ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನವೀನ್‌ ಅವರು ರಾಜ್ಯಕ್ಕೆ ಮೊದಲ ಬಾರಿಗೆ ಆಗಮಿಸಿದ್ದು, ಎರಡು ದಿನಗಳ ಕಾಲ ಪಕ್ಷ ಸಂಘಟನೆ ಕುರಿತು ಸರಣಿ ಸಭೆಗಳನ್ನು ನಡೆಸಲಿದ್ದಾರೆ. ಈ ಭೇಟಿಯ ವೇಳೆ, ಮುಂಬರುವ ಚುನಾವಣೆಗಳು ಮತ್ತು ರಾಜ್ಯ ನಾಯಕತ್ವ ಬದಲಾವಣೆಯಂತಹ ಮಹತ್ವದ ವಿಷಯಗಳ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ.

ಬೆಂಗಳೂರು (ಮೇ.24): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿರುವ ನಿತಿನ್‌ ನವೀನ್‌ ಅವರು ಭಾನುವಾರ ಮತ್ತು ಸೋಮವಾರ ಪಕ್ಷ ಸಂಘಟನೆ ಕುರಿತು ಸರಣಿ ಸಭೆಗಳನ್ನು ನಡೆಸಲಿದ್ದಾರೆ.

ಶನಿವಾರ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ ಅವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಮತ್ತಿತರರು ಸ್ವಾಗತಿಸಿದರು.

ಎರಡು ದಿನಗಳ ಕಾಲ ವಿವಿಧ ಸಭೆ ನಡೆಸಲಿರುವ ನಿತಿನ್‌ ನವೀನ್‌ ಅವರು ರಾಜ್ಯಸಭೆ ಮತ್ತು ವಿಧಾನಪರಿಷತ್‌ ಚುನಾವಣೆಗಳು, ಮುಂಬರುವ ಜಿಬಿಎ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಬಗ್ಗೆಯೂ ರಾಜ್ಯದ ನಾಯಕರೊಂದಿಗೆ ಚರ್ಚಿಸಲಿದ್ದಾರೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು 12 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಮುಂದೆ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ದಿಕ್ಸೂಚಿ ನೀಡಲಿದ್ದಾರೆ.

ಇದೇ ವೇಳೆ ನಿತಿನ್ ನವೀನ್ ಅವರು ರಾಜ್ಯದ ಹಿರಿಯ ನಾಯಕರೊಂದಿಗೆ ವೈಯಕ್ತಿಕವಾಗಿ ರಾಜ್ಯಾಧ್ಯಕ್ಷ ಹುದ್ದೆಯ ಬದಲಾವಣೆ ಸೇರಿದಂತೆ ಪಕ್ಷ ಸಂಘಟನೆ ಬಲಪಡಿಸುವ ಕುರಿತಂತೆ ಅಭಿಪ್ರಾಯ, ಸಲಹೆ ಸ್ವೀಕರಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ರಾಜ್ಯಕ್ಕೆ ನಿತಿನ್, ಇಂದಿನ ಕಾರ್ಯಕ್ರಮಗಳೇನು?

ಭಾನುವಾರ ಬೆಳಿಗ್ಗೆ 9ಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಉಪಾಹಾರ ಸೇವಿಸಲಿದ್ದಾರೆ. ನಂತರ 10.45ಕ್ಕೆ ರಾಜ್ಯ ಬಿಜೆಪಿ ನಾಯಕರೊಂದಿಗೆ ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ. ಬೆಳಗ್ಗೆ 11.10ಕ್ಕೆ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿಗೆ ಭೇಟಿ ನೀಡಲಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಬೆಳಗ್ಗೆ 11.30 ರಿಂದ ಮಧ್ಯಾಹ್ನ 1 ಗಂಟೆವರೆಗೆ ಶಾಸಕರು, ಸಂಸದರು, ಪದಾಧಿಕಾರಿಗಳ ಜೊತೆಗೆ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 2 ಗಂಟೆಯಿಂದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಬಿಜೆಪಿ ಕಚೇರಿಯಿಂದ ಹೊರಟು 3.45 ರಿಂದ ಬೆಂಗಳೂರು ಉತ್ತರ ಜಿಲ್ಲೆ ಪ್ರಶಿಕ್ಷಣಾ ಶಿಬಿರದ ಸಮಾರೋಪದಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 4.30 ರಿಂದ ರಾಜ್ಯ ಎಸ್ಐಆರ್ ತಂಡದ ಜೊತೆಗೆ ಸಭೆ ನಡೆಸಲಿದ್ದಾರೆ.

