ನಮ್ಮ ಮೆಟ್ರೋ ಮೂರನೇ ಹಂತದ ಹೊಸಹಳ್ಳಿ-ಕಡಬಗೆರೆ ಮಾರ್ಗ ನಿರ್ಮಾಣಕ್ಕಾಗಿ 3627 ಮರಗಳನ್ನು ತೆರವುಗೊಳಿಸಲು ಬಿಎಂಆರ್‌ಸಿಎಲ್‌ ಪ್ರಸ್ತಾವನೆ ಸಲ್ಲಿಸಿದೆ. ಈ ಯೋಜನೆಗಾಗಿ ಹೊಸಹಳ್ಳಿ, ಕಾಮಾಕ್ಷಿಪಾಳ್ಯ, ಬ್ಯಾಡರಹಳ್ಳಿ ಸೇರಿದಂತೆ ಹಲವೆಡೆ ಮರಗಳನ್ನು ಗುರುತಿಸಲಾಗಿದ್ದು, ಸಾರ್ವಜನಿಕರಿಂದ ಆಕ್ಷೇಪಣೆಗೆ ಆಹ್ವಾನ.

ಬೆಂಗಳೂರು (ಜೂ.20): ನಮ್ಮ ಮೆಟ್ರೋ(Namma Metro) ಮೂರನೇ ಹಂತದ ಹೊಸಹಳ್ಳಿ ನಿಲ್ದಾಣದಿಂದ ಕಡಬಗೆರೆ ನಿಲ್ದಾಣದವರೆಗಿನ ಮಾರ್ಗ ನಿರ್ಮಾಣಕ್ಕಾಗಿ 3627 ಮರಗಳ ತೆರವಿಗೆ ಬಿಎಂಆರ್‌ಸಿಎಲ್‌ನಿಂದ ಜಿಬಿಎಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

3627 ಮರಗಳ ತೆರವಿಗೆ ಬಿಎಂಆರ್‌ಸಿಎಲ್ ಪ್ರಸ್ತಾವನೆ

ಹೊಸಹಳ್ಳಿ ಮೆಟ್ರೋ ನಿಲ್ದಾಣದಿಂದ ಕಡಬಗೆರೆ ಮೆಟ್ರೋ ನಿಲ್ದಾಣದವರೆಗಿನ 12.50 ಕಿಮೀ ಉದ್ದದ ಎಲಿವೇಟೆಡ್‌ ಮಾರ್ಗ ನಿರ್ಮಾಣಕ್ಕೆ ಬಿಎಂಆರ್‌ಸಿಎಲ್‌ ಯೋಜನೆ ರೂಪಿಸಿದೆ. ಈ ಮಾರ್ಗದಲ್ಲಿ ಒಟ್ಟು 9 ಎಲಿವೇಟೆಡ್‌ ಮೆಟ್ರೋ ನಿಲ್ದಾಣಗಳು ನಿರ್ಮಾಣವಾಗಲಿದೆ. ಅದರ ಜತೆಗೆ ವಯಾಡಕ್ಟ್‌, ಪೋರ್ಟಲ್‌ ಪಿಯರ್ಸ್‌, ಸರ್ವೀಸ್‌ ರಸ್ತೆ, ಯುಟಿಲಿಟಿ ಡೈವರ್ಷನ್‌ ಹಾಗೂ ರಸ್ತೆ ವಿಸ್ತರಣೆ ಕಾಮಗಾರಿಗಳನ್ನೂ ಕೈಗೊಳ್ಳಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಬರುವ ವಿವಿಧ ಜಾತಿಯ 2426 ಮರಗಳು ಹಾಗೂ 1201 ಅಡಕೆ ಮರಗಳ ತೆರವಿಗೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ.

ಎಲ್ಲೆಲ್ಲಿ ಮರಗಳ ತೆರವು?

ಹೊಸಹಳ್ಳಿ, ಕೆಎಚ್‌ಬಿ ಕಾಲೋನಿ, ಕಾಮಾಕ್ಷಿಪಾಳ್ಯ, ಸುಮನಹಳ್ಳಿ ಕ್ರಾಸ್‌, ಸುಂಕದಕಟ್ಟೆ, ಹೇರೋಹಳ್ಳಿ, ಬ್ಯಾಡರಹಳ್ಳಿ, ಕಾಮತ್‌ ಲೇಔಟ್‌ ಹಾಗೂ ಕಡಬಗೆರೆ ಪ್ರದೇಶಗಳ ಮರಗಳನ್ನು ತೆರವು ಮಾಡಲು ಗುರುತಿಸಲಾಗಿದೆ.

ಬಿಎಂಆರ್‌ಸಿಎಲ್‌ ಪ್ರಸ್ತಾವನೆಗೆ ಸಂಬಂಧಿಸಿದಂತೆ ಇದೀಗ ಜಿಬಿಎ ಜೂ.17ರಂದು ಸಾರ್ವಜನಿಕ ಆಕ್ಷೇಪಣೆ ಆಹ್ವಾನಿಸಿದೆ. ಮುಂದಿನ 10 ದಿನಗಳಲ್ಲಿ ಸಾರ್ವಜನಿಕರು ಆಕ್ಷೇಪಣೆ ಮತ್ತು ಸಲಹೆ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅದಾದ ನಂತರ ಮರಗಳ ತೆರವಿಗೆ ಸಂಬಂಧಿಸಿದಂತೆ ಜನರ ಅಭಿಪ್ರಾಯದಂತೆ ಜಿಬಿಎ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ.