ಪಿಎಸೈ ಅಕ್ರಮದ ರೂವಾರಿ ಯಾದಗಿರಿಯ ವ್ಯಕ್ತಿ ಎಂಬ ದೂರಿನ ಆಧಾರದ ಮೇಲೆ ಆರಂಭಗೊಂಡ ಕನ್ನಡಪ್ರಭದ ತನಿಖಾ ವರದಿಗಳು
ಆನಂದ್ ಎಂ. ಸೌದಿ
ಯಾದಗಿರಿ(ಜು.24): ಪಿಎಸೈ ಪರೀಕ್ಷೆಯ ವೇಳೆ ಬ್ಲೂಟೂತ್ ಉಪಕರಣವನ್ನು ಬಳಸುವುದು ಹೇಗೆ ಎಂಬ ಬಗ್ಗೆ ಯಾದಗಿರಿಯ ಡಿಆರ್ (ಮೀಸಲು ಪಡೆ) ಕ್ವಾರ್ಟಸ್‌ನಲ್ಲೇ (ವಸತಿನಿಲಯ) ಟ್ರೇನಿಂಗ್ ನೀಡಲಾಗಿತ್ತು ! ಬ್ಲೂಟೂತ್ ಡಿವೈಸ್ ಬಳಸುವ ಬಗ್ಗೆ ಇಲ್ಲಿನ ಡಿಆರ್ ಪೇದೆಯೊಬ್ಬ ಆಕಾಂಕ್ಷಿಗಳಿಗೆ ವಸತಿನಿಲಯದಲ್ಲೇ ತರಬೇತಿ ನೀಡಿದ್ದ ಅನ್ನೋ ವಿಷಯ ಸಿಐಡಿ ತನಿಖೆಯಲ್ಲಿ ತಿಳಿದುಬಂದಿದೆ ಎನ್ನಲಾಗಿದೆ. ಆದರೆ, ಪಿಎಸೈ ಹುದ್ದೆಗೆ 60-70 ಲಕ್ಷ ರು.ಗಳ ಹಣ ನೀಡಬೇಕಾಗುತ್ತದೆ ಎಂಬುದು ತಿಳಿಯುತ್ತಲೇ ಕೈಚೆಲ್ಲಿದ ಕೆಲವು ಆಕಾಂಕ್ಷಿಗಳು ತರಬೇತಿಯನ್ನಷ್ಟೇ ಪಡೆದು ವಾಪಸ್ಸಾಗಿದ್ದರು ಎಂದು ‘ಕನ್ನಡಪ್ರಭ’ಕ್ಕೆ ಸಿಐಡಿ ಮೂಲಗಳು ತಿಳಿಸಿವೆ.
ಅಚ್ಚರಿ ಎಂದರೆ, ಇದೇ ಡಿಆರ್ ಪೇದೆ ಮುಂದೆ ಎಫ್‌ಡಿಎ ಪರೀಕ್ಷೆಯಲ್ಲಿ ಪಾಸಾಗಿ, ನಂತರ 545 ಪಿಎಸೈ ಪರೀಕ್ಷೆಯ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿಯೂ ಸ್ಥಾನ ಗಿಟ್ಟಿಸಿಕೊಂಡಿದ್ದ. ಹೀಗಾಗಿ, ಈತನ ಬಗ್ಗೆ ಮಾಹಿತಿ ಕಲೆಹಾಕಿರುವ ಅಧಿಕಾರಿಗಳ ತಂಡ, ಸೂಕ್ತ ಸಾಕ್ಷ್ಯಾಧಾರಗಳ ಸಂಗ್ರಹಿಸಿ ಹೆಡೆಮುರಿ ಕಟ್ಟಲು ಸಿದ್ಧತೆ ನಡೆಸಿದೆ.
ಪಿಎಸ್‌ಐ ಹಗರಣದ ಹಣ ಮ್ಯೂಚುವಲ್ ಫಂಡ್‌ಗೆ: ತನ್ನ ಖಾತೆ ಬದಲು ಬೇರೆಡೆ ಹಾಕಿಸ್ತಿದ್ದ ಕಿಂಗ್‌ಪಿನ್..!
ಪಿಎಸೈ ಅಕ್ರಮದ ರೂವಾರಿ ಯಾದಗಿರಿಯ ವ್ಯಕ್ತಿ ಎಂಬ ದೂರಿನ ಆಧಾರದ ಮೇಲೆ ಆರಂಭಗೊಂಡ ಕನ್ನಡಪ್ರಭದ ತನಿಖಾ ವರದಿಗಳು, ಇಡೀ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿದ್ದವು. ‘ಪಿಎಸೈ ಪರೀಕ್ಷೆ ಅಕ್ರಮ ಶಂಕೆ : ಯಾದಗಿರಿ ವ್ಯಕ್ತಿ ಸೂತ್ರಧಾರಿಯೇ ? ಎಂಬ ತಲೆಬರಹದಡಿ ಜ.28 ರಂದು ಕನ್ನಡಪ್ರಭ’ದಲ್ಲಿ ಪ್ರಕಟಗೊಂಡಿದ್ದ ವರದಿ ಅಕ್ರಮ ಬಯಲಿಗೆಳೆಯಲು ನಾಂದಿಯಾಯಿತು.
ಮತ್ತಷ್ಟೂ ಪರೀಕ್ಷಾ ಕೇಂದ್ರಗಳತ್ತ ಸಿಐಡಿ ಚಿತ್ತ ?
ಪಿಎಸೈ ಅಕ್ರಮದ ತನಿಖೆ ನಡೆಸುತ್ತಿರುವ ಸಿಐಡಿ ತಂಡ ಇದೀಗ ಕಲಬುರಗಿಯಲ್ಲಿನ ಕೆಲವು ಪ್ರಭಾವಿ ಪರೀಕ್ಷಾ ಕೇಂದ್ರಗಳತ್ತ ಚಿತ್ತ ಹರಿಸಿದ್ದಾರೆ. ಬಂಧಿತ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಈ ಪ್ರಮುಖ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಿದ್ದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎನ್ನಲಾಗಿದೆ.
ಬಂಧಿತ ಅಕ್ರಮ ಅಭ್ಯರ್ಥಿಯ ಹೇಳಿಕೆಗಳ ಆಧಾರದ ಮೇಲೆ ಮತ್ತಷ್ಟೂಆರೋಪಿಗಳ ಬಂಧನಕ್ಕೆ ಜಾಲ ಬೀಸಿರುವ ಸಿಐಡಿ, ಕಲಬುರಗಿಯಲ್ಲಿನ ಇನ್ನೂ ಎರಡ್ಮೂರು ಪರೀಕ್ಷಾ ಕೇಂದ್ರಗಳ ಮೇಲೆ ನಿಗಾ ವಹಿಸಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಮತ್ತಷ್ಟೂಅಭ್ಯರ್ಥಿಗಳನ್ನು ಸಿಐಡಿ ತಂಡ ವಿಚಾರಣೆ ನಡೆಸಿದೆ. ಅನುಮಾನಾಸ್ಪದ, ಕಲಬುರಗಿ-ಯಾದಗಿರಿ ಭಾಗದ 8 ಜನ ಅಭ್ಯರ್ಥಿಗಳನ್ನು ಮತ್ತೇ ವಿಚಾರಣೆಗೆ ಕರೆಯುವ ಸಾಧ್ಯತೆಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಲಬುರಗಿಯಲ್ಲಿಯೂ ಅಮೃತ್‌ಪಾಲ್ ವಿಚಾರಣೆ ?
ಪಿಎಸೈ ಅಕ್ರಮಕ್ಕೆ ಸಂಬಂಧಿಸಿದಂತೆ, ಬೆಂಗಳೂರಿನಲ್ಲಿ ದಾಖಲಾದ ಪ್ರಕರಣದಲ್ಲಿ ಬಂಧಿತ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಅವರನ್ನು ಕಲಬುರಗಿಯಲ್ಲಿಯೂ ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ. ಅಕ್ರಮದಲ್ಲಿ ಅಮೃತ್ ಪಾಲ್ ಪಾತ್ರದ ಬಗ್ಗೆ ಕಲಬುರಗಿ ಸಿಐಡಿ ತಂಡದೆದುರು ಹೇಳಿಕೆ ನೀಡಿದ್ದಾರೆನ್ನಲಾದ ಬಂಧಿತ ಕೆಲವು ಆರೋಪಿ ಅಭ್ಯರ್ಥಿಗಳು, ತನಿಖೆಯ ವೇಳೆ ಎಫ್‌ಎಸ್‌ಎಲ್ ಪರೀಕ್ಷೆ ನಡೆಸಿದರೂ ಅಕ್ರಮ ಮಾಡಿದ್ದು ಗೊತ್ತಾಗದಂತೆ ಓಎಂಆರ್ ತಿದ್ದುಪಡಿ ವಿಧಾನದ ಬಗ್ಗೆ ಬಾಯ್ಬಿಟ್ಟಿದ್ದಾರಂತೆ.
ಎಸ್‌ಐ ಪರೀಕ್ಷೆ ದಿನ ಸಿಬ್ಬಂದಿಗೆ ಹಾಗರಗಿ ಹೋಳಿಗೆ ಊಟ..!
ಅಭ್ಯರ್ಥಿಯೊಬ್ಬನ ಓಎಂಆರ್ ಶೀಟ್‌ನ ಮೂಲ ಹಾಗೂ ನಕಲು ಪ್ರತಿ ತಾಳೆಯಾಗಿತ್ತಾದರೂ, ಆತನ ಅನುಮಾನಸ್ಪದ ನಡೆಯ ಕಂಡು ವಿಚಾರಣೆ ನಡೆಸಿದ್ದ ಸಿಐಡಿ ತಂಡಕ್ಕೆ ಇಂತಹ ಅಚ್ಚರಿ ಅಂಶ ಪತ್ತೆಯಾಗಿದೆ. ಓಎಂಆರ್ ಮೌಲ್ಯಮಾಪನ ವೇಳೆ, ಡೈರೆಕ್ಟ್ ಡೀಲ್‌ಗಿಳಿದ ಅಭ್ಯರ್ಥಿಯನ್ನು ನೇಮಕಾತಿ ವಿಭಾಗಕ್ಕೇ ಕರೆಯಿಸಿಕೊಂಡು ಮೂಲ ಹಾಗೂ ನಕಲು ಪ್ರತಿಯನ್ನು ಸಮನಾಗಿಟ್ಟುಕೊಂಡು ಬಳಸಿದ್ದ ಪೆನ್ನಿನಲ್ಲೇ ಎಲ್ಲ ಉತ್ತರಗಳಿಗೆ ಗುರುತು ಹಾಕಲಾಗುತ್ತಿತ್ತು.
ಒಂದು ವೇಳೆ ಎಫ್‌ಎಸ್‌ಎಲ್ ಪರೀಕ್ಷೆ ನಡೆದರೂ ಸಹ ಗೊತ್ತಾಗದಂತೆ ಎಚ್ಚರಿಕೆ ವಹಿಸಲಾಗಿತ್ತು. ಆದರೆ, ಪೂರ್ತಿ ಹಣ ಸಂದಾಯವಾಗುವರೆಗೆ ಎರಡೂ ಪ್ರತಿಗಳನ್ನು ತಮ್ಮ ಕಡೆಗೇ ಇಟ್ಟುಕೊಳ್ಳುತ್ತಿದ್ದರು. ಯಾವಾಗ, ಸಿಐಡಿ ತನಿಖೆಯಲ್ಲಿ ಅಭ್ಯರ್ಥಿಗಳಿಗೆ ಓಎಂಆರ್ ತರುವಂತೆ ಸೂಚಿಸಲಾಯಿತೋ, ಆಗ ತಡವರಿಸಿದ ನೇಮಕಾತಿ ವಿಭಾಗ ಎರಡು ದಿನಗಳಲ್ಲಿ ಅಭ್ಯರ್ಥಿಯ ಪ್ರತಿ ನೀಡಿ ಕಳುಹಿಸಿದೆ.
ದಾಖಲೆಗಳ ಪರಿಶೀಲನೆ ವೇಳೆ ಅಡ್ಡಿ ಎದುರಾಗದಿದ್ದರೂ, ತನಿಖೆಯ ಒಂದೊಂದು ಹಂತದಲ್ಲಿ ‘ಡೈರೆಕ್ಟ್ ಡೀಲ್’ ಪತ್ತೆಯಾಗಿದೆ. ಕಲಬುರಗಿಯಲ್ಲಿ ಬಂಧಿತ ಅಭ್ಯರ್ಥಿಯೊಬ್ಬ ಸಿಐಡಿ ಎದುರು ಈ ಬಗ್ಗೆ ಬಾಯ್ಬಿಟ್ಟಿರುವ ಆಧಾರದ ಮೇಲೆ ಅಮೃತ್ ಪಾಲ್ ಅವರನ್ನು ಕಲಬುರಗಿಯಲ್ಲಿಯೂ ವಿಚಾರಣೆ ನಡೆಸುವ ಸಾಧ್ಯತೆ ಎದುರಾಗಬಹುದು. ಮುಂಬರುವ ದಿನಗಳಲ್ಲಿ ಈ ಬಗ್ಗೆ ನ್ಯಾಯಾಲಯಕ್ಕೆ ಕೋರಲಾಗುವುದು ಎಂದು ನಂಬಲರ್ಹ ಪೊಲೀಸ್ ಮೂಲಗಳು ’ಕನ್ನಡಪ್ರಭ’ಕ್ಕೆ ತಿಳಿಸಿವೆ.
