ರಾಜ್ಯದಲ್ಲಿ ಅರ್ಧದಷ್ಟೂಇಲ್ಲ ಬ್ಲ್ಯಾಕ್‌ ಫಂಗಸ್‌ ಇಂಜೆಕ್ಷನ್‌! ಎಚ್ಚರಿಕೆ

  • ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿರುವ ಕಪ್ಪು ಶಿಲೀಂಧ್ರ ರೋಗ
  • ಔಷಧಿಯ ತೀವ್ರ ಕೊರತೆ ರಾಜ್ಯದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳನ್ನು ಕಾಡುತ್ತಿದೆ
  • ಮಾರಕ ರೋಗಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚಬಹುದು ಎಂದು ತಜ್ಞರು ಎಚ್ಚರಿಕೆ
Karnataka Faces Black fungus  Medicine Shortages snr

 ಬೆಂಗಳೂರು (ಮೇ.28):  ರಾಜ್ಯದಲ್ಲಿ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿರುವ ಕಪ್ಪು ಶಿಲೀಂಧ್ರ ರೋಗಕ್ಕೆ ನೀಡುವ ಔಷಧಿಯ ತೀವ್ರ ಕೊರತೆ ರಾಜ್ಯದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳನ್ನು ಕಾಡುತ್ತಿದೆ. ಈ ಪರಿಸ್ಥಿತಿ ಸರಿದೂಗಿಸಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳದಿದ್ದರೆ ಈ ಮಾರಕ ರೋಗಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.

ರಾಜ್ಯದಲ್ಲಿ ಸುಮಾರು 600 ಮಂದಿಗೆ ಕಪ್ಪು ಶಿಲೀಂಧ್ರ (ಬ್ಲಾಕ್‌ ಫಂಗಸ್‌) ಕಾಯಿಲೆ ಬಂದಿರುವುದು ಖಚಿತವಾಗಿದೆ. ತಜ್ಞರ ಪ್ರಕಾರ ಒಬ್ಬ ರೋಗಿಗೆ ಚಿಕಿತ್ಸೆ ನೀಡಲು ಕನಿಷ್ಠ ಪಕ್ಷ ಅಂಪೊಟೆರಿಸಿನ್‌ ಬಿ 60 ವಯಲ್ಸ್‌ ಬೇಕು. ಅಂದರೆ ಒಟ್ಟು 36,000 ವಯಲ್ಸ್‌ ಅಗತ್ಯವಿದೆ. ಆದರೆ ಕೇಂದ್ರ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ರಾಜ್ಯಕ್ಕೆ ಮೇ 26ರವರೆಗೆ 5,180 ವಯಲ್ಸ್‌ ಲಸಿಕೆ ಹಂಚಿಕೆಯಾಗಿದೆ. ಈ ಮಧ್ಯೆ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 5,190 ವಯಲ್ಸ್‌ ಚುಚ್ಚುಮದ್ದನ್ನು ನೀಡುವುದಾಗಿ ಪ್ರಕಟಿಸಿದರೂ ಅಭಾವ ಪೂರ್ಣವಾಗಿ ಬಗೆಹರಿಯುವುದಿಲ್ಲ.

ಈ ಮೊದಲು ಕೇಂದ್ರ ನೀಡಿದ್ದ ವಯಲ್ಸ್‌ ಸಂಪೂರ್ಣ ಖಾಲಿಯಾಗಿದೆ. ಹೊಸದಾಗಿ 5,190 ವಯಲ್ಸ್‌ ಬಂದರೆ ಅದರಿಂದ ತಾತ್ಕಾಲಿಕ ಪರಿಹಾರ ದೊರೆಯಬಹುದು. ಆದರೆ, ಆರೋಗ್ಯ ಇಲಾಖೆಯ ಮೂಲಗಳ ಪ್ರಕಾರ ಮೇ ಮಾಸಾಂತ್ಯದವರೆಗೆ ಪರಿಸ್ಥಿತಿ ನಿಭಾಯಿಸಲು 20 ಸಾವಿರ ವಯಲ್ಸ್‌ ಬೇಕು. ಇದು ಬೇಡಿಕೆ ಹಾಗೂ ಪೂರೈಕೆಯ ನಡುವಿನ ಭಾರಿ ವ್ಯತ್ಯಾಸ ತೋರಿಸುತ್ತದೆ.

