ಮಧ್ಯೆಪ್ರಾಚ್ಯ ಯುದ್ಧದಿಂದಾಗ ಕರ್ನಾಟಕ ಯಾದಗಿರಿ, ರಾಯಚೂರು, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗ್ಯಾಸ್ ಪೂರೈಕೆ ಸಮಸ್ಯೆ ಶೋಚನೀಯವಾಗಿದೆ. ಗ್ಯಾಸ್ ಏಜೆನ್ಸಿಗಳಿಂದ ಕಾಳಸಂತೆಯಲ್ಲಿ ಗ್ಯಾಸ್ ಸಿಲಿಂಡರ್ ಮಾರಾಟದಿಂದ ಮತ್ತಷ್ಟು ಸಮಸ್ಯೆ ಬಿಗಡಾಯಿಸಿದೆ.

ಬೆಂಗಳೂರು (ಮೇ.24): ಮಧ್ಯಪ್ರಾಚ್ಯ ಯುದ್ಧದಿಂದಾಗಿ ರಾಜ್ಯದ ಮೂರು ಜಿಲ್ಲೆಗಳಲ್ಲಿ ಗೃಹ ಬಳಕೆಯ ಎಲ್‌ಪಿಜಿ ಪೂರೈಕೆಯಲ್ಲಿ ಭಾರೀ ವ್ಯತ್ಯಯವಾಗಿದ್ದು, ಗ್ರಾಹಕರನ್ನು ಹೈರಾಣು ಮಾಡಿದೆ. ಯಾದಗಿರಿ, ರಾಯಚೂರು, ಹಾಸನದಲ್ಲಿ ಗ್ರಾಹಕರು ಬೆಳಗ್ಗೆ 5 ಗಂಟೆಯಿಂದಲೇ ಏಜೆನ್ಸಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತರೂ ಸಿಲಿಂಡರ್‌ ಪಡೆಯಲಾಗದೇ ಭಾರೀ ಸಮಸ್ಯೆ ಎದುರಿಸಿದ್ದಾರೆ.

Add Asianetnews Kannada as a Preferred SourcegooglePreferred

ಕೆಲವು ಕಡೆ ಏಜೆನ್ಸಿಗಳಿಗೆ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರಿಂದ ಈ ಸಮಸ್ಯೆ ಕಂಡುಬಂದಿದ್ದರೆ ಇನ್ನು ಕೆಲವು ಕಡೆ ಗ್ಯಾಸ್‌ ಏಜೆನ್ಸಿ ಮಾಲೀಕರೇ ಕಾಳಸಂತೆಯಲ್ಲಿ ಸಿಲಿಂಡರ್‌ ಮಾರಿಕೊಂಡ ಕಾರಣಕ್ಕೆ ಸಮಸ್ಯೆ ಎದುರಾಗಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

ಏಜೆನ್ಸಿ ವಿರುದ್ಧ ದೂರು:

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಾಲಗುಂದದಲ್ಲಿ ಭಾರತ್‌ ಗ್ಯಾಸ್‌ ಏಜೆನ್ಸಿ ಮುಂದೆ ದಿನಪೂರ್ತಿ ಕಾದು ಕುಳಿತರೂ ಸಿಲಿಂಡರ್‌ ಸಿಗುತ್ತಿಲ್ಲ. ಅಲ್ಲದೆ ಅಂಗಡಿ ಮಾಲೀಕ ಏಜೆನ್ಸಿ ಕಚೇರಿಯನ್ನು ತೆರೆಯದೆ ಕಾಳ ಸಂತೆಯಲ್ಲಿ ಸಿಲಿಂಡರ್‌ ಮಾರುತ್ತಿದ್ದಾರೆ ಎಂದು ಆರೋಪಿಸಿ ಗ್ರಾಹಕರು ಪೊಲೀಸರಿಗೆ ಕರೆ ಮಾಡಿ ದೂರು ಸಲ್ಲಿಸಿದ್ದಾರೆ.

