ಬೆಂಗಳೂರು(ಮೇ.29): ಕೊರೋನಾ ಸೋಂಕಿತರಿಗೆ ಮಾರಣಾಂತಿಕವಾಗಿರುವ ಕಪ್ಪು ಶಿಲೀಂಧ್ರ (ಬ್ಲ್ಯಾಕ್‌ ಫಂಗಸ್‌) ಸೋಂಕಿಗೆ ಅತಿಯಾದ ಸ್ಟಿರಾಯ್ಡ್‌ ಔಷಧಿ ಸೇವನೆ, ಕೈಗಾರಿಕಾ ಆಮ್ಲಜನಕ ಬಳಕೆ, ವೆಂಟಿಲೇಟರ್‌ಗಳ ಅಸ್ವಚ್ಛತೆ ಮುಂತಾದವುಗಳು ಕಾರಣ ಎಂಬ ನಂಬಿಕೆ ಈವರೆಗೆ ಇತ್ತು. ಆದರೆ ಈ ನಂಬಿಕೆ ತಳ್ಳಿ ಹಾಕುವ ರೀತಿಯಲ್ಲಿ, ‘ರೂಪಾಂತರಗೊಂಡಿರುವ ವೈರಾಣು ಹಾಗೂ ವಿಪರೀತ ಪ್ರಮಾಣದಲ್ಲಿ ಹಬೆ (ಸ್ಟೀಮ್‌) ತೆಗೆದುಕೊಳ್ಳುತ್ತಿರುವುದು ಸಹ ಬ್ಲ್ಯಾಕ್‌ ಫಂಗಸ್‌ಗೆ ಕಾರಣವಾಗಿರಬಹುದು’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೊರೋನಾ ಸೋಂಕು ಮೂಗಿನ ಮೂಲಕ ಬರುವುದನ್ನು ತಡೆಯಲು ಹಬೆ (ಸ್ಟೀಮ್‌) ತೆಗೆದುಕೊಳ್ಳುವುದು ಉತ್ತಮ ಎಂಬ ಮಾತುಗಳನ್ನು ನಂಬಿ ಜನರು ದಿನಕ್ಕೆ ಹತ್ತಾರು ಬಾರಿ ಕುದಿವ ನೀರಿನ ಹಬೆ ತೆಗೆದುಕೊಂಡ ಪರಿಣಾಮ ಮೂಗಿನ ಜೀವ ನಿರೋಧಕತೆ ಕಡಿಮೆ ಆಗಿದೆ. ಗಾಳಿಯಲ್ಲಿ ಇರುವ ಕಪ್ಪು ಶಿಲೀಂಧ್ರ ಸುಲಭವಾಗಿ ಮೂಗಿನ ಮೂಲಕ ಸೇರಿ ಜೀವಕ್ಕೆ ಹಾನಿ ಉಂಟು ಮಾಡುತ್ತಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ರಾಜ್ಯದಲ್ಲಿ ಕಪ್ಪು ಶಿಲೀಂಧ್ರ ರೋಗದಿಂದ ಬಳಲುತ್ತಿರುವವರ ಪೈಕಿ ಅತಿ ಹೆಚ್ಚು ಜನರಿಗೆ ಶಸ್ತ್ರಚಿಕಿತ್ಸೆ ನಡೆಸಿರುವ ಖ್ಯಾತ ವೈದ್ಯ ಡಾ. ದೀಪಕ್‌ ಹಲ್ದಿಪುರ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ರಾಜ್ಯದಲ್ಲಿ ಅರ್ಧದಷ್ಟೂಇಲ್ಲ ಬ್ಲ್ಯಾಕ್‌ ಫಂಗಸ್‌ ಇಂಜೆಕ್ಷನ್‌! ಎಚ್ಚರಿಕೆ

ಸ್ಟೀಮ್‌ನಿಂದ ಸುಲಭ ತುತ್ತು: ದಿನಕ್ಕೆ 8-10 ಬಾರಿ ಕುದಿವ ನೀರಿನಿಂದ ಜನರು ಹಬೆ ತೆಗೆದುಕೊಳ್ಳುತ್ತಿರುವುದರಿಂದ ಮೂಗಿನ ಜೀವ ನಿರೋಧಕತೆ ಕಡಿಮೆ ಆಗುತ್ತದೆ. ಏಕೆಂದರೆ ಕಪ್ಪು ಶಿಲೀಂಧ್ರ ಗಾಳಿಯಲ್ಲೇ ಇರುತ್ತದೆ. ಅದನ್ನು ಮೂಗಿನ ಮೂಲಕ ಸೇವಿಸುತ್ತಿದ್ದೇವೆ. ಆದರೆ ಈವರೆಗೆ ಸಮಸ್ಯೆ ಕಂಡು ಬಂದಿರಲಿಲ್ಲ. ಆದರೆ ಮಿಕ್ಸೋಪತಿ ವೈದ್ಯರ ಮಾತು ನಂಬಿ ಜನರು ವಿಪರೀತ ಪ್ರಮಾಣದಲ್ಲಿ ಹಬೆ ತೆಗೆದುಕೊಂಡ ಪರಿಣಾಮ ಇದರಿಂದ ಮೂಗಿನ ಜೀವನಿರೋಧಕತೆ ದುರ್ಬಲಗೊಳ್ಳುತ್ತಿದೆ. ಇದರಿಂದ ಶಿಲೀಂಧ್ರ ಸುಲಭವಾಗಿ ದೇಹ ಪ್ರವೇಶಿಸುತ್ತಿದೆ’ ಎಂದು ಡಾ. ಹಲ್ದಿಪುರ ಹೇಳುತ್ತಾರೆ.

ಟ್ರಸ್ಟ್‌ವೆಲ್‌ ಆಸ್ಪತ್ರೆ ನಿರ್ದೇಶಕರಾಗಿರುವ ಡಾ. ದೀಪಕ್‌ ವಿ. ಹಲ್ದಿಪುರ ಪ್ರಕಾರ, ಮನೆಯಲ್ಲೇ ಇದ್ದು ಯಾವುದೇ ಔಷಧಿಯಿಲ್ಲದೆ ಕೊರೋನಾದಿಂದ ಚೇತರಿಸಿಕೊಂಡವರಲ್ಲಿ ಕಪ್ಪು ಶಿಲೀಂಧ್ರ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಮೊದಲ ಅಲೆಯಲ್ಲಿ ಚಿಕಿತ್ಸೆ ನೀಡಿದ ಮಾದರಿಯಲ್ಲಿಯೇ ಆಸ್ಪತ್ರೆಗಳು ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರೂ ಆಗ ಕಪ್ಪು ಶಿಲೀಂಧ್ರ ಸಮಸ್ಯೆ ಕಾಣಿಸಿಕೊಂಡಿರಲಿಲ್ಲ. ಮೊದಲ ಅಲೆಯಲ್ಲಿಯೂ ಮಧುಮೇಹ ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇವೆ. ನಾವು ಬೇರೆ ಸಂದರ್ಭಗಳಲ್ಲಿಯೂ ಸ್ಟಿರಾಯ್ಡ್‌, ಆಮ್ಲಜನಕ ಬಳಸಿ ಚಿಕಿತ್ಸೆ ನೀಡಿದ್ದೇವೆ. ಆದರೆ ಇಂತಹ ಸಮಸ್ಯೆ ಕಾಣಿಸಿಕೊಂಡಿರಲಿಲ್ಲ ಎಂದು ಹೇಳುತ್ತಾರೆ.

ಡಾ. ದೀಪಕ್‌ ಹಲ್ದಿಪುರ ಪ್ರಕಾರ, ಕಪ್ಪು ಶಿಲೀಂಧ್ರ ಸಮಸ್ಯೆಗೆ ರೂಪಾಂತರಿ ಕೊರೋನಾ ವೈರಾಣು ಮತ್ತು ಲಸಿಕೆ ಪಡೆಯದಿರುವುದು ಕೂಡ ಕಾರಣವಾಗಿದೆ. ಎರಡು ಡೋಸ್‌ ಲಸಿಕೆ ಪಡೆದವರಲ್ಲಿ ಈವರೆಗೆ ಶಿಲೀಂಧ್ರ ಪತ್ತೆಯಾಗಿಲ್ಲ ಎಂದು ಅವರು ಹೇಳುತ್ತಾರೆ.