ಸೋಮವಾರ ಬೆಳಿಗ್ಗೆ 9 ಗಂಟೆಯಿಂದ ರಾಜ್ಯ ನಾಯಕರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಲಿದ್ದಾರೆ. ಸಂಜೆ 4.30ಕ್ಕೆ ಬೆಂಗಳೂರಿನಿಂದ ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಿತವ್ಯಯ ಮಂತ್ರ: ಬಿಜೆಪಿ ಅಧ್ಯಕ್ಷರಿಗೆ ಸರಳವಾಗಿ ಸ್ವಾಗತ

ಮಿತವ್ಯಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನವೀನ್‌ ಅವರನ್ನು ರಾಜ್ಯ ಬಿಜೆಪಿ ನಾಯಕರು ಸರಳವಾಗಿ ಸ್ವಾಗತಿಸಿದರು. ಕಾರು, ಬೈಕ್‌ ರಾಲಿ ಮುಖಾಂತರ ಅದ್ಧೂರಿ ಸ್ವಾಗತದ ಯೋಜನೆ ಕೈಬಿಟ್ಟು ಸೀಮಿತ ಸಂಖ್ಯೆಯಲ್ಲಿ ನಾಲ್ಕು ಎಲೆಕ್ಟ್ರಿಕ್‌ ಕಾರುಗಳಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿದ ರಾಜ್ಯ ಬಿಜೆಪಿ ನಾಯಕರು, ನಿತಿನ್‌ ನವೀನ್‌ ಅವರನ್ನು ಆತ್ಮೀಯವಾಗಿ ಬರ ಮಾಡಿಕೊಂಡರು. ನಗರದಲ್ಲಿ ನಿತಿನ್‌ ನವೀನ್‌ ಅವರ ಓಡಾಟಕ್ಕೆ ಎಲೆಕ್ಟ್ರಿಕ್‌ ಕಾರುಗಳ ವ್ಯವಸ್ಥೆ ಮಾಡಲಾಗಿದೆ.

--ನಬೀನ್‌ ಅವರ ಇಂದಿನ ಕಾರ್ಯಕ್ರಮ:

*ಬೆಳಗ್ಗೆ 9 ಗಂಟೆಗೆ ಬಿಎಸ್‌ವೈ ಮನೆಯಲ್ಲಿ ಉಪಾಹಾರ ಸೇವನೆ

* ಬೆಳಿಗ್ಗೆ 10.45ಕ್ಕೆ ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ

* ಬೆಳಿಗ್ಗೆ 11.10ಕ್ಕೆ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿಗೆ ಭೇಟಿ

* ಬೆಳಗ್ಗೆ 11.30 ರಿಂದ ಮಧ್ಯಾಹ್ನ 1ಗಂಟೆ ವರೆಗೆ ಶಾಸಕರು, ಸಂಸದರು, ಪದಾಧಿಕಾರಿಗಳ ಜೊತೆಗೆ ಸಭೆ

* ಮಧ್ಯಾಹ್ನ 2 ಗಂಟೆಯಿಂದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗಿ

* ಮಧ್ಯಾಹ್ನ 3.45 ರಿಂದ ಬೆಂಗಳೂರು ಉತ್ತರ ಜಿಲ್ಲೆ ಪ್ರಶಿಕ್ಷಣಾ ಶಿಬಿರದ ಸಮಾರೋಪದಲ್ಲಿ ಭಾಗಿ

* ಸಂಜೆ 4.30 ರಿಂದ ರಾಜ್ಯ ಎಸ್ಐಆರ್ ತಂಡದ ಜೊತೆಗೆ ಸಭೆ