Asianet Suvarna News Asianet Suvarna News

ಸದ್ದಿಲ್ಲದೆ ಬ್ಲ್ಯಾಕ್‌ ಫಂಗಸ್‌ ಸಾವಿನಬ್ಬರ ಏರಿಕೆ..!

* ರಾಜ್ಯದಲ್ಲಿ ಈವರೆಗೆ ಫಂಗಸ್‌ಗೆ ಬಲಿಯಾದವರ ಸಂಖ್ಯೆ 200ರ ಗಡಿಯತ್ತ
* 2600 ಜನರಿಗೆ ಕಪ್ಪು ಶಿಲೀಂದ್ರ ಸೋಂಕು
* ವಿವಿಧ ಆಸ್ಪತ್ರೆಗಳಲ್ಲಿ ಈಗಾಗಲೇ 300ಕ್ಕೂ ಹೆಚ್ಚು ಜನರಿಗೆ 3ನೇ ಹಂತಕ್ಕೆ ಸೋಂಕು
 

Black Fungus Death Ration Increasing in Karnataka grg
Author
Bengaluru, First Published Jun 14, 2021, 8:15 AM IST

ಬೆಂಗಳೂರು(ಜೂ.14): ರಾಜ್ಯದಲ್ಲಿ ಕೊರೋನಾ ಸೋಂಕು ಇಳಿಕೆಯಾಗುತ್ತಿದ್ದರೂ, ಬ್ಲ್ಯಾಕ್‌ ಫಂಗಸ್‌ ಸೋಂಕಿತರು ಮತ್ತು ಸಾವಿನ ಪ್ರಮಾಣ ಏರಿಕೆಯ ಹಾದಿಯಲ್ಲೇ ಇದ್ದು ಆತಂಕಕ್ಕೆ ಕಾರಣವಾಗಿದೆ. ಭಾನುವಾರದವರೆಗೆ ರಾಜ್ಯದಲ್ಲಿ ಬರೋಬ್ಬರಿ 2,600 ಮಂದಿಗೆ ಕಪ್ಪು ಶಿಲೀಂದ್ರ ಸೋಂಕು ತಗುಲಿದೆ. ಈ ಪೈಕಿ 127 ಮಂದಿ ಗುಣಮುಖರಾಗಿದ್ದು, ಬರೋಬ್ಬರಿ 197 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 200ರ ಗಡಿ ತಲುಪಿದೆ.

ಇನ್ನೂ 2002 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 300ಕ್ಕೂ ಹೆಚ್ಚು ಮಂದಿಗೆ ಎರಡನೇ ಹಂತ ಹಾಗೂ ಮೂರನೇ ಹಂತಕ್ಕೆ ಸೋಂಕು ಹರಡಿದೆ. ಹೀಗಾಗಿ ಸಾವಿನ ಸಂಖ್ಯೆಯ ಮತ್ತಷ್ಟುಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಬೆಡ್‌ ಹಾಗೂ ಔಷಧದ ತೀವ್ರ ಕೊರತೆ ಕಾಡುತ್ತಿದೆ. ಪ್ರತಿಯೊಬ್ಬ ಸೋಂಕಿತನಿಗೆ ಕನಿಷ್ಠ ಎರಡು ವಾರ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಬೇಕು. ಅಲ್ಲದೆ, ನಿತ್ಯ 6 ವಯಲ್ಸ್‌ ಅಂಪೊಟೆರಿಸಿನ್‌ ಬಿ ಔಷಧ ನೀಡಬೇಕು.

ಬೆಂಗಳೂರಿನಲ್ಲೇ ಹೆಚ್ಚು ಸೋಂಕು, ಸಾವು:

ಬೆಂಗಳೂರಿನಲ್ಲಿ ಈವರೆಗೆ 900 ಮಂದಿಗೆ ಕಪ್ಪು ಶಿಲೀಂದ್ರ ಸೋಂಕು ಹರಡಿದ್ದು, 70 ಮಂದಿ ಬಲಿಯಾಗಿದ್ದಾರೆ. ಮಂಡ್ಯದಲ್ಲಿ 17, ಚಿತ್ರದುರ್ಗ 99, ಕಲಬುರಗಿ 146 ಮಂದಿಗೆ ಸೋಂಕು ತಗುಲಿದ್ದು, ಜೂ.11ರ ಬೆಳಗ್ಗೆ 10 ಗಂಟೆವರೆಗೆ ಬಾಗಲಕೋಟೆ 97, ಬಳ್ಳಾರಿ 88, ಬೆಳಗಾವಿ 147, ಬೆಂಗಳೂರು ಗ್ರಾಮಾಂತರ 54, ಬೀದರ್‌ 26, ಚಾಮರಾಜನಗರ 9, ಚಿಕ್ಕಬಳ್ಳಾಪುರ 13, ಚಿಕ್ಕಮಗಳೂರು 3, ಚಿತ್ರದುರ್ಗ 95, ದಕ್ಷಿಣ ಕನ್ನಡ 61, ದಾವಣಗೆರೆ 69, ಧಾರವಾಡ 202, ಗದಗ 31, ಹಾಸನ 31, ಹಾವೇರಿ 37, ಕೊಡಗು 1, ಕೋಲಾರ 63, ಕೊಪ್ಪಳ 23, ಮೈಸೂರು 93, ರಾಯಚೂರು 81, ರಾಮನಗರ 6, ಶಿವಮೊಗ್ಗ 46, ತುಮಕೂರು 32, ಉಡುಪಿ 15, ಉತ್ತರ ಕನ್ನಡ 8, ವಿಜಯಪುರ 99, ಯಾದಗಿರಿಯಲ್ಲಿ 3 ಮಂದಿ ಸೋಂಕು ಹರಡಿತ್ತು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

