪಿಗಳ ಮುಖಚಿತ್ರಗಳನ್ನು (ಸ್ಕೆಚ್‌) ಸಿದ್ಧಪಡಿಸಿಕೊಳ್ಳಲಾಗಿತ್ತು.

ಬಳಿಕ ಎರಡು ವಾರಗಳ ಕಾಲ ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಶಿವಾಜಿನಗರ, ಪುಲಿಕೇಶಿ ನಗರ ಮತ್ತು ಬೆನ್ಸನ್‌ ಟೌನ್‌ ಸೇರಿ ಇತರ ಕಡೆ ಪ್ರಯಾಣಿಕರಂತೆ ಪ್ರಯಾಣಿಸಿ ಶಿವಾಜಿನಗರದಲ್ಲಿ ಇಬ್ಬರು ಆರೋಪಿಗಳನ್ನು ಬಲೆಗೆ ಕೆಡವಲು ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.