ಕೋವಿಡ್‌ ಗೆಲ್ಲಲು ಡಯಾಬಿಟೀಸ್‌ ರೋಗಿಗಳು ಸ್ಟಿರಾಯ್ಡ್‌ ಔಷಧಿ ತೆಗೆದುಕೊಳ್ಳುವುದು ಕಪ್ಪು ಶಿಲೀಂಧ್ರ ಸಮಸ್ಯೆಗೆ ಕಾರಣ ಎಂದು ನಂಬಲಾಗಿತ್ತು. ಆದರೆ ಸ್ಟಿರಾಯ್ಡ್‌ ತೆಗೆದುಕೊಳ್ಳದ ರೋಗಿಗಳಲ್ಲಿಯೂ ಶಿಲೀಂಧ್ರ ಸಮಸ್ಯೆ ಕಾಡಲಾರಂಭಿಸಿದ ಹಿನ್ನೆಲೆಯಲ್ಲಿ ಇನ್ನೂ ಅನೇಕ ವೈದ್ಯಕೀಯ ಚಿಕಿತ್ಸೆಯ ಕಾರಣಗಳನ್ನು ಹೇಳಲಾಗುತ್ತಿತ್ತು. ಆದರೆ ಇದೀಗ ಕೋವಿಡ್‌ ಬಂದು ಹೋಗಿದ್ದೇ ಗೊತ್ತಿಲ್ಲದವರಲ್ಲಿ, ಸೌಮ್ಯ ಲಕ್ಷಣಗಳಿದ್ದು ಸ್ಟಿರಾಯ್ಡ್‌ ಔಷಧಿ ಪಡೆಯದೇ ಇದ್ದವರಲ್ಲಿ, ಆಸ್ಪತ್ರೆಯಲ್ಲಿ ದಾಖಲಾಗದೆ ಹೋಮ್‌ ಐಸೋಲೇಷನ್‌ನಲ್ಲಿದ್ದವರಲ್ಲಿಯೂ ಕಪ್ಪು ಶಿಲಿಂಧ್ರ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎನ್ನುತ್ತಾರೆ.

ಮಿಕ್ಸೋಪತಿ ಕಾರಣ: 

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಸಂದೇಶ, ಮಿಕ್ಸೋಪತಿಗಳ ಮಾತು ಕೇಳಿ ಬೆಳಗ್ಗೆಯಿಂದ ಸಂಜೆ ಬಿಸಿ ನೀರಿನಲ್ಲಿ ಹಬೆ ತೆಗೆದುಕೊಳ್ಳುವುದು ಮೂಗಿನ ಆರೋಗ್ಯ ಮೇಲೆ ಕೆಟ್ಟಪರಿಣಾಮ ಬೀರಿದೆ. ಮೂಗಿನ ಮೂಲಕ ಪ್ರವೇಶಿಸುವ ವೈರಾಣು ಅಲ್ಲಿ ಒಂದೆರಡು ದಿನ ನೆಲೆ ನಿಂತು ತನ್ನ ಶಕ್ತಿ ಮತ್ತು ಸಂಖ್ಯೆ ವೃದ್ಧಿಸಿಕೊಂಡು ಶ್ವಾಸಕೋಶದ ಮೇಲೆ ದಾಳಿ ನಡೆಸುತ್ತದೆ. ಆದ್ದರಿಂದ ಈ ವೈರಾಣುವನ್ನು ಮೂಗಿನಲ್ಲೇ ಕೊಂದರೆ ಕೋವಿಡ್‌ ಆಪಾಯದಿಂದ ಪಾರಾಗಬಹುದು. ಕೊರೋನಾವನ್ನು ನಾಸಿಕದಲ್ಲೇ ಕೊಲ್ಲಲು ಹಬೆ ತೆಗೆದುಕೊಳ್ಳುವುದು ಸಹಕಾರಿ ಎಂದು ಅನೇಕರು ಹಬೆ ತೆಗೆದುಕೊಳ್ಳುವುದನ್ನು ಚಟ ಮಾಡಿಕೊಂಡಿದ್ದಾರೆ.