GST ಕೌನ್ಸಿಲ್ ಸಭೆ: ಬ್ಲಾಕ್ ಫಂಗಸ್ ಇಂಜೆಕ್ಷನ್, ಕೋವಿಡ್ ಉಪಕರಣ ಮೇಲೆ ತೆರಿಗೆ ಕಡಿತ!

ದ್ವಿಶಕದತ್ತ ಸಾವು:

ಸಾವಿನ ಪೈಕಿ ಬೆಂಗಳೂರು ನಗರ 70, ಕಲಬುರಗಿಯಲ್ಲಿ 19, ಧಾರವಾಡ 15, ಮೈಸೂರು, ದಕ್ಷಿಣ ಕನ್ನಡ ತಲಾ 11, ದಾವಣಗೆರೆ 8, ಬಾಗಲಕೋಟೆ, ಬಳ್ಳಾರಿ, ಶಿವಮೊಗ್ಗ, ಬೆಳಗಾವಿ ತಲಾ 7, ಚಿಕ್ಕಬಳ್ಳಾಪುರ 6, ಬೆಂಗಳೂರು ಗ್ರಾಮಾಂತರ, ಹಾಸನ ತಲಾ 5, ಗದಗ 4, ಚಾಮರಾಜನಗರ 3, ಬೀದರ್‌ , ವಿಜಯಪುರ, ಕೋಲಾರ, ಕೊಪ್ಪಳ, ಮಂಡ್ಯ ತಲಾ 2, ರಾಯಚೂರು, ಯಾದಗಿರಿ ತಲಾ 1 ಸಾವು ಸೇರಿ ಒಟ್ಟು 197 ಮಂದಿ ಸಾವನ್ನಪ್ಪಿದ್ದಾರೆ.

ಈಗಲೂ ಔಷಧ ಕೊರತೆ

ಬ್ಲ್ಯಾಕ್‌ ಫಂಗಸ್‌ ಸೋಂಕಿತರಿಗೆ ಈವರೆಗೆ ಕೇಂದ್ರದಿಂದ 32 ಸಾವಿರ ವಯಲ್ಸ್‌ ಮಾತ್ರ ಔಷಧ ಪೂರೈಕೆಯಾಗಿದ್ದು, 9,700 ವಯಲ್‌ ದಾಸ್ತಾನು ಇದೆ. ಪ್ರಸ್ತುತ ಇರುವ ಸಕ್ರಿಯ ಸೋಂಕಿತರಿಗೆ ನಿತ್ಯ 12 ಸಾವಿರ ವಯಲ್ಸ್‌ ಔಷಧ ಬೇಕು. ಆದರೆ, ಔಷಧ ಕೊರತೆಯಿಂದ ಹೆಚ್ಚು ಸೋಂಕು ಹರಡದವರಿಗೆ ಕಡಿಮೆ ಔಷಧ ನೀಡಲಾಗುತ್ತಿದೆ. ಈ ಮೂಲಕ ನಿರ್ವಹಣೆ ಮಾಡುತ್ತಿದ್ದು, ಪ್ರಸ್ತುತ ಇರುವ ಸೋಂಕಿತರಿಗೆ ಪೂರ್ಣ ಚಿಕಿತ್ಸೆ ನೀಡಬೇಕಾದರೂ ಕನಿಷ್ಠ 1 ಲಕ್ಷ ವಯಲ್ಸ್‌ ಔಷಧ ಬೇಕು ಎಂದು ಬ್ಲಾಕ್‌ ಫಂಗಸ್‌ ಕುರಿತು ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿ ಸದಸ್ಯರೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಸಾವಿನ ಪ್ರಮಾಣ ಹೆಚ್ಚುವ ಭೀತಿ ಹೆಚ್ಚು ಸೋಂಕಿರುವ ಟಾಪ್‌ 3 ನಗರ

1.ಬೆಂಗಳೂರು 900
2.ಧಾರವಾಡ 202
3.ಬೆಳಗಾವಿ 147

ಹೆಚ್ಚು ಸಾವಿನ ಟಾಪ್‌ 3 ನಗರ

1.ಬೆಂಗಳೂರು 70
2.ಕಲಬುರಗಿ 19
3.ಧಾರವಾಡ 15
 

Follow Us:
Download App:
  • android
  • ios