ಗ್ರಾಮದಲ್ಲಿ 2 ತಿಂಗಳಿನಿಂದಲೂ ಸಿಲಿಂಡರ್‌ ವಿತರಣೆಯಲ್ಲಿ ಏರುಪೇರಾಗಿದೆ. ಗ್ಯಾಸ್‌ ಬುಕ್‌ ಮಾಡಿದ ಜನರು ಕೆಲಸ ಬಿಟ್ಟು ಏಜೆನ್ಸಿ ಕಚೇರಿ ಮುಂದೆ ಸಾಲಾಗಿ ಖಾಲಿ ಸಿಲಿಂಡರ್‌ ಇಟ್ಟು ಕಾದು ಸುಸ್ತಾಗಿದ್ದಾರೆ. ಶನಿವಾರ ಬೆಳಗ್ಗೆ 5 ಗಂಟೆಯಿಂದಲೇ ಕಾದಿದ್ದ ಜನರು, ಹಲವು ಗಂಟೆ ಕಾದರೂ ಗ್ಯಾಸ್‌ ಅಂಗಡಿ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಪೊಲೀಸರಿಗೆ ಕರೆ ಮಾಡಿ ದೂರು ನೀಡಿ ಸ್ಥಳಕ್ಕೆ ಕರೆಸಿ ಗ್ಯಾಸ್‌ ಕೊಡಿಸುವಂತೆ ಮನವಿ ಮಾಡಿದ್ದಾರೆ. ಅಡುಗೆ ಅನಿಲ ಅವನ್ನು ಬುಕ್‌ ಮಾಡಿ ಗ್ರಾಹಕರಿಂದ ಒಟಿಪಿ ಪಡೆದು ಬ್ಲಾಕ್‌ನಲ್ಲಿ ಸಿಲಿಂಡರ್‌ಗಳನ್ನು ಮಾರಾಟ ಮಾಡಿದ್ದರಿಂದ ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಶಾಸಕ ಸ್ಥಳಕ್ಕೆ:

ಹಾಸನ ಜಿಲ್ಲೆಯ ಆಲೂರಿನಲ್ಲಿಯೂ ಸಿಲಿಂಡರ್‌ ಸಮರ್ಪಕವಾಗಿ ಪೂರೈಕೆ ಆಗಿಲ್ಲ. ವಿಜಯಲಕ್ಷ್ಮೀ ಭಾರತ್ ಗ್ಯಾಸ್ ಏಜೆನ್ಸಿ ಮುಂದೆ ಜನರು ಸಾಲಗಟ್ಟಿ ನಿಂತಿದ್ದರು. ಕಳೆದ ಕೆಲವು ದಿನಗಳಿಂದ ತಾಂತ್ರಿಕ ಲೋಪದೋಷ, ಸರಬರಾಜಿನ ವಿಳಂಬ ಹಾಗೂ ವಿತರಣಾ ವ್ಯವಸ್ಥೆಯ ಗೊಂದಲದಿಂದ ಆಲೂರು ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳ ಗ್ರಾಹಕರು ಪರದಾಡುತ್ತಿದ್ದಾರೆ. ಶನಿವಾರ ಮಹಿಳೆಯರು ಸೇರಿ ನೂರಾರು ಮಂದಿ ಬೆಳಗ್ಗಿನಿಂದಲೇ ಸಾಲಿನಲ್ಲಿ ನಿಂತು ಗ್ಯಾಸ್ ಸಿಲಿಂಡರ್ ಪಡೆಯಲು ಹರಸಾಹಸ ಪಡುತ್ತಿದ್ದರು. ಈ ವಿಷಯ ತಿಳಿದ ಶಾಸಕ ಸಿಮೆಂಟ್ ಮಂಜು ಸ್ಥಳಕ್ಕೆ ತಕ್ಷಣ ಆಗಮಿಸಿದರು. ಏಜೆನ್ಸಿ ಮತ್ತು ಅಧಿಕಾರಿಗಳ ವಿರುದ್ಧ ಸ್ಥಳದಲ್ಲಿಯೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳ ಜತೆ ಚರ್ಚಿಸಿದ ಶಾಸಕ ಮಂಜು, ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ತಕ್ಷಣವೇ ಹೆಚ್ಚುವರಿ ಸಿಲಿಂಡರ್ ಪೂರೈಕೆ ಮಾಡುವಂತೆ ಸೂಚಿಸಿದರು. ಶಾಸಕರ ಸೂಚನೆ ಬೆನ್ನಲ್ಲೇ ತಕ್ಷಣವೇ ಮೂರು ಲಾರಿಗಳಲ್ಲಿ ಗ್ಯಾಸ್ ಸಿಲಿಂಡರ್ ತರಿಸಲಾಯಿತು.

ಗ್ಯಾಸ್‌ಗೆ ಪರದಾಟ:

ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಅಡುಗೆ ಅನಿಲ ಪೂರೈಕೆಯಲ್ಲಿ ಕೊರತೆ ಭುಗಿಲೆದ್ದಿದೆ. ಗ್ರಾಹಕರು ಬೆಳಗ್ಗೆಯಿಂದಲೇ ಏಜೆನ್ಸಿ ಎದುರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದ ಜನರು ನಸುಕಿನಲ್ಲೇ ಆಗಮಿಸಿ ಸರದಿಯಲ್ಲಿ ನಿಂತು ಕಾಯುತ್ತಿದ್ದರೂ ಸಿಲಿಂಡರ್‌ ಸಿಗದೆ ಪರದಾಡಿದರು.