ಬಂಧುಗಳೇ ಔಷಧ ತರಬೇಕಂತೆ!:  ಅಷ್ಟೇ ಅಲ್ಲ, ಕಪ್ಪು ಶಿಲೀಂಧ್ರ ಕಾಯಿಲೆಗೆ ಚಿಕಿತ್ಸೆ ನೀಡುತ್ತಿರುವ ಖಾಸಗಿ ಆಸ್ಪತ್ರೆಗಳಲ್ಲಿಯೂ ಅಂಪೊಟೆರಿಸಿನ್‌ನ ತೀವ್ರ ಕೊರತೆ ಕಾಡುತ್ತಿದೆ. ಹೀಗಾಗಿ ಈ ಆಸ್ಪತ್ರೆಗಳು ನೀವೇ ಔಷಧಿ ತಂದು ಕೊಡಿ ಎಂದು ರೋಗಿಗಳ ಸಂಬಂಧಿಕರಿಗೆ ಹೇಳುತ್ತಿವೆ. ಸರ್ಕಾರಿ ಆಸ್ಪತ್ರೆಗಳಿಂದ ಔಷಧಿ ತರುವಂತೆ ಸೂಚಿಸುತ್ತಿವೆ. ಆದರೆ ಸರ್ಕಾರಿ ಆಸ್ಪತ್ರೆಗಳೂ ಈಗಾಗಲೇ ಔಷಧಿಯ ಕೊರತೆಯಿಂದ ಡೋಸ್‌ ಪ್ರಮಾಣ ಮಾಡಿ ಚಿಕಿತ್ಸೆ ನೀಡುವ ಪ್ರಯತ್ನ ನಡೆಸುತ್ತಿವೆ. ಔಷಧ ಇಲಾಖೆಯ ಉನ್ನತ ಮೂಲಗಳ ಪ್ರಕಾರ ಕಪ್ಪು ಫಂಗಸ್‌ ಕಾಯಿಲೆಯ ಚಿಕಿತ್ಸೆಗೆಂದು ಬಂದಿರುವ ಔಷಧದ ದಾಸ್ತಾನು ಖಾಲಿಯಾಗಿದೆ. ಹೊಸ ದಾಸ್ತಾನು ಯಾವಾಗ ಬರುತ್ತದೆ ಎಂಬ ಮಾಹಿತಿ ಇಲ್ಲ. ಸದ್ಯ ಆಸ್ಪತ್ರೆಗಳ ಬಳಿಯಿರುವ ಔಷಧಿಯಿಂದ ಪರಿಸ್ಥಿತಿ ನಿಭಾಯಿಸಬೇಕಿದೆ. ಅದರೆ ಹೆಚ್ಚುವರಿಯಾಗಿ 5,190 ವಯಲ್ಸ್‌ ತಕ್ಷಣವೇ ರಾಜ್ಯಕ್ಕಿ ಸಿಕ್ಕರೆ ತಾತ್ಕಾಲಿಕವಾಗಿ ಪರಿಸ್ಥಿತಿಯನ್ನು ನಿಭಾಯಿಸಬಹುದು ಎಂದು ಇಲಾಖೆಯ ಮೂಲಗಳು ಹೇಳುತ್ತವೆ.

ಗುಪ್ತಾಂಗ, ಚರ್ಮ, ಮೆದುಳಿಗೆ ಹಾನಿ, ಬ್ಲ್ಯಾಕ್ ಫಂಗಸ್‌ಗಿಂತಲೂ ಡೇಂಜರ್ ಈ ವೈಟ್‌ ಫಂಗಸ್! ..

ಸರ್ಕಾರದ ಉನ್ನತ ಮೂಲವೊಂದರ ಪ್ರಕಾರ ರೆಮ್‌ಡೆಸಿವಿರ್‌ ಚುಚ್ಚುಮದ್ದಿನ ಕೊರತೆ ತೀವ್ರವಾಗಿ ಕಾಡಿದಾಗ ನಮ್ಮಲ್ಲಿ ರೆಮ್‌ಡೆಸಿವಿರ್‌ ಉತ್ಪಾದಿಸುವ ಕಂಪೆನಿಗಳು, ಕಚ್ಚಾ ವಸ್ತು ಲಭ್ಯವಿತ್ತು. ಆದ್ದರಿಂದ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಯಿತು. ಆದರೆ ಅಂಪೊಟೆರಿಸಿನ್‌ ಬಿ ಅನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಿದೆ. ಆದ್ದರಿಂದ ಕಪ್ಪು ಶಿಲೀಂಧ್ರ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತ ಹೋದರೆ ಪರಿಸ್ಥಿತಿ ನಿಭಾಯಿಸುವುದು ಕಠಿಣವಾಗುತ್ತ ಹೋಗಲಿದೆ ಎಂದು ಹೇಳುತ್ತವೆ.

ಹೊಸ ರೋಗಿಗಳು ಬಂದ್ರೆ ಕಷ್ಟ:  ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಯಲ್ಲಿ ಕಪ್ಪು ಶಿಲೀಂಧ್ರ ರೋಗಿಗಳ ಚಿಕಿತ್ಸೆ ನಿರ್ವಹಿಸುತ್ತಿರುವ ಡಾ. ಧನ್‌ಪಾಲ್‌ ಪ್ರಕಾರ, ಆಸ್ಪತ್ರೆಯಲ್ಲಿ ಸದ್ಯ 70 ರೋಗಿಗಳಿದ್ದು ಈಗಿರುವ ರೋಗಿಗಳಿಗೆ ಚಿಕಿತ್ಸೆ ನೀಡುವಷ್ಟುಮಾತ್ರ ಔಷಧವಿದೆ. ಹೊಸ ರೋಗಿಗಳು ಬಂದರೆ ಪರಿಸ್ಥಿತಿ ಬಿಗಡಾಯಿಸಬಹುದು ಎಂದು ಹೇಳುತ್ತಾರೆ.

ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಮ್ಸ್‌ಗಳ ಒಕ್ಕೂಟದ ಅಧ್ಯಕ್ಷ ಎಚ್‌.ಎಂ. ಪ್ರಸನ್ನ ಅವರು ಅಂಪೊಟೆರಿಸಿನ್‌ ಬಿ ಕೊರತೆ ಇರುವುದನ್ನು ಒಪ್ಪಿಕೊಂಡಿದ್ದು, ‘ನಮ್ಮಲ್ಲಿ ಈ ಮೊದಲು ಒಂದೆರಡು ರೋಗಿಗಳು ಮಾತ್ರ ಪತ್ತೆ ಆಗುತ್ತಿದ್ದರು. ಆದರೆ ಈಗ ಭಾರಿ ಪ್ರಮಾಣದಲ್ಲಿ ರೋಗ ಕಂಡು ಬಂದಿದ್ದು ನಮ್ಮಲ್ಲಿನ ಔಷಧಿ ಸಾಕಾಗುವುದಿಲ್ಲ. ಮುಕ್ತ ಮಾರುಕಟ್ಟೆಯಲ್ಲಿಯೂ ಔಷಧಿ ಸಿಗುತ್ತಿಲ್ಲ’ ಎಂದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios