ಬೆಂಗಳೂರು ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿನ ವೈಟ್ ಟಾಪಿಂಗ್ ಕಾಮಗಾರಿಗಳನ್ನು ಪರಿಶೀಲಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ತಾಕೀತು. ಇದೇ ವೇಳೆ ಖಾಲಿ ಸ್ಥಳಗಳಲ್ಲಿ ‘ನಮ್ಮ ಬೆಂಗಳೂರು’ ನಾಮಫಲಕ ಅಳವಡಿಕೆಗೆ ಸೂಚಿಸದರು.
ಬೆಂಗಳೂರು ಆ.1): ಉತ್ತರ ಪಾಲಿಕೆ ವ್ಯಾಪ್ತಿಯ ಖಾಲಿ ಸ್ಥಳಗಳಲ್ಲಿ ‘ನಮ್ಮ ಬೆಂಗಳೂರು’ ಹಾಗೂ ‘ಐ ಲವ್ ಬೆಂಗಳೂರು’ ನಾಮಫಲಕ ಅಳವಡಿಸುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶುಕ್ರವಾರ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಅಮೃತಹಳ್ಳಿ ಮುಖ್ಯ ರಸ್ತೆ ಸೇರಿದಂತೆ ವೈಟ್ ಟಾಪಿಂಗ್ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕಾಮಗಾರಿಗಳ ಪ್ರಗತಿ, ಗುಣಮಟ್ಟ ಹಾಗೂ ಸಮನ್ವಯದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಅಲ್ಲದೆ, ವೈಟ್ ಟಾಪಿಂಗ್ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಲ್ಲಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.
ಆರ್.ಎಫ್.ಪಿ ಷರತ್ತುಗಳಂತೆ ಅನುಭವಿ ಪಿಎಂಸಿ ಪ್ರಮುಖ ಸಿಬ್ಬಂದಿ ಕಾಮಗಾರಿ ನಡೆಯುವ ಅವಧಿಯಲ್ಲಿ ಸ್ಥಳದಲ್ಲಿಯೇ ಹಾಜರಿರುವುದನ್ನು ಖಚಿತಪಡಿಸಬೇಕು. ಅಲ್ಲದೆ, ರಸ್ತೆ ಜಂಕ್ಷನ್ ಗಳು ಹಾಗೂ ತಿರುವುಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಗತ್ಯವಾದ ಟರ್ನಿಂಗ್ ರೇಡಿಯಸ್ ಒದಗಿಸುವಂತೆ ಸೂಚನೆ ನೀಡಿದರು.
ಕಾಮಗಾರಿಗಳ ಮೇಲ್ವಿಚಾರಣೆಗಾಗಿ ಎಲ್ಲಾ ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಹಾಗೂ ಅರ್ಕಾವತಿ ರಸ್ತೆಯ ಡಾಂಬರೀಕರಣಕ್ಕೆ ಸಂಬಂಧಿಸಿದಂತೆ ಬಿಡಿಎಗೆ ಅಧಿಕೃತ ಪತ್ರ ಕಳುಹಿಸಲು ತಿಳಿಸಿದರು.
ರಸ್ತೆ ಬದಿ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡುತ್ತಿರುವುದನ್ನು ಗಮನಿಸಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ, ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಿ ಒತ್ತುವರಿ ಭಾಗವನ್ನು ಕೂಡಲೇ ತೆರವುಗೊಳಿಸಲು ಸೂಚಿಸಿದರು.
ಜಕ್ಕೂರು(ರೈತರ ಸಂತೆ) ರಸ್ತೆಯಲ್ಲಿ ಬಹುತೇಕ ಎಲ್ಲಾ ಕಾಮಗಾರಿಗಳು ಮುಗಿದಿದ್ದು ಲೈನ್ ಮಾರ್ಕಿಂಗ್ ಕೈಗೊಳ್ಳುವಂತೆ ಸೂಚಿಸಿದರು. ಈಗಾಗಲೇ ಸದರಿ ರಸ್ತೆಯಲ್ಲಿ ಒಎಫ್ ಸಿ ಕೇಬಲ್ ಗಳಿಗಾಗಿ ಡಕ್ಟ್ ಗಳನ್ನು ಅಳವಡಿಸುವುದರಿಂದ ಏರಿಯಲ್ ಕೇಬಲ್ ಗಳನ್ನು ತೆರವುಗೊಳಿಸುವಂತೆ ಸೂಚಿಸಲಾಯಿತು. ಆ ಬಳಿಕ ಉಪಯುಕ್ತತಾ ಕೇಬಲ್ಗಳನ್ನು 15 ದಿನಗಳೊಳಗೆ ಯುಟಿಲಿಟಿ ಡಕ್ಟ್ಗಳಲ್ಲಿ ಅಳವಡಿಸುವಂತೆ ಹಾಗೂ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದ ಟಿಡಿಆರ್ ವಿಷಯದಲ್ಲಿ ಜಂಟಿ ಆಯುಕ್ತರೊಂದಿಗೆ ಸಮನ್ವಯ ಸಾಧಿಸುವಂತೆ ಸೂಚಿಸಿದರು.
ಇದೇ ವೇಳೆ ಸಹಕಾರನಗರ 20ನೇ ಅಡ್ಡರಸ್ತೆಯಲ್ಲಿ ಪಾದಚಾರಿ ಮಾರ್ಗದಲ್ಲಿರುವ ಕುಸಿದ ಪೇವರ್ ಬ್ಲಾಕ್ಗಳನ್ನು ಮರು ಅಳವಡಿಸಿ ಸಾರ್ವಜನಿಕರಿಗೆ ಸುರಕ್ಷಿತ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ವೇಳೆ ವೇಳೆ ವಿಶೇಷ ಆಯುಕ್ತ ನಿತೀಶ್, ಮುಖ್ಯ ಎಂಜಿನಿಯರ್ ಮಾದೇಶ್ ಉಪಸ್ಥಿತರಿದ್ದರು.


